--Ads--

ರೆಕ್ಕೆ ಬಿಚ್ಚಿ ಹಾರೋಣ..!

On: January 30, 2025 3:32 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್

ರೆಕ್ಕೆ ಬಿಚ್ಚಿ ಹಾರೋಣ..!

• ಜಯಶ್ರಿ.ಜೆ. ಅಬ್ಬಿಗೇರಿ, ಬೆಳಗಾವಿ

ಖುಷಿ ಯಾರಿಗೆ ಬೇಡ ಹೇಳಿ? ಪ್ರತಿ ದಿನ ಪ್ರತಿ ಕ್ಷಣ ನಾವೆಲ್ಲ ಬೆನ್ನು ಹತ್ತಿರುವುದು ಖುಷಿಯ ಹಿಂದೆ. ಅಂದ ಹಾಗೆ ‘ಎಂದರೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ಅದೊಂದು ಕೃತಜ್ಞತೆಯ ಭಾವನಾತ್ಮಕ ಸ್ಥಿತಿ ಎಂದು ತಿಳಿದು ಬರುತ್ತದೆ. ಖುಷಿ ಒಂದೇ ತೆರನಾಗಿ ಇರುವುದಿಲ್ಲ. ಒಬ್ಬರಿಗೆ ಖುಷಿ ನೀಡಿದ ಸಂಗತಿ ಇನ್ನೊಬ್ಬರಿಗೆ ಬೇಸರ ಹುಟ್ಟಿಸಬಹುದು. ಕೋಪದಿಂದ ಉರಿಯುವ ವ್ಯಕ್ತಿಯನ್ನು ಹೇಗೆ ಗುರುತಿಸಬಹುದೋ ಖುಷಿಯಲ್ಲಿರುವ ಹಾಗೆಯೇ ವ್ಯಕ್ತಿಯನ್ನು ಗುರುತಿಸುವುದೂ ಅತಿ ಸರಳ, ನಾವು ನಿರೀಕ್ಷಿಸಿದ್ದು ನಿರೀಕ್ಷಿಸಿದ ಹಾಗೆಯೇ ನಡೆದರೆ ನಮಗೆಲ್ಲ ಖುಷಿಯೋ ಖುಷಿ. ಕೆಲವೊಮ್ಮೆ ಅನಿರೀಕ್ಷಿತವಾಗಿ ಭೇಟಿ ಕೊಟ್ಟ ಖುಷಿ ನಮ್ಮನ್ನು ಆಕಾಶದಲ್ಲಿ ತೇಲುವ ಹಕ್ಕಿಯನ್ನಾಗಿಸುತ್ತದೆ.

ದೊಡ್ಡ ಕಟ್ಟಡ ಕಟ್ಟಿದರೂ ಚೀಪುಗಲ್ಲು ಬೇಕು ಎಂಬ ಗಾದೆ ಮಾತಿನಂತೆ, ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ಬಹುತೇಕ ಜನರಲ್ಲಿ ಗರಿಗೆದರಿ ಮತ್ತೆ ಹಾರುವಂತೆ ಮಾಡುವುದು ಚಿಕ್ಕ ಪುಟ್ಟ ಸಂತಸಗಳೇ ಎನ್ನುವದು ನಮ್ಮ ಖುಷಿಗಾಗಿ ಇತರರನ್ನು ಅವಲಂಬಿಸದೇ ಇರುವುದು ಮನುಷ್ಯನ ಸುಖದ ಲಕ್ಷಣ ಎಂದಿದ್ದಾರೆ ಕವಿ ರವೀಂದ್ರರು. ಇದನ್ನೇ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಹೇಳಬೇಕೆಂದರೆ, ಸಂತುಷ್ಟನಾಗಲು ಹೊರಾಂಗಣ ಸಹಾಯವನ್ನು ಅಪೇಕ್ಷಿಸಬೇಡ. ಇತರರು ಕೊಡುವ ಶಾಂತಿಗಾಗಿ ಕಾಯಬೇಡ. ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿ ಮೆರೆಯುವ ಜನರು ಖುಷಿಯ ಅಭಾವದಿಂದ ಬಳಲುತ್ತಿರುವುದನ್ನು ಕಾಣುತ್ತೇವೆ.

