--Ads--

ಕಾಗೆಯೊಂದು……

On: October 13, 2026 6:17 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕಾಗೆಯೊಂದು……

ಸಮಯ ರಾತ್ರಿ 9:00 ಗಂಟೆ. ನಮ್ಮ ಮನೆಯಲ್ಲಿ ಎಲ್ಲರೂ ಮಲಗುವ ಸಮಯ. ನಾನು ಅಪ್ಪನ ಜೊತೆ ಹಾಸಿಗೆಯ ಮೇಲೆ ಮಲಗಿದ್ದೇನೆ. ಅಪ್ಪನ ಎದೆಯ ಮೇಲೆ ತಲೆ ಹಾಕಿ ಇವತ್ತಿನ ಕಥೆ ಏನಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದೇನೆ.

ಅಪ್ಪ ದಿನವೂ ನನಗೆ ಒಂದೊಂದು ನೀತಿ ಕಥೆಯನ್ನು ಹೇಳುತ್ತಾರೆ. ಕಥೆ ಕೇಳುತ್ತಾ ಹಾಗೇ ನಿದ್ದೆ ಮಾಡುತ್ತೇನೆ. ಆದರೆ ಅಪ್ಪ ಇವತ್ತು ಇನ್ನೂ ಕಥೆ ಹೇಳಿಲ್ಲ. ನನಗೆ ನಿದ್ರೆಯೂ ಬರುತ್ತಿಲ್ಲ. ಅಪ್ಪ ಏನೋ ಬೇಸರದಲ್ಲಿದ್ದಂತೆ ಕಾಣುತ್ತಿತ್ತು. ಸುಮಾರು ಅರ್ಧ ಗಂಟೆಯಾದರೂ ಅಪ್ಪ ಕತೆ ಹೇಳಲಿಲ್ಲ, ನಾನು ನಿದ್ದೆ ಮಾಡದೆ ಹಾಗೆ ಹೊರಳಾಡುತ್ತಾ ಇದ್ದೆ. ಇದನ್ನು ಗಮನಿಸಿದ ಅಪ್ಪನಿಗೆ ಓ, ಕತೆ ಕೇಳದೆ ಇವಳು ನಿದ್ದೆ ಮಾಡುವುದಿಲ್ಲ ಎನಿಸಿರಬೇಕು. ನಿಧಾನವಾಗಿ ಕಥೆ ಶುರು ಮಾಡಿದರು.

ಮಗಳೇ, ನಾನು 50 ವರ್ಷದ ಹಿಂದೆ ನಮ್ಮ ಹಳ್ಳಿಯಲ್ಲಿ ನನ್ನ ಬಾಲ್ಯವನ್ನು ಕಳೆಯುತ್ತಿದ್ದಾಗ ಇವತ್ತಿನ ಈ ನಗರ ಬದುಕಿನ ಸಂಕೀರ್ಣ, ಸಂಘರ್ಷ, ಒತ್ತಡ, ಜಂಜಾಟದ ಬದುಕು ಇರಲೇ ಇಲ್ಲ. ಅದು ಒಂದು ರೀತಿ ಇಡೀ ಊರೇ ಪ್ರಶಾಂತವಾಗಿ, ತಟಸ್ಥವಾಗಿ, ಮೌನವಾಗಿ ಹರಿಯುವ ನದಿಯಂತೆ ಇಡೀ ಜನಜೀವನವೇ ಸಾಗುತ್ತಿತ್ತು. ಅಲ್ಲೋ ಇಲ್ಲೋ ಒಂದೆರಡು ಅಹಿತಕರ, ಕೆಟ್ಟ ಘಟನೆಗಳು ನಡೆಯುತ್ತಿದ್ದುದು ಬಿಟ್ಟರೆ ಅಂತಹ ಭಯಂಕರ ಅವಘಡಗಳು, ಜಗಳಗಳು ನಡೆಯುತ್ತಲೇ ಇರಲಿಲ್ಲ. ಕೋರ್ಟು, ಪೊಲೀಸ್ ಸ್ಟೇಷನ್ ತುಂಬಾ ದೂರದ ವಿಷಯಗಳಾಗಿದ್ದವು. ಒಬ್ಬರಿಗೊಬ್ಬರು ಸಹಕಾರ ಕೊಡುತ್ತಾ, ಸಹಬಾಳ್ವೆ ನಡೆಸುತ್ತಾ ತುಂಬಾ ಚಂದದ ಜೀವನಶೈಲಿ ಅದಾಗಿತ್ತು.

