ವಿಜಯ ದರ್ಪಣ ನ್ಯೂಸ್. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 16
ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ದೇವನಹಳ್ಳಿ ತಾಲ್ಲೂಕು, ಬೀರಸಂದ್ರ ಗ್ರಾಮ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ 2022-23 ಹಾಗೂ 2023-24 ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳೆಯರು, ಮಕ್ಕಳು, ಯುವಜನರು, ಬಡವರು, ದುರ್ಬಲ ವರ್ಗದವರ ಅಭಿವೃದ್ದಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಅಧಿಕಾರಿಗಳು ಸಭೆಗೆ ಕಡ್ಡಾಯವಾಗಿ ಹಾಜರಾಗಿ ತಮ್ಮ ಇಲಾಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ನೀಡಬೇಕು. ಜನಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಬೇಕು ಎಂದರು.
ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಕುಡಿಯುವ ನೀರಿನ ಕುರಿತು ಚರ್ಚೆ ನಡೆಸಿದ ಸಚಿವರು ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಹೊಸಕೋಟೆ ಶಾಸಕರು ಹಾಗೂ ನೆಲಮಂಗಲ ಶಾಸಕರು ತಮ್ಮ ಕ್ಷೇತ್ರದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ತುರ್ತಾಗಿ ಕ್ರಮವಹಿಸುವಂತೆ, ಸ್ಥಗಿತಗೊಂಡಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಶೀಘ್ರ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಹದಗೆಟ್ಟಿರುವ ಸಿಸಿ ರಸ್ತೆಗಳನ್ನು ರಸ್ತೆ ಸರಿಪಡಿಸಬೇಕು ಎಂದರು.

ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಪ್ರಸ್ತುತ 5 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 10 ಕೆಜಿ ನೀಡಲು ನಿರ್ಧರಿಸಿದ್ದೇವೆ. ಅಕ್ಕಿ ವಿತರಿಸಲು, ಅಕ್ಕಿ ಸಂಗ್ರಹಿಸುವ ಉಗ್ರಾಣ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ನೆಲಮಂಗಲದಲ್ಲಿ ಪ್ಲಾಸ್ಟಿಕ್ ಅಕ್ಕಿ ಎಂದು ಪತ್ತೆಯಾಗಿರುವ ವರದಿಯನ್ನು ಪ್ರಸ್ತಾಪಿಸಿ ಪ್ಲಾಸ್ಟಿಕ್ ಅಕ್ಕಿ ಸಾಮಾನ್ಯವಾಗಿ ಎಲ್ಲೂ ಪತ್ತೆಯಾಗಿಲ್ಲ, ಅಕ್ಕಿಯಲ್ಲಿ
ಪೌಷ್ಟಿಕಾಂಶ ಹೆಚ್ಚಿಸಲು ಪ್ರತಿ 100 ಕೆಜಿ ಅಕ್ಕಿಗೆ 01ಕೆಜಿ ಫೋರ್ಟಿಫೈಡ್ (fortified rice) ಅಕ್ಕಿಯನ್ನು ಬೆರೆಸುತ್ತಾರೆ, ನೆಲಮಂಗಲದಲ್ಲಿ ಅದೇ ರೀತಿ ಆಗಿರಬಹುದು ಇದರ ಬಗ್ಗೆ ಪರಿಶೀಲಿಸಿ ಶೀಘ್ರ ವರದಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಗಳು ಪ್ರಾರಂಭದ ಹಿನ್ನಲೆಯಲ್ಲಿ ಲಭ್ಯವಿರುವ ಶಿಕ್ಷಕರು, ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳ ಮಾಹಿತಿಯನ್ನು ಪಡೆದುಕೊಂಡು ಪ್ರತಿಕ್ರಿಯಿಸಿದ ಸಚಿವರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು, ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಸಿಎಸ್‌ಆರ್ ಅನುದಾನವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿ ಬಳಸಿಕೊಂಡು ಖಾಸಗಿ ಶಾಲೆಗಳಂತೆಯೇ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಆಕರ್ಷಿಸಬೇಕು. ಪ್ರತಿ ಮಗುವೂ ಉತ್ತಮ ಶಿಕ್ಷಣ ಸೌಲಭ್ಯ ಪಡೆಯಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಕೃಷಿ, ತೋಟಗಾರಿಕೆ ಇಲಾಖೆಯ ಯೋಜನೆಯ ಕುರಿತು ಮಾಹಿತಿಯ ಕೊರತೆಯಿದ್ದು, ಶಾಸಕರ ನೇತೃತ್ವದಲ್ಲಿ ರೈತರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಯೋಜನೆಗಳ ಮಾಹಿತಿ ನೀಡಲು ಕ್ರಮವಹಿಸಬೇಕು. ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿಗೆ ಕ್ರಮ ವಹಿಸಬೇಕು. ನಗರೀಕರಣದಿಂದಾಗಿ ದೇವನಹಳ್ಳಿಯ ಮೂಲ ಚಕೋತಾ, ಮಲ್ಲಿಗೆ ಬೆಳೆ ನಶಿಸುತ್ತಿದ್ದು, ಈ ಬೆಳೆಗಳನ್ನು ಬೆಳೆಯಲು ಉತ್ತೇಜಿಸಬೇಕು. ದ್ರಾಕ್ಷಿ ಬೆಳೆಗಾರರಿಗೆ ಇರುವ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಹೇಳಿದರು.
ಮೇಲ್ಛಾವಣಿ, ಗೋಡೆ, ಶೌಚಾಲಯ ಸೇರಿದಂತೆ ಜಿಲ್ಲೆಯಲ್ಲಿ ಶಿಥಿಲಗೊಂಡು ದುರಸ್ತಿ ಹಂತದಲ್ಲಿರುವ ಅಂಗನವಾಡಿಗಳನ್ನು ತ್ವರಿತವಾಗಿ ದುರಸ್ತಿ ಮಾಡಬೇಕು ಹಾಗೂ ದುರಸ್ತಿ ಕಾರ್ಯವು ಗುಣಮಟ್ಟದಿಂದ ಕೂಡಿರಬೇಕು ಎಂದರಲ್ಲದೆ ರಾಜ್ಯ ಸರ್ಕಾರದ ಐದು ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆ ಸೌಲಭ್ಯದ ಕುರಿತು ಅರಿವು ಮೂಡಿಸಿ ಎಂದರು
