ವಿಜಯ ದರ್ಪಣ ನ್ಯೂಸ್….
ದೇವಸ್ಥಾನಗಳು ಕೇವಲ ಕಟ್ಟಡಗಳಲ್ಲ, ಭಕ್ತಿ ಮತ್ತು ಮಾನವೀಯತೆಯ ಪ್ರತೀಕವಾಗಬೇಕು: ಶ್ರೀ ಮೂಗು ಮಾರಮ್ಮ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ

ತಾಂಡವಪುರ ನವಂಬರ್ 18
ದೇವರು ಕೇವಲ ದೇವಸ್ಥಾನದಲ್ಲಿ ಮಾತ್ರ ಇರುವುದಿಲ್ಲ. ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಿದ್ದಾನೆ. ದೇವಸ್ಥಾನ ಎನ್ನುವುದು ಕೇವಲ ಕಟ್ಟಡವಲ್ಲ, ಅದು ಭಕ್ತಿ ಮತ್ತು ನಂಬಿಕೆಯ ಪ್ರತೀಕವಾಗಿದೆ. ಮನುಷ್ಯರು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಮಾನವೀಯತೆಯಿಂದ ಬದುಕುವುದೇ ನಿಜವಾದ ಧರ್ಮ. ಒಳ್ಳೆಯ ನಡೆನುಡಿ ಮತ್ತು ಇತರರಿಗೆ ಒಳಿತನ್ನು ಬಯಸುವ ಗುಣಗಳ ಮೂಲಕವೇ ದೈವತ್ವಕ್ಕೆ ಹತ್ತಿರವಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹೊಸ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮೂಗು ಮಾರಮ್ಮ ದೇವಾಲಯದ ಉದ್ಘಾಟನಾಮಹೋತ್ಸವದಲ್ಲಿ ಹೊಸಕೆಂಪಯ್ಯನಹುಂಡಿ ಗ್ರಾಮದಲ್ಲಿ
ನೂತನವಾಗಿ ನಿರ್ಮಿಸಲಾದ ಶ್ರೀ ಮೂಗುಮಾರಮ್ಮ ದೇವಿಯ ದೇವಸ್ಥಾನವನ್ನು ಉಪ್ಪಾರ ಸಮುದಾಯದ ಪೂಜ್ಯ ಸ್ವಾಮೀಜಿಗಳಾದ ಶ್ರೀ ಪುರುಷೋತ್ತಮಾನಂದ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿ ಮಾತನಾಡುತ್ತಾ
ನಮ್ಮ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ದೇವಾಲಯಗಳು ಅಭಿವೃದ್ಧಿ ಹೊಂದಿವೆ, ಹಿಂದೆ ಸಣ್ಣ ದೇವಸ್ಥಾನವಿದ್ದ ಸ್ಥಳದಲ್ಲಿ ಇಂದು ಭವ್ಯವಾದ ದೇವಸ್ಥಾನ ನಿರ್ಮಾಣವಾಗಿರುವುದು ಸಂತೋಷದ ಸಂಗತಿಯಾಗಿದೆ. ದೇವಸ್ಥಾನದ ನಿರ್ಮಾಣದ ಹಿಂದೆ ಅನೇಕರ ಶ್ರಮ, ಭಕ್ತಿ ಮತ್ತು ಸಹಕಾರವಿದೆ. ಎಲ್ಲರ ಪ್ರಯತ್ನದಿಂದ ದೇವಸ್ಥಾನದ ನಿರ್ಮಾಣ ಮತ್ತು ದೇವಿಯ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿದೆ ಎಂದು ಹೇಳಿದರು.
ದೇವಸ್ಥಾನ ಕಟ್ಟಿದ ಮಾತ್ರಕ್ಕೆ ದೇವರು ಬರುವುದಿಲ್ಲ. ದೇವರು ಎಲ್ಲ ಕಡೆಯೂ ಇದ್ದಾನೆ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ದೇವರನ್ನು ಪೂಜಿಸುವುದರ ಜೊತೆಗೆ ಒಳ್ಳೆಯ ಮನುಷ್ಯರಾಗಿ ಬದುಕುವುದು ಮುಖ್ಯ. ಇತರರನ್ನು ಪ್ರೀತಿಸುವುದು, ಎಲ್ಲರನ್ನೂ ಮನುಷ್ಯರಾಗಿ ಕಾಣುವುದು ಮತ್ತು ಯಾರಿಗೂ ಕೆಡುಕನ್ನು ಬಯಸದಿರುವುದೇ ಧರ್ಮದ ಮೂಲ ಸಾರವಾಗಿದೆ ಎಂದು ಸಿದ್ದರಾಮಯ್ಯನವರು ತಿಳಿಸಿದರು.