ಹಂಚಿ ತಿನ್ನುವ ಗುಣವೇ ಮೇಲುಗೈ ಪಡೆದು ಹೊಂಚಿ ತಿನ್ನುವ ಬುದ್ಧಿ ಇರಲೇ ಇಲ್ಲ. ಮಗಳೇ, 12ನೇ ಶತಮಾನದ ಶರಣರ ಮಾತು ಎಷ್ಟೊಂದು ಅರ್ಥಪೂರ್ಣ ಮತ್ತು ನಮಗೆಲ್ಲ ಅನ್ವಯವಾಗುತ್ತಿತ್ತು.
” ಕಾಗೆಯೊಂದು ಅಗುಳ ಕಂಡರೆ ತನ್ನ ಬಳಗವನ್ನು ಕೂಗಿ ಕರೆಯುವುದು… ”

ಆದರೆ ದಿನಗಳು ಉರುಳುತ್ತಾ ಬದುಕು ವೇಗ, ಸ್ಪರ್ಧೆ, ದುರಾಸೆ, ಸಂಕೀರ್ಣವಾಗುತ್ತಾ ಸಾಗಿದಂತೆ ನಾನು ಊಹಿಸದ ಘಟನೆಗಳು ನಡೆದವು. ಮೊನ್ನೆ ಊರಿನಿಂದ ಬಂದ ಸುದ್ದಿ ನನಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ನಮ್ಮೂರಿನ ಕೊನೆಯಲ್ಲಿ ಒಂದು ಮಧ್ಯಮ ವರ್ಗದ ರೈತ ಕುಟುಂಬ ವಾಸವಾಗಿತ್ತು. ಅದು ಅವಿಭಕ್ತ ಕುಟುಂಬ. ಆರು ಜನ ಅಣ್ಣತಮ್ಮಂದಿರು ಒಟ್ಟಿಗೆ ತಮ್ಮ ತಂದೆ ತಾಯಿ, ಅಜ್ಜ ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ ಇವರೊಂದಿಗೆ ವಾಸ ಮಾಡುತ್ತಿದ್ದರು. ಆರೂ ಮಕ್ಕಳಿಗೂ ಮದುವೆಯಾಗಿತ್ತು. ಅವರೆಲ್ಲರಿಗೆ ಮಕ್ಕಳೂ ಇದ್ದರು. ಸುಮಾರು 35 ಜನರ ಕುಟುಂಬವದು. ನಾನು ಆ ಊರಿನಲ್ಲಿ ಇರುವವರೆಗೂ ಒಂದೇ ಒಂದು ದಿನ ಅವರು ಜಗಳವಾಡಿದ್ದನ್ನು, ಒಬ್ಬರಿಗೊಬ್ಬರು ದೂರಿದನ್ನು ನೋಡೇ ಇರಲಿಲ್ಲ. ಹಬ್ಬ ಹರಿದಿನಗಳನ್ನು ತುಂಬಾ ಉತ್ಸಾಹದಿಂದ ಆಚರಿಸುತ್ತಿದ್ದರು. ಸಾಕಷ್ಟು ಕೃಷಿ ಭೂಮಿ ಇದ್ದುದರಿಂದ ಎಲ್ಲರೂ ಹಂಚಿಕೊಂಡು ಹೊಲ, ತೋಟ, ಗದ್ದೆಗಳಲ್ಲಿ ದುಡಿಯುತ್ತಿದ್ದರು. ಅವರು ದೊಡ್ಡ ವಿದ್ಯಾಭ್ಯಾಸ ಮಾಡದಿದ್ದರೂ ಸ್ಥಳೀಯ ಶಾಲೆಯಲ್ಲಿಯೇ ಓದಿ ಕೃಷಿಯನ್ನೇ ನಂಬಿ ಬದುಕುತ್ತಿದ್ದರು. ಯಾವುದೇ ಸರ್ಕಾರಿ ಉದ್ಯೋಗಕ್ಕೆ ಹೋಗುವ ಪ್ರಯತ್ನವನ್ನೇ ಮಾಡಲಿಲ್ಲ.

ನಾನು ಹತ್ತನೇ ತರಗತಿಯ ನಂತರ ಕಾಲೇಜಿಗೆ ನಗರಕ್ಕೆ ಸೇರಿ ಉದ್ಯೋಗ ಪಡೆದು ಈಗ ಇಲ್ಲಿಯೇ ವಾಸಿಸುತ್ತಿದ್ದೇನೆ. ಊರಿನೊಂದಿಗೆ ಅಂತಹ ಸಂಪರ್ಕ ಇಲ್ಲ.

