ವಿಜಯ ದರ್ಪಣ ನ್ಯೂಸ್….
ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ರೊಬೊಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಗುದನಾಳದ ಗಡ್ಡೆ ನಿವಾರಣೆ

ಆಧುನಿಕ ರೊಬೊಟಿಕ್ ಟ್ರಾನ್ಸಾನಲ್ ಶಸ್ತ್ರಚಿಕಿತ್ಸೆಯು ಶರೀರದ ನೈಸರ್ಗಿಕ ದ್ವಾರದ ಮೂಲಕವೇ ಸಂಪೂರ್ಣ ಗಡ್ಡೆಯನ್ನು ಹೊರತೆಗೆಯಲು ನೆರವಾಗಿದ್ದು, ಮಲನಾಳವನ್ನು ಸುರಕ್ಷಿತವಾಗಿಡಲು, ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲು ಮತ್ತು 24 ಗಂಟೆಗಳ ಒಳಗೆ ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಸಾಧ್ಯವಾಗಿಸಿದೆ.
ಬೆಂಗಳೂರು, 10 ಆಗಸ್ಟ್ 2026 : ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯು, 71 ವರ್ಷದ ರೋಗಿಯೊಬ್ಬರ ಮಲದ್ವಾರದಲ್ಲಿದ್ದ ದೊಡ್ಡ ಪ್ರಮಾಣದ ಕ್ಯಾನ್ಸರ್ ಪೂರ್ವ ಗಡ್ಡೆಯನ್ನು ಶರೀರದ ಹೊರಭಾಗದಲ್ಲಿ ಯಾವುದೇ ಚರ್ಮದ ಗಾಯವಿಲ್ಲದೆ ಸಂಪೂರ್ಣವಾಗಿ ಗುದದ್ವಾರದ ಮೂಲವೇ ಹೊರತೆಗೆಯುವ ‘ರೊಬೊಟಿಕ್ ಟ್ರಾನ್ಸಾನಲ್ ಮಿನಿಮಲಿ ಇನ್ವೇಸಿವ್ ಸರ್ಜರಿ’ (rTAMIS) ಅನ್ನು ಯಶಸ್ವಿಯಾಗಿ ನೆರವೇರಿಸಿದೆ. ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಹಾಗೂ ರೊಬೊಟಿಕ್ ಸರ್ಜನ್ ಡಾ. ಸೂರಜ್ ಮಂಜುನಾಥ್

ಅವರ ನೇತೃತ್ವದ ವೈದ್ಯರ ತಂಡವು ರಂದು ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ಈ ಶಸ್ತ್ರಚಿಕಿತ್ಸೆಯು ವೈದ್ಯರಿಗೆ ಸಂಪೂರ್ಣ ಗಡ್ಡೆಯನ್ನು ಶರೀರದ ನೈಸರ್ಗಿಕ ಗುದದ್ವಾರದ ಮೂಲಕವೇ ಹೊರತೆಗೆಯಲು ನೆರವಾಗಿದೆ. ಇದರಿಂದಾಗಿ ಹೊಟ್ಟೆಯ ಭಾಗದಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಯನ್ನು ತಡೆಯಲು, ರೋಗಿಯ ಮಲನಾಳ ಮತ್ತು ನೈಸರ್ಗಿಕ ಮಲವಿಸರ್ಜನೆಯ ಕಾರ್ಯವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಹಾಗೂ ತಾತ್ಕಾಲಿಕ ಅಥವಾ ಶಾಶ್ವತ ಸ್ಟೋಮಾ (ಹೊಟ್ಟೆಯ ಮೇಲೆ ಕೃತಕ ಮಲದ್ವಾರ) ಅಳವಡಿಕೆಯನ್ನು ತಪ್ಪಿಸಲು ಸಾಧ್ಯವಾಯಿತು. ರೋಗಿಯು ಶೀಘ್ರವಾಗಿ ಚೇತರಿಸಿಕೊಂಡಿದ್ದು, 24 ಗಂಟೆಗಳ ಒಳಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಪ್ರಕ್ರಿಯೆಯನ್ನು ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯ ಹಿರಿಯ ಸರ್ಜಿಕಲ್ ಆಂಕಾಲಜಿಸ್ಟ್ ಹಾಗೂ ರೊಬೊಟಿಕ್ ಸರ್ಜನ್ ಆದ ಡಾ. ಸೂರಜ್ ಮಂಜುನಾಥ್ ಅವರ ನೇತೃತ್ವದ ಬಹುಶಿಸ್ತೀಯ ವೈದ್ಯಕೀಯ ತಂಡವು ಯಶಸ್ವಿಯಾಗಿ ನೆರವೇರಿಸಿತು.
