ವಿಜಯ ದರ್ಪಣ ನ್ಯೂಸ್….
ಹೂವಿನ ತೋಟಕ್ಕೆ ನುಗ್ಗಿ ಕವರ್ ಕತ್ತರಿಸಿರುವ ದುಷ್ಕರ್ಮಿಗಳು

ಶಿಡ್ಲಘಟ್ಟ : “ಬಿ” ವೈಟ್ ಹೂವಿನ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 10ಕ್ಕೂ ಹೆಚ್ಚು ಸಾಲುಗಳ ಉದ್ದದ ಕವರ್ ಗಳನ್ನು ಕತ್ತರಿಸಿ ತುಂಡು ಮಾಡಿದ್ದಾರೆ ಸದ್ಯ ಮಳೆ ಬಾರದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ ಮಳೆ ಬಂದಿದ್ದರೆ ಕಟಾವಿಗೆ ಬಂದಿದ್ದ ಹೂವು ಸಂಪೂರ್ಣ ಹಾಳಾಗಿ, ಲಕ್ಷಾಂತರ ರೂಪಾಯಿ ನಷ್ಟವಾಗುವ ಸಾಧ್ಯತೆ ಇತ್ತು ಎಂದು ರೈತ ಜಿ.ಎಂ.ಸುಧಾಕರ್ ತಿಳಿಸಿದ್ದಾರೆ.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿಯಲ್ಲಿ ಹೂವಿನ ಬೆಳೆಯನ್ನು ಮಳೆಯಿಂದ ರಕ್ಷಿಸಲು ಅಳವಡಿಸಿದ್ದ ಕವರ್ ಗಳನ್ನು ದುಷ್ಕರ್ಮಿಗಳು
ಬುಧವಾರ ರಾತ್ರಿ ಕತ್ತರಿಸಿರುವ ಘಟನೆ ನಡೆದಿದೆ.
ಗ್ರಾಮದ ಯುವ ರೈತ ಜಿ.ಎಂ.ಸುಧಾಕರ್ ಅವರು ತಮ್ಮ ತೋಟದಲ್ಲಿ ಶೇಡ್‌ನೆಟ್ ಅಡಿಯಲ್ಲಿ “ಬಿ” ವೈಟ್ ಹೂವಿನ
ಬೆಳೆ ಬೆಳೆದಿದ್ದಾರೆ ಮಳೆಯಿಂದ ಬೆಳೆಯನ್ನು ರಕ್ಷಿಸುವ ಉದ್ದೇಶದಿಂದ ಸುಮಾರು 50 ಸಾವಿರ ರೂ.ಗಳ ವೆಚ್ಚದಲ್ಲಿ ಕವರ್ ಅಳವಡಿಸಿದ್ದರು.
ಹೂವು ನೇರವಾಗಿ ಬಿಸಿಲಿಗೆ ಹಾಗೂ ರಾತ್ರಿ ವೇಳೆ ಬೀಳುವ ಇಬ್ಬನಿಗೆ ಒಡ್ಡಿಕೊಂಡರೆ ಬೇಗನೆ ಹಾಳಾಗುತ್ತದ ಹೀಗಾಗಿ ಕವರ್ ಹಾನಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಬೆಳೆಯ ಮೇಲೆ ಪರಿಣಾಮ ಬೀರುವ ಆತಂಕ ರೈತರಲ್ಲಿ ಮೂಡಿದೆ.
ತೀವ್ರ ನೀರಿನ ಅಭಾವದ ನಡುವೆಯೂ ಇರುವ ನೀರನ್ನು ಬಳಸಿಕೊಂಡು, ವಿದ್ಯುತ್ ಕಣ್ಣಾಮುಚ್ಚಾಲೆಯ ನಡುವೆ ರಾತ್ರಿ ನಿದ್ದೆಗೆಟ್ಟು ನೀರು ಹಾಯಿಸಿ ಮಕ್ಕಳಂತೆ ಬೆಳೆಸಿದ ಬೆಳೆಯನ್ನು ಹಾಳು ಮಾಡುವ ಮನಸ್ಥಿತಿ ಇರಬಾರದು ರೈತರ ಕಷ್ಟ ರೈತರಿಗಷ್ಟೇ ಅರ್ಥವಾಗುತ್ತದೆ ಎಂದು ರೈತ ಸುಧಾಕರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.










