ಭದ್ರತಾ ವೈಫಲ್ಯ ಎಂಬ ಅಂಶಗಳ ಸುತ್ತ…….. ಭಾರತದ ಸಂಸತ್ತಿನಲ್ಲಿ ನಡೆದ ಕಲರ್ ಗ್ಯಾಸ್‌ ಸ್ಪೋಟದ ಪ್ರಹಸನದ ಹಿನ್ನೆಲೆಯಲ್ಲಿ….

ವಿಜಯ ದರ್ಪಣ ನ್ಯೂಸ್ 

ನವದೆಹಲಿ ಡಿಸೆಂಬರ್ 

ಭದ್ರತಾ ವೈಫಲ್ಯ ಎಂಬ ಅಂಶಗಳ ಸುತ್ತ……..

ಭಾರತದ ಸಂಸತ್ತಿನಲ್ಲಿ ನಡೆದ ಕಲರ್ ಗ್ಯಾಸ್‌ ಸ್ಪೋಟದ ಪ್ರಹಸನದ ಹಿನ್ನೆಲೆಯಲ್ಲಿ….

ಹಿಂದೆ ಎಷ್ಟೋ ಘಟನೆಗಳು ನಡೆದಿವೆ, ಈಗಲು ಎಷ್ಟೋ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ, ಮುಂದೆ ಇನ್ನೂ ಭಯಂಕರ ಹತ್ಯೆಗಳು‌ ಸಂಭವಿಸಬಹುದು. ಆಗಲು ಎಲ್ಲರೂ ಹೇಳುವುದು ಭದ್ರತಾ ವೈಫಲ್ಯ……..

ಇದು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ. ವಿಶ್ವದ ಬಲಿಷ್ಠ ದೇಶಗಳಲ್ಲಿ ಸಹ ಭದ್ರತಾ ವೈಫಲ್ಯ ಎಂಬ ಕಾರಣ ಸದಾ ಸಿದ್ಧವಾಗಿರುತ್ತದೆ…..

ಅಮೆರಿಕದಲ್ಲಿ, ಇಂಗ್ಲೇಂಡಿನಲ್ಲಿ, ಆಫ್ರಿಕಾದಲ್ಲಿ, ಆಸ್ಟ್ರೇಲಿಯಾದಲ್ಲಿ, ಜಪಾನಿನಲ್ಲಿ, ಚೀನಾದಲ್ಲಿ, ಭಾರತದಲ್ಲಿ ಹೀಗೆ ಎಲ್ಲಾ ದೇಶಗಳಲ್ಲಿ ಸಹ ಇದು ನಿರಂತರವಾಗಿ ನಡೆಯುತ್ತಿದೆ…..

ಕಾರಣ ಭದ್ರತೆ ಎಂಬ ಭಾವದಲ್ಲಿಯೇ ಅಭದ್ರತೆ, ಆಕ್ರಮಣ ಹಾಗು ಹಿಂಸೆ ಅಡಕವಾಗಿದೆ. ಆ ಕಾರಣದಿಂದಲೇ ಭದ್ರತೆ ಪ್ರಾಮುಖ್ಯತೆ ಪಡೆಯುತ್ತದೆ. ಶೇಕಡಾ 99% ರಷ್ಟು ಭದ್ರತೆ ಯಾವಾಗಲು ಯಶಸ್ವಿಯಾಗುತ್ತದೆ. ಕೇವಲ 1% ಸಾಮಾನ್ಯವಾಗಿ ವಿಫಲವಾಗುತ್ತದೆ. ಆದರೆ ಆ 1% ಮಾಡುವ ಹಾನಿ ಮಾತ್ರ ತುಂಬಾ ಅಪಾಯಕಾರಿಯಾಗಿರುತ್ತದೆ…..
ವಿಶ್ವದ ಅತ್ಯಂತ ಪ್ರಬಲ ರಕ್ಷಣಾ ವ್ಯವಸ್ಥೆ ಹೊಂದಿರುವ ಇಸ್ರೇಲ್ ದೇಶವು ಸಹ ಸದಾ ಅಭದ್ರತೆಯಿಂದ ನರಳುತ್ತಿದೆ. ಇನ್ನು ಬೃಹತ್ ಭಾರತದ ಪರಿಸ್ಥಿತಿ ಮತ್ತಷ್ಟು ಶೋಚನೀಯ….

