ನಿನ್ನ ರೂಪದ ರಮಣೀಯತೆಯನ್ನು ವರ್ಣಿಸಲು ಹೊರಟರೆ ಕನ್ನಡದ ಕಾವ್ಯಕನ್ನಿಕೆಯ ಪದಭಂಡಾರವೇ ಬರಿದಾಗಬಹುದು ನಿನ್ನ ಸೌಂದರ್ಯದ ಸೊಬಗಿಗೆ ಶರದೃತುವಿನ ಚಂದಿರನೂ ಸರಿಸಾಟಿಯಾಗಲಾರನು
ನಿನ್ನ ಆ ಸುಂದರ ನಯನಗಳು ಕೇವಲ ಕಣ್ಣುಗಳಲ್ಲ ಅವು ಪ್ರೇಮದ ಎರಡು ಸರೋವರಗಳು ಅವುಗಳ ಆಳದಲ್ಲಿ ಮುಳುಗಿದವನಿಗೆ ದಡವೆಂಬುದೇ ಕಾಣದು ನಿನ್ನ ಕಣ್ಣಂಚಿನ ಕಟಾಕ್ಷಕ್ಕೆ ಮನ್ಮಥನ ಬಾಣಗಳೂ ನಾಚಿ ತಲೆಬಾಗುವುವು
ನಿನ್ನ ಹಾಲುಗಲ್ಲದ ಮುಖಾರವಿಂದ ನಿನ್ನ ಕಪೋಲಗಳ ಕೋಮಲತೆ ನಿನ್ನ ಅಧರಗಳ ಮಂದಹಾಸ ನಿನ್ನ ದಂತಪಂಕ್ತಿಯ ಮುತ್ತಿನ ಹೊಳಪು… ಅಯ್ಯೋ ರಾಧೆ ಇವೆಲ್ಲವನ್ನೂ ಒಂದೇ ಕವಿತೆಯಲ್ಲಿ ಕಟ್ಟಿಹಾಕಲು ಯಾವ ಕವಿಯ ಕಲಮಿಗೆ ಸಾಧ್ಯ?
ನಿನ್ನ ಕೇಶರಾಶಿಯು ಕಾರ್ಮೋಡದ ಕಪ್ಪು ಹೊದಿಕೆಯಂತೆ ಭಾಸವಾಗುತ್ತದೆ. ಆ ಮುಂಗುರುಳಿನ ನೆರಳಲ್ಲಿ ಮುಂಜಾನೆಯ ಮಂಜಿನ ಹನಿಯೂ ಮುತ್ತಾಗಿ ಅರಳಿದಂತೆ ಕಾಣುತ್ತದೆ ನಿನ್ನ ಹಣೆಯ ಮೇಲಿನ ಕುಂಕುಮದ ಬಿಂದುವು ಪೂರ್ಣಚಂದ್ರನ ಹಣೆಯಲ್ಲಿ ಮೂಡಿದ ಅರುಣೋದಯದ ತಿಲಕದಂತಿದೆ.
ನಿನ್ನ ನಡಿಗೆಯ ನಯನಾಜೂಕು ಹಂಸಗಾಮಿನಿಯ ಲಾಸ್ಯವೋ ನಿನ್ನ ಹೆಜ್ಜೆಯ ಲಯಕ್ಕೆ ವಸಂತದ ಗಾಳಿಯೂ ತಾಳ ಹಾಕುವುದೋ ನಿನ್ನ ಬಳೆಗಳ ಕಿಣಿಕಿಣಿ ನಾದದಲ್ಲಿ ಸರಿಗಮದ ಸಪ್ತಸ್ವರಗಳು ಅಡಗಿವೆ ನಿನ್ನ ಗೆಜ್ಜೆಯ ನಾದದಲ್ಲಿ ಗಂಧರ್ವಲೋಕದ ಸಂಗೀತವೇ ಹೊಮ್ಮುತ್ತದೆ
ಓ ನನ್ನ ರಾಧೆ…
ನಿನ್ನ ಮೈಬಣ್ಣ ಬೂದು ಬಣ್ಣವಿರಬಹುದು ಸೌಂದರ್ಯಕ್ಕೆ ಬಣ್ಣದ ಹಂಗೇಕೆ? ಕಪ್ಪು ಮೋಡದೊಳಗೆ ಮಿಂಚು ಅಡಗಿರುವಂತೆ ನಿನ್ನ ನಯನಗಳ ಹೊಳಪಿನಲ್ಲಿ ಸಾವಿರಾರು ಚಂದ್ರಬಿಂಬಗಳು ಪ್ರತಿಫಲಿಸುತ್ತವೆ ನಿನ್ನ ವರ್ಣಕ್ಕಿಂತ ನಿನ್ನ ವರ್ಚಸ್ಸು ದೊಡ್ಡದು ನಿನ್ನ ಮೈಮಾಟಕ್ಕಿಂತ ನಿನ್ನ ಮನಮೋಹಕ ವ್ಯಕ್ತಿತ್ವ ಸುಂದರವಾದುದು
ನಿನ್ನ ತುಟಿಗಳಿಂದ ಉದುರುವ ಒಂದೊಂದು ನುಡಿಮುತ್ತು ದಾಳಿಂಬೆಯ ಕಾಳಿನ ಸವಿಯಂತೆ ಜೇನಿನ ಹನಿಯಂತೆ ಕೋಗಿಲೆಯ ಇಂಪಿನಂತೆ ನನ್ನ ಕಿವಿಗಳಲ್ಲಿ ಅಮೃತಧಾರೆಯಾಗಿ ಹರಿಯುತ್ತದೆ.
