ವಿಜಯ ದರ್ಪಣ ನ್ಯೂಸ್…..
ಕೇಂಬ್ರಿಡ್ಜ್ ಅಧ್ಯಯನದ ಪ್ರಕಾರ ಯುವ ಭಾರತೀಯರು ವಾತಾವರಣದ ಕ್ರಮವನ್ನು ಬರೀ ಉದ್ದೇಶವಾಗಿ ಕಾಣದೆ ಉದ್ಯೋಗದ ಅವಕಾಶವಾಗಿ ಕಾಣುತ್ತಿದ್ದಾರೆ
ಭಾರತದಾದ್ಯಂತ 1,144 ವಿದ್ಯಾರ್ಥಿಗಳ ಸ್ವತಂತ್ರ ಮೌಲ್ಯಮಾಪನವು ಹವಾಮಾನದ ಮೇಲಿನ ಆಸಕ್ತಿ, ತಿಳುವಳಿಕೆ ಮತ್ತು ಕಾರ್ಯಪ್ರವೃತ್ತರಾಗುವ ಮನೋಭಾವದಲ್ಲಿ ಗಮನಾರ್ಹ ಏರಿಕೆಯನ್ನು ತೋರಿಸುತ್ತದೆ; ರಚನಾತ್ಮಕ ಹವಾಮಾನ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ ಹವಾಮಾನ ವಿಷಯಗಳ ಮೇಲಿನ ಆಸಕ್ತಿಯು ~ ಶೇ.40 ರಿಂದ ಶೇ.61 ಕ್ಕಿಂತ ಹೆಚ್ಚಾಗಿದ್ದು, ಹತ್ತರಲ್ಲಿ ಸುಮಾರು ಆರು ವಿದ್ಯಾರ್ಥಿಗಳು ಹವಾಮಾನ ಜಾಗೃತಿಯ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಿತರಾಗಿದ್ದಾರೆ.
• ಹವಾಮಾನ ಶಿಕ್ಷಣವು ಮುಂದಿನ ಪೀಳಿಗೆಯ ಸುಸ್ಥಿರತೆಯ ನಾಯಕರನ್ನು ಮತ್ತು ಭವಿಷ್ಯಕ್ಕೆ ಸಜ್ಜಾದ ಪ್ರತಿಭೆಗಳನ್ನು ರೂಪಿಸುತ್ತದೆ.
ನವದೆಹಲಿ, 15 ಸೆಪ್ಟೆಂಬರ್ 2026: ಹವಾಮಾನ ಬದಲಾವಣೆಯು ಆರ್ಥಿಕತೆಗಳು, ಉದ್ಯಮಗಳು, ಸಾರ್ವಜನಿಕ ನೀತಿಗಳು ಮತ್ತು ಭವಿಷ್ಯದ ಉದ್ಯೋಗಗಳನ್ನು ಹೆಚ್ಚಾಗಿ ರೂಪಿಸುತ್ತಿರುವ ಈ ಸಮಯದಲ್ಲಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ನೂತನ ಸ್ವತಂತ್ರ ಅಧ್ಯಯನವೊಂದು ಮಹತ್ವದ ವಿಷಯವನ್ನು ಬಹಿರಂಗಪಡಿಸಿದೆ. ಹವಾಮಾನ ಶಿಕ್ಷಣವು ಯುವಜನತೆಯನ್ನು ಹವಾಮಾನದ ಆತಂಕದಿಂದ ಹೊರತಂದು, ಮಾಹಿತಿಪೂರ್ಣ ಕ್ರಮ, ಭವಿಷ್ಯಕ್ಕೆ ಅಗತ್ಯವಿರುವ ಕೌಶಲ್ಯಗಳು ಮತ್ತು ನಿರ್ದಿಷ್ಟ ಗುರಿ-ಆಧಾರಿತ ವೃತ್ತಿಜೀವನದ ಆಕಾಂಕ್ಷೆಗಳತ್ತ ಹೆಜ್ಜೆ ಹಾಕಲು ಸಹಾಯ ಮಾಡುತ್ತದೆ ಎಂದು ಈ ಅಧ್ಯಯನವು