ವಿಜಯ ದರ್ಪಣ ನ್ಯೂಸ್…..
ಪೌರಕಾರ್ಮಿಕರಿಗೆ ನಿವೇಶನ ಭಾಗ್ಯ:ಸಚಿವ ಕೆ.ಹೆಚ್ ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ನ.04 :
ಪುರಸಭೆಯ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆಗೆ ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಹೇಳಿದರು.
ದೇವನಹಳ್ಳಿ ಟೌನ್ ನ ಪುರಸಭೆ ಕಾರ್ಯಾಲಯ ಆವರಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಹಾಗೂ ಆಯುಧ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಈ ಹಿಂದೆ ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಸಂಬಂಧಿಸಿದಂತೆ ಮಾತನಾಡಿದ್ದೆ. ಪೌರಕಾರ್ಮಿಕರಿಗೆ ನೀವೇಶನ ಹಂಚಿಕಗೆ ಸಂಬಂಧಿಸಿದಂತೆ ದೇವನಹಳ್ಳಿ ತಾಲ್ಲೂಕಿನ ಸಣ್ಣೆ ಗ್ರಾಮ ಹಾಗೂ ಕೆಂಪತಿಮ್ಮನಹಳ್ಳಿ ಯಲ್ಲಿ ನಿವೇಶನ ಅಭಿವೃದ್ಧಿ ಪಡಿಸಲಾಗಿದೆ. 30 ದಿನಗಳೊಳಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಒಂದು ತಿಂಗಳಲ್ಲಿ ಹಕ್ಕು ಪತ್ರ ವಿತರಿಸಲಿದ್ದೇವೆ. ಜೊತೆಗೆ ವಿಜಯಪುರ ಪುರಸಭೆಯ ಪೌರಕಾರ್ಮಿಕರಿಗೆ ಹಕ್ಕು ಪತ್ರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ದೇವನಹಳ್ಳಿ ಟೌನ್ ನಲ್ಲಿ ಸುಮಾರು 40-50 ವರ್ಷ ಬಾಳಿಕೆ ಬರುವ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಬಜೆಟ್ ನಲ್ಲಿ ಘೋಷಿಸಿರುವಂತೆ ದೇವನಹಳ್ಳಿ ಟೌನ್ ನಲ್ಲಿ ಯುಜಿಡಿ(ಒಳಚರಂಡಿ ಕಾಮಗಾರಿ) ಶೀಘ್ರ ಪ್ರಾರಂಭ ಮಾಡಲಾಗುವುದು. ವಿಜಯಪುರ ಪುರಸಭೆಗೆ ಕೂಡ ಯುಜಿಡಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.
ದೇವನಹಳ್ಳಿಯಲ್ಲಿ ಕೆಂಪೇಗೌಡ ಸ್ಮಾರಕ, ಮೆಟ್ರೋ ರೂಪುರೇಷೆ, ವಿಜಯಪುರ, ದೇವನಹಳ್ಳಿಗೆ ಕಾವೇರಿ ನೀರು ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಲಾಗಿದೆ, ಶೀಘ್ರ ಮುಖ್ಯಮಂತ್ರಿಗಳನ್ನು ಕರೆಸಿ ಕಾರ್ಯಕ್ರಮ ಮಾಡಲಾಗುವುದು ಎಂದು ಸಚಿವರು ಹೇಳಿದರು.
ದೇವನಹಳ್ಳಿಯಿಂದ ಬಾಗೆಪಲ್ಲಿ ವರೆಗೂ ದಶಪಥದ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಜೊತೆಗೆ ದೇವನಹಳ್ಳಿ ಯಿಂದ ವೇಮಗಲ್ ವರೆಗೆ 6 ಪಥದ ರಸ್ತೆ ಕಾಮಗಾರಿ ಆರಂಭವಾಗಿದೆ. ದೇವನಹಳ್ಳಿ ತಾಲ್ಲೂಕು ನನಗೆ ಶಾಸಕ ಸ್ಥಾನ ನೀಡಿ, ಸಚಿವ ಸ್ಥಾನ ಸಿಗುವಂತೆ ಮಾಡಿದ್ದು ಈ ತಾಲ್ಲೂಕಿನ ಜನತೆ ಋಣ ನನ್ನ ಮೇಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಶ್ವತ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 18000 ಪೌರಕಾರ್ಮಿಕರನ್ನು ಪರ್ಮನೆಂಟ್ ಮಾಡಲಾಗಿತ್ತು. ಈಗ ಡಿಕೆ ಶಿವಕುಮಾರ್ ನೇತೃತ್ವದಲ್ಲಿ 15000 ಸಾವಿರ ಪೌರಕಾರ್ಮಿಕರ ಪರ್ಮನೆಂಟ್ ಮಾಡಲಿದ್ದೇವೆ ಎಂದರು.
ಪೌರಕಾರ್ಮಿಕರ ಕೆಲಸ ಅತ್ಯಂತ ಕಷ್ಟಕರ, ಅವರಿಂದ ನಗರ ಸ್ವಚ್ಚವಾಗಿಡಲು ಸಾಧ್ಯ. ನಗರ ಪ್ರದೇಶಗಳಲ್ಲಿ ಸ್ಮಶಾನಕ್ಕೆ ಭೂಮಿ, ಮನೆ, ನಿವೇಶನಗಳು ಮುಖ್ಯ ಅವುಗಳನ್ನು ಒದಗಿಸಿಕೊಡಲು ಸರ್ಕಾರ ಬದ್ಧವಾಗಿದೆ. ಪೌರಕಾರ್ಮಿಕರ ಕಷ್ಟಕ್ಕೆ ಸರ್ಕಾರ ಸದಾ ನೆರವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಾದ ಮುನಿಯಪ್ಪ, ರಮೇಶ್, ಕಲಾವತಿ, ನಿರ್ಮಲ ಅವರನ್ನು ಉತ್ತಮ ಕೆಲಸಗಾರರು ಎಂದು ಗುರುತಿಸಿ ಸನ್ಮಾನಿಸಿದರು. ಜೊತೆಗೆ ನಿವೃತ್ತಿ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.
ಬಳಿಕ ದೇವನಹಳ್ಳಿ ಟೌನ್ ನಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣ ಸ್ಥಾಪನೆಗೆ ಸಂಬಂಧಿಸಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ನೂತನ ಹೂ ಮಾರುಕಟ್ಟೆ, ವಾರ್ಡ್ ನಂ 11 ರಲ್ಲಿ ಅಂಗನವಾಡಿ ನೂತನ ಕಟ್ಟಡ, ವಾರ್ಡ್ ನಂ 23 ರಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆಎನ್ ಅನುರಾಧ, ತಹಶೀಲ್ದಾರ್ ಅನಿಲ್, ಪುರಸಭೆ ಮುಖ್ಯಾಧಿಕಾರಿ ಶಿವಮೂರ್ತಿ, ಮುಖಂಡರಾದ ಪ್ರಸನ್ನ, ಚಿನ್ನಪ್ಪ, ಮಂಜುನಾಥ್, ತಹಶೀಲ್ದಾರ್ ಅನಿಲ್, ಮುಖಂಡರು, ಪುರಸಭೆಯ ಮಾಜಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.