ನೀನು ನಕ್ಕರೆ ಮಲ್ಲಿಗೆ ಹೂವು ಅರಳಿದಂತೆ ನೀನು ನುಡಿದರೆ ವೀಣೆಯ ತಂತಿ ಮೀಟಿದಂತೆ ನೀನು ಕಣ್ಣೆತ್ತಿ ನೋಡಿದರೆ ಮದನನ ಮನದಲ್ಲೇ ಮಿಂಚು ಹೊಳೆದಂತೆ
ನಿನ್ನ ಸೌಂದರ್ಯದ ಸೊಬಗನ್ನು ಕಂಡು ಚಂದ್ರನು ತನ್ನ ಪೂರ್ಣಿಮೆಯ ಗರ್ವವನ್ನು ಮರೆತಾನು ಮಲ್ಲಿಗೆಯು ತನ್ನ ಪರಿಮಳದ ಅಹಂಕಾರವನ್ನು ತೊರೆದೀತು ವಸಂತವು ನಿನ್ನ ವದನದ ಕಾಂತಿಯ ಮುಂದೆ ತನ್ನ ವೈಭವವನ್ನೇ ಮರೆತೀತು
ರಾಧೆ ನಿನ್ನ ಸಾನ್ನಿಧ್ಯವೇ ಒಂದು ಸುಂದರ ಅನುಭೂತಿ ನಿನ್ನ ನಗು ಒಂದು ಮಧುರ ಗೀತೆ ನಿನ್ನ ನೋಟ ಒಂದು ಪ್ರೇಮಗೀತೆ ನಿನ್ನ ಮೌನವೇ ಸಾವಿರ ಕವಿತೆಗಳ ಮಹಾಕಾವ್ಯ.
ಓ ನನ್ನ ರಾಧೆ…
ನಿನ್ನನ್ನು ವರ್ಣಿಸಲು ಉಪಮೆಗಳನ್ನು ಹುಡುಕಿದೆ ಪ್ರಕೃತಿಯ ಪುಟಗಳನ್ನು ತಿರುವಿದೆ ಕಾಳಿದಾಸನ ಕಾವ್ಯವನ್ನು ನೆನಪಿಸಿಕೊಂಡೆ ಬೇಂದ್ರೆಯ ಭಾವಲೋಕದಲ್ಲಿ ವಿಹರಿಸಿದೆ. ಆದರೂ ನಿನ್ನ ಸೌಂದರ್ಯಕ್ಕೆ ಸಮಾನವಾದ ರೂಪಕವೊಂದು ಸಿಗಲಿಲ್ಲ
ನೀನು ಕೇವಲ ರೂಪಸಿಯಲ್ಲ ರೂಪಲಾವಣ್ಯದ ರಸಸಾಗರ ನೀನು ಕೇವಲ ಚೆಲುವೆಯಲ್ಲ ಚೆಲುವಿನ ಚೈತ್ರಮಾಸ ನೀನು ಕೇವಲ ಕನಸಿನ ಕನ್ಯೆಯಲ್ಲ ಕವಿಯ ಕಲ್ಪನೆಯನ್ನು ಮೀರಿದ ಕಾವ್ಯಸೃಷ್ಟಿ
ನಿನ್ನ ರೂಪವನ್ನು ಕಣ್ಣುಗಳು ಆಸ್ವಾದಿಸಬಹುದು ನಿನ್ನ ನಗುವನ್ನು ಹೃದಯ ಸವಿಯಬಹುದು ನಿನ್ನ ಸೌಂದರ್ಯದ ಸಂಪೂರ್ಣತೆಯನ್ನು ವರ್ಣಿಸಲು ಕನ್ನಡದ ಅಕ್ಷರಮಾಲೆಯೇ ಮತ್ತೊಮ್ಮೆ ಜನ್ಮತಾಳಬೇಕು