ಸಾಮಾನ್ಯ ಆರೋಗ್ಯ ತಪಾಸಣೆಯ ಸಂದರ್ಭದಲ್ಲಿ ಸುಮಾರು 5 ಸೆಂ.ಮೀ ಅಳತೆಯ ಈ ಗಡ್ಡೆಯನ್ನು ಪತ್ತೆ ಹಚ್ಚಲಾಗಿತ್ತು. ಇದು ಮಲನಾಳದ ಮೇಲ್ಭಾಗದಲ್ಲಿದ್ದ ಕಾರಣ, ಇದರ ಗಾತ್ರ ಹಾಗೂ ಇದ್ದ ಸ್ಥಳದಿಂದಾಗಿ ಸಾಂಪ್ರದಾಯಿಕ ಕೊಲೊನೊಸ್ಕೋಪಿ ಮೂಲಕ ಇದನ್ನು ತೆಗೆದುಹಾಕುವುದು ಸಾಧ್ಯವಿರಲಿಲ್ಲ. ಇಂತಹ ಅನೇಕ ಪ್ರಕರಣಗಳಲ್ಲಿ, ರೋಗಿಗಳು ದೊಡ್ಡ ಮಟ್ಟದ ಉದರ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಇದು ಮಲನಾಳದ ಕೆಲ ಭಾಗವನ್ನು ತೆಗೆದುಹಾಕುವುದಕ್ಕೆ ಮತ್ತು ಕೆಲವು ಸಂದರ್ಭಗಳಲ್ಲಿ ತಾತ್ಕಾಲಿಕ ಅಥವಾ ಶಾಶ್ವತ ಕೃತಕ ಮಲದ್ವಾರ ನಿರ್ಮಿಸುವುದಕ್ಕೆ ಕಾರಣವಾಗಬಹುದು.
ಆದರೆ, ಇಲ್ಲಿನ ಶಸ್ತ್ರಚಿಕಿತ್ಸಾ ವೈದ್ಯರ ತಂಡವು ನೈಸರ್ಗಿಕ ದ್ವಾರದ ಮೂಲಕವೇ ಗಡ್ಡೆಯನ್ನು ತಲುಪಿ, ಅದನ್ನು ಸಂಪೂರ್ಣವಾಗಿ ಹೊರತೆಗೆಯಲು ‘ರೊಬೊಟಿಕ್ ಟ್ರಾನ್ಸಾನಲ್ ಮಿನಿಮಲಿ ಇನ್ವೇಸಿವ್ ಸರ್ಜರಿ’ ವಿಧಾನವನ್ನು ಬಳಸಿತು. ಈ ಆಧುನಿಕ ವಿಧಾನವು ಮಲನಾಳವನ್ನು ಸುರಕ್ಷಿತವಾಗಿಡಲು, ಶರೀರದ ಮೇಲೆ ಯಾವುದೇ ಕಲೆಗಳು ಉಳಿಯದಂತೆ ತಡೆಯಲು ಮತ್ತು ಶಸ್ತ್ರಚಿಕಿತ್ಸೆಯಿಂದ ದೇಹದ ಮೇಲಾಗುವ ದೈಹಿಕ ಪರಿಣಾಮವನ್ನು ಕಡಿಮೆ ಮಾಡಲು ನೆರವಾಯಿತು.
