ಮಾನಸಿಕ ದೃಢತೆಯನ್ನು ಕಾಪಾಡುವುದು ಹೇಗೆ…… ಹೋರಾಡ ಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ……..
ವಿಜಯ ದರ್ಪಣ ನ್ಯೂಸ್….
ಮಾನಸಿಕ ದೃಢತೆಯನ್ನು ಕಾಪಾಡುವುದು ಹೇಗೆ……
ಹೋರಾಡ ಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ……..

ಇತ್ತೀಚಿನ ವರ್ಷಗಳಲ್ಲಿ ಅನೇಕ ವ್ಯಕ್ತಿಗಳು ತುಂಬಾ ಕಷ್ಟಪಟ್ಟು ಮೇಲೆ ಬಂದು, ಒಂದು ಬೃಹತ್ ಆರ್ಥಿಕ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು, ತದನಂತರ ಯಾವುದೋ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.
ಪ್ರೇಮಿಗಳು, ವಿದ್ಯಾರ್ಥಿಗಳು, ಅನೈತಿಕ ಸಂಬಂಧಗಳು, ಮಾನಸಿಕ ಅಸ್ವಸ್ಥರು, ಸಾಲಗಾರರು, ಕೆಲವು ರೈತರು, ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಜೊತೆಗೆ ಈ ರೀತಿ ಬೃಹತ್ ಸಾಮ್ರಾಜ್ಯದ ವ್ಯಕ್ತಿಗಳು ಸಹ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಹೌದು, ಇಂದಿನ ಆಧುನಿಕ ಸಂಕೀರ್ಣ ವ್ಯವಸ್ಥೆಯಲ್ಲಿ ಎಲ್ಲರಿಗೂ ಒತ್ತಡ, ಅಸಮಾಧಾನ ಇರುತ್ತದೆ, ಇದ್ದೇ ಇರುತ್ತದೆ. ಈ ಆಧುನಿಕ ಬದುಕಿನಲ್ಲಿ ಆರೋಗ್ಯ ಸಮಸ್ಯೆ ಹೊರತುಪಡಿಸಿ ಮತ್ತೆ ಯಾವುದೇ ಒತ್ತಡವನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ. ಅದರಲ್ಲೂ ಏನನ್ನಾದರೂ ಸಾಧಿಸುವು
ಮಹಾತ್ವಾಕಾಂಕ್ಷಿ ಇರುವವರಿಗೆ ಒತ್ತಡ ಅತ್ಯಂತ ಸಹಜವಾದದ್ದು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಕವನದ ಎರಡು ಸಾಲುಗಳು ಇಲ್ಲಿ ಉಲ್ಲೇಖನೀಯ,
* ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲಾ ನವೀನ ಜನನ * ಅಂದರೆ ಪ್ರತಿ ಬೆಳಗು ನಮಗೆ ಹೊಸ ಬದುಕು ನೀಡಿದಂತೆ. ಹಿಂದಿನ ದಿನದ ಎಲ್ಲಾ ಸಾಧನೆಗಳು, ವಿಫಲತೆಗಳು ಅಲ್ಲೇ ಮರೆತು ಮುನ್ನಡೆಯಬೇಕು, ವ್ಯಾವಹಾರಿಕತೆಯ ವಾಸ್ತವತೆಯನ್ನು ಜೊತೆಯಲ್ಲಿ ಮೈಗೂಡಿಸಿಕೊಂಡು.
ರಾಷ್ಟ್ರಕವಿ ಕುವೆಂಪು ಅವರ ಮತ್ತೊಂದು ಮಾತು * ಬದುಕಿನ ಬಹುದೊಡ್ಡ ಸಾಧನೆ ಎಂದರೆ ಬದುಕುವುದು ಮಾತ್ರ* ಇದನ್ನು ನೆನಪು ಮಾಡಿಕೊಳ್ಳುತ್ತಾ.….
