--Ads--

ಎಮ್ಮೆ, ಹಸು, ದನ, ಕುರಿ, ಮೇಕೆ ಕಾಯುತ್ತಾ….

On: October 27, 2026 6:46 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಶ್ರಮದಾನ – 8
*********
ಎಮ್ಮೆ, ಹಸು, ದನ, ಕುರಿ, ಮೇಕೆ ಕಾಯುತ್ತಾ…….

ಶ್ರಮದಾನ ಪರಿಕಲ್ಪನೆಯ ಎಂಟನೆಯ ಉದ್ಯೋಗವಾಗಿ ದಿನಾಂಕ 25/10/2026ರ ಭಾನುವಾರ ಬೆಳಗ್ಗೆ ಮನೆಯಿಂದ ಹೊರಟು ಬಸ್ಸಿನಲ್ಲಿ ತುಮಕೂರು ಜಿಲ್ಲೆಯ ತುಮಕೂರು ಗ್ರಾಮಾಂತರ ತಾಲ್ಲೂಕಿನ ದಾಬಸ್ಪೇಟೆಯ ಬಳಿ ಇಳಿದೆನು. ಮೊದಲೇ ನಿಗದಿಯಾದಂತೆ ನನ್ನ ಆತ್ಮೀಯ ಮಿತ್ರರು, ಹಿತೈಷಿಗಳು, ಸಮಾನ ಮನಸ್ಕರು ಆದ ಹೊನ್ನುಡಿಕೆ ಬಳಿಯ ಗೊಲ್ಲರಹಟ್ಟಿಯ ಹತ್ತಿರದ ಚೋಳಂಬಳ್ಳಿಯ ಶ್ರೀ ಮುದ್ದಯ್ಯನವರು ತಮ್ಮ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದರು. ಇಬ್ಬರೂ ದಾಬಸ್ಪೇಟೆಯ ಗೊರವನಹಳ್ಳಿ ರಸ್ತೆಯ ಚಿಕ್ಕ ಹೋಟೆಲಿನಲ್ಲಿ ತಟ್ಟೆ ಇಡ್ಲಿ, ವಡೆ ತಿಂದು ಅವರ ಚೋಳಂಬಳ್ಳಿಯ ಮನೆ ಕಡೆ ಹೊರಟೆವು.

