ಫಾಕ್ಸ್ ಕಾನ್ ಕಂಪನಿಗೆ 300 ಎಕರೆ ಭೂಮಿ: ಭೂಸ್ವಾಧೀನ ಪರಿಹಾರ ನ್ಯಾಯಾಲಯದಲ್ಲಿ ಠೇವಣಿ, ಪೊಲೀಸ್ ನೆರವಿನಿಂದ ಫೆನ್ಸಿಂಗ್..

 ವಿಜಯ ದರ್ಪಣ ನ್ಯೂಸ್…

ಫಾಕ್ಸ್ ಕಾನ್ ಕಂಪನಿಗೆ 300 ಎಕರೆ ಭೂಮಿ:

ಭೂಸ್ವಾಧೀನ ಪರಿಹಾರ ನ್ಯಾಯಾಲಯದಲ್ಲಿ ಠೇವಣಿ, ಪೊಲೀಸ್ ನೆರವಿನಿಂದ ಫೆನ್ಸಿಂಗ್..

ಕೆಐಎಡಿಬಿ ಸಿಇಓ ಡಾ. ಮಹೇಶ ಸ್ಪಷ್ಟನೆ.

ಬೆಂಗಳೂರು: ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿಗೆ ಸೇರಿದ ದೊಡ್ಡಗೊಲ್ಲಹಳ್ಳಿ ಮತ್ತು ಚಪ್ಪರದಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಫಾಕ್ಸ್ ಕಾನ್ ಕಂಪನಿಗೆ ಭೂಮಿ ಮಂಜೂರಾಗಿದ್ದು, ಸಂಬಂಧಿಸಿದ ಭೂ ಪರಿಹಾರವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗುವುದು ಎಂದು ಕೆಐಎಡಿಬಿ ಸಿಇಓ ಡಾ. ಮಹೇಶ ಅವರು ಶುಕ್ರವಾರ ತಿಳಿಸಿದ್ದಾರೆ.

ಈ ಗ್ರಾಮಗಳಲ್ಲಿ ಕಂಪನಿಗೆ ಮಂಜೂರಾಗಿರುವ ಭೂಮಿಗೆ ಭೂಸ್ವಾಧೀನ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಸಹಕಾರ ಪಡೆದು ಫೆನ್ಸಿಂಗ್ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

ದೇವನಹಳ್ಳಿ 3ನೇ ಅಡಿಷನಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ನೇರವಾಗಿ ಖಾತೆದಾರರಿಗೆ ಪರಿಹಾರ ಕೊಡಬಾರದೆಂದು ತಡೆಯಾಜ್ಞೆ ನೀಡಿದೆ. ಹೀಗಾಗಿ, ಪರಿಹಾರ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಕುಂದಾಣ ಹೋಬಳಿಯ ಅರವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ ಮತ್ತು ಬೈರದೇನಹಳ್ಳಿ ಗ್ರಾಮಗಳಲ್ಲಿ ಒಟ್ಟು 867.37 ಎಕರೆ ವಿಸ್ತೀರ್ಣದ ಜಮೀನನ್ನು ಕೈಗಾರಿಕಾ ಪ್ರದೇಶದ ಸ್ಥಾಪನೆಗಾಗಿ ಭೂಸ್ವಾಧೀನ‌ ಮಾಡಿಕೊಳ್ಳಲಾಗಿದ್ದು. ಈ ಪೈಕಿ ಫಾಕ್ಸ್‌ಕಾನ್‌ ಕಂಪನಿಗೆ 300 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿರುತ್ತದೆ ಎಂದಿದ್ದಾರೆ.

ದೊಡ್ಡಗೊಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 91/1, 80/3, 92, 98/1, 98/2, 98/4, 93, 8/3, 76, 81/1,
87/4ಪಿ, 90/1 ಮತ್ತು ಚಪ್ಪರದಹಳ್ಳಿ ಗ್ರಾಮದ ಸ.ನಂ.4ಗಳಲ್ಲಿ ಕಂಪನಿಯ ವತಿಯಿಂದ ಫೆನ್ಸಿಂಗ್
ಹಾಕಲು ಹೋದಾಗ ಖಾತೆದಾರರು ಪ್ರತಿಭಟನೆ ನಡೆಸಿ ಫೆನ್ಸಿಂಗ್ ಹಾಕಲು ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.