ಹಾಗೆಯೇ ಸಣ್ಣ ಗುಡಿಸಲಿನಲ್ಲಿರುವ ಹರಕು ಮೈ ಅಂಗಿಯ, ಹಸಿದ ಹೊಟ್ಟೆಗಳು ಖುಷಿಯಲ್ಲಿ ಜಿಂಕೆಯಂತೆ ಜಿಗಿಯುವುದನ್ನು ಕಾಣುತ್ತೇವೆ. ಇದರರ್ಥ ಖುಷಿಗೆ ಸಿರಿವಂತಿಕೆ ಬೇಕೇ ಬೇಕೆಂದಿಲ್ಲ. ಒಂದು ವೇಳೆ ಮನುಷ್ಯ ಶುದ್ದ ಮನದಿಂದ ಹೇಳುತ್ತಿದ್ದರೆ ಅಥವಾ ಕೆಲಸ ಮಾಡುತ್ತಿದ್ದರೆ ಆನಂದವುಅವನ ಹಿಂದೆ ನೆರಳಿನ ಹಾಗೆ ಇರುತ್ತದೆ. ಅದು ಅವನಿಂದ ಎಂದೂ ದೂರಾಗುವುದಿಲ್ಲ. ಎಂದಿದ್ದಾನೆ ಬುದ್ಧ.ಮಾನವ ಜೀವನದ ಪರಮೋಚ್ಚ ಗುರಿಯೇ ಆನಂದ ಹೊಂದುವುದು. ಹಾಗಂತ ಪರರು ಸೋಲಿನ ಬಾವಿಯಲ್ಲಿ ಬಿದ್ದಾಗ ಮೇಲೆ ನಿಂತು ಚಪ್ಪಾಳೆ ತಟ್ಟಿ ನಗುವುದು ತರವಲ್ಲ, ಇತರರಿಗಾಗಿ ಮಾಡುವ ಕೆಲಸಗಳು ಯಾವಾಗಲೂ ಲಾಭಾಂಶ ನೀಡುತ್ತವೆ. ಮತ್ತೊಬ್ಬರ ದಾರಿಗೆ ಬೆಳಕು ನೀಡಲು ಬ್ಯಾಟರಿ ಹಾಕಿದಾಗ ನಮ್ಮ ದಾರಿಯೂ ಸಹ ಬೆಳಕಾಗುತ್ತದೆ. ಬಹಳಷ್ಟು ಬಾರಿ ಖುಷಿಯನ್ನು ವಿಲಾಸಿ ಜೀವನಕ್ಕೆ ಸಮೀಕರಿಸುತ್ತೇವೆ. ಆದರೆ ವಿಲಾಸತನದಲ್ಲಿ ನಿಜವಾದ ಖುಷಿ ಅಡಗಿಲ್ಲ ಎನ್ನುವುದು ಅನೇಕ ಜನರ ಜೀವನದಿಂದ ಸಾಬೀತಾಗಿದೆ. ಆರ್ಥಿಕ ಯಶಸ್ಸು ಎಂಬುದು ನಮ್ಮ ಪುಸ್ತಕವನ್ನು ತೋಲನದಲ್ಲಿಡುವುದಿಲ್ಲ. ಖುಷಿ ಪಡಲು ತುಂಬಾ ದಾರಿಗಳಿವೆ. ಅದರಲ್ಲಿ ನೀವು ಆರಿಸಿಕೊಂಡ ಮಾರ್ಗ ಸರಿಯಾಗಿದೆಯಾ? ಎಂದು ಪರೀಕ್ಷಿಸಿಕೊಳ್ಳಿ. ಏಕೆಂದರೆ ನಿಮ್ಮ ನಂತರ ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಹಾಕುವವರು ಎಷ್ಟೋ ಜನ ಇರುತ್ತಾರೆ. ಹುಸಿ ಖುಷಿಯ ದಾರಿ ತೋರಿದ ಕಡೆ ಹೋಗುವುದು ಬೇಡ, ನಿಜ ಖುಷಿಯ ದಾರಿಯಲ್ಲಿ ಚಲಿಸಿ ನಮ್ಮ ಹಿಂದೆ ದಾರಿ ಬಿಡೋಣ. ಯಾವುದೇ ಕಾರಣಕ್ಕೂ ಕೆಲಸದ ಹೊಳಪನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಿ. ಒಂದೊಳ್ಳೆ ಪುಸ್ತಕದ ಓದು, ಜನರೊಂದಿಗೆ ಬೆರೆತುಕೊಳ್ಳುವಿಕೆ, ಜೊತೆಗೆ ಸಂಗೀತ ಕ್ರೀಡೆಗಳಲ್ಲಿ ಆಸಕ್ತಿ, ಬಯಲಲ್ಲಿ ಆಡುವ ಮಕ್ಕಳ ನಗುವಿಗೆ ಕಾರಣರಾಗಿ, ಕಷ್ಟದಲ್ಲಿರುವ ದಿವ್ಯಾಂಗರಿಗೆ ನಿಮ್ಮ ಸಹಾಯ ಹಸ್ತ ಚಾಚಿ, ಗುಡ್ಡ ಬೆಟ್ಟಗಳಲ್ಲಿ ಓಡಾಡಿ. ಪ್ರಕೃತಿ ಮಾತೆಯ ಮಡಿಲಲ್ಲಿ ಮಲಗಿ, ಮನೆಯಂಗಳದಲ್ಲಿ ಪುಟ್ಟ ಹೂದೋಟ ನಿರ್ಮಿಸಿ, ನೆನಪಿರಲಿ, ಸಂತೋಷ ಮತ್ತು ಮುಗಳು ವಿಧಿ ಲಿಖಿತಗಳಲ್ಲ. ಅವು ನಾವಾಗಿಯೇ ಪಡೆದುಕೊಂಡವು.

ಖುಷಿ ಎನ್ನುವುದು ಯಾವುದೇ ಬಾಹ್ಯ ಪ್ರಾಪಂಚಿಕ ಲೋಭಗಳಲ್ಲಿ ದೊರೆಯುವುದಿಲ್ಲ. ಅದೊಂದು ಮನಸ್ಥಿತಿ. ಇಲ್ಲದ ಖುಷಿಯನ್ನು ಇಲ್ಲದ ಕಡೆ ಹುಡುಕುವುದನ್ನು ನಿಲ್ಲಿಸೋಣ. ಮುದ್ದು ಮಗುವಿನಂತೆ ಮುಗ್ಧ ನಗು ಹೊತ್ತು ಸಾಗಿದರೆ ಎಲ್ಲೆಲ್ಲೂ ಖುಷಿಯೇ ಖುಷಿ ಎಂಬುದನ್ನು ಸ್ವತಃ ಪ್ರಯೋಗಿಸಿ ನೋಡೋಣ. ಖುಷಿಯಿಂದ ರೆಕ್ಕೆ ಬಿಚ್ಚಿ ಹಾರಾಡೋಣ.

ಜಯಶ್ರೀ. ಜೆ . ಅಬ್ಬಿಗೇರಿ 

WhatsApp

Join Now

Telegram

Join Now

Instagram

Join Now