ಶಿವಗಂಗೆ ಬೆಟ್ಟದ ಸಮೀಪದ ಅಂದರೆ ಸುಮಾರು 18 ಕಿಲೋಮೀಟರ್ ದೂರದ ಪ್ರದೇಶವಿದು. ಮಳೆಗಾಲವಾದ್ದರಿಂದ ಹಚ್ಚ ಹಸಿರು ಜೊತೆಗೆ ಸುತ್ತಮುತ್ತ ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿದೆ. ಕೃಷಿಯೇ ಪ್ರಧಾನ ಉದ್ಯೋಗವಾದರೂ ಹೈನುಗಾರಿಕೆಯೂ ಸಹ ಹೆಚ್ಚು ಚಟುವಟಿಕೆಯಿಂದಿದೆ. ಬೆಂಗಳೂರು ಮತ್ತು ತುಮಕೂರಿಗೆ ಸಮೀಪವಿರುವ ಕಾರಣದಿಂದ ಈ ಗ್ರಾಮದ ಸುತ್ತಮುತ್ತಲ ಜನ ಬೇರೆ ಬೇರೆ ಶಾಲಾ – ಕಾಲೇಜುಗಳಲ್ಲಿ ಓದಿ ದೊಡ್ಡ ಮಟ್ಟದ ವಿದ್ಯಾಭ್ಯಾಸ ಪಡೆದರೂ ಮತ್ತೆ ಹಳ್ಳಿಗಳಿಗೆ ಹಿಂತಿರುಗಿ ರಜಾ ದಿನಗಳಲ್ಲಿ ಪೋಷಕರ ಜೊತೆ ಕೃಷಿ, ಹೈನುಗಾರಿಕೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಹಿಂದೆ ಟಯೋಟಾ ಕಿರ್ಲೋಸ್ಕರ್ ಕಂಪನಿಯಲ್ಲಿ ಉದ್ಯೋಗಿಯಾಗಿ, ಅಲ್ಲಿನ ಕಾರ್ಮಿಕ ಸಂಘಟನೆಗಳಲ್ಲಿ ಸಹ ತೊಡಗಿಸಿಕೊಂಡು ಹೋರಾಟಗಾರರಾಗಿದ್ದ ಮುದ್ದಯ್ಯನವರು ಸುಮಾರು 15 ವರ್ಷಗಳ ಹಿಂದೆಯೇ ಉದ್ಯೋಗ ತ್ಯಜಿಸಿ ತಮ್ಮ ತಂದೆಯ ಕೃಷಿ ಭೂಮಿಯನ್ನು ನೋಡಿಕೊಳ್ಳಲು ಚೋಳಂಬಳ್ಳಿಗೆ ಹಿಂತಿರುಗಿರುವವರು. ಸಾಮಾಜಿಕ ಜಾಲತಾಣಗಳ ನನ್ನ ಬರವಣಿಗೆಯ ಮೂಲಕವೇ ಪರಿಚಯವಾಗಿ ತಾಯಿ, ಹೆಂಡತಿ ಮತ್ತು ಇಬ್ಬರು ಕಾಲೇಜು ಓದುತ್ತಿರುವ ಹೆಣ್ಣು ಮಕ್ಕಳೊಂದಿಗೆ ಅಲ್ಲೇ ವಾಸವಾಗಿದ್ದಾರೆ. ಒಂದಷ್ಟು ಮೇಕೆ, ಕುರಿಗಳು ಇನ್ನೊಂದಷ್ಟು ದನ, ಹಸು, ಕೋಳಿ, ಎಮ್ಮೆಗಳನ್ನು ಕಟ್ಟಿಕೊಂಡು ಇರುವ ಸ್ವಲ್ಪ ಜಾಗದಲ್ಲಿ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

ನನ್ನ ಶ್ರಮದಾನದ ಭಾಗವಾಗಿ ಒಂದು ದಿನ ಕುರಿ ಮತ್ತು ದನ ಕಾಯುವ ಕೆಲಸವನ್ನು ನಿಮ್ಮ ಜೊತೆ ಮಾಡಬೇಕೆಂದು ಅವರಿಗೆ ಕೇಳಿದಾಗ ಸಂತೋಷದಿಂದ ಒಪ್ಪಿಕೊಂಡರು.

ಕೆಲಸ ಗೊತ್ತಿದ್ದರೆ ಯಾವುದೇ ಕೆಲಸವೂ ಕೋತಿ ವಿದ್ಯೆ ಇದ್ದಂತೆ. ಆದರೆ ಕೆಲಸ ಗೊತ್ತಿಲ್ಲದಿದ್ದರೆ ಎಲ್ಲವೂ ಬ್ರಹ್ಮ ವಿದ್ಯೆ ಅಂದರೆ ಕಠಿಣ ವಿದ್ಯೆಯಂತೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳನ್ನು, ಎಮ್ಮೆಗಳನ್ನು ಹಗ್ಗ ಬಿಚ್ಚಿ ಮನೆಯಿಂದ ಸ್ವಲ್ಪ ದೂರ ಕರೆದುಕೊಂಡು ಹೋಗಿ, ದಾರಿಯಲ್ಲಿ ಹೋಗುವ ಸಂದರ್ಭದಲ್ಲಿ ಅವುಗಳನ್ನು ನಿಯಂತ್ರಿಸಿ ಹುಲ್ಲು, ಸೊಪ್ಪು ಬೆಳೆದಿರುವ ಜಾಗದಲ್ಲಿ ಅವುಗಳನ್ನು ಗೂಟದಿಂದ ಕಟ್ಟಿಹಾಕಿ, ನಿರಂತರವಾಗಿ ಅವುಗಳ ಮೇಲೆ ಕಣ್ಣಿಟ್ಟಿರಬೇಕು.

