ವಿಜಯ ದರ್ಪಣ ನ್ಯೂಸ್….
ಸಾವಿರಾರು ಭಕ್ತರಿಂದ ದೇವಿರಮ್ಮನ ದರ್ಶನ

ಚಿಕ್ಕಮಗಳೂರು: ಕಲ್ಲು ಮುಳ್ಳಿನ ಆತಂಕವಿಲ್ಲ, ಮುಗಿಲೆತ್ತರಕ್ಕೆ ಕಾಣುವ ಕಡಿದಾದ ಗುಡ್ಡ ಏರಲು ದಣಿವಿಲ್ಲ, ಚೂಪು ಕಲ್ಲಿನಂತಹ ಬೆಟ್ಟದ ತುದಿಯಲ್ಲಿ ಕುಳಿತ ದೇವಿಯ ದರ್ಶನ ಪಡೆಯುವ ತವಕದಲ್ಲಿ ಈ ಹಾದಿ ಹಿಡಿದು ಹೊರಟ ಸಾವಿರಾರು ಭಕ್ತರು ದೇವಿರಮ್ಮನ ದರ್ಶನ ಪಡೆದು ಪುಳಕಿತರಾದರು.
ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗಾ ದೇವೀರಮ್ಮ ಉತ್ಸವ ಆರಂಭವಾಗಿದ್ದು, ಮೊದಲ ದಿನ ಭಕ್ತರು ಯಾವುದನ್ನೂ ಲೆಕ್ಕಿಸದೆ ಬೆಟ್ಟ ಏರಿ ದೇವಿಯ ದರ್ಶನ ಪಡೆದರು. ಬೆಳಿಗ್ಗೆ 6 ಗಂಟೆಯಿಂದಲೇ ದೇವೀರಮ್ಮ ಬೆಟ್ಟಕ್ಕೆ ಬರಿಗಾಲಿನಲ್ಲಿ ಭಕ್ತರು ಏರಲು ಆರಂಭಿಸಿದರು. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಬಿಂಡಿಗ ದೇವಿರಮ್ಮ ದೇವಿಯನ್ನು ಕಣ್ಣುಂಬಿಕೊಂಡು ಆಶೀರ್ವಾದ ಪಡೆಯಲು ಶನಿವಾರ ಭಕ್ತ ಸಾಗರವೇ ಹರಿದಿತ್ತು. ಇಡೀ ದೇವಿರಮ್ಮ ಗುಡ್ಡ ಭಕ್ತರಿಂದ ತುಂಬಿಕೊಂಡಿತ್ತು.
ಚಿಕ್ಕಮಗಳೂರು ನಗರದ ಬಸ್ ನಿಲ್ದಾಣದಿಂದ ಮಲ್ಲೇನಹಳ್ಳಿಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಲ್ಲೇನಹಳ್ಳಿ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಏರಿದರೆ, ಮಾಣಿಕ್ಯಧಾರಾ ಜಲಪಾತ ಕಡೆಯಿಂದಲೂ ಭಕ್ತರು ಬಂದರು. ಇನ್ನೊಂದೆಡೆ ಅರಿಶಿನಗುಪ್ಪೆ ಕಡೆಯಿಂದಲೂ ಭಕ್ತರು ಬೆಟ್ಟ ಏರಿದರು.
ಕಾಡು-ಮೇಡು, ತಗ್ಗು ದಿಣ್ಣೆ ಯಾವುದನ್ನೂ ಲೆಕ್ಕಿಸದೆ ಸಾಗಿದರು. ಹಾದಿಯುದ್ದಕ್ಕೂ ಒಬ್ಬರಿಗೊಬ್ಬರು ಆಸರೆಯಾಗಿ ಕೈಹಿಡಿದುಕೊಂಡು ನಡೆದರು. ಜಾರಿದವರ ಕೈಹಿಡಿದು ಎತ್ತಿ, ಹಿಂದೆ ಉಳಿದವರನ್ನು ಕರೆದುಕೊಂಡು ಮುಂದೆ ಸಾಗಿದರು.
ಭಕ್ತರ ದಣಿವು ನೀಗಿಸಲು ಅಲ್ಲಲ್ಲಿ ಹಣ್ಣು, ನೀರು ಮತ್ತು ಪಾನಕ ವಿತರಣೆ ಮಾಡಲಾಗಿತ್ತು. ಶನಿವಾರ ಬೆಳಿಗ್ಗೆ ವಿಗ್ರಹವನ್ನು ಬೆಟ್ಟದ ಮೇಲಕ್ಕೆ ಹೊತ್ತೊಯ್ದು ಪ್ರತಿಷ್ಠಾಪಿಸಲಾಗಿತ್ತು. ಅಭಿಷೇಕ ಮತ್ತು ಪೂಜೆ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಲಾಯಿತು. ಅದಕ್ಕಾಗಿ ಕಾದಿದ್ದ ಭಕ್ತರು ದೇವಿಯನ್ನು ಕಣ್ಣುಂಬಿಕೊಂಡು ಹರ್ಷಗೊಂಡರು.
ದೇವಿರಮ್ಮ ದರ್ಶನ ಪಡೆದ ಬಳಿಕ ಭಕ್ತರು ಕೆಲಕಾಲ ಹಸಿರು ಮತ್ತು ಮಂಜಿನ ನಡುವಿನ ಪರಿಸರದ ನಡುವೆ ವಿಶ್ರಮಿಸಿದರು. ಮೊಬೈಲ್ ಫೋನ್ ಕ್ಯಾಮೆರಾಗಳಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಸಾಮಾಜಿಕ ಮಾಧ್ಯಮಗಳಿಗೆ ಫೋಟೊ, ವಿಡಿಯೊಗಳನ್ನು ಅಪ್‌ಲೋಡ್ ಮಾಡಿ ಖುಷಿಪಟ್ಟರು. ಈ ಸಂಭ್ರಮದಲ್ಲಿ ಬೆಟ್ಟ ಹತ್ತಿದ ಪ್ರಯಾಸ ಮರೆಯಾಗಿತ್ತು.











