ನಮ್ಮನ್ನು ಅಗಲಿದ ಮಾತಂಡ ಮೊಣ್ಣಪ್ಪನವರೊಂದಿಗೆ ಆ ದಿನಗಳು : ಶ್ರೀಧರ್ ನೆಲ್ಲಿತ್ತಾಯ

ವಿಜಯ ದರ್ಪಣ ನ್ಯೂಸ್

ಮಡಿಕೇರಿ 
ಮಾತoಡ ಮೊಣ್ಣಪ್ಪ, ಈ ಹೆಸರಿನಲ್ಲಿ ಇದೆ ಮಾನವೀಯ ಗುಣಗಳು, ಸರಳ ಸಜ್ಜನಿಕೆಯ ವ್ಯಕ್ತಿತ್ವ ಸಾಮಾಜಿಕ ಕಳಕಳಿ, ನೊಂದವರ ಪರ ವಕಾಲತ್ತು ವಹಿಸುವ ಗುಣ ಅವರನ್ನು ಸದಾ ನೆನಪಿನಲ್ಲಿ ಇರುವಂತೆ ಮಾಡಿದೆ.

ನನಗೆ ಮೊಣಪ್ಪನವರು ಹೆಚ್ಚಾಗಿ ಪರಿಚಯವಾಗಿದ್ದು ಕೊಡಗು ಏಕೀಕರಣ ರಂಗದಲ್ಲಿ ಅವರು ಅಧ್ಯಕ್ಷರಾಗಿದ್ದಾಗ ನಾನು ಏಕೀಕರಣ ರಂಗದ ಸದಸ್ಯನಾಗಿದ್ದೆ ಆ ಸಂದರ್ಭ ಅವರೊಂದಿಗೆ ಹಲವು ಹೋರಾಟಗಳಲ್ಲಿ ನಾನು ಭಾಗವಹಿಸಿದ್ದೆ. ಹೋರಾಟದ ಕಾರ್ಯಕ್ರಮಗಳಿಗೆ ನನ್ನ ನರ್ಮದಾ ಸ್ಕೂಟರ್ ನಲ್ಲಿ ಹಿಂಬದಿಯಲ್ಲಿ ಕುಳಿತು ಅವರೊಂದಿಗೆ ಬೆರೆತ ದಿನಗಳು ಹಲವು. ಕಾನೂರಿನ ಚೆಪ್ಪುಡೀರ ಕೃಪ ರವರಿಗೆ ಅರಣ್ಯ ಇಲಾಖೆಯವರು ಕಿರುಕುಳ ನೀಡುತ್ತಿದ್ದಾಗ ಅವರ ತೋಟದ ಮುಂಭಾಗ ಹಾಕಿದ ಬೇಲಿಯನ್ನು ಕಿತ್ತು ಹೋರಾಟದ ಮೂಲಕ ಅವರಿಗೆ ಜಾಗ ದೊರಕಿಸಿಕೊಟ್ಟ ಘಟನೆ, ನಾಗರಹೊಳಗೆ ಬೆಂಕಿ ಬಿದ್ದ ಪ್ರಕರಣ ಸಂದರ್ಭ ಪೊಲೀಸರು ಕುಟ್ಟ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀಮತಿ ಶರೀನ್ ಅವರ ಪತಿ ಸುಬ್ಬಯ್ಯನವರನ್ನು ಠಾಣೆಯಲ್ಲಿ ಹಿಂಸಿಸಿದನ್ನು ಪ್ರತಿಭಟಿಸಿ ಶ್ರೀಮಂಗಲ ಠಾಣೆಯಲ್ಲಿ ಹೋರಾಟ ನಡಿಸಿ ಅಂದಿನ ಠಾಣಾಧಿಕಾರಿಯವರನ್ನು, ಭರತ್, ಸಂದ್ಯ ಪ್ರಕಾಶ್ (ಇದೀಗ ದಿವಂಗತ) ರೊಂದಿಗೆ ಜನ್ಮ ಜಾಲಾಡಿದ ಸಂದರ್ಭ, ಗೊಬ್ಬರ ಕೊರತೆ ಸಂದರ್ಭ ಗೊಬ್ಬರದ ಮಳಿಗೆಗೆ ಬೀಗ ಹಾಕಿ ಪ್ರತಿಬಟಿಸಿದ ಸಂದರ್ಭ, ಹೀಗೆ ಅವರೊಂದಿಗೆ ನಾನು ಹೋರಾಟದಲ್ಲಿ ಪಾಲ್ಗೊಂಡಿದ್ದೆ. ಹೋರಾಟದ ಕಿಚ್ಚು, ಇತರರ ನೋವಿನಲ್ಲಿ ಭಾಗಿಯಾಗುವ ರೀತಿ ತನ್ನ ಜನಾಂಗದ ಮೇಲೆ ಇರಲೇಬೇಕಾದ ಪ್ರೇಮ. ಇತರ ಜನಾಂಗಗಳಿಗೂ ಕೂಡ ಗೌರವ ನೀಡುವ ಗುಣ ಅವರ ಸಂಸ್ಕಾರ ಇದರಿಂದ ಮೊಣ್ಣಪ್ಪನವರು ನನಗೆ ಅಚ್ಚುಮೆಚ್ಚು.

