--Ads--

ಜಿಲ್ಲಾಡಳಿತ ಭವನದಲ್ಲಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

On: August 28, 2026 12:57 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಜಿಲ್ಲಾಡಳಿತ ಭವನದಲ್ಲಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಗಸ್ಟ್ 28 :

ನುಲಿಯ ಚಂದಯ್ಯನವರು ತಮ್ಮ ಕಾಯಕ, ಭಕ್ತಿ ಮತ್ತು ಸರಳ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾ, ಕಾಯಕಕ್ಕೆ ಗೌರವ ನೀಡಬೇಕು ಎಂಬ ಸಂದೇಶವನ್ನು ಸಾರಿದರು. ಜೀವನದಲ್ಲಿ ಶ್ರಮ, ಪ್ರಾಮಾಣಿಕತೆ, ಭಕ್ತಿ ಮತ್ತು ಸಮಾನತೆಗೆ ವಿಶೇಷ ಸ್ಥಾನಮಾನ ನೀಡಿದ್ದರು. ಈ ಮಹಾನ್ ಶರಣರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು.

ಇಂದು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ನುಲಿಯ ಚಂದಯ್ಯ ಹಾಗೂ ತತ್ವಜ್ಞಾನಿ, ಆಧ್ಯಾತ್ಮಿಕ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ನುಲಿಯ ಚಂದಯ್ಯನವರು 12ನೇ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರು. ಅವರು ತಮ್ಮ ಕಾಯಕ, ಭಕ್ತಿ ಮತ್ತು ಸರಳ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ನುಲಿಯ ಚಂದಯ್ಯನವರು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಜಾತಿ-ಭೇದ, ಅಹಂಕಾರ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ, ಎಲ್ಲರೂ ಸಮಾನರು ಎಂಬ ಮಾನವೀಯ ಸಂದೇಶವನ್ನು ನೀಡಿದರು. ಅವರ ವಚನಗಳು ಮತ್ತು ಜೀವನಾದರ್ಶಗಳು ಇಂದಿಗೂ ನಮಗೆ ಸ್ಪೂರ್ತಿಯಾಗಿವೆ ಎಂದರು.

ನಾವು ನುಲಿಯ ಚಂದಯ್ಯನವರ ಜೀವನದಿಂದ ಪ್ರಾಮಾಣಿಕವಾಗಿ ದುಡಿಯುವುದು, ಎಲ್ಲರನ್ನು ಸಮಾನವಾಗಿ ಗೌರವಿಸುವುದು ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸುವುದು ಎಂಬ ಗುಣಗಳನ್ನು ಕಲಿಯಬೇಕು ಎಂದು ತಿಳಿಸಿದರು.

ಮಹಾನ್ ಸಮಾಜ ಸುಧಾರಕ, ತತ್ವಜ್ಞಾನಿ ಹಾಗೂ ಆಧ್ಯಾತ್ಮಿಕ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ಜಾತಿ ಭೇದ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಎಲ್ಲ ಮನುಷ್ಯರೂ ಸಮಾನರು ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕ ಸಾರಿದರು. “ಒಂದು ಜಾತಿ, ಒಂದು ಧರ್ಮ, ಒಬ್ಬ ದೇವರು ಮನುಷ್ಯನಿಗೆ” ಎಂಬ ಅವರ ಮಹತ್ವದ ಸಂದೇಶವು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ.

ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಪ್ರಮುಖ ಸಾಧನ ಎಂದು ನಂಬಿದ್ದ ಅವರು, ಜನರಲ್ಲಿ ಶಿಕ್ಷಣ, ಸ್ವಾಭಿಮಾನ, ಸ್ವಚ್ಛತೆ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸಲು ಶ್ರಮಿಸಿದರು. ಅವರ ಸರಳ ಜೀವನ ಮತ್ತು ಉನ್ನತ ಚಿಂತನೆಗಳು ನಮಗೆ ಸದಾ ಸ್ಫೂರ್ತಿಯಾಗಿವೆ. ನಾವು ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಜಾತಿ-ಮತ ಭೇದವಿಲ್ಲದೆ ಎಲ್ಲರನ್ನು ಗೌರವಿಸೋಣ. ಶಿಕ್ಷಣ ಪಡೆದು, ಸಮಾಜದ ಒಳಿತಿಗಾಗಿ ಕೆಲಸ ಮಾಡೋಣ ಮತ್ತು ಸಮಾನತೆ ಹಾಗೂ ಸಹೋದರತ್ವವನ್ನು ಬೆಳೆಸೋಣ ಎಂದರು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ ಚಂದ್ರಣ್ಣ ಮಾತನಾಡಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನದ ಆದರ್ಶ, ಅವರ ಸೇವೆಯನ್ನು ಸ್ಮರಿಸಿದರು. ಸಮಾಜದಲ್ಲಿ ಅವರ ಆದರ್ಶ ತತ್ವಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಬಿ. ಕೃಷ್ಣಪ್ಪ ಮಾತನಾಡಿ ನುಲಿಯ ಚಂದಯ್ಯ ಅವರು ಹಗ್ಗ ಒಸೆದು ಸಂತೆಯಲ್ಲಿ ಮಾರಿ ಬಂದ ಹಣದಿಂದ ದಾಸೋಹ ಮಾಡುತ್ತಿದ್ದರು. ಕಾಯಕ ನಿಷ್ಠೆಗೆ ಮಹತ್ವವನ್ನು ನೀಡಿದ್ದರು ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದು ಜಾತಿ, ಒಂದು ಧರ್ಮ, ಒಬ್ಬ ದೇವರು ಎಂಬ ಸಂದೇಶವನ್ನು ಸಾರಿದ್ದಾರೆ. ಅವರ ತತ್ವ ಆದರ್ಶಗಳು ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತ ಎಂದರು.

ಕಾರ್ಯಕ್ರಮದಲ್ಲಿ ಕೊರಮ ಜನಾಂಗ ಸಂಘದ ಉಪಾಧ್ಯಕ್ಷ ಚೆನ್ನಕೇಶವ, ಮಾಜಿ ಅಧ್ಯಕ್ಷ ಪ್ರಭಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕಲ್ಪನ ಆರ್, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಸೆಪ್ಟಂಬರ್ 12 ರಂದು ಶಿಕ್ಷಕರ ದಿನಾಚರಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಗಸ್ಟ್ 28,:

ಸೆಪ್ಟಂಬರ್ 12ರಂದು ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ ಕೆ.ಎನ್. ಅನುರಾಧ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸುವ ಪ್ರಯುಕ್ತ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹ್ಮಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೆಪ್ಟೆಂಬರ್ 12ರಂದು ಶನಿವಾರ ದೇವನಹಳ್ಳಿ ಟೌನ್ ನ ಅಂಬೇಡ್ಕರ್ ಭವನ ದಲ್ಲಿ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗುವುದು.

ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಗಳ ಮುದ್ರಣ, ಕಾರ್ಯಕ್ರಮದ ವೇದಿಕೆ ನಿರ್ಮಾಣ, ಸಾಂಸ್ಕೃತಿಕ ಕಾರ್ಯಕ್ರಮ, ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಶಿಕ್ಷಕರು ಪ್ರತಿ ತಾಲ್ಲೂಕಿನಿಂದ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಒಬ್ಬರು, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಒಂದು ಹಾಗೂ ಪ್ರೌಢಶಾಲಾ ವಿಭಾಗದಿಂದ ಒಂದು ಒಟ್ಟಾರೆ ಒಂದು ತಾಲ್ಲೂಕಿನಿಂದ ಮೂರು ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಜೊತೆಗೆ 2025-26ನೇ ಸಾಲಿನಲ್ಲಿ ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನಿವೃತ್ತರಾದಂತಹ ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದರು.

ಸಭೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯತೀಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಭೈರೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಆದರ್ಶ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಂಜುನಾಥ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅರುಣ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಂಜನಪ್ಪ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಕಾರ್ಯದರ್ಶಿ ಸೊಣ್ಣಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now