ದೇವರು ಒಬ್ಬನೇ ಆಗಿದ್ದರೂ ಆತನನ್ನು ವಿವಿಧ ಹೆಸರುಗಳಿಂದ ಆರಾಧಿಸಲಾಗುತ್ತದೆ. ದೇವರ ದೃಷ್ಟಿಯಲ್ಲಿ ಸಂಪ್ರದಾಯ ಮತ್ತು ಆಚರಣೆಗಳಿಗಿಂತ ಮಾನವೀಯತೆ ಮುಖ್ಯವಾಗಿದೆ. ಶುದ್ಧವಾದ ಭಕ್ತಿ, ಒಳ್ಳೆಯ ನಡೆನುಡಿ, ಇತರರ ಬಗ್ಗೆ ಪ್ರೀತಿ ಮತ್ತು ಕಾಳಜಿ ಹೊಂದಿರುವುದು ಅಗತ್ಯ. ಸಮಾಜದಲ್ಲಿ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಕೇವಲ ಪೂಜೆ, ಆಚರಣೆಗಳಿಂದ ದೇವರು ಸಂತೃಪ್ತನಾಗುವುದಿಲ್ಲ. ಇತರರಿಗೂ ಒಳ್ಳೆಯದನ್ನೇ ಬಯಸುವ ಗುಣ ಇದ್ದಾಗ ಮಾತ್ರ ನಿಜವಾದ ಭಕ್ತಿಗೆ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ತಮ್ಮನ್ನು ಪ್ರೀತಿ ಮತ್ತು ಅಭಿಮಾನದಿಂದ ಕಂಡಿದ್ದಾರೆ. ಕಷ್ಟದ ಸಂದರ್ಭಗಳಲ್ಲಿಯೂ ಕೈಹಿಡಿದು ಬೆಂಬಲಿಸಿದ್ದಾರೆ. ಜನರು ತೋರಿದ ಪ್ರೀತಿ ಮತ್ತು ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕ್ಷೇತ್ರದ ಜನತೆಗೆ ಸಿದ್ದರಾಮಯ್ಯನವರು ಕೃತಜ್ಞತೆ ವ್ಯಕ್ತಪಡಿಸಿದರು.
ಈ ಊರಿನ ಜನರೊಂದಿಗೆ ತಮಗೆ ವಿಶೇಷವಾದ ಭಾವನಾತ್ಮಕ ಸಂಬಂಧವಿದೆ. ಇಲ್ಲಿಯೇ ಹುಟ್ಟಿ ಬೆಳೆದಿರುವುದರಿಂದ ಜನರ ಕಷ್ಟಸುಖಗಳನ್ನು ಅರಿತಿದ್ದೇನೆ. ಜನರು ನೀಡಿದ ಬೆಂಬಲದಿಂದಲೇ ರಾಜಕೀಯ ಜೀವನದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಯಿತು. ಜನರ ಋಣ ತೀರಿಸಲು ತಮ್ಮಿಂದಾದ ಪ್ರಯತ್ನಗಳನ್ನು ಮಾಡಿದ್ದೇನೆ ಎಂದು ಹೇಳಿದರು.
