--Ads--

ಕರ್ನಾಟಕ ಸಂಘ ಕತಾರ್‌ನ 71ನೇ ರಾಜ್ಯೋತ್ಸವ “ಕರುನಾಡ ವೈಭವ-2026″ಗೆ ಭರಪೂರ ಸಿದ್ಧತೆ; ಸಂಸದ ಡಾ. ಸಿ.ಎನ್. ಮಂಜುನಾಥ್ ಭೇಟಿ

On: October 31, 2026 8:32 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕರ್ನಾಟಕ ಸಂಘ ಕತಾರ್‌ನ 71ನೇ ರಾಜ್ಯೋತ್ಸವ “ಕರುನಾಡ ವೈಭವ – 2026″ಗೆ ಭರಪೂರ ಸಿದ್ಧತೆ : ಸಂಸದ ಡಾ. ಸಿ.ಎನ್. ಮಂಜುನಾಥ್ ಭೇಟಿ

ದೋಹಾ, ಕತಾರ್: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಂಯೋಜಿತ ಸಂಸ್ಥೆಯಾದ ಕರ್ನಾಟಕ ಸಂಘ ಕತಾರ್ (KSQ) ಆಯೋಜಿಸುತ್ತಿರುವ 71ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ “ಕರುನಾಡ ವೈಭವ-2026” ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.

ಅಧಿಕೃತ ಪೋಸ್ಟರ್ ಬಿಡುಗಡೆಯಾದ ಬೆನ್ನಲ್ಲೇ, ಕಾರ್ಯಕ್ರಮ ಯಶಸ್ವಿಗೊಳಿಸಲು ಸಂಘದ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಕಾರ್ಯನಿರತರಾಗಿದ್ದಾರೆ. ಈ ವೈಭವೋಪೇತ ಸಾಂಸ್ಕೃತಿಕ ಕಾರ್ಯಕ್ರಮವು 2026ರ ನವೆಂಬರ್ 6, ಶುಕ್ರವಾರದಂದು ಸಂಜೆ 4:00 ಗಂಟೆಯಿಂದ ಅಲ್ ವಕ್ರಾ ಬಳಿಯ DPS MIS ಆಡಿಟೋರಿಯಂನಲ್ಲಿ ನಡೆಯಲಿದೆ.

ಪ್ರಮುಖ ಅತಿಥಿಯಾಗಿ ಸಂಸದ ಡಾ. ಸಿ.ಎನ್. ಮಂಜುನಾಥ್ ಭಾಗಿ ಈ ಬಾರಿಯ ಸಂಭ್ರಮಾಚರಣೆಗೆ ಪ್ರಸಿದ್ಧ ಹೃದ್ರೋಗ ತಜ್ಞರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರಾಗಿ ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆ ಹಾಗೂ ಜನಪ್ರಿಯತೆಯಿಂದಾಗಿ, ಅವರ ಭೇಟಿಯು ಕತಾರ್‌ನಲ್ಲಿರುವ ಅನಿವಾಸಿ ಕನ್ನಡಿಗರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ.

ಸಮಾರಂಭದಲ್ಲಿ ಖ್ಯಾತ ಹಿರಿಯ ಚಲನಚಿತ್ರ ನಟಿ, ಮಾಜಿ ಸಚಿವರು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಉಪಸಭಾಪತಿ ಶ್ರೀಮತಿ ಉಮಾಶ್ರೀ ಅವರಿಗೆ ಪ್ರತಿಷ್ಠಿತ ‘ಕತಾರ್ ಕನ್ನಡ ಸಮ್ಮಾನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದರೊಂದಿಗೆ ಕರ್ನಾಟಕದ ಖ್ಯಾತ ಕಲಾವಿದರಿಂದ ಹಾಸ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ.

ಸಾಂಸ್ಕೃತಿಕ ತರಬೇತಿ ಮತ್ತು ರಂಗಸಜ್ಜಿತ ಕಾರ್ಯಗಳು
ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ತರಬೇತಿ ಹಾಗೂ ರಿಹರ್ಸಲ್ ಕಾರ್ಯಗಳು ಪೂರ್ಣಪ್ರಮಾಣದಲ್ಲಿ ನಡೆಯುತ್ತಿವೆ. ಸ್ಥಳೀಯ ಕನ್ನಡ ಕಲಾವಿದರು, ಹಿರಿಯರು ಮತ್ತು ಮಕ್ಕಳು ನೃತ್ಯ, ನಾಟಕ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮೂಡಿಸಲು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

ಅದೇ ರೀತಿ, ವೇದಿಕೆ ವಿನ್ಯಾಸ, ಸಾಂಪ್ರದಾಯಿಕ ಅಲಂಕಾರ, ಧ್ವನಿವರ್ಧಕ ವ್ಯವಸ್ಥೆ ಮತ್ತು ಪ್ರೇಕ್ಷಕರ ನಿರ್ವಹಣೆ ಸೇರಿದಂತೆ ಕಾರ್ಯಕ್ರಮದ ಎಲ್ಲ ವ್ಯವಸ್ಥೆಗಳನ್ನು ಅಂತಿಮಗೊಳಿಸಲು ಸಿದ್ಧತಾ ತಂಡ ನಿರಂತರವಾಗಿ ಶ್ರಮಿಸುತ್ತಿದೆ.

ಯಶಸ್ವಿ ಆಯೋಜನೆಗೆ ಸಿದ್ಧತೆ
ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾದ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಮತ್ತು ಆಡಳಿತ ಸಮಿತಿಯ ನೇತೃತ್ವದಲ್ಲಿ, ಹಾಗೂ KSQ ಸಲಹೆಗಾರರ ಮಾರ್ಗದರ್ಶನದಲ್ಲಿ ಕಾರ್ಯಕ್ರಮದ ಪ್ರತಿಯೊಂದು ವಿಭಾಗದ ಕೆಲಸಗಳು ಮುಕ್ತಾಯದ ಹಂತಕ್ಕೆ ತಲುಪಿವೆ.

ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ಐಕ್ಯತೆಯನ್ನು ಎತ್ತಿಹಿಡಿಯುವ ಈ ವೈಭವದ ಸಂಜೆಗಾಗಿ ಕತಾರ್‌ನ ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ.

WhatsApp

Join Now

Telegram

Join Now

Instagram

Join Now