ವಿಜಯ ದರ್ಪಣ ನ್ಯೂಸ್………
ದೇವನಹಳ್ಳಿಯಲ್ಲಿ ಜೆಡಿಎಸ್ ಎಸ್ಟಿ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ವಾಲ್ಮೀಕಿ ಜಯಂತ್ಯೋತ್ಸವ ಆಚರಣೆ

ದೇವನಹಳ್ಳಿ:ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜನತಾದಳ (ಜಾತ್ಯತೀತ) ಎಸ್ಟಿ ಘಟಕದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ, ಎಸ್ಟಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭ ಅತ್ಯಂತ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ಎಲ್.ಎನ್. ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಎಸ್. ಮಹೇಶ್ ಹಾಗೂ ತಾಲ್ಲೂಕು ಎಸ್ಟಿ ಘಟಕದ ಅಧ್ಯಕ್ಷ ವೆಂಕಟೇಶ್ ಮೂರ್ತಿ ಸೇರಿದಂತೆ ಪ್ರಮುಖ ನಾಯಕರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾಂಗ್ರೆಸ್ ಸರ್ಕಾರ ಬಡ ಸಮುದಾಯದ ಹಣ ದುರ್ಬಳಕೆ ಮಾಡಿದೆ: ನಿಸರ್ಗ ನಾರಾಯಣಸ್ವಾಮಿ ಆಕ್ರೋಶ: ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಮಹಾಕವಿ ವಾಲ್ಮೀಕಿ ರಚಿಸಿದ ರಾಮಾಯಣ ಇಡೀ ಮಾನವಕುಲಕ್ಕೇ ಆದರ್ಶವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಮೀಸಲಿದ್ದ ನೂರಾರು ಕೋಟಿ ರೂಪಾಯಿ ಅನುದಾನವನ್ನು ಬಡ ಸಮುದಾಯಗಳಿಗೆ ತಲುಪಿಸದೆ, ತೆಲಂಗಾಣ ಚುನಾವಣೆಗೆ ದುರ್ಬಳಕೆ ಮಾಡಿಕೊಂಡಿದೆ. ನಿಗಮದ ಚಂದ್ರಶೇಖರ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸರ್ಕಾರ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ಯಾಯ ಎಸಗಿದೆ,” ಎಂದು ಆರೋಪಿಸಿದರು.
ಹೆಚ್.ಡಿ. ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಗಂಗಾ ಕಲ್ಯಾಣ ಮತ್ತು ಪಂಚಾಯತ್ ರಾಜ್ ಮೀಸಲಾತಿ ಮೂಲಕ ಎಸ್ಟಿ ಸಮುದಾಯಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ ಅವರು, “ತಮ್ಮ ಶಾಸಕಾವಧಿಯಲ್ಲಿ ವಾಲ್ಮೀಕಿ ಸಮುದಾಯ ಭವನ ಪೂರ್ಣಗೊಳಿಸುವುದು ಹಾಗೂ ಯಲಿಯೂರು ಗ್ರಾಮದ ವಸತಿ ನಿಲಯ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂಬರುವ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬಿ, ಸಮಾಜದ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತೇನೆ,” ಎಂದರು.
ನೀಡಿದ ಮಾತಿಗೆ ಬದ್ಧರಾಗಿ ಬಾಳುವುದೇ ರಾಮಾಯಣ ನೀಡುವ ಸಂದೇಶ: ಕೆ.ವಿ. ಮಂಜುನಾಥ್: ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ಮಂಜುನಾಥ್ ಮಾತನಾಡಿ, “ಮಹರ್ಷಿ ವಾಲ್ಮೀಕಿಯವರ ತತ್ವಗಳು ಮತ್ತು ನೀಡಿದ ಮಾತಿಗೆ ಬದ್ಧರಾಗಿ ಬಾಳುವ ನೀತಿ ಪ್ರತಿಯೊಬ್ಬರಿಗೂ ದಿಕ್ಸೂಚಿಯಾಗಿದೆ. ಎಷ್ಟೇ ಕಷ್ಟ ಬಂದರೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಾಮಾಯಣ ನಮಗೆ ನೀಡುವ ಅಮೂಲ್ಯ ಸಂದೇಶ.
ಆದರೆ ಪ್ರಸ್ತುತ ದೇವನಹಳ್ಳಿ ಪಟ್ಟಣದಲ್ಲಿರುವ ಅಂಬೇಡ್ಕರ್ ಭವನಕ್ಕೆ ವಿದ್ಯುತ್ ಹಾಗೂ ನೀರಿನಂತಹ ಮೂಲಭೂತ ಸೌಕರ್ಯವನ್ನೂ ಕಲ್ಪಿಸದಿರುವುದು ಶೋಚನೀಯ,” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಮ್ಮ ಮಾತನಾಡಿ, “ಜೆಡಿಎಸ್ ಪಕ್ಷವು ಸದಾ ನಮ್ಮ ಸಮುದಾಯದ ಪರವಾಗಿ ನಿಂತಿದೆ. ನಿಸರ್ಗ ನಾರಾಯಣಸ್ವಾಮಿ ಅವರು ಶಾಸಕರಾಗಿದ್ದಾಗ ಗ್ರಾಮೀಣ ಭಾಗದ ರಸ್ತೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಈಗಲೂ ಅಧಿಕಾರದಲ್ಲಿ ಇಲ್ಲದಿದ್ದರೂ ಜನರ ಕಷ್ಟ-ಸುಖಗಳಲ್ಲಿ ಸದಾ ಭಾಗಿಯಾಗುತ್ತಿದ್ದಾರೆ,” ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಗೌರವ ಅಧ್ಯಕ್ಷ ಸಂಪಂಗಪ್ಪ, ಪ್ರಧಾನ ಕಾರ್ಯದರ್ಶಿ ಮನೋಹರ್, ಕಾರ್ಯಾಧ್ಯಕ್ಷ ಜಿ.ಎ. ರವೀಂದ್ರ, ಟೌನ್ ಅಧ್ಯಕ್ಷ ಮುನಿನಂಜಪ್ಪ, ಯುವ ಘಟಕದ ಅಧ್ಯಕ್ಷ ಟಿ. ರವಿ, ಉಪನ್ಯಾಸಕ ಕೃಷ್ಣಪ್ಪ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ನಾಗರಾಜ್, ತಾಲ್ಲೂಕು ಉಪಾಧ್ಯಕ್ಷ ಶಿವಣ್ಣ, ಮುಖಂಡರಾದ ನಾಗರಾಜ್, ರಾಮಣ್ಣ, ಗುರುಪ್ಪ, ಶಾಮಣ್ಣ, ವಿಜಯಪುರ ಶ್ರೀ ರಾಮಣ್ಣ, ಮಂಜುಳಮ್ಮ, ಚಂದ್ರಶೇಖರ್, ಮಂಡಿಬೆಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅಂಬಿಕಾ, ಪುರಸಭಾ ಮಾಜಿ ಸದಸ್ಯ ರಾಮು, ಶ್ರೀನಿವಾಸ್, ನಾರಾಯಣಸ್ವಾಮಿ, ವೀರಭದ್ರಪ್ಪ, ವೆಂಕಟರಾಜು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.