ಮಕ್ಕಳಿಗೆ ಉಚಿತ ಶಿಕ್ಷಣದ ಅವಕಾಶವಿದೆ. ಪ್ರತಿಯೊಬ್ಬರೂ ಅದರ ಪ್ರಯೋಜನ ಪಡೆದುಕೊಂಡು ಶಿಕ್ಷಣ ಪಡೆಯಬೇಕು. ಉದ್ಯೋಗ ದೊರೆಯಲಿ ಅಥವಾ ದೊರೆಯದಿರಲಿ, ಶಿಕ್ಷಣದಲ್ಲಿ ಯಾರೂ ಹಿಂದುಳಿಯಬಾರದು. ಶಿಕ್ಷಣವು ವ್ಯಕ್ತಿಗೆ ಜ್ಞಾನ, ಆತ್ಮವಿಶ್ವಾಸ ಮತ್ತು ಸಮಾಜದಲ್ಲಿ ಗೌರವಯುತವಾಗಿ ಬದುಕುವ ಸಾಮರ್ಥ್ಯವನ್ನು ನೀಡುತ್ತದೆ. ಈ ಊರಿನ ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ಬಾಬಾಸಾಹೇಬ್ ಅಂಬೇಡ್ಕರ್ ಬಸವಣ್ಣ ಕನಕದಾಸರು ಸೇರಿದಂತೆ ಇನ್ನೂ ಹಲವಾರು ಮಹನೀಯರ ಅವರ ಕನಸನ್ನು ನನಸಾಗಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿನ ಜಾತೀಯತೆ, ಅಸಮಾನತೆ ಮತ್ತು ತಾರತಮ್ಯವನ್ನು ತೊಡೆದುಹಾಕಲು ಕೇವಲ ಮಾತುಗಳಿಂದ ಸಾಧ್ಯವಿಲ್ಲ. ಎಲ್ಲರಿಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿ ತುಂಬಬೇಕು. ಅವಕಾಶ ವಂಚಿತ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸಬಲೀಕರಣದ ಅವಕಾಶಗಳನ್ನು ಕಲ್ಪಿಸಬೇಕು. ಜನರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾದಾಗ ಮಾತ್ರ ಜಾತಿ ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ನಿವಾರಿಸಲು ಸಾಧ್ಯ ಎಂದು ಹೇಳಿದರು.
ತಮ್ಮ ವಯಸ್ಸು ಮತ್ತು ರಾಜಕೀಯ ಬದುಕನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು, ತಮಗೆ ಈಗ 79 ವರ್ಷ ತುಂಬಿ 80ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ. ಈ ಕ್ಷೇತ್ರದಲ್ಲಿ ಹುಟ್ಟಿದವನಾಗಿ ಇಲ್ಲಿನ ಜನರ ಋಣ ತೀರಿಸಲು ನಿರಂತರವಾಗಿ ಪ್ರಯತ್ನಿಸಿದ್ದೇನೆ. ಜನರು ತಮ್ಮ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಸದಾ ಕೃತಜ್ಞನಾಗಿದ್ದೇನೆ ಎಂದು ಸಿದ್ದರಾಮಯ್ಯನವರು ಹೇಳಿದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರ ಎನ್ನುವುದು ಸಮಾಜದಲ್ಲಿ ಬದಲಾವಣೆ ತರುವ ಒಂದು ಮಾರ್ಗವಷ್ಟೇ. ಅಧಿಕಾರದ ಮೂಲಕ ಅವಕಾಶ ವಂಚಿತರಿಗೆ ನ್ಯಾಯ ಒದಗಿಸುವುದು ಮತ್ತು ಸಮಾಜದಲ್ಲಿ ಸಮಾನತೆ ತರುವುದು ಮುಖ್ಯ. ಇದೇ ಕಾರಣಕ್ಕಾಗಿ ತಮ್ಮ ರಾಜಕೀಯ ಬದುಕಿನಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ನಿಂತಿದ್ದೇನೆ. ಸಮಾಜದಲ್ಲಿ ಬದಲಾವಣೆ ತರುವುದೇ ಅಧಿಕಾರದ ಮೂಲ ಉದ್ದೇಶವಾಗಬೇಕು ಎಂದು ಅಭಿಪ್ರಾಯಪಟ್ಟರು.
