ವಿಜಯ ದರ್ಪಣ ನ್ಯೂಸ್….
ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ : ಮತದಾರರ ನೋಂದಣಾಧಿಕಾರಿ (ERO)

ತಾವರೆಕೆರೆ ಹೊಸಕೋಟೆ ತಾಲೂಕಿನ ಸಭಾಂಗಣದಲ್ಲಿ ಭಾರತೀಯ ಚುನಾವಣಾ ಆಯೋಗದ (ECI) ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು ತಾಲೂಕು ಮಟ್ಟದಲ್ಲಿ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೊಸಕೋಟೆ ತಾಲ್ಲೂಕಿನ ಮತದಾರರ ನೋಂದಣಾಧಿಕಾರಿ (ERO) ಶಿವಕುಮಾರ್ ಬಿ. ತಿಳಿಸಿದ್ದಾರೆ.
ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ವಿಚಾರಣಾ ಪ್ರಕ್ರಿಯೆಯ ಕುರಿತು ವಿವರವಾದ ಮಾಹಿತಿ ನೀಡಿದ ಅವರು, ಪ್ರಮುಖ ಅಂಶಗಳನ್ನು ಹಂಚಿಕೊಂಡರು.
ಮ್ಯಾಪಿಂಗ್ ಮತ್ತು ಕರಡು ಪಟ್ಟಿ ಬಿಡುಗಡೆ: ಮ್ಯಾಪಿಂಗ್ ಪ್ರಕ್ರಿಯೆಯ ನಂತರ ಮತದಾರರ EF ಫಾರಂಗಳನ್ನು ಡಿಜಿಟೈಸ್ ಮಾಡಿ, ಕಳೆದ ಆಗಸ್ಟ್ 23 ರಂದು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಅನಾಮಲಿಸ್ ಮತ್ತು ‘ನೋ ಮ್ಯಾಪಿಂಗ್’ ಪ್ರಕರಣಗಳು: ಒಟ್ಟು 14,004 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ 7,813 ‘ನೋ ಮ್ಯಾಪಿಂಗ್’ ಹಾಗೂ 6,191 ‘ಅನಾಮಲಿಸ್’ಎಂದು ಪರಿಗಣಿಸಲಾಗಿದೆ. ಈ ಎಲ್ಲಾ 14,004 ಮತದಾರರಿಗೆ ಬಿಎಲ್‌ಒ (BLO) ಗಳ ಮೂಲಕ ಈಗಾಗಲೇ ನೋಟಿಸ್ ರವಾನಿಸಲಾಗಿದೆ.
ಹೆಚ್ಚುವರಿ AERO ಗಳ ನೇಮಕ: ಸಾರ್ವಜನಿಕರಿಗೆ ಸ್ಥಳೀಯವಾಗಿಯೇ ವಿಚಾರಣೆಗೆ ಅನುಕೂಲ ಮಾಡಿಕೊಡಲು, ಇಸಿಐ ನಿರ್ದೇಶನದಂತೆ 18 ಗ್ರೂಪ್-ಎ ಮತ್ತು ಗ್ರೂಪ್-ಬಿ ಅಧಿಕಾರಿಗಳನ್ನು ಹೆಚ್ಚುವರಿ ಎಇಆರ್‌ಒ (AERO) ಗಳಾಗಿ ನೇಮಿಸಲಾಗಿದೆ.
ಪ್ರತಿಯೊಬ್ಬ ಅಧಿಕಾರಿಗೆ ಸರಳವಾಗಿ ವಿಚಾರಣೆ ನಡೆಸಲು 700 ರಿಂದ 800 ಮತದಾರರಂತೆ ಮತಗಟ್ಟೆಗಳನ್ನು ನಿಗದಿಪಡಿಸಲಾಗಿದೆ.
ವಿಚಾರಣೆ ಪ್ರಗತಿ: ಕಳೆದ 10 ದಿನಗಳಲ್ಲಿ ಅಧಿಕಾರಿಗಳು ಈಗಾಗಲೇ 8,154 ಮತದಾರರ ವಿಚಾರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬಾಕಿ ಉಳಿದಿರುವ 5,850 ಪ್ರಕರಣಗಳ ಮತದಾರರಿಗೂ ನೋಟಿಸ್ ನೀಡಲಾಗಿದ್ದು, ಮುಂದಿನ 5 ರಿಂದ 6 ದಿನಗಳಲ್ಲಿ ಈ ವಿಚಾರಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
ಇಸಿಐ ಮಾರ್ಗದರ್ಶನದಂತೆ ಮತದಾರರು ಸೂಕ್ತ ದಾಖಲೆಗಳನ್ನು ನೀಡಿದಲ್ಲಿ, ಬಿಎಲ್‌ಒ ಆ್ಯಪ್ (BLO App) ಮೂಲಕ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲಾಗುತ್ತದೆ. ವಿಚಾರಣೆ ನಂತರ ಇದನ್ನು ಜಿಲ್ಲಾ ಮತದಾರ ನೋಂದಣಾಧಿಕಾರಿಗಳ ಪರಿಶೀಲನೆಗೆ ಕಳುಹಿಸಲಾಗುತ್ತಿದ್ದು, ಅಲ್ಲಿಂದ ಅನುಮೋದನೆ ಬಂದ ಬಳಿಕ ಅಂತಿಮ ಮತದಾರರ ಪಟ್ಟಿಗೆ (Final Roll) ಸೇರಿಸಲಾಗುವುದು.
ಸ್ಥಳೀಯವಾಗಿಯೇ ಎಇಆರ್‌ಒ (AERO) ಮತ್ತು ಇಆರ್‌ಒ (ERO) ಹಂತದಲ್ಲಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸಲಾಗುತ್ತಿದೆ.
ವಿಶೇಷ ಗ್ರಾಮ ಸಭೆಗಳು & ಸ್ವೀಪ್ (SVEEP) ಪ್ರಚಾರ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಿ ಕರಡು ಮತದಾರರ ಪಟ್ಟಿಯನ್ನು ಓದಿ ಹೇಳಲಾಗುತ್ತಿದೆ.
ಯಾವೊಬ್ಬ ಅರ್ಹ ಮತದಾರನೂ ಪಟ್ಟಿಯಿಂದ ಹೊರಗುಳಿಯಬಾರದು ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ. ಅಲ್ಲದೆ, ಯುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ‘ಸ್ವೀಪ್’ ಕಾರ್ಯಕ್ರಮಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ.
ಅರ್ಹ ನಾಗರಿಕರು ಮತ್ತು ಯುವ ಮತದಾರರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಹಾಗೂ ದಾಖಲೆಗಳ ಪರಿಶೀಲನೆಗೆ ಸಹಕರಿಸಬೇಕಾಗಿ ಮತದಾರರ ನೋಂದಣಾಧಿಕಾರಿ ಶಿವಕುಮಾರ್ ಬಿ. ಮನವಿ ಮಾಡಿದ್ದಾರೆ.