ಸೂಚಿಸುತ್ತದೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಪ್ರೊಫೆಸರ್ ನಿಧಿ ಸಿಂಘಾಲ್ ಮತ್ತು ಡಾ. ಕ್ಯಾಮಿಲ್ಲಾ ಹದಿ ಚೌಧರಿ ಅವರು ನಡೆಸಿದ ಕೇಂಬ್ರಿಡ್ಜ್ ಕ್ಲೈಮೇಟ್ ಕ್ವೆಸ್ಟ್ ಕಾರ್ಯಕ್ರಮದ ಸ್ವತಂತ್ರ ಮೌಲ್ಯಮಾಪನ ಅಧ್ಯಯನವು ಗುಣಾತ್ಮಕ ಮತ್ತು ಪರಿಮಾಣಾತ್ಮಕ ಸಂಶೋಧನಾ ವಿಧಾನಗಳನ್ನು ಒಳಗೊಂಡಿದೆ. ಇದು ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕದ 18 ಶಾಲೆಗಳ ಸುಮಾರು 1,200 ವಿದ್ಯಾರ್ಥಿಗಳ ಬೃಹತ್ ಸಮೀಕ್ಷೆಯನ್ನು ಒಳಗೊಂಡಿದೆ (ಹಾಗೂ ಶಿಕ್ಷಕರೊಂದಿಗೆ ನಡೆಸಿದ ಒಂದು ಹೆಚ್ಚುವರಿ ಎಫ್.ಜಿ.ಡಿ. ಸಹ ಒಳಗೊಂಡಿದೆ).
ಈ ಅಧ್ಯಯನವು ಭಾರತೀಯ ವಿದ್ಯಾರ್ಥಿಗಳು ಹವಾಮಾನ ಕಲಿಕೆ, ಹವಾಮಾನ ಜಾಗೃತಿ ಕ್ರಮಗಳು ಮತ್ತು ಸುಸ್ಥಿರತೆಗೆ ಸಂಬಂಧಿಸಿದ ಆಕಾಂಕ್ಷೆಗಳಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಹೊಸ ಒಳನೋಟಗಳನ್ನು ನೀಡುತ್ತದೆ.
ಹವಾಮಾನ ಬದಲಾವಣೆಯ ಮೇಲಿನ ಆಸಕ್ತಿಯು ಗಮನಾರ್ಹವಾಗಿ ಹೆಚ್ಚಿದ್ದು, ಭಾಗವಹಿಸುವ ಮೊದಲು ಇದ್ದ ಸುಮಾರು ಶೇ.40ರಿಂದ ಕಾರ್ಯಕ್ರಮ ಪೂರ್ಣಗೊಂಡ ನಂತರ ಶೇ.61.2 ಕ್ಕೆ ಏರಿಕೆಯಾಗಿದೆ. ಗಮನಿಸಬೇಕಾದ ಅಂಶವೆಂದರೆ, ಆರಂಭದಲ್ಲಿ ಅತ್ಯಂತ ಕಡಿಮೆ ಆಸಕ್ತಿ ಹೊಂದಿದ್ದ ವಿದ್ಯಾರ್ಥಿಗಳಲ್ಲಿಯೇ ಹೆಚ್ಚಿನ ಪ್ರಗತಿ ಕಂಡುಬಂದಿದ್ದು, ಇದು ಹವಾಮಾನ ಶಿಕ್ಷಣವು ವಿಸ್ತಾರ ಶಿಕ್ಷಣಾರ್ಥಿಗಳನ್ನು ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ.
ಸುಮಾರು ಶೇ.59ರಷ್ಟು ವಿದ್ಯಾರ್ಥಿಗಳು ಹವಾಮಾನಕ್ಕೆ ಪೂರಕವಾದ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಣೆ ಹೊಂದಿರುವುದನ್ನು ತಿಳಿಸಿದ್ದಾರೆ.
