ವಿಜಯ ದರ್ಪಣ ನ್ಯೂಸ್…..
ಚೌಡಸಂದ್ರದ ಶ್ರೀ ಆಂಜನೇಯಸ್ವಾಮಿಗೆ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಶಿಡ್ಲಘಟ್ಟ: ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ನೆಲೆಸಿ, ಭಕ್ತಾದಿಗಳ ಕಷ್ಟ-ಕಾರ್ಪಣ್ಯಗಳನ್ನು ಪರಿಹರಿಸುತ್ತಿರುವ ವಿಜಯನಗರ ಕಾಲದ, ಶ್ರೀ ವ್ಯಾಸರಾಯರು ಪ್ರತಿಷ್ಠಾಪಿಸಿದ ಸುಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು.
ಅಮಾವಾಸ್ಯೆಯ ಶುಭ ದಿನದಂದು ಸ್ವಾಮಿಯ ಮೂಲ ವಿಗ್ರಹ ಹಾಗೂ ನೂತನ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಧಾರ್ಮಿಕ ಸೇವೆಗಳು ನೆರವೇರಿದವು.
ದೇವಾಲಯದ ಅರ್ಚಕರಾದ ವೇಣುಗೋಪಾಲಚಾರ್ ಹಾಗೂ ಶ್ಯಾಮ್ ಸುಂದರ್ ಅವರ ತಂಡವು ಸ್ವಾಮಿಗೆ ಕಣ್ಣುಸೆಳೆಯುವಂತೆ ಮಾಡಿದ ವರ್ಣರಂಜಿತ ಹೂವಿನ ಅಲಂಕಾರವು ಭಕ್ತರ ಮನಸೆಳೆಯಿತು.
ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿದ ನೂರಾರು ಭಕ್ತಾದಿಗಳು ಶ್ರೀ ಸ್ವಾಮಿಯ ದರ್ಶನ ಪಡೆದು, ಪೂಜೆ ಸಲ್ಲಿಸಿ ಪುನೀತರಾದರು ಬಂದಂತಹ ಎಲ್ಲಾ ಭಕ್ತಾದಿಗಳಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.