ಹಾಗೆಯೇ ಅಲ್ಲಿ ಇನ್ನೊಂದಿಷ್ಟು ಜನ ಇದೇ ರೀತಿ ದನ ಕಾಯುತ್ತಿರುತ್ತಾರೆ. ನಮಗೆ ಕೆಲಸವಿದ್ದಾಗ ಅವರಿಗೂ, ಅವರಿಗೆ ಕೆಲಸಕ್ಕೆ ಬಿದ್ದಾಗ ನಾವು ಅಲ್ಲಿರುವ ದನಕುರಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಜೊತೆಗೆ ಕಟ್ಟಿ ಹಾಕಿರುವುದರಿಂದ ಆ ದನಗಳು ಅಲ್ಲಿನ ಸುತ್ತಮುತ್ತ ಹಗ್ಗಕ್ಕೆ ಸಿಗುವಷ್ಟು ದೂರ ಹುಲ್ಲು, ಸೊಪ್ಪು ಮೇಯ್ದ ಖಾಲಿ ಮಾಡುತ್ತವೆ. ನಂತರ ಅದನ್ನು ಮತ್ತೊಂದು ಜಾಗಕ್ಕೆ ಬದಲಾಯಿಸಬೇಕಾಗುತ್ತದೆ. ಆಗಾಗ ಈ ಕೆಲಸನ್ನು ಮಾಡಬೇಕು.

ಕುರಿಗಳಾದರೆ ಕಟ್ಟಿ ಹಾಕುವ ಅವಶ್ಯಕತೆ ಇಲ್ಲ. ಕುರಿ, ಮೇಕೆಗಳು ಒಟ್ಟೊಟ್ಟಾಗಿಯೇ ಮೇಯುತ್ತಾ ಇರುತ್ತದೆ. ಸಾಮಾನ್ಯವಾಗಿ ಅವು ಹೆಚ್ಚು ದೂರವೇನು ಹೋಗುವುದಿಲ್ಲ. ಯಾವುದಾದರೂ ನಾಯಿಗಳು ಅಥವಾ ಹಾವು ಮುಂತಾದ ವಿಷ ಜಂತುಗಳಿಂದ ಏನಾದರೂ ಅಪಾಯವಿದ್ದಲ್ಲಿ ಮಾತ್ರ ನಾವು ಮುನ್ನೆಚ್ಚರಿಕೆ ವಹಿಸಬೇಕು.

ಮೊದಲೆಲ್ಲಾ ದಡ್ಡನನ್ನು, ಅವಿದ್ಯಾವಂತನನ್ನು, ಸೋಮಾರಿಯನ್ನು ಹೋಗಿ ದನ ಕುರಿ ಕಾಯಲು ಹೋಗು ಎಂದು ಮೂದಲಿಸಲಾಗುತ್ತಿತ್ತು. ಸಾಮಾನ್ಯವಾಗಿ ಶಾಲೆಗಳಲ್ಲಿ ಓದಲು ಬರೆಯಲು ಬಾರದ ಅಥವಾ ಕಡಿಮೆ ಅಂಕ ಪಡೆಯುವವರನ್ನು ಕುರಿ ಮೇಯಿಸಲಿಕ್ಕೆ ಹೋಗು ಎಂದೇ ಹೇಳಲಾಗುತ್ತಿತ್ತು. ಅಂದರೆ ಅವರು ಅದಕ್ಕೆ ಮಾತ್ರ ಅರ್ಹರು ಎಂಬಂತೆ. ಇದು ಉದ್ದೇಶಪೂರ್ವಕ ಕೆಟ್ಟ ಬೈಗುಳವಾಗಿರಲಿಲ್ಲ, ಸಹಜವಾಗಿಯೇ ಆ ಕೆಲಸ ಮಾಡುತ್ತಿದ್ದ ಕಡುಬಡವರನ್ನು ಕುರಿತು ಹೇಳಿದಂತಿತ್ತು ಮತ್ತು ಅದನ್ನು ಬಿಟ್ಟು ಓದಿ ಯಾವುದಾದರೂ ಉದ್ಯೋಗ ಮಾಡವುದು ಹೆಚ್ಚು ಕ್ಷೇಮ ಮತ್ತು ಭದ್ರತೆ ಎಂಬ ಅಭಿಪ್ರಾಯ ಆಗಿನ ಕಾಲದ ಗ್ರಾಮೀಣ ಜನರಲ್ಲಿ ಇತ್ತು.

ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಹೆಚ್ಚು ಓದಿರುವವರು ಸಹ ನಿರುದ್ಯೋಗಿಗಳಾಗಿ ಅಥವಾ ಎಷ್ಟೋ ದೊಡ್ಡ ಕಂಪನಿಗಳಲ್ಲಿ ಸಣ್ಣ ಮೊತ್ತಕ್ಕೆ ಗುಲಾಮಿತನ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಈಗ ಈ ಕುರಿ ದನ ಮೇಯಿಸುವುದು ಒಂದು ಆಸಕ್ತಿಕರ, ಜೀವನೋಪಾಯದ ಒಂದು ಸ್ವಯಂ ಉದ್ಯೋಗವಾಗಿದೆ. ಎಷ್ಟೋ ಜನ ಹಾಲು ಮಾರುವುದರ ಮೂಲಕವೇ ಬದುಕನ್ನು ಕಟ್ಟಿಕೊಂಡಿರುವುದನ್ನು ನೋಡುತ್ತಿದ್ದೇವೆ.

ಜೊತೆಗೆ ನಗರ ಪ್ರದೇಶದ ಅನೇಕ ಉದ್ಯೋಗಗಳು ಮನುಷ್ಯನ ದೇಹ ಮತ್ತು ಮನಸ್ಸನ್ನು ದುರ್ಬಲಗೊಳಿಸಿ ರೋಗ ರುಜಿನಗಳು ಕಾಡುವಂತೆ ಮಾಡುತ್ತಿವೆ. ಬಿಪಿ, ಶುಗರ್, ಅಸಿಡಿಟಿ, ನಿದ್ರಾಹೀನತೆ , ಖಿನ್ನತೆ ಮುಂತಾದ ಸಹಜ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ ಕೃಷಿ ಮತ್ತು ಕೃಷಿ ಅವಲಂಬಿತ ಉದ್ಯೋಗಗಳಿರುವರು ಸದ್ಯಕ್ಕೆ ಆರೋಗ್ಯದ ದೃಷ್ಟಿಯಿಂದ ಒಂದಷ್ಟು ಉತ್ತಮ ಸ್ಥಿತಿಯಲ್ಲಿದ್ದಾರೆ.

ಆದರೂ ಕಾರ್ಪೊರೇಟ್ ಸಂಸ್ಕೃತಿ ಕೃಷಿ ಮತ್ತು ಪಶುಸಂಗೋಪನೆಗೂ ಪ್ರವೇಶಿಸುತ್ತಿರುವುದರಿಂದ ರೈತರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿ ಅಲ್ಲಿಯೂ ಹಣ ಕೇಂದ್ರಿತ ಮಾರುಕಟ್ಟೆ ನೀತಿಯೇ ಮೇಲುಗೈ ಪಡೆದು ರೈತರು ಸಹ ಮುಂದೆ ಸಾಫ್ಟ್ವೇರ್ ಉದ್ಯೋಗಿಗಳಂತೆ ಆದರೂ ಆಗಬಹುದು. ಏಕೆಂದರೆ ಹಣ ಮತ್ತು ವ್ಯಾಪಾರವೇ ಮುಖ್ಯವಾದಾಗ ಎಲ್ಲವೂ ದುರ್ಗಲಗೊಳ್ಳುತ್ತಾ ಹೋಗುತ್ತದೆ.

ಒಂದಷ್ಟು ಹೊತ್ತು ದನ, ಎಮ್ಮೆ, ಕುರಿಗಳನ್ನು ನೋಡುತ್ತಾ ಇದ್ದೆ. ನಿರಂತರವಾಗಿ ತಿನ್ನುತ್ತಲೇ ಇರುತ್ತದೆ. ಬೇರೆ ಕಡೆ ಗಮನವನ್ನೇ ಹರಿಸದೆ ಏಕಾಗ್ರತೆಯಿಂದ ತಿನ್ನುವುದನ್ನು ನೋಡುವುದೇ ಒಂದು ಕುತೂಹಲ. ಬಾಯಿ ನೋವಾದಾಗ ಸ್ವಲ್ಪ ಹೊತ್ತು ತಲೆಯೆತ್ತಿ ಆ ಕಡೆ ಈ ಕಡೆ ನೋಡಿ ಮತ್ತೆ ತಿನ್ನುತ್ತಾ ಇರುತ್ತವೆ. ಅದರ ಹುಲ್ಲು ಸೊಪ್ಪು ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ನಿಜಕ್ಕೂ ಪ್ರಕೃತಿಯ ವಿಸ್ಮಯಗಳಲ್ಲಿ ಒಂದು. ಅನ್ನ ಎಂಬ ಮೃದು ಪಧಾರ್ಥವನ್ನು ಸಹ ತಿಂದು ಜೀರ್ಣಿಸಿಕೊಳ್ಳಲಾಗದ ಸ್ಥಿತಿಗೆ ಮನುಷ್ಯ ಬಂದಿರುವಾಗ ಪ್ರಾಣಿಗಳು ಇನ್ನೂ ಅದೇ ಜೀರ್ಣ ಶಕ್ತಿಯನ್ನು ಉಳಿಸಿಕೊಂಡಿರುವುದು ನಮಗೆಲ್ಲ ಒಂದು ಎಚ್ಚರಿಕೆಯ ಪಾಠವಾಗಬೇಕು.

ಮುದ್ದಯ್ಯನವರನ್ನು ಮಾತನಾಡಿಸಿ ಅವರ ಕುಟುಂಬದವರೊಂದಿಗೆ ಸ್ವಲ್ಪ ಸಮಯ ಕಳೆದು, ನನಗಾಗಿಯೇ ಭಾನುವಾರದ ವಿಶೇಷ ಅಡುಗೆ ಮಾಡಿಸಿದ್ದನ್ನು ಸವಿದು ಅವರೊಂದಿಗೆ ನಾನಾ ವಿಷಯಗಳನ್ನು ಚರ್ಚಿಸುತ್ತಾ, ಅವರು ಮತ್ತೆ ಅದೇ ದ್ವಿಚಕ್ರ ವಾಹನದಲ್ಲಿ ದಾಬಸ್ ಪೇಟೆಗೆ ನನ್ನನ್ನು ಬೀಳ್ಕೊಟ್ಟರು. ಭಾನುವಾರವಾದ್ದರಿಂದ ಬಸ್ಸುಗಳು ತುಂಬಿ ತುಳುಕುತ್ತಿದ್ದರೂ ಹೇಗೋ ಸಾಹಸ ಮಾಡಿ ಮೂರು ನಾಲ್ಕು ಗಂಟೆಯ ಪ್ರಯಾಣದ ನಂತರ ರಾತ್ರಿ 9:00 ಗಂಟೆಯ ಸುಮಾರಿಗೆ ಮನೆ ತಲುಪಿದೆನು.