ತಾಯಿ ಶ್ರೀ ಮೂಗು ಮಾರಮ್ಮ ದೇವಿಯುಎಲ್ಲರಿಗೂ ಒಳಿತನ್ನು ಮಾಡಲಿ. ಪ್ರತಿಯೊಬ್ಬರ ಕುಟುಂಬದಲ್ಲಿಯೂ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದ ಅವರು, ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಹಾಗೂ ಅದರ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದುಸಿದ್ದರಾಮಯ್ಯನವರು ಹೇಳಿದರು
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ರಾಮಯ್ಯನವರು ಮಾತನಾಡುತ್ತಾ
ಶ್ರೀ ಮೂಗುಮಾರಮ್ಮ ದೇವಿಯ ಕೃಪೆಯಿಂದ ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಲಭಿಸಲಿ. ಗ್ರಾಮದಲ್ಲಿ ಭಕ್ತಿ, ಸಾಮರಸ್ಯ ಮತ್ತು ಸಹಬಾಳ್ವೆಯ ವಾತಾವರಣ ಸದಾ ನೆಲೆಸಲಿ, ಗ್ರಾಮದ ಸರ್ವತೋಮುಖ ಅಭಿವೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು ಇದೇ ಸಂದರ್ಭದಲ್ಲಿ ಉಪ್ಪಾರ ಸಮುದಾಯದ ಅಭಿವೃದ್ಧಿ ಹಾಗೂ ಸಮಾಜದ ಹಿತದೃಷ್ಟಿಯಿಂದ 8 ಗುಂಟೆ ಜಮೀನನ್ನು ಸಮಾಜಕ್ಕೆ ದಾನವಾಗಿ ನೀಡಿದ ಶ್ರೀ ಗೋಪಿನಾಥ್ ಹಾಗೂ ಅವರ ಕುಟುಂಬದ ಉದಾರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಸಮಾಜದ ಏಳಿಗೆಗಾಗಿ ಇಂತಹ ಸೇವಾ ಮನೋಭಾವದ ಕೊಡುಗೆಗಳು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ನ ನಿಕಟಪೂರ್ವ ಅಧ್ಯಕ್ಷ ಡಾ. ಬಿ.ಜೆ. ವಿಜಯ್ ಕುಮಾರ್, ಉಪ್ಪಾರ ಸಮಾಜದ ಮುಖಂಡ ಶ್ರೀ ಯೋಗೇಶ್ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ನಿರ್ದೇಶಕ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ, ಲತಾ ಸಿದ್ದಶಟ್ಟಿ ತಾಲೂಕ್ ಪಂಚಾಯಿತಿ ಮಾಜಿ ಸದಸ್ಯ ಮೂಗ ಶೆಟ್ಟಿ ಗ್ರಾಮದ ಮುಖಂಡ ರಾಜೇಂದ್ರ ಪಿ ಎಲ್ ಡಿ ಬ್ಯಾಂಕ್ಬ ಅಧ್ಯಕ್ಷ ಮಹದೇವಣ್ಣ ಮಹೇಶ್ ಬಸವರಾಜು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾದೇವ ಅನಿಲ್ ಕುಮಾರ್ ಅನಿಲ್ ಕುಮಾರ್ ಸುಂದ್ರ ಅಂಕಶಟ್ಟಿ ನಾಗರಾಜು ಕುಮಾರ ವಿಜಯ ಕುಮಾರ ಮಹೇಶ್ ಮಹೇಶ್ ಗುಂಡ ಶಿವನಂಜಶೆಟ್ಟಿ ಮಂಜು ಸೇರಿದಂತೆ ಸಮುದಾಯದ ಮುಖಂಡರು, ಗ್ರಾಮಸ್ಥರು ಹಾಗೂ ಅಪಾರ ಸಂಖ್ಯೆಯ ಭಕ್ತರು ಹಾಜರಿದ್ದು ಇದೆ ವೇಳೆ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಹಾಗೂ ಅಭಿಮಾನಿಗಳು ಜೆಸಿಬಿ ಯಂತ್ರದ ಮೇಲೆ ಹತ್ತಿ ಸಿದ್ದರಾಮಯ್ಯ ರವರಿಗೆ ಬಾರಿಗೆ ಸೇಬಿನ ಹಾರ ಹಾಗೂ ಊಮಳೆ ಸುರಿಯುವ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಿದರುಅವರು ಮಾತನಾಡುವಾಗ ಅಭಿಮಾನಿಗಳು ನೀವು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದರು











