ವಿಜಯ ದರ್ಪಣ ನ್ಯೂಸ್…….
ನೂತನ ಸೌಲಭ್ಯಗಳೊಂದಿಗೆ ಚಿಕ್ಕಮಗಳೂರು ರೈಲು ನಿಲ್ದಾಣ ಲೋಕಾರ್ಪಣೆ

ಚಿಕ್ಕಮಗಳೂರು: ಪರಂಪರೆಯಿಂದ ಆಧುನಿಕತೆಯತ್ತ ಹೆಜ್ಜೆಯಿಟ್ಟಿರುವ ಚಿಕ್ಕಮಗಳೂರು ರೈಲು ನಿಲ್ದಾಣವು ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 22.06 ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಗೊಂಡಿದ್ದು, ನೂತನ ಸೌಲಭ್ಯಗಳೊಂದಿಗೆ ಶುಕ್ರವಾರ ಲೋಕಾರ್ಪಣೆಗೊಂಡಿತು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ದೇಶಾದ್ಯಂತ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಅದರ ಭಾಗವಾಗಿ ಚಿಕ್ಕಮಗಳೂರು ರೈಲು ನಿಲ್ದಾಣವನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ನಿಲ್ದಾಣದ ಹಳೆಯ ಕಟ್ಟಡವನ್ನು ನವೀಕರಿಸಿ ಆಧುನಿಕ ಒಳಾಂಗಣ ವಿನ್ಯಾಸ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶೌಚಾಲಯ ಹಾಗೂ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ಲಾಟ್‌ಫಾರ್ಮ್ ಸಂಖ್ಯೆ 1, 2 ಮತ್ತು 3ರಲ್ಲಿ ಗ್ರಾನೈಟ್ ನೆಲಹಾಸು, ಅಂಧ ಪ್ರಯಾಣಿಕರಿಗೆ ಅನುಕೂಲವಾಗುವ ಸ್ಪರ್ಶ ಸೂಚಕ ಟೈಲ್ಸ್ ಹಾಗೂ ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ನೀಡುವ ಮೇಲ್ಬಾವಣಿ ನಿರ್ಮಿಸಲಾಗಿದೆ.
12 ಮೀಟರ್ ಅಗಲದ ಪಾದಚಾರಿ ಮೇಲ್ಲೇತುವೆ, ಎರಡು ಲಿಫ್ಟ್‌ಗಳು ಮತ್ತು ಎರಡು ಎಸ್ಕಲೇಟರ್‌ಗಳನ್ನು ಅಳವಡಿಸಲಾಗಿದೆ. ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ, ಪ್ರತ್ಯೇಕ ಪಾದಚಾರಿ ಮಾರ್ಗ, ಉದ್ಯಾನವನ, ಹಸಿರೀಕರಣ, ಎಲ್‌ಇಡಿ ಸೂಚನಾ ಫಲಕಗಳು, ರೈಲು ಮಾಹಿತಿ ಫಲಕಗಳು ಹಾಗೂ ಆಧುನಿಕ ಧ್ವನಿವರ್ಧಕ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ರೈಲ್ವೆ ಅಧಿಕಾರಿಗಳಾದ ರವಿಕುಮಾರ್ ಡಿಎಂಎಂ ಸೀನಿಯರ್, ಪ್ರಶಾಂತ್ ಕುಮಾರ್ ಎನ್ ಡಿಆರ್‌ಎಂ, ಬಾಲಾಜಿ ಸೇರಿದಂತೆ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಹಾಗೂ ಸಾರ್ವಜನಿಕರು ಇದ್ದರು











