ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಎರಡೇ ದಿನದಲ್ಲಿ ಮತ್ತೆ ಕೆಲಸಕ್ಕೆ ಹಾಜರಾದ ತಹಶಿಲ್ದಾರ್ ಶಿವರಾಜ್

ವಿಜಯ ದರ್ಪಣ ನ್ಯೂಸ್

ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ 

ದೇವನಹಳ್ಳಿ ತಾಲೂಕು ತಹಶಿಲ್ದಾರ್ ಶಿವರಾಜ್ ಅವರನ್ನು ಸರ್ಕಾರ ಕಳೆದ ತಿಂಗಳು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು .

ಶಿವರಾಜ್ ಅವರು, ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿ ಕೆಎಟಿಗೆ ಮೇಲ್ಮನವಿ ಸಲ್ಲಿಸಿ, ದೇವನಹಳ್ಳಿಯಲ್ಲಿಯೇ ತಹಶಿಲ್ದಾರ್ ಆಗಿ ಮತ್ತೆ ಮುಂದುವರೆದಿದ್ದು ,ಈ ನಡುವೆ ಕಳೆದ ಆಗಷ್ಟ್ 17 ರ ಗುರುವಾರ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ದೇವನಹಳ್ಳಿ ತಹಶಿಲ್ದಾರ್​ ಶಿವರಾಜ್​ ಮನೆಗೆ ದಿಢೀರನೆ ಬಂದಿಳಿದು ಪರಿಶೀಲಿಸಲಾಗಿ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಹಲವು ಪ್ರಮುಖ ದಾಖಲೆಗಳು ಸಿಕ್ಕಿದೆ. ಇದರ ಜೊತೆ ತಹಶಿಲ್ದಾರ್ ಮನೆಯಲ್ಲಿ ಅಧಿಕ‌‌ ಮೊತ್ತದ ಹಣ ಪತ್ತೆಯಾಗಿದೆ. ಈಗಾಗಲೇ ತಹಶೀಲ್ದಾರ್ ಮನೆಯಲ್ಲಿ ಸಿಕ್ಕ ಹಣ ಮತ್ತು ದಾಖಲೆಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ, ಅಲ್ಲದೆ, ದಾಖಲೆಗಳ ಜೊತೆಗೆ ತಹಶೀಲ್ದಾರ್ ಮೊಬೈಲ್ ಸಹ‌ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ, ಪೋನ್ ರಿಟ್ರೀವ್ ಮಾಡಿ ಮತ್ತಷ್ಟು ಪುರಾವೆಗಳನ್ನು ಅಧಿಕಾರಿಗಳು ಪಡೆಯಲಿದ್ದಾರೆ.

ಇಬ್ಬರು ಆಪ್ತರ ಮೂಲಕ ಹೆಚ್ಚಿನ ಅಕ್ರಮ ಮಾಡಿರುವುದು ಮೊಲ್ನೋಟಕ್ಕೆ ಪತ್ತೆಯಾಗಿದೆ, ಈ ಹಿನ್ನೆಲೆಯಲ್ಲಿ ತಹಶಿಲ್ದಾರ್​​ ಶಿವರಾಜ್ ಅವರ ಇಬ್ಬರು ಆಪ್ತರನ್ನು ಕಛೇರಿಗೆ ಕರೆಸಿ ತನಿಖೆ ನಡೆಸಲಿದ್ದಾರೆ. ಅಲ್ಲದೇ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಹಾಗೂ ತಹಶೀಲ್ದಾರ್ ಕಾರು‌ ಚಾಲಕನ ವಿಚಾರಣೆ ನಡೆಸುವ ಸಾಧ್ಯತೆಯಿದೆ, ಎಂದೆಲ್ಲಾ, ಕಳೆದ ಆಗಷ್ಟ್ 17-18 ರಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು ಇದರಿಂದಾಗಿ ಸಾರ್ವಜನಿಕರು ಅಂದು ನಿಟ್ಟುಸಿರು ಬಿಟ್ಟಿದ್ದರು.

ದೇವನಹಳ್ಳಿ ತಾಲೂಕಿನಲ್ಲಿ ಕೆಐಎಡಿಬಿಗೆ ಭೂಸ್ವಾಧಿನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಐಎಡಿಬಿಗೆ ಹೋಗುತ್ತಿರುವ ಜಮೀನುಗಳಲ್ಲಿ ಹಲವು ಸರ್ಕಾರಿ ಜಮೀನುಗಳಿಗೆ ನಖಲಿ ದಾಖಲೆ ಸೃಷ್ಟಿ ಮಾಡಿಕೊಂಡು ಪರಿಹಾರದ ಮೊತ್ತವನ್ನು ಲಪಟಾಯಿಸಲಾಗುತ್ತಿದೆ ಎಂದು ಜನ ಸಾಮಾನ್ಯರು ಕೂಡ ಆರೋಪಿಸಿ ಹಿಡಿ ಶಾಪ ಹಾಕುತ್ತಿದ್ದ ಸಂದರ್ಭದಲ್ಲೇ ತಹಶಿಲ್ದಾರ್ ಮನೆಯಲ್ಲಿ ಲೋಕಾಯುಕ್ತರು ಶೋಧನೆ ಮಾಡಿ ಇಂತಹ ಅಕ್ರಮಗಳ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದನ್ನು ಕಂಡು ಜನ ಸಾಮಾನ್ಯರ ಕೆಲಸ ಮಾಡದೆ ಕೇವಲ ಹಣ ಉಳ್ಳವರ ಪರವಾಗಿ ಕೆಲಸ ಮಾಡುವ ಅಧಿಕಾರಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದ ಸಾರ್ವಜನಿಕರು ಕೂಡ ಲೋಕಾಯುಕ್ತ ಅಧಿಕಾರಿಗಳ ಕಾರ್ಯವನ್ನು ಮೆಚ್ಚಿ ಒಂದಿಷ್ಟು ನಿಟ್ಟುಸಿರು ಬಿಟ್ಟಿದ್ದರು ಆದರೆ ಲೋಕಾಯುಕ್ತ ಪೋಲೀಸರು ತಹಶಿಲ್ದಾರ್ ಶಿವರಾಜ್ ವಿರುದ್ಧ ಎಪ್ ಐ ಆರ್ ದಾಖಲಿಸಿದ್ದರು ಕೂಡ ತಹಶಿಲ್ದಾರ್ ಮತ್ತೆ ಎರಡೇ ದಿನದಲ್ಲಿ ದೇವನಹಳ್ಳಿ ತಾಲೂಕು ಕಛೇರಿಗೆ ಹಾಜರಾಗಿ ಕೆಲಸ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮತ್ತು ಹಲವು ರೀತಿಯ ಅನುಮಾನಕ್ಕೆ ಕಾರಣವಾಗಿದೆ.