ನರೇಂದ್ರ ಮೋದಿ ಇರಲಿ,
ಮನಮೋಹನ್ ಸಿಂಗ್ ಇರಲಿ, ರಾಹುಲ್ ಗಾಂಧಿ ಇರಲಿ, ಅಜಿತ್ ದೋವಲ್ ಇರಲಿ, ನಾನೇ ಇರಲಿ, ನೀವೇ ಇರಲಿ ಭದ್ರತಾ ವೈಫಲ್ಯ ಒಂದಲ್ಲ ಒಂದು ಬಾರಿ ಆಗೇ ಆಗುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ತಡೆಯುವ ಪ್ರಯತ್ನಗಳು ಮಾತ್ರ ಪ್ರಾಮಾಣಿಕವಾಗಿರಬೇಕು ಮತ್ತು ನಿರಂತರವಾಗಿರಬೇಕು ಮತ್ತು ಹೊಸ ಹೊಸ ವಿಧಾನಗಳನ್ನು ಅನುಸರಿಸಬೇಕು. ಹಾಗೆಯೇ ಅದನ್ನು ವಿಫಲಗೊಳಿಸಲು ವಿರೋಧಿಗಳು ಸಹ ಅಷ್ಟೇ ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಾರೆ. ಅಪರೂಪಕ್ಕೊಮ್ಮೆ ಅವರು ಯಶಸ್ವಿಯಾಗುವುದು ಸಹ ಅಷ್ಟೇ ವಾಸ್ತವ…..

ಇಂದಿರಾ ಗಾಂಧಿ ಸ್ವತಃ ಭದ್ರತಾ ವೈಫಲ್ಯಕ್ಕೆ ಬಲಿಯಾದರು. ನರಸಿಂಹರಾವ್ ಕಾಲದಲ್ಲಿ ಭದ್ರತಾ ವೈಫಲ್ಯದಿಂದ ಬಾಬರಿ ಮಸೀದಿ ಧ್ವಂಸವಾಯಿತು. ವಾಜಪೇಯಿ ಕಾಲದಲ್ಲಿ ಭದ್ರತಾ ವೈಫಲ್ಯದಿಂದ ಸಂಸತ್ತಿನ ಮೇಲೆ ದಾಳಿಯಾಯಿತು. ಮನಮೋಹನ್ ಸಿಂಗ್ ಕಾಲದಲ್ಲಿ ಭದ್ರತಾ ವೈಫಲ್ಯದಿಂದ ಮುಂಬಯಿ ಮೇಲೆ ದಾಳಿಯಾಯಿತು. ನರೇಂದ್ರ ಮೋದಿ ಕಾಲದಲ್ಲಿ ಭದ್ರತಾ ವೈಫಲ್ಯದಿಂದ ಪುಲ್ವಾಮ ಬಾಂಬ್ ದಾಳಿ ನಡೆಯಿತು. ಹೀಗೆ ಇನ್ನೂ ಎಷ್ಟೋ. ಇದು ನಿರಂತರ ಎಂಬುದನ್ನು ಮರೆಯಬಾರದು….

ಇದಕ್ಕೆ ಶಾಶ್ವತ ಪರಿಹಾರವೇನು ಇಲ್ಲ. ಎಷ್ಟೇ ತಂತ್ರಜ್ಞಾನ ಉಪಯೋಗಿಸಿದರು ವಿರೋಧಿಗಳು ಅಷ್ಟೇ ಪ್ರಬಲ ತಂತ್ರ ಹೆಣೆಯುತ್ತಾರೆ. ಇದೊಂದು ಅಪಘಾತದಂತೆ. ಎಲ್ಲ ಎಚ್ಚರಿಕೆಗಳ ನಡುವೆಯೂ ಯಾವಾಗ ಬೇಕಾದರೂ ಸಂಭವಿಸುವ ಸಾಧ್ಯತೆ ಇದ್ದೇ ಇರುತ್ತದೆ…….

ದುರಾದೃಷ್ಟವಶಾತ್ ರಾಜಕೀಯ ನಾಯಕರು ಆಗಲೂ ಈಗಲೂ ಪರಸ್ಪರ ಆರೋಪದ ಮಾಡುವುದನ್ನು ಬಿಡುವುದಿಲ್ಲ. ‌ಒಳ್ಳೆಯ ಕೆಲಸಗಳನ್ನು ಹಿರೋಗಳಂತೆ ಸ್ವೀಕರಿಸುವ ದೇಶದ ಮುಖ್ಯಸ್ಥರು ಕೆಟ್ಟದ್ದನ್ನು ಸಹ ಒಪ್ಪಿಕೊಳ್ಳಲೇಬೇಕು. ಇದೇ ಸಹಜ ನ್ಯಾಯ….