“ರೋಗಿಗಳು ತಮಗೆ ಮಲನಾಳದಲ್ಲಿ ದೊಡ್ಡ ಗಡ್ಡೆ ಇದೆ ಎಂದು ತಿಳಿದಾಗ, ದೊಡ್ಡ ಶಸ್ತ್ರಚಿಕಿತ್ಸೆಯೊಂದೇ ತಮಗಿರುವ ಏಕೈಕ ಮಾರ್ಗ ಎಂದು ಭಾವಿಸುತ್ತಾರೆ,” ಎಂದು ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯ ಹಿರಿಯ ಸರ್ಜಿಕಲ್ ಆಂಕಾಲಜಿಸ್ಟ್ ಹಾಗೂ ರೊಬೊಟಿಕ್ ಸರ್ಜನ್ ಡಾ. ಸೂರಜ್ ಮಂಜುನಾಥ್ ಹೇಳಿದರು.
“ಎಚ್ಚರಿಕೆಯಿಂದ ಆಯ್ಕೆ ಮಾಡಿದ ರೋಗಿಗಳಿಗೆ, ರೊಬೊಟಿಕ್ ಟ್ರಾನ್ಸಾನಲ್ ಶಸ್ತ್ರಚಿಕಿತ್ಸೆಯು ಅತ್ಯಂತ ಕಡಿಮೆ ನೋವಿನ ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ. ಇದು ಆರೋಗ್ಯಕರ ಅಂಗಾಂಶಗಳು ಮತ್ತು ಮಲವಿಸರ್ಜನಾ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ, ಅತ್ಯಂತ ನಿಖರತೆಯಿಂದ ಜಟಿಲವಾದ ಸಾಧಾರಣ ಗಡ್ಡೆಗಳು, ಕ್ಯಾನ್ಸರ್ ಪೂರ್ವ ಮತ್ತು ಆರಂಭಿಕ ಹಂತದ ಕೆಲವು ಮಲನಾಳದ ಕ್ಯಾನ್ಸರ್ ಗಡ್ಡೆಗಳನ್ನು ಸಂಪೂರ್ಣವಾಗಿ ಹೊರತೆಗೆಯಲು ನಮಗೆ ಸಹಾಯ ಮಾಡುತ್ತದೆ. ಇದರಿಂದ ರೋಗಿಗಳಿಗೆ ಅಪಾರ ಪ್ರಯೋಜನಗಳಿದ್ದು—ಕಡಿಮೆ ನೋವು, ಶೀಘ್ರ ಚೇತರಿಕೆ, ಆಸ್ಪತ್ರೆಯಲ್ಲಿ ಕಡಿಮೆ ಅವಧಿಯ ವಾಸ್ತವ್ಯ ಮತ್ತು ಮುಖ್ಯವಾಗಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಗುಣಮಟ್ಟಕ್ಕೆ ಯಾವುದೇ ಧಕ್ಕೆಯಾಗದಂತೆ ಸ್ಟೋಮಾ ಅಳವಡಿಕೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ” ಎಂದರು.
ಈ ಶಸ್ತ್ರಚಿಕಿತ್ಸೆಯನ್ನು ಡಾ ವಿನ್ಸಿ ಎಕ್ಸ್‌ಐ ರೊಬೊಟಿಕ್ ತಂತ್ರಜ್ಞಾನವನ್ನು ಬಳಸಿ ನಡೆಸಲಾಯಿತು. ಇದು ಮಲನಾಳದಂತಹ ಕಿರಿದಾದ ಜಾಗಗಳಲ್ಲಿಯೂ ಶಸ್ತ್ರಚಿಕಿತ್ಸಕರಿಗೆ ಹೈ-ಡೆಫಿನಿಷನ್ 3ಡಿ ದೃಶ್ಯಾವಳಿ ಮತ್ತು ಅತ್ಯುನ್ನತ ನಿಖರತೆಯನ್ನು ಒದಗಿಸುತ್ತದೆ. ಈ ಶಸ್ತ್ರಚಿಕಿತ್ಸೆಯು ಸುಮಾರು ಎರಡು ಗಂಟೆಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿತು.