ಮೊನ್ನೆ ಊರಿನ ನನ್ನ ಪರಿಚಿತರು ಕರೆ ಮಾಡಿ ಆ ಊರಿನಲ್ಲಿ ಇಬ್ಬರ ಕೊಲೆಯಾಗಿದೆ ಎಂದು ಹೇಳಿದರು. ಅದು ಯಾರೆಂದರೆ ನಾನು ನಿನಗೆ ಹೇಳಿದ ಆ ರೈತ ಕುಟುಂಬದ ಇಬ್ಬರ ಕೊಲೆಯಾಗಿತ್ತು. ಒಬ್ಬ ಮಗ ಮತ್ತು ಇನ್ನೊಬ್ಬ ಸೊಸೆಯ ಸಾವಾಗಿ ಇಡೀ ಮನೆಯವರನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದರು. ಅದಕ್ಕೆ ಕಾರಣ ಸುಮಾರು 15 ವರ್ಷಗಳ ಹಿಂದೆಯೇ ಈ ಮನೆಯವರು ಜಮೀನಿನ ವಿಷಯಕ್ಕೆ ಭಾಗ ಮಾಡಿಕೊಳ್ಳುವಾಗ ಜಗಳವಾಡಿ ಇಬ್ಬರು ಅಣ್ಣಂದಿರು ಬೇರೆಯಾಗಿ ತಮ್ಮದೇ ಪ್ರತ್ಯೇಕ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ಉಳಿದ ನಾಲ್ಕು ಜನ ಮತ್ತೊಂದು ಕಡೆ ಮೂಲ ಮನೆಯಲ್ಲಿಯೇ ಇದ್ದರು. ಆದರೆ ಇನ್ನೂ ಬದುಕಿದ್ದ ಅವರಪ್ಪ ಜಮೀನನ್ನು ಇಬ್ಬಾಗ ಮಾಡಲು ಮನಸ್ಸು ಒಪ್ಪದೆ ಸತಾಯಿಸುತ್ತಿದ್ದುದರಿಂದ ಈ ಇಬ್ಬರು ಮಕ್ಕಳು ಇದನ್ನು ಕೋರ್ಟಿಗೆ ತೆಗೆದುಕೊಂಡು ಹೋಗಿದ್ದರು. ಸುಮಾರು ವರ್ಷಗಳಿಂದ ಎರಡು ಕುಟುಂಬದವರು ಕೋರ್ಟಿಗೆ ಅಲೆದು ಅಲೆದು, ವಕೀಲರಿಗೆ ಹಣ ಕೊಟ್ಟು ಬೇಸರಗೊಂಡಿದ್ದರು.

ಅಂತಿಮವಾಗಿ ಇತ್ತೀಚೆಗಷ್ಟೇ ಕೋರ್ಟು ಈ ಇಬ್ಬರು ಮಕ್ಕಳಿಗೆ ಅವರ ಭಾಗವನ್ನು ಕೊಡಬೇಕೆಂದು ತೀರ್ಪು ನೀಡಿತು. ಇದನ್ನು ಅಪ್ಪ ಮತ್ತು ಉಳಿದ ನಾಲ್ಕು ಮಕ್ಕಳಿಗೆ ಸಹಿಸಲು ಸಾಧ್ಯವಾಗದೆ ಯಾವುದೋ ವಿಷಯವನ್ನು ಮುಂದೆ ಮಾಡಿ ಪ್ರತ್ಯೇಕವಾಗಿದ್ದ ಅವರದೇ ಇಬ್ಬರ ಮಕ್ಕಳು ಮತ್ತು ಸೊಸೆಯಂದಿರನ್ನು ಕೊಲ್ಲಲು ಪ್ರಯತ್ನಿಸಿ ಅದರಲ್ಲಿ ಒಬ್ಬ ಮಗ ಮತ್ತು ಇನ್ನೊಬ್ಬ ಸೊಸೆ ತೀರಿಕೊಂಡು ಉಳಿದವರಿಗೆ ಗಂಭೀರ ಗಾಯವಾಗಿದೆ. ಹತ್ಯೆಗೆ ಯತ್ನಿಸಿದ ಮತ್ತೊಂದು ಕುಟುಂಬದ ಎಲ್ಲರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಈ ವಿಷಯವನ್ನು ಗೆಳೆಯ ಕರೆ ಮಾಡಿ ಹೇಳಿದ್ದರಿಂದ ನನ್ನ ಮನಸ್ಸು ತುಂಬಾ ಘಾಸಿಗೊಂಡಿದೆ. ಸಹಕಾರದೊಂದಿಗೆ, ಸಹಬಾಳ್ವೆಯಿಂದ ಎಷ್ಟೊಂದು ನೆಮ್ಮದಿಯಾಗಿ ಇಡೀ ಊರೇ ಧ್ಯಾನಸ್ಥ ಸ್ಥಿತಿಯಲ್ಲಿ ಜೀವನ ಕಳೆಯುತ್ತಿದ್ದ ದಿನಗಳು ಕಳೆದು ಎಲ್ಲರ ಮನಸ್ಥಿತಿ ಪ್ರಕ್ಷ್ಯುಬ್ಧವಾಗಿ ಅನೇಕ ಅನಾಹುತಗಳಾಗುತ್ತಿರುವುದು ನನಗೆ ಘಾಸಿಯುಂಟುಮಾಡಿದೆ.