ನಾವು ನಮ್ಮ ನಿಷ್ಠೆಯನ್ನು ಪ್ರಕೃತಿಯ ಕಡೆಗೆ ತೋರಿಸಬೇಕು. ನಮಗೆ ಜೀವ ನೀಡಿರುವುದು ಈ ಪ್ರಕೃತಿ. ಅದಕ್ಕೆ ಸಾಧನವಾಗಿರುವುದು ನಮ್ಮ ಅಪ್ಪ ಅಮ್ಮ. ಅದಕ್ಕೆ ಪೂರಕವಾಗಿರುವುದು ಇತರ ರಕ್ತ ಸಂಬಂಧಗಳು, ಸ್ನೇಹಿತರು, ಸಮಾಜ, ಸರ್ಕಾರಗಳು. ಹಾಗಾದರೆ ನಮ್ಮ ಸಂಪೂರ್ಣ ನಿಷ್ಠೆ ಪ್ರಕೃತಿಗೆ ನೀಡುವುದಾದರೆ ಈ ಸೋಲು, ಗೆಲುವು, ಯಶಸ್ಸು, ಮಾನ, ಅವಮಾನ ಯಾವುದು ಒಂದು ದೊಡ್ಡ ಭಾವನೆಯೇ ಅಲ್ಲ, ಅದೊಂದು ಜೀವನದ ವ್ಯಾವಹಾರಿಕ ವಿಧಾನ ಮಾತ್ರ.
ಹೌದು, ನಾವು ತುಂಬಾ ಕಷ್ಟಪಟ್ಟು ಮೇಲೆ ಬಂದೆವು, ಏನೇನೋ ಶ್ರಮಪಟ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇವೆ, ಅಧಿಕಾರವೋ, ಹಣವೋ, ಆಸ್ತಿಯೋ, ಅಂತಸ್ತೋ ಎಲ್ಲವೂ ಇದೆ, ಸಮಾಜದಲ್ಲಿ ದೊಡ್ಡ ಸ್ಥಾನಮಾನವಿದೆ, ಜನಪ್ರಿಯತೆ ಇದೆ, ಸಾಕಷ್ಟು ಜನ ನಮ್ಮನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೋ ಕಾರಣದಿಂದ ಆರ್ಥಿಕ ನಷ್ಟ ಉಂಟಾಗಬಹುದು, ಅವಮಾನವಾಗಬಹುದು, ತೆರಿಗೆ ದಾಳಿಗಳಾಗಬಹುದು, ನಾವು ಯಾವುದೋ ಕ್ಷಣದಲ್ಲಿ ಮೈಮರೆತು ಹನಿ ಟ್ರ್ಯಾಪ್ ಗೋ ಅಥವಾ ಲೈಂಗಿಕ ಹಗರಣಕ್ಕೂ ಸಿಕ್ಕಿಹಾಕಿಕೊಳ್ಳಬಹುದು, ಇನ್ಯಾರೋ ನಮ್ಮನ್ನು ಕುತಂತ್ರ ಮಾಡಿ ದೊಡ್ಡ ಅಪರಾಧದಲ್ಲಿ ಸಿಲುಕಿಸಬಹುದು ಅಥವಾ ನಾವು ಮಾಡಿದ ಇನ್ಯಾವುದೋ ತಪ್ಪು ಬಹಿರಂಗವಾದರೆ ನಾವು ಬದುಕಲೇ ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಬಹುದು, ನಾವು ಜೈಲಿಗೆ ಹೋಗಬಹುದು, ಮಾಧ್ಯಮಗಳಿಗೆ ಆಹಾರವಾಗಬಹುದು ಏನಾದರೂ ಆಗಬಹುದು. ಅಂತಹ ಸಂದರ್ಭದಲ್ಲಿ ನಿಜವಾದ ಅಗ್ನಿ ಪರೀಕ್ಷೆ ಎದುರಾಗುತ್ತದೆ.
