ಪುರಾತತ್ವ ಇಲಾಖೆಯಿಂದ ಗ್ರಾಮಾವಾರು ಸರ್ವೆಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್

ವಿಜಯ ದರ್ಪಣ ನ್ಯೂಸ್…

ಪುರಾತತ್ವ ಇಲಾಖೆಯಿಂದ ಗ್ರಾಮಾವಾರು ಸರ್ವೆಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್

ಶಿಡ್ಲಘಟ್ಟ : ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾವಾರು ಸರ್ವೆಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್, ಸ್ಥಳೀಯರಾದ ಎ.ಎಂ.ತ್ಯಾಗರಾಜ್‌ ಮತ್ತು ಅರುಣ್ ಕುಮಾರ್ ಅವರ ನೆರವಿನಿಂದ ಸುಮಾರು 1,100 ವರ್ಷಗಳಷ್ಟು ಹಿಂದಿನ ಮೂರು ವೀರಗಲ್ಲುಗಳನ್ನು ಹುಡುಕಿದ್ದಾರೆ.

ತಾಲ್ಲೂಕಿನ ಹಂಡಿಗನಾಳ ಗ್ರಾಮದ ಹೊರವಲಯದಲ್ಲಿ ಗಂಗರ ಕಾಲದ, ಸುಮಾರು 9 ರಿಂದ 10ನೇ ಶತಮಾನದ ಅಪರೂಪದ ಮೂರು -ವೀರಗಲ್ಲುಗಳನ್ನು ಪತ್ತೆಹಚ್ಚಲಾಗಿದೆ.
ಮೂರು ವೀರಗಲ್ಲುಗಳಲ್ಲಿಯೂ ಕುಂಬದ ಚಿತ್ರವಿರುವುದರಿಂದ ಇವುಗಳು ಗಂಗರ ಕಾಲದ್ದೆಂದು ತಿಳಿದು ಬರುತ್ತದೆ ಮೂರು ವೀರಗಲ್ಲುಗಳಲ್ಲಿಯೂ ಹಸುಗಳ ಚಿತ್ರವಿರುವುದರಿಂದ ಇವು ತುರುಗೋಳ್ ವೀರಗಲ್ಲುಗಳು ಅಂದರೆ, ಗೋವುಗಳ ರಕ್ಷಣೆಗಾಗಿ ವೀರ ಹೋರಾಡಿ ಮರಣ ಹೊಂದಿದ್ದಾನೆ ಎಂದು ಅರ್ಥ,ಒಂದು ವೀರಗಲ್ಲಿನಲ್ಲಿ ವೀರ, ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಬಿಲ್ಲು ಹಿಡಿದು ಎದುರಾಳಿ ವಿರುದ್ಧ ಹೋರಾಡುತ್ತಿದ್ದಾನೆ ವೀರನ ಅಂಗಸೌಷ್ಟವವನ್ನು ಶಿಲ್ಪಿ ಅದ್ಭುತವಾಗಿ ಕೆತ್ತಿದ್ದಾನೆ ವೀರ ಕೊಂದಿರುವ ಎದುರಾಳಿಗಳು
ಅವರ ಕಾಲ ಬಳಿ ಬಿದ್ದಿರುವುದನ್ನು ಕಾಣಬಹುದಾಗಿದೆ,ಸತ್ತ ವೀರನನ್ನು ಇಬ್ಬರು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುವ ಚಿತ್ರಣವೂ ಇದೆ ಎರಡನೇ ವೀರಗಲ್ಲಿನಲ್ಲಿ ಸೂರ್ಯ ಚಂದ್ರ ಇರುವವರೆಗೂ ಈ ವೀರನ ಇತಿಹಾಸ ಶಾಶ್ವತವಾಗಿರಲಿ ಎಂಬ ಉದ್ದೇಶದಿಂದ ಸೂರ್ಯ ಚಂದ್ರರನ್ನು ಕೆತ್ತಲಾಗಿದೆ ಎಂದರು.

ವೀರಾವೇಶದಿಂದ ಹೋರಾಡುತ್ತಿರುವ ಶರೀರಕ್ಕೆ ಬಾಣ ನಾಟಿರುವುದನ್ನು ಕಾಣಬಹುದಾಗಿದೆ ಅವನ ಶೌರ್ಯದ ಪ್ರತೀಕವಾಗಿ ಅವನ ತುರುಬನ್ನು ಕಟ್ಟಿರುವ ಬಟ್ಟೆ ಗಾಳಿಗೆ ಹಾರಾಡುವುದನ್ನು ಸಹ ಶಿಲ್ಪಿ ಕೆತ್ತಿರುವನು ಈ ವೀರನೊಂದಿಗೆ ಹೋರಾಡುವ ಎದುರಾಳಿಗಳು ಕುದುರೆ ಮೇಲೆ ಬಂದಿರುವುದನ್ನು ಈ ಶಿಲ್ಪದಲ್ಲಿ ನೋಡಿದಾಗ, ಬಹುಶಃ ರಾಜನ ಆಡಳಿತದಲ್ಲಿ ಈ ವೀರ ಪ್ರಮುಖ ಹುದ್ದೆಯಲ್ಲಿದ್ದ ಎಂದು ನಾವು ಊಹಿಸಬಹುದಾಗಿದೆ ಮೂರನೇ ವೀರಗಲ್ಲಿನಲ್ಲಿ ವೀರನ ಒಂದು ಕೈಯಲ್ಲಿ ಗಂಗರ ಕಾಲದ ಅದ್ಭುತವಾದ ಖಡ್ಗವಿದ್ದರೆ, ಮತ್ತೊಂದು ಕೈಯಲ್ಲಿ ವಿಶಿಷ್ಟವಾದ ಗುರಾಣಿಯಿದೆ ಈ ಶಿಲ್ಪದ ಇನ್ನೊಂದು ವಿಶೇಷವೆಂದರೆ ಎದುರಾಳಿಗಳ ದೇಹ ಎರಡು ತುಂಡಾಗುವ ಹಾಗೆ ವೀರ ಕತ್ತರಿಸಿರುವುದನ್ನು ಶಿಲ್ಪಿ ನೈಜವಾಗಿ ಕೆತ್ತಿದ್ದಾನೆ ಇದರಿಂದ ವೀರನ ಶೌರ್ಯ ಮತ್ತು ಅವನ ಆಯುಧದ ಶಕ್ತಿ ನಮಗೆ ತಿಳಿಯುತ್ತದೆ.
ಗೋವುಗಳ ರಕ್ಷಣೆಗಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿರುವ ಮೂವರು ವೀರರ ಅಪರೂಪದ, ಒಂದು ಸಾವಿರ ವರ್ಷಗಳಿಗೂ ಹಿಂದಿನ ವೀರಗಲ್ಲುಗಳಿವು ಎಂದು ಶಾಸನತಜ್ಞ ಕೆ.ಧನಪಾಲ್ ವಿವರಿಸಿದರು.