ಕಾಡಿನ ಪ್ರಾಣಿಗಳು, ಗಿಡಮರಗಳಲ್ಲಿ ಸಂಜೆ ಚಿಲಿಪಿಲಿ ಗುಟ್ಟುತ್ತಾ ಒಟ್ಟಾಗಿ ವಾಸಿಸುವ ಪಕ್ಷಿಗಳು, ಅನೇಕ ಕ್ರಿಮಿಕೀಟಗಳು ಎಲ್ಲವೂ ಆಹಾರಕ್ಕಾಗಿ, ತಮ್ಮ ಅಸ್ತಿತ್ವಕ್ಕಾಗಿ ಹೊರತುಪಡಿಸಿ ಸಹಜವಾಗಿ ಒಂದಕ್ಕೊಂದು ಸಹಕರಿಸುತ್ತಾ, ಸಹಸ್ರ ಸಹಸ್ರ ಶತಮಾನಗಳಿಂದ ಒಟ್ಟಿಗೆ ವಾಸಿಸುತ್ತಾ, ತಾವು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವಾಗ ಈ ಮನುಷ್ಯ ತನ್ನದಲ್ಲದ, ತನ್ನೊಂದಿಗೆ ಹೊತ್ತೊಯ್ಯದ, ಹುಟ್ಟುತ್ತಾ ತಾನೆಂದು ತಂದಿರದ ಆಸ್ತಿ, ಹಣಕ್ಕಾಗಿ ಕೇವಲ 70/80 ವರ್ಷದ ಬದುಕಿನ ಅವಧಿಯಲ್ಲಿಯೇ ಒಬ್ಬರಿಗೊಬ್ಬರು ಕೊಚ್ಚಿ ಕೊಂದುಕೊಳ್ಳುವ ಕ್ರಿಯೆ ನಿಜಕ್ಕೂ ಆಘಾತಕಾರಿ.

ಮಗಳೇ, ಕಾಗೆ ಅಗುಳ ಕಂಡು ತನ್ನ ಬಳಗವನ್ನು ಕರೆಯುವ ಗುಣ ಆ ಪಕ್ಷಿಗೆ ಹುಟ್ಟಿನಿಂದ ಬಂದು ಈ ಕ್ಷಣದವರೆಗೂ ಹಾಗೆ ಇರುವಾಗ ಮನುಷ್ಯ ಮಾತ್ರ ಹಂಚಿ ತಿನ್ನದೆ ಹೊಂಚಿ ತಿನ್ನುವ ದುರಾಸೆಯ ಸಮಾಜ ನಿರ್ಮಾಣವಾಗಿದೆ. ಇದು ತುಂಬಾ ತಪ್ಪು ಮತ್ತು ಮಾನವೀಯ ಮೌಲ್ಯಗಳ ವಿರುದ್ಧವಾದುದು.

