--Ads--

ಶ್ರೀ ದೇವಿರಮ್ಮ ಜಾತ್ರಾ ಮಹೋತ್ಸವ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

On: October 17, 2026 5:52 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಶ್ರೀ ದೇವಿರಮ್ಮ ಜಾತ್ರಾ ಮಹೋತ್ಸವ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

 

ಚಿಕ್ಕಮಗಳೂರು: ಬಿಂಡಿಗ ಶ್ರೀ ದೇವಿರಮ್ಮ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ನವೆಂಬರ್ ೭ರಿಂದ ೧೧ರವರೆಗೆ ನಡೆಯಲಿದ್ದು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀ ದೇವಿರಮ್ಮ ದೇವಾಲಯದ ದೀಪೋತ್ಸವ ಮತ್ತು ಜಾತ್ರಾ ಮಹೋತ್ಸವದ ಕುರಿತು ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಶ್ರೀ ದೇವಿರಮ್ಮನವರ ದೇವಾಲಯದ ದೀಪೋತ್ಸವ ಮತ್ತು ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ವಾಹನ ನಿಲುಗಡೆಗಾಗಿ ಸ್ಥಳವನ್ನು ಗುರುತಿಸಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಬೆಟ್ಟಕ್ಕೆ ನಾಲ್ಕು ದಿಕ್ಕುಗಳಿಂದ ಹತ್ತುವುದರಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಚಿಕ್ಕಮಗಳೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಬಿಂಡಿಗ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದೇವಾಲಯದ ಆವರಣದಲ್ಲಿ ಹಾಗೂ ಗ್ರಾಮದಲ್ಲಿ ಸ್ವಚ್ಛತೆ, ತ್ಯಾಜ್ಯ ಸಂಗ್ರಹಕ್ಕಾಗಿ ಅಗತ್ಯ ಸಿಬ್ಬಂದಿ ಹಾಗೂ ಟಿಪ್ಪರ್ ವ್ಯವಸ್ಥೆ ಮಾಡಬೇಕಲ್ಲದೆ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡಬೇಕಲ್ಲದೆ ಭಕ್ತಾದಿಗಳಿಗೆ ಜಾತ್ರಾ ಮಹೋತ್ಸವದ ಮಾಹಿತಿ ಕುರಿತು ನಾಮಫಲಕಗಳನ್ನು ಅಗತ್ಯ ಸ್ಥಳಗಳಲ್ಲಿ ಅಳವಡಿಸಬೇಕು, ಜಾತ್ರೆ ಸಮಯದಲ್ಲಿ ಅನುಮತಿ ಪಡೆಯದೆ ಯಾವುದೇ ಅಂಗಡಿಗಳನ್ನು ತೆರೆಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು, ಯಾತ್ರಾರ್ಥಿಗಳು ಆಗಮಿಸುವುದರಿಂದ ಭಕ್ತಾದಿಗಳಿಗೆ ಆರೋಗ್ಯ ಸೇವೆ ಒದಗಿಸಲು ಬೆಟ್ಟದ ಮೇಲೆ, ಬೆಟ್ಟದ ಮಧ್ಯಭಾಗ, ಫಲಾಹಾರ ಕಲ್ಲು, ಐ.ಡಿ.ಪೀಠ (ಮಾಣಿಕ್ಯಧಾರ) ಹಾಗೂ ದೇವಾಲಯದ ಕೆಳಭಾಗದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ವೈದ್ಯಕೀಯ ಪರಿಕರಗಳೊಂದಿಗೆ ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ತುರ್ತು ಆರೋಗ್ಯ ಸೇವೆ ಒದಗಿಸಬೇಕು. ಮೂರು ಸುಸಜ್ಜಿತ ಆಂಬ್ಯುಲೆನ್ಸ್ ವಾಹನಗಳನ್ನು ಸ್ಥಳದಲ್ಲಿ ಇರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ತಿಳಿಸಿದರು.

ಜಾತ್ರೆ ಸಮಯದಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕೆಂದು ಮೆಸ್ಕಾಂ ಇಲಾಖೆ ಕಾರ್ಯಪಾಲಕ ಅಭಿಯಂತರರಿಗೆ,  ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ಅಗತ್ಯ ರಕ್ಷಣಾ ಸಾಮಗ್ರಿಗಳೊಂದಿಗೆ ಬೆಟ್ಟ ಹತ್ತುವ ಸ್ಥಳಗಳಲ್ಲಿ ಮತ್ತು ದೇವಾಲಯದ ಕೆಳ ಭಾಗದಲ್ಲಿ ಅಗತ್ಯ ಸಿಬ್ಬಂದಿಗಳೊಂದಿಗೆ ಹಾಜರಿದ್ದು ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು ಬೆಟ್ಟ ಹತ್ತುವ ಮಾರ್ಗದಲ್ಲಿ ಕಡಿದಾದ ಸ್ಥಳಗಳಲ್ಲಿ  ಹಗ್ಗದ ಸಹಾಯದಿಂದ ಭಕ್ತಾದಿಗಳಿಗೆ ಬೆಟ್ಟ ಹತ್ತುವ ವ್ಯವಸ್ಥೆ ಮಾಡಬೇಕೆಂದು ಅಗ್ನಿ ಶಾಮಕ ಇಲಾಖೆ ಅಧಿಕಾರಿಗೆ ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಜಾತ್ರೆ ಪ್ರಾರಂಭದಿಂದ ಮುಗಿಯುವವರೆಗೆ ವಿಶೇಷ ಬಸ್‌ಗಳನ್ನು ಒದಗಿಸಬೇಕು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ಥಿಪಡಿಸಬೇಕು, ದೇವಾಲಯಕ್ಕೆ ಹೋಗುವ ರಸ್ತೆ ಮಾರ್ಗದ ಇಕ್ಕೆಲಗಳಲ್ಲಿ ಹೊರಚಾಚಿರುವ ಜಂಗಲ್ ಕ್ಲಿಯರ್ ಹಾಗೂ ಪಾರ್ಕಿಂಗ್, ಇತರೆ ಕಡೆಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದರ್ ಕುಮಾರ್ ದಯ್ಮಾ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ, ತಲಸೀಲ್ದಾರ್ ರೇಷ್ಮಾ ಶೆಟ್ಟಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಶ್ರೀ ದೇವಿರಮ್ಮ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರುಗಳು ಹಾಜರಿದ್ದರು.

WhatsApp

Join Now

Telegram

Join Now

Instagram

Join Now