ವಿಜಯ ದರ್ಪಣ ನ್ಯೂಸ್…..
ರಾಮನಿಗಿಂತ ಸೀತೆಯ ವ್ಯಕ್ತಿತ್ವ ಬಹಳ ದೊಡ್ಡದು; ಸಮಾಜಕ್ಕೆ ಮಹಿಳಾ ಉದ್ಯಮಿಗಳು ಮಾದರಿ: ಸಿ ಎಂ ಡಿ ಕೆ ಶಿವಕುಮಾರ್ ಬಣ್ಣನೆ

ಬೆಂಗಳೂರು, ಸೆ. 02:
“ರಾಮಾಯಣದಲ್ಲಿ ರಾಮನಿಗಿಂತ ಸೀತೆಯ ವ್ಯಕ್ತಿತ್ವ ಬಹಳ ದೊಡ್ಡದು. ಆಕೆಯ ತ್ಯಾಗ, ಹೋರಾಟಗಳು ಮಾದರಿಯಾಗಿದೆ. ಮಹಿಳೆಯರು ಸೃಷ್ಟಿಕರ್ತರು. ಸವಾಲುಗಳನ್ನು ಮೆಟ್ಟಿ ಉದ್ದಿಮೆ ಕಟ್ಟಿರುವ ನೀವೂ ಮಾದರಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಬಣ್ಣಿಸಿದರು.
ಎಫ್ ಕೆ ಸಿಸಿಐನ ಸಭಾಂಗಣದಲ್ಲಿ ಬುಧವಾರ ನಡೆದ ಉಬುಂಟು ಸಂಸ್ಥೆಯ “ಒಗ್ಗಟ್ಟಾಗಿ ಬೆಳೆಯೋಣ (Together We Grow)” ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನದ 5 ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದರು.
“ಗ್ರಾಮಪಂಚಾಯತಿ ಯಿಂದ ಸಂಸತ್ತಿನವರೆಗೆ ಮಹಿಳಾ ನಾಯಕತ್ವದ ಅಗತ್ಯವಿದ್ದು, ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ” ಎಂದರು.
ಗ್ಯಾರಂಟಿಗಳ ಮೂಲಕ ಕುಟುಂಬ ನಿರ್ವಹಣೆಗೆ ಮಹಿಳೆಯರ ನೆರವು
“ನನಗೆ ಯುವಸಮೂಹ ಮತ್ತು ಮಹಿಳೆಯರ ಶಕ್ತಿಯ ಮೇಲೆ ಅಪಾರ ವಿಶ್ವಾಸವಿದೆ. ನಮ್ಮ ಸರ್ಕಾರ 5 ಗ್ಯಾರಂಟಿ ನೀಡುತ್ತಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣಿಸುತ್ತಾರೆ. ಈ ಯೋಜನೆಯು ಮಹಿಳೆಯರಲ್ಲಿ ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯನ್ನು ಹೆಚ್ಚಿಸಿದೆ. ಬಿಜೆಪಿ ಹಾಗೂ ಪ್ರಧಾನಿ ಮೋದಿಯವರು ಗ್ಯಾರಂಟಿಯೋಜನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ 1.22 ಕೋಟಿ ಮಹಿಳೆಯರಿಗೆ 2000 ರೂ. ದೊರೆಯುತ್ತಿದ್ದು, ಮಹಿಳೆಯರು ಕುಟುಂಬ ನಿರ್ವಹಣೆಗೆ ಆ ಹಣ ನೆರವಾಗಿದೆ” ಎಂದರು.
“ನಮ್ಮ ಸರ್ಕಾರ ಶೇ. 4 ರಷ್ಟು ಬಡ್ಡಿದರದಲ್ಲಿ ಸಾಲಸೌಲಭ್ಯ, ಸಹಾಯಧನ, ಸ್ತ್ರೀಶಕ್ತಿ ಯೋಜನೆ ಸೇರಿದಂತೆ ಅನೇಕ ಮಹಿಳಾ ಆಧರಿತ ಯೋಜನೆಗಳನ್ನು ಜಾರಿಮಾಡಿದೆ. ಪ್ರತಿವರ್ಷ ತಯಾರಾಗುವ ವೈದ್ಯರ ಪೈಕಿ, ಶೇ. 40 ರಷ್ಟು ಮಹಿಳಾ ವೈದ್ಯರಿದ್ದಾರೆ. ನೀವು ಅಡುಗೆಮನೆಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರು ಉತ್ತಮ ಚಿಂತಕರು ಹಾಗೂ ಉದ್ಯಮಿಗಳು” ಎಂದರು.