ಮಗಳೇ, ಯಾವುದೇ ಸಂದರ್ಭದಲ್ಲಿ, ಯಾವುದೇ ಪರಿಸ್ಥಿತಿಯಲ್ಲಿ ಸಹಕಾರ, ಸಹಬಾಳ್ವೆಯ ಸಮಾಜವನ್ನು ನಿರ್ಮಿಸಲು ನಾವು ಸದಾ ಕ್ರಿಯಾಶೀಲರಾಗಬೇಕು. ಅರಿಷಡ್ವರ್ಗಗಳೆಂಬ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಭಾವನೆಗಳ ಮೇಲೆ ಸದಾ ನಿಯಂತ್ರಣ ಹೊಂದಿರಬೇಕು. ಸರಳ, ಸಹಜ, ಸಾಮಾನ್ಯ ಬದುಕು ನಮ್ಮದಾಗಬೇಕು. ನಮ್ಮದಲ್ಲದ ಹಣ, ಆಸ್ತಿ, ಅಂತಸ್ತುಗಳಿಗೆ ನಾವೆಂದು ಆಸೆಪಡಬಾರದು.

ನಾನೇ ಕಣ್ಣಾರೆ ಕಂಡ ಕುಟುಂಬದ ಸಾವು, ನೋವು, ಜೈಲು ಪಾಲಾದದ್ದು ಇವತ್ತಿನ ಸಣ್ಣ ಕಥೆಯಾದರು ನಿನಗೆ ಇದೊಂದು ಬಹುದೊಡ್ಡ ಪಾಠ.

ಅಪ್ಪ ಕಥೆ ಹೇಳುತ್ತಾ ಒತ್ತರಿಸಿ ಬಂದ ದುಃಖವನ್ನು ಅನುಭವಿಸುವುದನ್ನು ಅವರ ಹೃದಯ ಬಡಿತವೇ ಹೇಳುತ್ತಿತ್ತು. ಅವರು ನಿಧಾನವಾಗಿ ನಿದ್ರೆಗೆ ಜಾರಿದರು. ನಾನು ಅವರ ಎದೆಯ ಮೇಲಿಂದ ತಲೆ ಎತ್ತಿ ನನ್ನ ದಿಂಬಿಗೆ ಒರಗಿದೆ.

ನನಗೆ ಮಾತ್ರ ನಿದ್ದೆ ಬರಲಿಲ್ಲ. ಸ್ವತಃ ಒಂದೇ ತಾಯಿಯಲ್ಲಿ ಹುಟ್ಟಿದ, ರಕ್ತ ಹಂಚಿಕೊಂಡ ಅಣ್ಣ ತಮ್ಮಂದಿರು, ಅಪ್ಪ ಮಕ್ಕಳು ಜಮೀನಿಗಾಗಿ ಹೊಡೆದಾಡಿ ಸಾಯುವ ಸಮಾಜ ನಿಜಕ್ಕೂ ಅನಾಗರಿಕ ಸಮಾಜ. ಅದೇ ಅಣ್ಣ ತಮ್ಮಂದಿರು ಕುಳಿತು ಮಾತುಕತೆಯಾಡಿಕೊಂಡು ಕೊಡು – ಕೊಳ್ಳುವಿಕೆಯ ಮೂಲಕ ಬಗೆಹರಿಸಿಕೊಂಡಿದ್ದರೆ ಎರಡು ಜೀವ ಉಳಿಯುತ್ತಿತ್ತು. ಕುಟುಂಬಗಳು ಜೈಲು ಪಾಲಾಗುವುದು ತಪ್ಪುತ್ತಿತ್ತು. ನ್ಯಾಯಾಲಯಕ್ಕೆ ಅಲೆಯುವುದು, ವಕೀಲರಿಗೆ ಕೊಡುವ ಹಣ ಎಲ್ಲವೂ ಉಳಿಯುತ್ತಿತ್ತು.

ಕೇವಲ ಹಂಚಿ ತಿನ್ನುವ ಸಹಕಾರ ಮತ್ತು ಸಹ ಬಾಳ್ವೆಯ ಕೊರತೆ ಇಷ್ಟಕೆಲ್ಲಾ ಕಾರಣ. ನಾನೆಂದೂ ನನ್ನ ಜೀವನದಲ್ಲಿ ಆ ತಪ್ಪು ಮಾಡಬಾರದು ಎಂದು ಮನಸ್ಸಿನಲ್ಲಿ ಪ್ರತಿಜ್ಞೆ ಮಾಡಿಕೊಂಡು ನಿದ್ದೆ ಮಾಡಲು ಪ್ರಯತ್ನಿಸುತ್ತಿದ್ದೇನೆ.

ಸ.. ಹ… ಕಾ…. ರ,
ಸ….. ಹ….. ಬಾ…. ಳ್ವೆ….. ಎಂದು ತುಟಿಗಳು ತೊದಲುತ್ತಿವೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now