ಸಂಭ್ರಮದಿಂದ ನಡೆದ ಶ್ರೀ ಗಂಗಾದೇವಿ ಅಮ್ಮನವರ ಮರಿ ಜಾತ್ರೆ

ವಿಜಯ ದರ್ಪಣ ನ್ಯೂಸ್..

ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಗ್ರಾಮದೇವತೆ ಶ್ರೀಗಂಗಾದೇವಿ ಅಮ್ಮನವರ ಮರಿ ಜಾತ್ರೆಯು ಸಡಗರ ಸಂಭ್ರಮದಿಂದ ನೆರವೇರಿತು.

ಜಾತ್ರೆ ಪ್ರಯುಕ್ತ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ಗ್ರಾಮದ ಹೆಣ್ಣು ಮಕ್ಕಳು, ಮುತ್ತೈದೆಯರು ತಂಬಿಟ್ಟು ಆರತಿಯನ್ನು ತಲೆ ಮೇಲೆ ಹೊತ್ತು
ಊರ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಾಲಯದ ಸುತ್ತಲೂ ಪ್ರದಕ್ಷಿಣಿ ಹಾಕಿ ದೇವರಿಗೆ ಬೆಳಗಿದರು,ದೀಪೋ ತ್ಸವದಲ್ಲಿ ಮೇಲೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ದೇವತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು..

ಜಾತ್ರೆಯ ಪ್ರಯುಕ್ತ,ಗ್ರಾಮದ ಚೆಂಗಲರಾಯರೆಡ್ಡಿ ಸರ್ಕಲ್ ಸೇರಿದಂತೆ ರಾಜಬೀದಿಯ ಪ್ರಮುಖ ರಸ್ತೆಗಳಲ್ಲಿ ವಿಭಿನ್ನ ರೀತಿಯ ವಿದ್ಯುತ್ ದೀಪಾಲಂಕಾರ ನೋಡುಗರ ಕಣ್ಮನ ತಣಿಸಿತು.

ಜನ್ಮಭೂಮಿ ತಮಟೆ ವಾದ್ಯ ಮೈಲಾಂಡಹಳ್ಳಿ ,ಬೆಂಗಳೂರು ತಂಡದ ತಮಟೆ ವಾದನಕ್ಕೆ ಯುವಕರು ಹುಚ್ಚೆದ್ದು ಕುಣಿದರು. ಮೇಲೂರು ಗ್ರಾಮದ ಅಧಿದೇವತೆ ಶ್ರೀಗಂಗಮ್ಮ ತಾಯಿಯು ಮಳೆ ಬೆಳೆಯನ್ನು ನೀಡಿ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರತಿ ವರ್ಷ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ,ಸುತ್ತ ಮುತ್ತಲಿನ ಗ್ರಾಮಗಳಿಂದ ಆಗಮಿಸುವ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಅಮ್ಮನವರ ದರ್ಶನ ಪಡೆದು ಪುನೀತರಾದರು.