ವಿಜಯ ದರ್ಪಣ ನ್ಯೂಸ್…..
ಬೆಂಗಳೂರು ತಜ್ಞರಿಂದ ಬೆಳವಣಿಗೆ ವಿಳಂಬ ಹೊಂದಿರುವ ಮಕ್ಕಳಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ

ಶಿಡ್ಲಘಟ್ಟ : ಮಕ್ಕಳ ಬೆಳವಣಿಗೆಯಲ್ಲಿ ಯಾವುದೇ ರೀತಿಯ ವಿಳಂಬ ಅಥವಾ ತೊಂದರೆ ಕಂಡುಬಂದಲ್ಲಿ ಆರಂಭಿಕ ಹಂತದಲ್ಲಿಯೇ ತಜ್ಞರಿಂದ ತಪಾಸಣೆ ಹಾಗೂ ಸೂಕ್ತ ಮಾರ್ಗದರ್ಶನ ಪಡೆಯುವುದು ಅಗತ್ಯ ಎಂದು ವೈದ್ಯರು ಪೋಷಕರಿಗೆ ತಿಳಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧಿ ಫೌಂಡೇಷನ್
ಫಾರ್ ಅರ್ಲಿ ಇಂಟರ್ವೆನ್ನನ್ಸ್ ವತಿಯಿಂದ ಬೆಳವಣಿಗೆಯಲ್ಲಿ ವಿಳಂಬ ಹಾಗೂ ತೊಂದರೆಗಳನ್ನು ಹೊಂದಿರುವ ಮಕ್ಕಳಿಗೆ ಉಚಿತ ತಪಾಸಣಾ ಶಿಬಿರದಲ್ಲಿ ಮಾಹಿತಿ ನೀಡಿದರು.
ಮಕ್ಕಳ ಬೆಳವಣಿಗೆ, ಮಾತು, ಚಲನವಲನ, ಕಲಿಕೆ ಅಥವಾ ನಡವಳಿಕೆಯಲ್ಲಿ ವಯೋಮಾನಕ್ಕೆ ಅನುಗುಣವಾದ ಬೆಳವಣಿಗೆ ಕಂಡುಬರದಿದ್ದರೆ ನಿರ್ಲಕ್ಷಿಸದೆ ತಜ್ಞರ ಸಲಹೆ ಪಡೆಯಬೇಕು, ಆರಂಭಿಕ ಹಂತದಲ್ಲೇ ಗುರುತಿಸಿ ಅಗತ್ಯ ತರಬೇತಿ ಮತ್ತು ಚಿಕಿತ್ಸೆಯನ್ನು ಆರಂಭಿಸುವುದರಿಂದ ಮಕ್ಕಳ ಬೆಳವಣಿಗೆಗೆ ನೆರವಾಗಬಹುದು ಎಂದು ವೈದ್ಯರು ತಿಳಿಸಿದರು.
ನಿಧಿ ಫೌಂಡೇಷನ್ ಆಹ್ವಾನದ ಮೇರೆಗೆ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಯೂನಿಟ್ ಆಫ್ ಹೋಪ್ನಿಂದ ಐವರು ಅನುಭವಿ ವೈದ್ಯರು ಹಾಗೂ ಅರ್ಲಿ ಇಂಟರ್ವೆನ್ನನ್ ತಜ್ಞರ ತಂಡ ಶಿಬಿರದಲ್ಲಿ ಭಾಗವಹಿಸಿತು.
ಶಿಶುವೈದ್ಯರು, ಮಕ್ಕಳ ಮನೋವೈದ್ಯರು, ಮಕ್ಕಳ ಮನಶ್ಯಾಸ್ತ್ರಜ್ಞರು, ಫಿಜಿಯೋಥೆರಪಿಸ್ಟ್ಗಳು ಹಾಗೂ ವಾಕ್ ಮತ್ತು ಭಾಷಾ ತಜ್ಞರು ಮಕ್ಕಳನ್ನು ತಪಾಸಣೆ ನಡೆಸಿದರು.
ಶಿಬಿರದಲ್ಲಿ 25 ಮಕ್ಕಳ ಆರೋಗ್ಯ ಹಾಗೂ ಬೆಳವಣಿಗೆಯನ್ನು ಪರಿಶೀಲಿಸಿ, ಅವರ ದೈಹಿಕ, ಮಾನಸಿಕ ಹಾಗೂ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪೋಷಕರಿಗೆ ಅಗತ್ಯ ಸಲಹೆಗಳನ್ನು ನೀಡಲಾಯಿತು.
ಬೆಳವಣಿಗೆಯ ಮೈಲಿಗಲ್ಲುಗಳಲ್ಲಿ ವಿಳಂಬ, ಮಾತು ಹಾಗೂ ಭಾಷಾ ಬೆಳವಣಿಗೆಯ ತೊಂದರೆ, ಕಲಿಕೆಗೆ ಸಂಬಂಧಿಸಿದ ಸಮಸ್ಯೆಗಳು, ನಡವಳಿಕೆ ಹಾಗೂ ಇತರ ಬೆಳವಣಿಗೆ ಸಂಬಂಧಿತ ಸಮಸ್ಯೆಗಳ ಕುರಿತು ತಜ್ಞರು ಪೋಷಕರೊಂದಿಗೆ ಸಮಾಲೋಚನೆ ನಡೆಸಿದರು.
ಹೆಚ್ಚಿನ ಪರೀಕ್ಷೆ ಅಥವಾ ಚಿಕಿತ್ಸೆಯ ಅಗತ್ಯವಿರುವ ಮಕ್ಕಳಿಗೆ ಮುಂದಿನ ಹಂತದಲ್ಲಿ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಲಭ್ಯವಿರುವ ತಜ್ಞ ವೈದ್ಯಕೀಯ ಸೇವೆಗಳು ಹಾಗೂ ಪರೀಕ್ಷೆಗಳ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ನಿಧಿ ಫೌಂಡೇಷನ್ನ ಗಾಯತ್ರಿ ಕಿರಣ್, ಗೀತಾ, ಸವಿತಾ ಹಾಗೂ ತಂಡ, ಗ್ರಾಮಾಂತರ ಟ್ರಸ್ಟ್ನ ಉಷಾ ಎಸ್.ಶೆಟ್ಟಿ ಇನ್ನೀತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.










