ವಿಜಯ ದರ್ಪಣ ನ್ಯೂಸ್……
ಹರಿ ಭಜನೆ ಮಾಡೋ ನಿರಂತರ ಸೇವಾ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು : ಹರಿ ಭಜನೆ ಮಾಡೋ ನಿರಂತರ ಸೇವಾ ಪ್ರತಿಷ್ಠಾನದ ವತಿಯಿಂದ ನವೆಂಬರ್ 14ರಂದು ಬೆಂಗಳೂರಿನ ಅಕ್ಷಯನಗರದ ಸುಬ್ರಹ್ಮಣ್ಯ ಮಠದಲ್ಲಿ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು.
ಪ್ರತಿಷ್ಠಾನದ ಸಂಚಾಲಕರಾದ ಪ್ರಸನ್ನ ಅಲಬನೂರು, ಸುಷ್ಮಾ ಜೋಯಿಸ್ ಹಾಗೂ ಕಾರ್ಯದರ್ಶಿ ಸುಪ್ರಿಯಾ ಪೇಜಾವರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಖ್ಯಾತ ಗಾಯಕಿ ವಿದುಷಿ ಮಾಲಿನಿ ರಾಮ್ ಪ್ರಸಾದ್ ಅವರಿಗೆ ‘ಸಂಗೀತ ಕಲಾನಿಧಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹರಿದಾಸ ಸಾಹಿತ್ಯದ ಚಿಂತಕರಾಗಿ ಹಾಗೂ ದಾಸವಾಣಿ ಸಂಸ್ಥೆಯ ಸಂಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಜಯರಾಜ್ ಕುಲಕರ್ಣಿ ಮತ್ತು ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಶೇಷಶಯನಾಚಾರ ಜೋಶಿ ಅವರಿಗೆ ‘ಹರಿದಾಸ ಭೂಷಣ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಇದಲ್ಲದೆ, 2025-26ನೇ ಸಾಲಿನಲ್ಲಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 50 ಮಂದಿ ಸಾಧಕರಿಗೆ ‘ಹರಿದಾಸ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಭಜನೆ, ಸಂಗೀತ ಹಾಗೂ ಹರಿದಾಸ ಸಾಹಿತ್ಯದ ಮೂಲಕ ಆಧ್ಯಾತ್ಮಿಕ ಮೌಲ್ಯಗಳನ್ನು ಸಮಾಜದಲ್ಲಿ ಪಸರಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಈ ಕಾರ್ಯಕ್ರಮವು ಭಕ್ತಿಭಾವ ಮತ್ತು ಸಂಭ್ರಮದಿಂದ ನಡೆಯಿತು.
&&&&&&&&&&&&&&&&&&&&&&&
“ಸ್ಮರಿಸಿ ಬದುಕಿರೋ” ವಿಶೇಷ ದಾಸವಾಣಿ ಕಾರ್ಯಕ್ರಮ

ಬೆಂಗಳೂರು : ಹರಿದಾಸ ಸೇವಾ ಇಂಟರ್ನ್ಯಾಷನಲ್ ಟ್ರಸ್ಟ್ ವತಿಯಿಂದ ಭೃಗು ಅಂಶ ಸಂಭೂತರಾದ ಶ್ರೀ ವಿಜಯದಾಸಾರ್ಯರ ಆರಾಧನಾ ಮಹೋತ್ಸವದ ಅಂಗವಾಗಿ ಅವರ ಪೂರ್ವಾರಾಧನೆಯಂದು ಅಂದರೆ ದಿನಾಂಕ 18 ನವೆಂಬರ್ 2026 ಸಂಜೆ 6 ಗಂಟೆಗೆ *ಸ್ಮರಿಸಿ ಬದುಕಿರೋ* ಎಂಬ ಶೀರ್ಷಿಕೆ ಅಡಿಯಲ್ಲಿ ದಾಸವರ್ಯರಿಗೆ *ಗಾನ ನಮನ* ಕಾರ್ಯಕ್ರಮ ಆಯೋಜಿಸಿದ್ದೇವೆ.
ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀ ಕೃಷ್ಣ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯುವ ಈ ಕಾರ್ಯಕ್ರದಲ್ಲಿ ಖ್ಯಾತ ಗಾಯಕ ಶ್ರೀ ರಾಯಚೂರು ಶೇಷಗಿರಿ ದಾಸರು ವಿಜಯದಾಸರ ಕೃತಿಗಳನ್ನೊಳಗೊಂಡ ದಾಸವಾಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಆಸ್ತಿಕ ಬಂಧುಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಶ್ರೀ ವಿಜಯರಾಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಂಸ್ಥೆಯ ಪದಾಧಿಕಾರಿಗಳು ವಿನಂತಿಸಿದ್ದಾರೆ .










