ಸರ್ಕಾರಿ ಜಮೀನುಗಳ ಮಂಜೂರಿ ನಡಾವಳಿ ಪುಸ್ತಕ ಕಳವು: ಗ್ರಾಮ ಸಹಾಯಕನ ಬಂಧನ
ವಿಜಯ ದರ್ಪಣ ನ್ಯೂಸ್….
ಸರ್ಕಾರಿ ಜಮೀನುಗಳ ಮಂಜೂರಿ ನಡಾವಳಿ ಪುಸ್ತಕ ಕಳವು: ಗ್ರಾಮ ಸಹಾಯಕನ ಬಂಧನ
ಶಿಡ್ಲಘಟ್ಟ : ತಾಲ್ಲೂಕು ಕಚೇರಿಯ ಅಭಿಲೇಖಾಲಯದಲ್ಲಿ 1994-95 ನೇ ಸಾಲಿನ ಸರ್ಕಾರಿ ಜಮೀನುಗಳ ಮಂಜೂರಿ ನಡಾವಳಿ ವಹಿಯು ಕಳವುವಾಗಿರುವುದು ಕಂಡು ಬಂದಿದ್ದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರು ನೀಡಿದ್ದ ದೂರನ್ನು ಆಧರಿಸಿ, ಬಶೆಟ್ಟಿಹಳ್ಳಿ ಹೋಬಳಿ ಅಮ್ಮಗಾರಹಳ್ಳಿ ಕಂದಾಯ ವೃತ್ತದಲ್ಲಿ ಹೆಚ್ಚುವರಿ ಗ್ರಾಮ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಜಿ.ಗಂಗಾಧರ್ ಎಂಬಾತನನ್ನು ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಬಗ್ಗೆ ವರದಿಯಾಗಿದೆ.
ತಾಲ್ಲೂಕಿನಲ್ಲಿ ಕೆಐಎಡಿಬಿ ಭೂ ಸ್ವಾಧೀನ ಪ್ರಕ್ರಿಯೆ ಹಿನ್ನೆಲೆ ಪ್ರಸ್ತುತ ಭೂಮಿಗೆ ಬಂಗಾರದ ಬೆಲೆ ಬಂದಿದೆ ಹಣದ ಆಸೆಗೆ ಬಿದ್ದು ಅಡ್ಡದಾರಿ ಹಿಡಿದು ಸಿಕ್ಕಿ ಬಿದ್ದಿದ್ದಾನೆ. ಹಕ್ಕು ದಾಖಲೆ ಶಿರಸ್ತೇದಾರ್ ಅವರು, ಯಾವುದೋ ಕಡತ ಹುಡುಕಲು ಸೂಚಿಸಿರುವುದಾಗಿ, ಹೇಳಿಕೊಂಡು ಅಭಿಲೇಖಾಲಯ ಶಾಖೆಯಲ್ಲಿ ಕಡತಗಳನ್ನು ಪರಿಶೀಲಿಸಲು ಏಪ್ರಿಲ್ -29 ರಂದು ಬಂದಿದ್ದು ಈತನ ಮೇಲೆ ಅನುಮಾನಗೊಂಡ ತಹಶೀಲ್ದಾರ್ ಅವರು, ಈ ಕುರಿತು ಹಕ್ಕು ದಾಖಲೆ ಶಿರಸ್ತೇದಾರ್ ಅವರನ್ನು ವಿಚಾರಿಸಿದಾಗ, ಅಭಿಲೇಖಾಲಯದಲ್ಲಿ ಕಡತ ಹುಡುಕುವುದಕ್ಕೆ ಯಾವುದೇ ಸೂಚನೆಯಾಗಲಿ, ಅನುಮತಿಯಾಗಲಿ ನೀಡಿರುವುದಿಲ್ಲವೆಂದು ತಿಳಿಸಿದ್ದರಿಂದ ಅನುಮಾನಗೊಂಡ ತಹಶೀಲ್ದಾರ್ ಸಿ.ಸಿ.ಕ್ಯಾಮರಗಳನ್ನು ವೀಕ್ಷಿಸಿದಾಗ ಕಡತವನ್ನು ತೆಗೆದುಕೊಂಡು ಹೋಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು, ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ.
1994-95 ನೇ ಸಾಲಿನ ಸರ್ಕಾರಿ ಜಮೀನುಗಳ ಮಂಜೂರಿ ನಡಾವಳಿ ವಹಿಯು ‘ಎ’ ವರ್ಗದ ಶಾಶ್ವತ ಸರ್ಕಾರಿ ದಾಖಲೆಯಾಗಿರುತ್ತದೆ ಹಾಗೂ ಇದರಲ್ಲಿ ನೂರಾರು ರೈತರಿಗೆ ಮಂಜೂರಿ ಮಾಡಿದ ಮಾಹಿತಿಯು ನಮೂದಾಗಿದ್ದು, ಇದರ ಆಧಾರದ ಮೇರೆಗೆ ಮಂಜೂರಿದಾರರಿಗೆ ದುರಸ್ತಿ ಕಾರ್ಯ ಹಾಗೂ ಹಳೇ ಮಂಜೂರಿಯಂತೆ ಖಾತೆಗೆ ಬಾಕಿ ಇರುವ ಮಂಜೂರಿದಾರರಿಗೆ ಖಾತೆ ಮಾಡಲು ಪ್ರಮುಖ ಆಧಾರವಾಗಿರುತ್ತದೆ ಇಂತಹ ದಾಖಲೆಯಲ್ಲಿ ಆಕ್ರಮವಾಗಿ ಮಂಜೂರಿಯಾಗಿರುವಂತೆ ಹೊಸ ಹೆಸರನ್ನು ಸೇರಿಸುವ ದುರುದ್ದೇಶದಿಂದ ಸದರಿ ದಾಖಲೆಯನ್ನು ಅಕ್ರಮವಾಗಿ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರನ್ನಾಧರಿಸಿ, ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ, ಕಡತವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಹಶಿಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ
ನಾನು ರಜೆಯಲ್ಲಿರುವಾಗ ಜಂಗಮಕೋಟೆ ನಾಡಕಚೇರಿಯ ಗ್ರಾಮಸಹಾಯಕ, ಭಕ್ತರಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಯ ವೇಳೆ ಸಾರ್ವಜನಿಕರ ದೂರಿನ ಮೇರೆಗೆ ಬಶೆಟ್ಟಿಹಳ್ಳಿ ಹೋಬಳಿಗೆ ನಿಯೋಜನೆಗೊಂಡಿದ್ದ ಜಿ.ಗಂಗಾಧರ್ ಎಂಬಾತ ಕಡತವನ್ನು ಕದ್ದುಕೊಂಡು ಹೋಗಿರುವುದು ಸಿ.ಸಿ. ಕ್ಯಾಮರಾಗಳಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ದೂರು ನೀಡಿದ್ದೆ ಬೇರೆ ಯಾರದ್ದೋ ಹೆಸರು ಸೇರಿಸುವುದಕ್ಕಾಗಿ ವಹಿಯನ್ನು ಕದ್ದುಕೊಂಡು ಹೋಗಿದ್ದಾರೆ ,ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಮತ್ತೊಬ್ಬ ವ್ಯಕ್ತಿಯೂ ಇದರಲ್ಲಿ ಶಾಮೀಲಾಗಿರುವ ಅನುಮಾನವಿದೆ ಈ ಕೃತ್ಯದ ಹಿಂದೆ ಯಾರಿದ್ದಾರೆ ಅವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.