1997ರಲ್ಲಿ ಕೊಡಗು ಜಿಲ್ಲಾ ವಿಪ್ರ ಯುವ ಸಂಘದ ಸ್ಥಾಪಕ ಅಧ್ಯಕ್ಷನಾಗಿದ್ದ ಸಂದರ್ಭ ತಲಕಾವೇರಿಯ ಅವ್ಯವಸ್ಥೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ನಂತರ ಜಿಲ್ಲಾಧಿಕಾರಿಗಳೊಂದಿಗೆ ವ್ಯವಸ್ಥೆ ಸರಿಪಡಿಸುವ ಮನವಿ ಅರ್ಪಿಸಿದಾಗ ಯಾವುದೇ ರೀತಿಯ ಸ್ಪಂದನೆ ಜಿಲ್ಲಾಡಳಿತದಿಂದ ದೊರಕದಿರುವಾಗ, ಮಾತಂಡ ಮೊಣ್ಣಪ್ಪ ಹಾಗೂ ತಮ್ಮು ಪೂವಯ್ಯ ಅವರ ಸಲಹೆಯಂತೆ ನಾನು ಎಲ್ಲಾ ಜನಾಂಗದವರ ಸಭೆಯನ್ನು ಕರೆದಾಗ ಮಡಿಕೇರಿಯ ಕ್ಯಾಪಿಟಲ್ ಹೋಟೆಲ್ ನಲ್ಲಿ ಗಣೇಶ್ ಅಯ್ಯಣ್ಣರವರು ಉಚಿತವಾಗಿ ನೀಡಿದ ಸಭಾಂಗಣದಲ್ಲಿ ತಲಕಾವೇರಿ ಅಭಿವೃದ್ಧಿ ಹೋರಾಟ ಸಮಿತಿ ರಚನೆಗೊಂಡು ಅದರ ಅಧ್ಯಕ್ಷರಾಗಿ ಮಾತಂಡ ಮೊಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿ ನನ್ನನ್ನು ಪ್ರಧಾನ ಕಾರ್ಯದರ್ಶಿಯಾಗಿ ಭಾಗವಹಿಸಿದ್ದ ಎಲ್ಲಾ ಜನಾಂಗದ 50ಕ್ಕು ಹೆಚ್ಚು ಸದಸ್ಯರು ಆಯ್ಕೆ ಮಾಡಿ ಮೊಣ್ಣಪ್ಪ ರವರ ಮಾರ್ಗದರ್ಶನದಲ್ಲಿ ಕಾರ್ಯಯೋಜನೆಯನ್ನು ರೂಪಿಸಿ ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಚಂದ್ರಕಲಾರವರ ಮೂಲಕ ಎಸ್. ಎಂ ಕೃಷ್ಣ ರವರನ್ನು ಭೇಟಿ ಮಾಡಿ ಹತ್ತುವರೆ ಕೋಟಿ ರೂಪಾಯಿ ತಲಕಾವೇರಿ ಜೀರ್ಣೋದ್ಧಾರಕ್ಕೆ ಬಿಡುಗಡೆಗೊಳ್ಳಲು ಚಂದ್ರಕಲಾ ರವರ ಪ್ರಯತ್ನದಿಂದ ಮಾತಂಡ ಮೊಣ್ಣಪ್ಪನವರ ಶ್ರಮದಿಂದ ಸಾಧ್ಯವಾಯಿತು ಎಂದು ಹೇಳಿದರೆ ತಪ್ಪಾಗಲಾರದು. ಅಂದಿನ ಮುಖ್ಯಮಂತ್ರಿ ಆಗಿದ್ದ ಎಸ್ಎಂ ಕೃಷ್ಣ ಅವರ ಆಪ್ತ ಕಾರ್ಯದರ್ಶಿಗಳಾಗಿದ ಕೊಡಗಿನವರೇ ಆದ ಪುಣ್ಯಾತ್ಮರೊಬ್ಬರು ಕೊಡಗಿನ ಅಂದಿನ ಶಾಸಕರು ಹಾಗೂ ಕೊಡಗಿನವರೆ ಆದ ಉಸ್ತುವಾರಿ ಸಚಿವರನ್ನು ಸಮಿತಿಗೆ ಸೇರಿಸಿಕೊಳ್ಳಲಿಲ್ಲ, ಅವರ ಮುಂದಾಳತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ಹೊರಟಿಲ್ಲ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿಗಳ ಸಭೆಯನ್ನೇ ರದ್ದು ಮಾಡಿದಾಗ, ಮೊಣ್ಣಪ್ಪನವರು ತೆಗೆದುಕೊಂಡ ತೀರ್ಮಾನ ಹಾಗೆ ಚಂದ್ರಕಲಾ ಅವರ ಮೂಲಕ ಕೆಲವೇ ತಾಸುಗಳಲ್ಲಿ ಮುಖ್ಯಮಂತ್ರಿಗಳ ಮನೆಯಲ್ಲೇ ಅವರನ್ನು ಭೇಟಿ ಮಾಡಿ ಒಂದು ತಾಸಿಗು ಹೆಚ್ಚು ಕುಳಿತು ಸಭೆ ನಡೆಸಿ ಚಿದ್ವಿಲಾಸ್ ಅವರು ಮುಖ್ಯಮಂತ್ರಿಗಳಿಗೆ ನೀಡಿದ ಸಲಹೆಯಂತೆ ಕೂಡಲಸಂಗಮ ಅಭಿವೃದ್ಧಿಪಡಿಸಿದಂತೆ ಪ್ರತ್ಯೇಕವಾಗಿ ನಿಗಮದ ಮೂಲಕ ತಲಕಾವೇರಿ ಅಭಿವೃದ್ಧಿ ಪಡಿಸವ ಕೋರಿಕೆಗೆ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರಕಿತು. ಕಾವೇರಿ ನೀರಾವರಿ ನಿಗಮದ ಮೂಲಕ ಮೊಣ್ಣಪ್ಪನವರ ಸಲಹೆಯಂತೆ ಈ ಯೋಜನೆಗೆ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯದ ಮುಖ್ಯ ಅಭ್ಯಂತರಾದ ತಲಕಾವೇರಿಯ ಅರ್ಚಕ ಕುಟುಂಬದವರಾಗಿದ್ದ ಮನಮೋಹನ್ ರವರನ್ನು ನಿಗಮದ ಮುಖ್ಯ ಇಂಜಿನಿಯರ್ ಆಗಿ ಸರ್ಕಾರ ನೇಮಿಸಿ ತಲಕಾವೇರಿಯ ಸಂಪೂರ್ಣ ನೀಲಿ ನಕ್ಷೆಯನ್ನು ಮನಮೋಹನ್ ರವರೆ ಸಿದ್ದಪಡಿಸಿದರು. ನಂತರದ ದಿನಗಳಲ್ಲಿ ಜೀರ್ಣೋದ್ಧಾರದ ಕೆಲಸ ಆರಂಭಗೊಂಡಿತು. ಇದಕ್ಕೆಲ್ಲ ಮೂಲ ಕಾರಣ ಮಾತಂಡ ಮೊಣ್ಣಪ್ಪ ಎಂದರೆ ತಪ್ಪಾಗಲಾರದು. ಅವರೊಂದಿಗೆ ನಾನು ಸೇರಿದಂತೆ ಹಿರಿಯರಾದ ನಾಯಡ ವಾಸು, ತೋಟಂಬೈಲು ನಾಣ್ಣಯ್ಯ, ತಮ್ಮುಪೂವಯ್ಯ, ಬಿದ್ದಾಟಂಡ ತಮ್ಮಯ್ಯ, ಪ್ರಮೋದ್, ಬೆಟ್ಟಗೇರಿ ಸತೀಶ್, ಭಾಗಮಂಡಲದ ಹರ್ಷ, ಭರತ್, ಚಿದ್ವಿಲಾಸ್, ಚಿರಿಯಪಂಡ ಕಾಶಿಯಪ್ಪ, ರಾಜ ನಂಜಪ್ಪ, ಬಾಲಾಜಿ ಗ್ರಾಮದ ಕೊಣಿಯಂಡ ವಿಟ್ಟ ದೇವಯ್ಯ ಇನ್ನು ಕೆಲವು ಸಮಿತಿ ಸದಸ್ಯರು ಕೈಜೋಡಿಸಿದ್ದರು ಕೂಡ ಮೊಣ್ಣಪ್ಪನವರ ಸಾಂದರ್ಭಿಕ ತೀರ್ಮಾನಗಳೇ ಹೋರಾಟ ಯಶಸ್ವಿಯಾಗಲು ಪ್ರಮುಖ ಕಾರಣ ಎನ್ನಬಹುದು.

ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಂದ ನಂತರ ತಲಕಾವೇರಿಗೆ ಬಾಬುರಾವ್ ಚಿಂಚನೂರ್ ಅಂದಿನ ಮುಜರಾಯಿ ಸಚಿವರು ಎಸ್.ಎಮ್ ಕೃಷ್ಣ ರವರ ಆದೇಶದಂತೆ ಭೇಟಿ ನೀಡಲು ಜಿಲ್ಲೆಗೆ ಬಂದಾಗ ಮಧ್ಯಾಹ್ನ ಗುಂಡು ತುಂಡು ಸುದರ್ಶನ್ ಗೆಸ್ಟ್ ಹೌಸ್ ನಲ್ಲಿ ಹೊಡೆದು ತಲಕಾವೇರಿಗೆ ಹೋಗಿ ದೂರದಿಂದಲೇ ಮಂಜು ಕವಿದ ವಾತಾವರಣದಲ್ಲಿ ಕಾವೇರಿಯ ದರ್ಶನ ಪಡೆದು ಮುಖ್ಯಮಂತ್ರಿ ಗೆ ವರದಿ ಸಲ್ಲಿಸಲು ಹೊರಟ ವಿಚಾರ ತಿಳಿದು ಸಿಟ್ಟಾದ ಮೊಣ್ಣಪ್ಪನವರು ಬೆಳಗಿನ ಜಾವ ಮಾತಂಡ ಮೊಣ್ಣಪ್ಪ ಮತ್ತು ನಮ್ಮತಂಡ ಕೂರ್ಗ ಇಂಟರ್ನ್ಯಾಷನಲ್ ಹೋಟೆಲ್ ಗೆ ಲಗ್ಗೆ ಇಟ್ಟು ಅವರನ್ನು ಎಬ್ಬಿಸಿ ಮಂತ್ರಿಗಳಿಗೆ ಬಿಸಿ ಮುಟ್ಟಿಸಿದ ಕ್ಷಣ ಇಂದಿಗೂ ನನ್ನಲ್ಲಿ ಆ ನೆನಪು ಅಚ್ಚಳಿಯದೆ ಉಳಿದಿದೆ. ತಲಕಾವೇರಿ ಜೀರ್ಣೋದ್ಧಾರಕ್ಕೆ ನಂತರ ಬಂದ ಸರ್ಕಾರಗಳು ಹೆಚ್ಚು ಹೆಚ್ಚು ಹಣ ಬಿಡುಗಡೆಗೊಳಿಸಿತು.ಸಂಪೂರ್ಣ ಜೀರ್ಣೋದ್ಧಾರ ಆಗುವ ಮುಂಚೆ ಪ್ರಾರಂಭದಲ್ಲಿ ತಲಕಾವೇರಿ ಅಭಿವೃದ್ಧಿ ಹೋರಾಟ ಸಮಿತಿಯನ್ನು ವಿಸರ್ಜಿಸಲು ಸಭೆ ಕರೆಯುವಂತೆ ಅಧ್ಯಕ್ಷರು ಸೂಚನೆ ನೀಡಿದರು. ಯಾಕೆ ಎಂದು ಕೇಳಿದಾಗ ಅವರೆಂದರು,ಹಣ ಬಿಡುಗಡೆಯಾಗಿದೆ ಕೆಲಸ ಆರಂಭವಾಗುತ್ತೆ ನಾಳೆ ಯಾರ್ಯಾರೋ ಪತ್ರಿಕಾಗೋಷ್ಠಿ ಕರೆದು ಹೋರಾಟದ ಹೆಸರಿನಲ್ಲಿ ಇಲ್ಲಸಲ್ಲದ ತಡೆಯನ್ನು ತಂದು ಹಾಕುತ್ತಾರೆ ಇದರಿಂದ ನಮ್ಮೆಲ್ಲರಿಗೂ ದಕ್ಕೆಯಾಗುತ್ತದೆ . ನಿಗಮಕ್ಕೆ ಜವಾಬ್ದಾರಿ ನೀಡಲಾಗಿದೆ ನಿಗಮಕ್ಕೆ ಸಂಪೂರ್ಣ ಸ್ವಾತಂತ್ರವನ್ನು ನೀಡೋಣ ಅವರು ಮಾಡಿಕೊಂಡು ಹೋಗುತ್ತಾರೆ ಆದ್ದರಿಂದ ಸಮಿತಿಯನ್ನು ವಿಸರ್ಜಿಸುವ ಎಂದಾಕ್ಷಣ ಒಪ್ಪಿ ನಾವೆಲ್ಲರೂ ಕೂಡ ಸದ್ಯಸರು ಸ್ವಂತವಾಗಿ ಒಟ್ಟು ಹಾಕಿದ ಹಣವನ್ನು ಖರ್ಚು ಕಳಿದು ಬಾಕಿ ಉಳಿದಿದ್ದನ್ನು ಮತ್ತೆ ಖರ್ಚು ಮಾಡಿ ಮುಗಿಸಿ ಸಮಿತಿಯನ್ನು