ಶಕ್ತಿಯ ಬಳಕೆಯನ್ನು ಕಡಿಮೆ ಮಾಡುವುದು, ಏಕಬಳಕೆಯ ಪ್ಲಾಸ್ಟಿಕ್ಗಳನ್ನು ತ್ಯಜಿಸುವುದು, ಗಿಡ ನೆಡುವುದು, ಮರುಬಳಕೆ ಮಾಡುವುದು ಮತ್ತು ತಮ್ಮ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಪ್ರಾಯೋಗಿಕ ಹೆಜ್ಜೆಗಳನ್ನು ಅವರು ಗುರುತಿಸಿದ್ದಾರೆ. ಅಲ್ಲದೆ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ನಾಗರಿಕರು, ಉದ್ಯಮಗಳು, ಸರ್ಕಾರಗಳು ಮತ್ತು ಸಮುದಾಯಗಳ ನಡುವೆ ಸಹಕಾರ ಅಗತ್ಯ ಎಂಬುದನ್ನೂ ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಭಯ ಹುಟ್ಟಿಸುವಂತಹ ನಿರೂಪಣೆಗಳನ್ನು ಬಯಸುವುದಿಲ್ಲ ಎಂಬುದನ್ನೂ ಈ ಅಧ್ಯಯನವು ಕಂಡುಕೊಂಡಿದೆ. ಬದಲಾಗಿ, ಅವರು ವಿಶ್ವಾಸಾರ್ಹ ಮಾಹಿತಿ, ಪ್ರಾಯೋಗಿಕ ಜ್ಞಾನ ಮತ್ತು ಕೊಡುಗೆ ನೀಡಲು ಅರ್ಥಪೂರ್ಣ ಅವಕಾಶಗಳನ್ನು ಬಯಸುತ್ತಿದ್ದಾರೆ. ಹವಾಮಾನ ಶಿಕ್ಷಣವು ತಮಗೆ ಹತಾಶೆಯನ್ನು ಉಂಟುಮಾಡುವ ಬದಲು ಸಬಲೀಕರಣಗೊಳಿಸಬೇಕು, ಹಾಗೂ ಸವಾಲಿನ ತೀವ್ರತೆ ಮತ್ತು ಅದಕ್ಕಿರುವ ಪರಿಹಾರಗಳೆರಡನ್ನೂ ಅರ್ಥಮಾಡಿಕೊಳ್ಳಲು ತಮ್ಮನ್ನು ಸಜ್ಜುಗೊಳಿಸಬೇಕು ಎಂಬುದನ್ನು ವಿದ್ಯಾರ್ಥಿಗಳು ಸತತವಾಗಿ ಒತ್ತಿ ಹೇಳಿದ್ದಾರೆ.
ಸಂಶೋಧಕರ ಪ್ರಕಾರ, ವಿದ್ಯಾರ್ಥಿಗಳು ಹವಾಮಾನ ಬದಲಾವಣೆಯ ಕುರಿತು ವ್ಯಾಪಕವಾದ ತಿಳುವಳಿಕೆಯನ್ನು ಬೆಳೆಸಿಕೊಂಡಿದ್ದು, ಸಾರ್ವಜನಿಕ ಆರೋಗ್ಯ, ಅರ್ಥಶಾಸ್ತ್ರ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳೊಂದಿಗೆ ಅದಕ್ಕಿರುವ ಸಂಪರ್ಕವನ್ನು ಗುರುತಿಸಿದ್ದಾರೆ. ಈ ಸಂಶೋಧನಾ ಫಲಿತಾಂಶಗಳು ಹವಾಮಾನ ಸಾಕ್ಷರತೆಯನ್ನು ಕೇವಲ ಒಂದು ನಿರ್ದಿಷ್ಟ ಪರಿಸರ ವಿಷಯವಾಗಿ ನೋಡದೆ, ಭವಿಷ್ಯದ ಮೂಲಭೂತ ಕೌಶಲ್ಯವಾಗಿ ಪರಿಗಣಿಸಬೇಕು ಎಂಬುದನ್ನು ಸೂಚಿಸುತ್ತವೆ.
ಈ ಅಧ್ಯಯನದ ಅತ್ಯಂತ ಪ್ರಮುಖ ಫಲಿತಾಂಶವೆಂದರೆ, ವಿದ್ಯಾರ್ಥಿಗಳು ತಮ್ಮ ಹವಾಮಾನ ಕಲಿಕೆಯನ್ನು ಭವಿಷ್ಯದ ಶಿಕ್ಷಣ ಮತ್ತು ವೃತ್ತಿಜೀವನದ ಆಕಾಂಕ್ಷೆಗಳೊಂದಿಗೆ ಎಷ್ಟು ಆಳವಾಗಿ ಬೆಸೆದುಕೊಂಡಿದ್ದಾರೆ ಎಂಬುದು. ವಿದ್ಯಾರ್ಥಿಗಳು ಸುಸ್ಥಿರತೆ, ಪರಿಸರ ನೀತಿ, ಹವಾಮಾನ ತಂತ್ರಜ್ಞಾನ, ಎಂಜಿನಿಯರಿಂಗ್, ಸುಸ್ಥಿರ ಉದ್ಯಮ ಮತ್ತು ಆವಿಷ್ಕಾರದ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.
