ವಿಜಯದರ್ಪಣ ನ್ಯೂಸ್
ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

* ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗ ದಾನ ಮಾಡಿದ ಪೋಷಕರು
ಮೈಸೂರು -ಬನ್ನೂರು ಮುಖ್ಯ ರಸ್ತೆಯಲ್ಲಿ ತಂತಿಗುಳ್ಳು ಬಳಿ ಪದೇ ಪದೇ ಅಪಘಾತ
* ರೋಡ್ ಹಂಪ್ಸ್ ಹಾಕಲು ಗ್ರಾಮಸ್ಥರ ಆಗ್ರಹ
ವರದಿ ಟೀಕೆ ಬಸವರಾಜು
ತಾಂಡವಪುರ ಸೆಪ್ಟೆಂಬರ್ 16 ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗವನ್ನು ಪೋಷಕರು ದಾನ ಮಾಡಿ ನೋವಿನಲ್ಲೂ ಮಗನ ಅಕಾಲಿಕ ಸಾವು ಸಾರ್ಥಕಗೊಳಿಸಿದ್ದಾರೆ.
ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮೂಡಲಹುಂಡಿ ಗ್ರಾಮದ ಶಿವಮಾದು, ಲಕ್ಷ್ಮಮ್ಮ ದಂಪತಿ ಏಕೈಕ ಪುತ್ರ, ಹಣ್ಣಿನ ವ್ಯಾಪಾರಿಯಾಗಿದ್ದ ಭರತ್‌ಕುಮಾರ್(೧೯) ಸೆ.೮ರಂದು ಮಧ್ಯಾಹ್ನ ಮೈಸೂರಿಂದ ಸ್ವಗ್ರಾಮ ಮೂಡಲಹುಂಡಿಗೆ ಬೈಕ್ (ಕೆಎ.೦೯, ಜೆಪಿ.೨೩೪೦)ನಲ್ಲಿ ಹೋಗುತ್ತಿದ್ದಾಗ ಮೈಸೂರು-ಬನ್ನೂರು ರಸ್ತೆಯ ತಂತಿಗುಳ್ಳು ಸಮೀಪ ತಿರುವಿನಲ್ಲಿ ಮಳವಳ್ಳಿಯಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಬಸ್ (ಕೆಎ.೧೧,ಎಫ್.೦೪೫೨) ಡಿಕ್ಕಿ ಹೊಡೆದಿತ್ತು. ಡಿಕ್ಕಿ ರಭಸಕ್ಕೆ ರಸ್ತೆಗೆ ಹಾರಿ ಬಿದ್ದಿದ್ದ ಭರತ್‌ಕುಮಾರ್ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಗಾಯವಾಗಿತ್ತು. ದಾರಿ ಹೋಕರು ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ತಲೆಗೆ ತೀವ್ರ ಏಟಾಗಿ ಮೆದುಳು ಹೊರಗೆ ಬಂದಿದ್ದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕಳೆದ ಒಂದು ವಾರದಿಂದಲೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದರೂ ಆರೋಗ್ಯದಲ್ಲಿ ಸುಧಾರಣೆಯಾಗಿರಲಿಲ್ಲ. ಮೆದುಳು ನಿಷ್ಕ್ರಿಯವಾಗಿರುವುದನ್ನು ಮೊದಲ ದಿನವೆ ವೈದ್ಯರು ಯುವಕನ ಪೋಷಕರಿಗೆ ಮಾಹಿತಿ ನೀಡಿದ್ದರು. ಆದರೂ ಆರೋಗ್ಯ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ, ಎರಡು ದಿನದ ಹಿಂದೆ ಆರೋಗ್ಯದಲ್ಲಿ ಸುಧಾರಣೆಯಾಗದ ಕಾರಣ ವೈದ್ಯರು ಹಾಗೂ ಹಿತೈಷಿಗಳ ಸಲಹೆ ಪಡೆದ ಅಂಗಾಂಗ ದಾನ ಮಾಡಲು ಪೋಷಕರು ಒಪ್ಪಿದ್ದರು.
ಇಂದು ಬೆಳಗ್ಗೆ ದೇಹದ ಅಂಗಾಂಗ ಬೇರ್ಪಡಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪೋಷಕರಿಗೆ ಮೃತದೇಹ ಒಪ್ಪಿಸಲಾಯಿತು.
ಮರಣೋತ್ತರ ಪರೀಕ್ಷೆ: ಖಾಸಗಿ ಆಸ್ಪತ್ರೆಯಿಂದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಮೂಡಲಹುಂಡಿ ಗ್ರಾಮದ ಅವರ ಜಮೀನಿನಲ್ಲಿ ಗ್ರಾಮಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಸಂಬಂಧ ಅರಕೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನೆಷ್ಟು ಬಲಿ ಬೇಕು… ರಸ್ತೆಗೆ ಹಂಪ್ಸ್ ಹಾಕಿಸಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಈ ಮುಖ್ಯ ರಸ್ತೆಗೆ
ಮೈಸೂರು-ಬನ್ನೂರು ಮುಖ್ಯ ರಸ್ತೆಯಲ್ಲಿ ಬೊಂತಗಳ್ಳಿ ಬಳಿಯಿರುವ ಸೇತುವೆಯಿಂದ ತಂತಿಗುಳ್ಳಿನ ತಿರುವಿನ ಬಳಿ ಪದೇ ಪದೇ ರಸ್ತೆ ಅಪಘಾತವಾಗುತ್ತಿದ್ದು, ಅಮಾಯಕರು ಬಲಿಯಾಗುತ್ತಿದ್ದಾರೆ. ಅದರಲ್ಲೂ ತಂತಿಗುಳ್ಳಿನ ಶಾಂತಲಾಕುಮಾರ್ ಕಲ್ಯಾಣ ಮಂಟಪದ ತಿರುವಿನಿಂದ ನಯಾರ ಪೆಟ್ರೋಲ್ ಬಂಕ್ ಮುಂಭಾಗದ ಇಳಿಜಾರಿನವರೆಗೂ ಅಪಘಾತ ಸಂಭವಿಸುತ್ತಲೇ ಇದ್ದು, ಸಾವು-ನೋವು ಸಂಭವಿಸುತ್ತಿವೆ. ಕೆಲವರಿಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಭಾಗದಲ್ಲಿ ಮೂರು ಸ್ಥಳದಲ್ಲಿ ತಿರುವಿದ್ದು ಎದುರಿಗೆ ಬರುತ್ತಿರುವ ವಾಹನ ಕಾಣಿಸದಂತಾಗಿದೆ. ಅಲ್ಲದೆ, ರಸ್ತೆ ಪಕ್ಕ ಗಿಡ ಬೆಳೆದುಕೊಂಡಿರುವುದು ವಾಹನಗಳ ಗೋಚರಕ್ಕೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಹಂಪ್ಸ್ ಅಳವಡಿಸಿ, ಅದಕ್ಕೆ ಬಣ್ಣ ಬಳಿಯುವುದರೊಂದಿಗೆ ಹಂಪ್ಸ್ ಇರುವ ಎಚ್ಚರಿಕೆ ಫಲಕ ಅಳವಡಿಸಬೇಕು. ಸಾಧ್ಯವಾದರೆ ತಿರುವಿನಲ್ಲಿ ರಸ್ತೆ ಅಗಲೀಕರಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.