ರೋಗಿಯ ಚೇತರಿಕೆ ಅತ್ಯಂತ ಸುಗಮವಾಗಿತ್ತು. ಶಸ್ತ್ರಚಿಕಿತ್ಸೆಯ ಕೆಲವೇ ಸಮಯದಲ್ಲಿ ಅವರು ಸಾಮಾನ್ಯ ಆಹಾರವನ್ನು ಸೇವಿಸಲು ಪ್ರಾರಂಭಿಸಿದರು, ಅವರಿಗೆ ತೀರಾ ಕಡಿಮೆ ಪ್ರಮಾಣದ ನೋವು ನಿವಾರಕದ ಅಗತ್ಯವಿತ್ತು ಮತ್ತು ಮಾರನೇ ದಿನವೇ ಮನೆಗೆ ಮರಳಿದರು. ಪ್ರಯೋಗಾಲಯದ ತಪಾಸಣೆಯು ಗಡ್ಡೆಯನ್ನು ಅದರ ಅಂಚುಗಳ ಸಮೇತ ಸಂಪೂರ್ಣವಾಗಿ ಹೊರತೆಗೆಯಲಾಗಿದೆ ಎಂದು ದೃಢಪಡಿಸಿದ್ದು, ಶರೀರದಲ್ಲಿ ಯಾವುದೇ ಅಸಹಜ ಅಂಗಾಂಶಗಳು ಉಳಿದಿಲ್ಲವೆಂಬುದನ್ನು ಸ್ಪಷ್ಟಪಡಿಸಿದೆ.
ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ಎಚ್ಚರಿಕೆಯಿಂದ ಆಯ್ಕೆ ಮಾಡಿದ ರೋಗಿಗಳಿಗೆ ರೊಬೊಟಿಕ್ ಟ್ರಾನ್ಸಾನಲ್ ಮಿನಿಮಲಿ ಇನ್ವೇಸಿವ್ ಸರ್ಜರಿಯು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಮಲನಾಳ ಮತ್ತು ನೈಸರ್ಗಿಕ ಮಲವಿಸರ್ಜನೆಯ ಕಾರ್ಯವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವುದು, ಹೊಟ್ಟೆಯ ಭಾಗದಲ್ಲಿ ದೊಡ್ಡ ಗಾಯ ತಪ್ಪಿಸುವುದು, ಶಸ್ತ್ರಚಿಕಿತ್ಸೆಯ ನಂತರದ ನೋವನ್ನು ಕಡಿಮೆ ಮಾಡುವುದು, ಶೀಘ್ರ ಚೇತರಿಕೆ, ಆಸ್ಪತ್ರೆಯಲ್ಲಿ ಕಡಿಮೆ ಅವಧಿಯ ವಾಸ್ತವ್ಯ ಹಾಗೂ ವೈದ್ಯಕೀಯವಾಗಿ ಸಾಧ್ಯವಿರುವಲ್ಲಿ ತಾತ್ಕಾಲಿಕ ಅಥವಾ ಶಾಶ್ವತ ಸ್ಟೋಮಾ ಅಗತ್ಯವನ್ನು ತಪ್ಪಿಸುವುದು ಸೇರಿವೆ.
ರೊಬೊಟಿಕ್ ಟ್ರಾನ್ಸಾನಲ್ ಶಸ್ತ್ರಚಿಕಿತ್ಸೆಯು ಪ್ರತಿಯೊಂದು ಮಲನಾಳದ ಗಡ್ಡೆಗೂ ಸೂಕ್ತವಾಗದಿದ್ದರೂ, ಮಲನಾಳದ ಅಂಗಾಂಶಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳುವ ಕೊಲೊರೆಕ್ಟಲ್ ಚಿಕಿತ್ಸಾ ಕ್ಷೇತ್ರದಲ್ಲಿ ಇದೊಂದು ಗಮನಾರ್ಹ ಮುನ್ನಡೆಯಾಗಿದೆ.
ನಿಯಮಿತ ಆರೋಗ್ಯ ತಪಾಸಣೆಗಳು ಪ್ರಿ-ಕ್ಯಾನ್ಸರಸ್ ಮತ್ತು ಆರಂಭಿಕ ಹಂತದ ಮಲನಾಳದ ಗಡ್ಡೆಗಳನ್ನು ಪತ್ತೆಹಚ್ಚಲು ನೆರವಾಗುತ್ತಿರುವುದರಿಂದ, ಇಂತಹ ಕನಿಷ್ಠ ಗಾಯದ ಚಿಕಿತ್ಸಾ ವಿಧಾನಗಳು ಸೂಕ್ತ ರೋಗಿಗಳಿಗೆ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೇ ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸುತ್ತವೆ.