ನಿಜಕ್ಕೂ ಬರವಣಿಗೆ, ಪಾದಯಾತ್ರೆ, ಒಂದಷ್ಟು ಸಂವಾದ ಕಾರ್ಯಕ್ರಮಗಳ ನಂತರ ಈ ಶ್ರಮದಾನ ಎಂಬ ಪರಿಕಲ್ಪನೆಯ ವಿವಿಧ ಉದ್ಯೋಗಗಳ ಸಣ್ಣ ಪ್ರಯೋಗ ನನ್ನಲ್ಲಿ ಮತ್ತಷ್ಟು ಜೀವನೋತ್ಸಾಹ ಪುಟಿಯುವಂತೆ ಮಾಡಿದೆ. ಆರೋಗ್ಯ ಅನುಮತಿಸುವವರೆಗೂ ಇದನ್ನು ಆಗಾಗ ನಿರಂತರವಾಗಿ, ಖುಷಿಖುಷಿಯಾಗಿ ಮಾಡುತ್ತಲೇ ಇರಬೇಕು ಎಂಬ ಆಸೆ ಮೂಡಿದೆ. ನೋಡೋಣ ಮುಂದಿನ ಪ್ರಯಾಣ ಹೇಗಿರುತ್ತದೆ.

ಸಾಧ್ಯವಾದಷ್ಟೂ ಇದನ್ನು ನಾನು ಒಂದು ಹವ್ಯಾಸವಾಗಿ ಮಾಡುತ್ತಿದ್ದೇನೆ. ಇತರರು ಕೂಡ ಸಮಯವಾದಾಗ, ಅವಕಾಶವಾದಾಗ ತಾವಿರುವ ಜಾಗದಲ್ಲಿ, ತಮ್ಮ ಸುತ್ತಮುತ್ತಲ ಪರಿಸರದಲ್ಲಿ, ಸುಮ್ಮನೆ ಒಂದು ದಿನ ಯಾವುದಾದರೂ ಒಂದು ಕೆಲಸವನ್ನು ಉಚಿತವಾಗಿ ಮಾಡಿದರೆ ಮನಸ್ಸಿಗೂ ನೆಮ್ಮದಿ, ಅವರಿಗೂ ಒಂದಷ್ಟು ಸಣ್ಣ ಸಹಾಯ ಆಗಬಹುದು, ಸ್ನೇಹ ಸಂಬಂಧಗಳು ವೃದ್ಧಿಸುತ್ತವೆ. ದೇಶದ ಆರ್ಥಿಕತೆಗೂ ಅಳಿಲು ಸೇವೆ ಸಲ್ಲಿಸಿದಂತಾಗುತ್ತದೆ. ಜೊತೆಗೆ ಊರು, ಸರ್ಕಾರಿ ಶಾಲೆ, ಆಸ್ಪತ್ರೆಗಳ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಿದರೆ ಅದು ಸಹ ಒಂದು ದೊಡ್ಡ ಶ್ರಮದಾನವೇ ಆಗುತ್ತದೆ. ಸೋಮಾರಿಯಾಗಿ ಬಿಗ್ ಬಾಸ್ ರೀತಿಯ ಕಾರ್ಯಕ್ರಮಗಳನ್ನು ಮಕ್ಕಳೊಂದಿಗೆ ಟಿವಿಯಲ್ಲಿ ನೋಡುವುದಕ್ಕಿಂತ ಇದು ಉತ್ತಮ. ದೇಹವೂ ಆರೋಗ್ಯವಾಗಿರುತ್ತದೆ ಎಂಬುದು ನನ್ನ ಅನುಭವ. ಉಳಿದದ್ದು ನಿಮ್ಮ ವಿವೇಚನೆಗೆ ಬಿಡುತ್ತಾ, ಧನ್ಯವಾದಗಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now