ಅವರು ಹವಾಮಾನ ಜಾಗೃತಿಯ ಕ್ರಿಯೆಗಳನ್ನು ತಮ್ಮ ಗುರಿಗಿಂತ ಬೇರೆ ಎಂದು ನೋಡದೆ, ವೃತ್ತಿಪರ ಯಶಸ್ಸನ್ನು ಸಾಮಾಜಿಕ ಪರಿಣಾಮದೊಂದಿಗೆ ಸಂಯೋಜಿಸುವ ಮಾರ್ಗವಾಗಿ ಕಂಡುಕೊಂಡಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಪ್ರೊಫೆಸರ್ ನಿಧಿ ಸಿಂಘಾಲ್ ಅವರು, “ಈ ಅಧ್ಯಯನದ ಅತ್ಯಂತ ಗಮನಾರ್ಹ ಸಂಶೋಧನೆಯೆಂದರೆ ಯುವಜನರು ಹವಾಮಾನ ಬದಲಾವಣೆಯೊಂದಿಗೆ ತೊಡಗಿಸಿಕೊಳ್ಳುವ ರೀತಿಯಲ್ಲಿ ಉಂಟಾದ ಬದಲಾವಣೆ. ಕಾರ್ಯಕ್ರಮದ ಮೊದಲು ಹವಾಮಾನ ವಿಷಯಗಳ ಮೇಲಿದ್ದ ಆಸಕ್ತಿಯು ಸುಮಾರು ಶೇ.40 ರಷ್ಟಿದ್ದು, ನಂತರ ಶೇ.61 ಕ್ಕಿಂತ ಹೆಚ್ಚಾಯಿತು. ಅದಕ್ಕಿಂತ ಹೆಚ್ಚಾಗಿ ಅವರ ಆಲೋಚನೆಯ ವಿಸ್ತಾರವು ನಮ್ಮ ಗಮನ ಸೆಳೆಯಿತು. ವಿದ್ಯಾರ್ಥಿಗಳು ಹವಾಮಾನ ಬದಲಾವಣೆಯನ್ನು ಕೇವಲ ಪರಿಸರದ ಕೋನದಿಂದ ನೋಡುತ್ತಿರಲಿಲ್ಲ; ಬದಲಾಗಿ ಅದನ್ನು ಸಾರ್ವಜನಿಕ ಆರೋಗ್ಯ, ಸಾಮಾಜಿಕ ನ್ಯಾಯ, ಸಮಾನತೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಭವಿಷ್ಯದ ವೃತ್ತಿಜೀವನಕ್ಕೆ ಸಂಯೋಜಿಸುತ್ತಿದ್ದರು. ಈ ಸಂಶೋಧನಾ ಫಲಿತಾಂಶಗಳು ಹವಾಮಾನ ಸಾಕ್ಷರತೆಯ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತವೆ. ಇದು ಯುವಜನರಿಗೆ ಜಾಗತಿಕ ಸಂಕೀರ್ಣ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ತಮ್ಮ ಪಾತ್ರವನ್ನು ಗುರುತಿಸಲು ನೆರವಾಗುತ್ತದೆ,” ಎಂದು ಹೇಳಿದರು.
ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್ ಅಂಡ್ ಅಸೆಸ್ಮೆಂಟ್ ವ್ಯವಸ್ಥಾಪಕ ನಿರ್ದೇಶಕ (ದಕ್ಷಿಣ ಏಷ್ಯಾ) ಅರುಣ್ ರಾಜಮಣಿ, “ಹವಾಮಾನ ಶಿಕ್ಷಣವು ಈಗ ಕೇವಲ ಪರಿಸರದ ಸವಾಲನ್ನು ಅರ್ಥಮಾಡಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ; ಬದಲಾಗಿ ಯುವಜನರನ್ನು ಅವರು ಮುಂದೆ ಪಡೆಯಲಿರುವ ಜಗತ್ತಿಗೆ ಮತ್ತು ಅವರು ರೂಪಿಸಲು ನೆರವಾಗುವ ಅವಕಾಶಗಳಿಗೆ ಸಜ್ಜುಗೊಳಿಸುವುದಾಗಿದೆ. ವಿದ್ಯಾರ್ಥಿಗಳಿಗೆ ವಿಶ್ವಾಸಾರ್ಹ ಜ್ಞಾನ ಮತ್ತು ತೊಡಗಿಸಿಕೊಳ್ಳಲು ಪ್ರಾಯೋಗಿಕ ಮಾರ್ಗಗಳನ್ನು ನೀಡಿದಾಗ, ಅವರು ಹವಾಮಾನ ಕಲಿಕೆಯನ್ನು ಉನ್ನತ ಶಿಕ್ಷಣ, ವೃತ್ತಿಜೀವನ, ಆವಿಷ್ಕಾರ ಮತ್ತು ಸಾಮಾಜಿಕ ಪರಿಣಾಮಗಳೊಂದಿಗೆ ಸಂಯೋಜಿಸಲು ಪ್ರಾರಂಭಿಸುತ್ತಾರೆ ಎಂಬುದನ್ನು ಈ ಸಂಶೋಧನಾ ಫಲಿತಾಂಶಗಳು ತೋರಿಸುತ್ತವೆ. ಕೇಂಬ್ರಿಡ್ಜ್ನಲ್ಲಿ ನಾವು ಬೆಂಬಲಿಸಲು ಬಯಸುವ ಭವಿಷ್ಯಕ್ಕೆ ಸಜ್ಜುಗೊಳಿಸುವ ಕಲಿಕೆ ಇದೇ ಆಗಿದೆ,” ಎಂದು ಹೇಳಿದರು.
ವಿಶ್ವಾದ್ಯಂತ ಸಂಸ್ಥೆಗಳು ಸುಸ್ಥಿರತೆ, ವಾತಾವರಣದ ಅಳವಡಿಕೆ ಮತ್ತು ಇ.ಎಸ್.ಜಿ. ಉಪಕ್ರಮಗಳಲ್ಲಿ ಹೂಡಿಕೆಗಳನ್ನು ವಿಸ್ತರಿಸುತ್ತಿರುವ ಈ ಸಮಯದಲ್ಲಿ, ಯುವ ಪೀಳಿಗೆಯು ಸುಸ್ಥಿರತೆಯನ್ನು ಕೇವಲ ಒಂದು ಸಾಮಾಜಿಕ ಕಳಕಳಿಯಾಗಿ ನೋಡದೆ, ಅಧ್ಯಯನ, ಆವಿಷ್ಕಾರ, ಉದ್ಯಮಶೀಲತೆ ಮತ್ತು ಭವಿಷ್ಯದ ವೃತ್ತಿಪರ ಅವಕಾಶದ ಕ್ಷೇತ್ರವಾಗಿ ಕಾಣುತ್ತಿದೆ ಎಂಬುದನ್ನು ಈ ಸಂಶೋಧನಾ ಫಲಿತಾಂಶಗಳು ಎತ್ತಿ ತೋರಿಸಿವೆ.
ವಿದ್ಯಾರ್ಥಿಗಳು ಮುಂದೆ ಏನನ್ನು ಬಯಸುತ್ತಾರೆ
ವಾತಾವರಣದ ಶಿಕ್ಷಣವನ್ನು ಬಲಪಡಿಸಲು ಈ ಸಂಶೋಧನೆಯು ಐದು ನಿರಂತರ ಆದ್ಯತೆಗಳನ್ನು ಗುರುತಿಸಿದೆ:
• ವಿಶ್ವಾಸಾರ್ಹ ಮತ್ತು ಪುರಾವೆ ಆಧರಿತ ಹವಾಮಾನ ಮಾಹಿತಿಯ ಲಭ್ಯತೆ.
• ಯೋಜನೆಗಳು, ಕ್ಷೇತ್ರ ಭೇಟಿಗಳು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕ ಹೆಚ್ಚಿನ ಪ್ರಾಯೋಗಿಕ ಕಲಿಕೆ
• ಹವಾಮಾನ ಶಿಕ್ಷಣವನ್ನು ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳೊಂದಿಗೆ ಜೋಡಿಸುವ ಸ್ಪಷ್ಟ ಮಾರ್ಗಗಳು.
• ಸುಸ್ಥಿರತೆಯ ಕಲಿಕೆಯಲ್ಲಿ ದೇಶೀಯ ಮತ್ತು ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಹೆಚ್ಚಿನ ಸಂಯೋಜನೆ.