ಎಲ್ಲಿಯವರೆಗೆ ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ ಮತ್ತು ಧಾರ್ಮಿಕ ಅಸಹಿಷ್ಣತೆ ಇರುತ್ತದೆಯೋ ಅಲ್ಲಿಯವರೆಗೆ ಭದ್ರತಾ ವೈಫಲ್ಯ ವಿಶ್ವವನ್ನು ಕಾಡುತ್ತಲೇ ಇರುತ್ತದೆ. ಬೇಕಾದರೆ ಗಮನಿಸಿ ನೋಡಿ ವಿಶ್ವದ ಕೆಲವು ಉತ್ತಮ ಜೀವನಮಟ್ಟದ ದೇಶಗಳಾದ ನಾರ್ವೆ, ಸ್ವಿಟ್ಜರ್ಲೆಂಡ್‌‌, ಆಸ್ಟ್ರಿಯಾ ಮುಂತಾದ ಕೆಲವು ದೇಶಗಳಲ್ಲಿ ಭದ್ರತಾ ವೈಫಲ್ಯ ತೀರಾ ಅಪರೂಪ…..

ಜಾತಿ, ಧರ್ಮ, ಭ್ರಷ್ಟಾಚಾರ, ರಾಜಕೀಯ, ಚುನಾವಣೆ ಮುಂತಾದ ಅನೇಕ ವಿಷಯಗಳಲ್ಲಿ ಅಪಾರ ಭಿನ್ನತೆ ಹೊಂದಿರುವ ಭಾರತದಲ್ಲಿ ಎಷ್ಟೇ ಎಚ್ಚರಿಕೆ ವಹಿಸುವುದರು ಭದ್ರತಾ ವೈಫಲ್ಯ ಮಾತ್ರ ಯಾವಾಗ ಬೇಕಾದರೂ ಸಂಭವಿಸಬಹುದು ಎಂಬ ಪ್ರಜ್ಞೆ ಸದಾ ಜಾಗೃತವಾಗಿರಲಿ……

ಹಾಗೆಂದು ಈ ಕೆಟ್ಟವರನ್ನು ತಡೆಯಲು ಒಳ್ಳೆಯವರಿಗೆ ಹಿಂಸೆ ಮಾಡಬೇಡಿ. ಏಕೆಂದರೆ ಈಗಾಗಲೇ ಸಾಮಾನ್ಯ ಜನರ ತಪಾಸಣಾ ವ್ಯವಸ್ಥೆ ಮತ್ತು ಅವರ ಪ್ರವೇಶ ನಿಷೇಧ ಇಡೀ ವ್ಯವಸ್ಥೆಯನ್ನು ಜೈಲಿನಂತೆ ಮಾಡಲಾಗಿದೆ. ಇನ್ನೂ ಹೀಗೆ ಮಾಡುತ್ತಿದ್ದರೆ ನಾವುಗಳು ಏಕ ವ್ಯಕ್ತಿ ದ್ವೀಪಗಳಂತೆ ಅನಾಥರಾಗಿ, ಅಜ್ಞಾತರಾಗಿ ವಾಸ ಮಾಡಬೇಕಾದ ಪರಿಸ್ಥಿತಿ ಬರಬಹುದು…..

ಇನ್ನು ಈ ಸುಮಾರು 6/7 ಯುವಕರ ಈ ಹುಚ್ಚಾಟ ಖಂಡಿತ ಸ್ವೀಕಾರಾರ್ಹವಲ್ಲ. ಅವರ ಉದ್ದೇಶ ಏನೇ ಇರಲಿ ಮಾರ್ಗ ಮಾತ್ರ ಹುಚ್ಚುತನ ಮತ್ತು ಕ್ರಿಮಿನಲ್ ರೀತಿಯಲ್ಲಿದೆ. ಇಂತಹ ಪ್ರಯತ್ನಗಳಿಂದ ವೈಯಕ್ತಿಕ ಮತ್ತು ಸಾಮಾಜಿಕವಾಗಿ ಅಪಾರ ನಷ್ಟ ಉಂಟುಮಾಡುತ್ತದೆ ಮತ್ತು ಅವರುಗಳು ತುಂಬಾ ಕಷ್ಟ ಅನುಭವಿಸುವುದು ನಿಶ್ಚಿತ. ಇದಕ್ಕಿಂತ ಉತ್ತಮ ಮಾರ್ಗಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಕಷ್ಟು ಇವೆ. ಅದನ್ನು ಅನುಸರಿಸೋಣ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ ಎಚ್ ಕೆ,
9844013068………