ವಿಸರ್ಜಿಸಿದೆವು. ಸಮಿತಿಯನ್ನು ಉಳಿಸಿಕೊಂಡು ಆ ಮೂಲಕ ಪ್ರಪ್ರಥಮ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿಯೂ ಕೂಡ ಅವರು ಅಧಿಕಾರ ಗಳಿಸಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಹೀಗೆ ಮೊಣ್ಣಪ್ಪನವರ ಜೊತೆ ಒಟ್ಟಿಗೆ ಎರಡು ಸಂಘಟನೆಗಳಲ್ಲಿ ನಾನು ಕೆಲಸ ಮಾಡಿ ಅವರಿಂದ ಬಹಳಷ್ಟು ತಿಳಿದುಕೊಂಡಿದ್ದೇನೆ. ಇದಲ್ಲದೆ ಅವರು ಹಲವಾರು ಸಹಕಾರ ಸಂಘದಲ್ಲಿ ಕೂಡ ಕೆಲಸ ನಿರ್ವಹಿಸಿದ್ದಾರೆ ವಿರಾಜಪೇಟೆಯ ಫೆಡರೇಶನ್ ಸಹಕಾರ ಸಂಘದ ಪ್ರಗತಿಗೆ ಇವರ ಪಾಲು ದೊಡ್ಡದಿದೆ. ಅಖಿಲ ಕೊಡವ ಸಮಾಜದ ಮೂಲಕ ಕೊಡಗಿನ ಜ್ವಾಲಾಂತ ಸಮಸ್ಯೆಗಳತ್ತ ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ. ಜನಾಂಗದ ಅಭಿವೃದ್ಧಿಗೆ ಹೆಚ್ಚಿನ ಯೋಜನೆಗಳನ್ನು ಅನುಷ್ಠಾನಕ್ಕೆ ತಂದವರು ಮೊಣ್ಣಪ್ಪನವರು ಎಂದರೆ ತಪ್ಪಾಗಲಾರದು.ಕಳೆದ ಒಂದು ವರ್ಷಗಳ ಹಿಂದೆನವರೆಗೂ ಕೊಡಗಿನ ಪ್ರಚಲಿತ ವಿದ್ಯಮಾನಗಳ ಬಗ್ಗೆ 15 ದಿನಗಳಿಗೆ ಒಮ್ಮೆಯಾದರು ದೂರವಾಣಿ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಹೀಗೆ ಅವರು ಸೇವೆ ಸಲ್ಲಿಸಿದ ಎಲ್ಲಾ ಸಂಸ್ಥೆಗಳಲ್ಲೂ ಹಲವರನ್ನು ಬೆಳೆಸಿದ್ದಾರೆ ಮತ್ತು ಅವರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರಿಂದ ಬಹಳಷ್ಟು ಜನ ಪ್ರೇರೇಪಿತರಾಗಿ ಇಂದಿಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಹತ್ತು ಹಲವು ನೆನಪಿನ ಬುತ್ತಿಗಳನ್ನು ಶಾಶ್ವತವಾಗಿ ನಮ್ಮೊಂದಿಗೆ ಇಟ್ಟು ನಮ್ಮನ್ನು ಬಿಟ್ಟು ಅಗಲಿರುವ ಹಿರಿಯ ಚೇತನಕ್ಕೆ ನಮ್ಮದೊಂದು ಭಾವಪೂರ್ಣ ಶ್ರದ್ಧಾಂಜಲಿ..                                     ಮತ್ತೆ ಹುಟ್ಟಿ ಬನ್ನಿ ಮೊಣ್ಣಪ್ಪಣ್ಣ. 💐💐💐

🖊️ಶ್ರೀಧರ್ ನೆಲ್ಲಿತ್ತಾಯ