ಉಬುಂಟು ಮೂಲಕ ಸಾವಿರಾರು ಕನಸುಗಳು ಒಂದಾಗಿವೆ
“ಉಬುಂಟು ಮೂಲಕ ಸಾವಿರಾರು ಕನಸುಗಳು ಒಂದಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಬೆಳಯಬೇಕು. ಮಹಿಳೆಯರು ಕುಟುಂಬದ ನಿರ್ವಹಣೆಯ ಜೊತೆಗೆ ಯಾವುದೇ ಜವಾಬ್ದಾರಿಯನ್ನು ಅತ್ಯುತ್ತಮ ನಿಭಾಯಿಸಬಲ್ಲಳು ಎನ್ನುವುದು ಈಗಾಗಲೇ ನಿರೂಪಿತವಾಗಿದೆ. ಭಾರತೀಯ ಸಮಾಜದಲ್ಲಿ “ಮೊದಲ ಮಗು ಗಂಡು ಆಗಬೇಕೆನ್ನುವ ಭಾವನೆಯಿದೆ. ಈ ಮಾನಸಿಕ ಸ್ಥಿತಿಯಿಂದ ನಾವು ಹೊರಬರಬೇಕು. ಪೋಷಕರಾಗಿ ನಾವು ಮಕ್ಕಳಲ್ಲಿ ಮೌಲ್ಯಗಳು ಹಾಗೂ ಶಿಸ್ತು ಕಲಿಸಬೇಕು. ತಮ್ಮ ಮಗಳು ಒಬ್ಬ ಸಶಕ್ತ ಮಹಿಳೆಯಾಗಿದ್ದು, ಕುಟುಂಬ ಮತ್ತು ಉದ್ಯಮದ ನಿರ್ವಹಣೆಯಲ್ಲಿ ಯಶ್ವಸಿಯಾಗಿದ್ದಾಳೆ” ಎಂದರು.
ಹೆಣ್ಣು ಕುಟುಂಬದ ಕಣ್ಣು
“ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಕುಟುಂಬದ ಕಣ್ಣು ಎಂದು ಭಾವಿಸಲಾಗುತ್ತದೆ. ನೀವೆಲ್ಲರೂ ಉದ್ಯೋಗದಾತರಾಗಿದ್ದೀರಿ. ಉದ್ದಿಮೆಗಳ ನಿರ್ವಹಣೆಯಲ್ಲಿ ಎದುರಾಗುವ ಆರ್ಥಿಕ ಸವಾಲುಗಳನ್ನು ಮೆಟ್ಟಿ ನಿಂತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ, ಸಮಾಜದ ಜವಾಬ್ದಾರಿಯನ್ನು ಹೊರುವ ಮಹಿಳಾ ಉದ್ದಿಮೆದಾರರಿಗೆ ಸರ್ಕಾರ ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ” ಎಂದರು.
ನಾವುಗಳು ಸಣ್ಣ ಹುದ್ದೆಯನ್ನೂ ತ್ಯಾಗ ಮಾಡುವುದಿಲ್ಲ
“ಸೋನಿಯಾಗಾಂಧಿಯವರು ಅನೇಕ ಹೊಡೆತಗಳನ್ನು ಜೀವನದಲ್ಲಿ ಕಂಡವರು. ಇಂದಿರಾಗಾಂಧಿ ಅವರ ನಿಧನ, ಪತಿಯ ಹತ್ಯೆಯಾಯಿತು. ಇದನ್ನು ಮೀರಿ ಪಕ್ಷ ಮುನ್ನಡೆಸಿದರು. ಪ್ರಧಾನಿಯಾಗಲು ಎರಡು ಬಾರಿ ಅವಕಾಶವಿದ್ದರೂ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಲು ಅವಕಾಶ ನೀಡಿದರು. ಇದು ಮಹಿಳೆಯ ತ್ಯಾಗದ ಪ್ರತೀಕ. ಮಹಿಳೆಯರು ನಾಯಕರನ್ನು ಬೆಳೆಸುತ್ತಾರೆ” ಎಂದರು.
ನೀವೂ ನಾಯಕರಾಗಬೇಕು
“ಪುರಾಣಗಳಲ್ಲಿ ದ್ರೌಪದಿ ಹಾಗೂ ಕುಂತಿ ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಮ್ಮ ನಾಡದೇವತೆ ಚಾಮುಂಡೇಶ್ವರಿ, ನಮ್ಮ ಸಂಸ್ಕೃತಿಯಲ್ಲಿ ಗ್ರಾಮದೇವತೆಗಳು ಪ್ರಾಶಸ್ತ್ಯವಿದೆ. ನಿಮಗೆ ಉತ್ತಮ ಅವಕಾಶ, ಪ್ರತಿಭೆಯಿದ್ದು, ನೀವು ನಾಯಕರಾಗಬಹುದು. ಪಕ್ಷಾತೀತವಾಗಿ ಮಹಿಳಾ ಮೀಸಲಾತಿಯನ್ನು ನಾವು ಒಪ್ಪಿದ್ದೇವೆ. ಗ್ರಾಮಪಂಚಾಯತಿಯಿಂದ ಸಂಸತ್ತಿನವರೆಗೆ ಮಹಿಳಾ ನಾಯಕತ್ವದ ಅಗತ್ಯವಿದೆ. ಈ ದಿಸೆಯಲ್ಲಿ ಶೇ. 33 ರಷ್ಟು ಮೀಸಲಾತಿಯಿರುವುದರಿಂದ ಮಹಿಳೆಯರು ನಾಯಕರಾಗುವುದನ್ನು ತಡೆಯುವುದು ಸಾಧ್ಯವಿಲ್ಲ” ಎಂದರು.
ಟನೆಲ್ ಯೋಜನೆ ಪರವಾಗಿ ಉದ್ಯಮಿಗಳು ಧ್ವನಿಯೆತ್ತಬೇಕು
“ಬೆಂಗಳೂರು ಮಹಾನಗರದಲ್ಲಿ ಸಂಚಾರದಟ್ಟಣೆ ನಿವಾರಣೆಗೆ ರೂಪಿಸಲಾಗಿರುವ ಟನೆಲ್ ಯೋಜನೆಗೆ ರಾಜಕೀಯ ಉದ್ದೇಶದಿಂದ ವಿರೋಧ ವ್ಯಕ್ತವಾಗುತ್ತಿದ್ದು, ಈ ಯೋಜನೆ ಜನರ ಸಮಯ, ಹಣವನ್ನು ಉಳಿಸಲಿದೆ. ಉದ್ಯಮಿಗಳಾಗಿರುವ ನೀವು, ಈ ಯೋಜನೆಯ ಪರವಾಗಿ ಧ್ವನಿಯೆತ್ತಬೇಕು. ಈಗ ಬೆಂಗಳೂರು ಬೃಹತ್ತಾಗಿ ಬೆಳೆಯುತ್ತಿದ್ದು, 1.4 ಕೋಟಿ ವಾಹನಗಳಿವೆ. ಸರ್ಕಾರ ಬೆಂಗಳೂರಿನ ಸಂಚಾರ ವ್ಯವಸ್ಥೆ ಬಲಪಡಿಸುವ ಮೂಲಸೌಲಭ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ” ಎಂದರು.
ರಾಜ್ಯದ ಅಭಿವೃದ್ಧಿ ಪಥದಲ್ಲಿ ನೀವೂ ಭಾಗಿಗಳಾಗಿ
“ಸಮಾಜದಲ್ಲಿ ದುಡ್ಡು ಮತ್ತು ದೇಹದಲ್ಲಿ ರಕ್ತ ಸದಾ ಹರಿಯುತ್ತಿರಬೇಕು. ದುಡ್ಡು ಒಂದೇ ಕಡೆ ಶೇಖರಣೆಯಾದರೆ ಅಭಿವೃದ್ಧಿ ಅಸಾಧ್ಯ. ಮಹಿಳಾ ಉದ್ಯಮಿಗಳು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಶ್ರಮವಿದ್ದಲ್ಲಿ ಫಲವಿದೆ. ಸರ್ಕಾರಕ್ಕೆ ಮಹಿಳೆಯರ ಮೇಲೆ ಅಪಾರ ವಿಶ್ವಾಸವಿದ್ದು, ರಾಜ್ಯದ ಅಭಿವೃದ್ಧಿಯ ಪಥದಲ್ಲಿ ಭಾಗಿಗಳಾಗಬೇಕು. ಭಾರತದ ಅಭಿವೃದ್ಧಿಯು ದಕ್ಷಿಣ ಭಾರತದ ಅಭಿವೃದ್ಧಿಯನ್ನು ಆಧರಿಸಿದೆ. “ಜೊತೆಗೂಡುವುದು ಆರಂಭ, ಜೊತೆಗೂಡುವುದು ಪ್ರಗತಿ. ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು”. ಕರ್ನಾಟಕ ಅಭಿವೃದ್ಧಿಗೆ ಎಲ್ಲರೂ ಪಾಲುದಾರರಾಗಬೇಕು” ಎಂದರು.