ಸಾಮಾನ್ಯವಾಗಿ ಸಹಜ ವ್ಯಕ್ತಿಗಳಿಗೆ ಇದು ಅಷ್ಟೊಂದು ಅನ್ವಯಿಸುವುದಿಲ್ಲ. ವಿಶೇಷವಾಗಿ ಸಮಾಜದಲ್ಲಿ, ಸಾರ್ವಜನಿಕವಾಗಿ ಗುರುತಿಸಿಕೊಂಡಿರುವವರಿಗೆ ಇದೊಂದು ಬಹುದೊಡ್ಡ ಸವಾಲನ್ನು ಒಡ್ಡುತ್ತದೆ. ಅಂತಹ ಸಂದರ್ಭದಲ್ಲಿ ನಾವು ಮಾಡಬೇಕಾಗಿರುವುದು ತುಂಬಾ ತುಂಬಾ ಇದೆ. ಒಂದು ವೇಳೆ ಈ ರೀತಿಯ ಪರಿಸ್ಥಿತಿ ನಮಗೆ ಎದುರಾದಾಗ ನಾವು ಮಾಡಬೇಕಾಗಿರುವ ಕೆಲಸ ನಮ್ಮ ನಿಷ್ಠೆಯನ್ನು ಪ್ರಕೃತಿಗೆ ವರ್ಗಾಯಿಸಿ ಮತ್ತೆ ನಾವು ಶೂನ್ಯದಿಂದಲೇ ಬದುಕು ಪ್ರಾರಂಭಿಸಬೇಕು. ಅಂದರೆ ಪ್ರಸ್ತುತ ಎಲ್ಲಿರುತ್ತವೆಯೋ, ಜೈಲೋ, ಅವಮಾನವೋ ಏನೇ ಆಗಲಿ ಅಲ್ಲಿಂದಲೇ ಮುಂದಿನ ಹೊಸ ಬದುಕನ್ನು ಪ್ರಾರಂಭಿಸಬೇಕು.
ಇಲ್ಲಿ ನಮಗೆ ತುಂಬಾ ಕಡಿಮೆ ಆಯ್ಕೆಗಳಿರುತ್ತವೆ. ಒಂದು ವೇಳೆ ನಮ್ಮ ಕುಟುಂಬದವರು, ರಕ್ತ ಸಂಬಂಧಿಗಳು, ಹಿತೈಷಿಗಳು, ಆತ್ಮೀಯರಲ್ಲಿ ಯಾರಾದರೂ ನಮ್ಮ ತಪ್ಪುಗಳನ್ನು ಮನ್ನಿಸಿಯೋ, ಕಷ್ಟವನ್ನು ಸಹಿಸಿಯೋ ನಮಗೆ ಪ್ರಜ್ಞಾಪೂರ್ವಕವಾಗಿ, ಆತ್ಮೀಯವಾಗಿ, ಯಾವುದೇ ಮುಖವಾಡವಿಲ್ಲದೆ ಸಹಾಯ ಏನಾದರೂ ಮಾಡುವುದಾದರೆ ಪಡೆಯಬಹುದು. ಇಲ್ಲದೇ ಅವರೇನಾದರೂ ನಮ್ಮನ್ನು ಹಿಂದೆ ಹೊಗಳುತ್ತಿದ್ದ ಕಾರಣಗಳನ್ನು ಮುಂದಿಟ್ಟುಕೊಂಡು ಈಗ ಈ ವಿಫಲತೆಯನ್ನೇ ಹಿಯಾಳಿಸಿ ನಮ್ಮನ್ನು ತೀರಾ ನಿಕೃಷ್ಟವಾಗಿ ಕಾಣುತ್ತಿದ್ದರೆ, ಮೊದಲಿಗೆ ಇನ್ನೆಂದೂ ಅವರು ನಮ್ಮ ಜೀವನದಲ್ಲಿ ಇರುವುದಿಲ್ಲ, ಅವರಿಗೆ ನಮ್ಮಲ್ಲಿ ಯಾವುದೇ ಪಾತ್ರವಿಲ್ಲ ಎಂದು ಭಾವಿಸಿ ಅವರಿಂದ ನೇರವಾಗಿ ದೂರ ಸರಿಯಬೇಕು. ನಮ್ಮ ಪಾಲಿಗೆ ಅವರಿಲ್ಲ, ಅವರ ಪಾಲಿಗೆ ನಾವು ಸತ್ತಿದ್ದೇವೆ ಎಂದೇ ಭಾವಿಸಿಕೊಳ್ಳಬೇಕು.
ಏಕೆಂದರೆ ಕುಟುಂಬದವರ ಕರ್ಕಶ ನುಡಿಗಳನ್ನು ಕೇಳುವುದು ತುಂಬಾ ಕಷ್ಟ. ಅದು ಗಂಡ ಹೆಂಡತಿಯೇ ಆಗಿರಲಿ, ಮಕ್ಕಳೇ ಆಗಿರಲಿ, ತಂದೆ ತಾಯಿಯೇ ಯಾರೇ ಆಗಿರಲಿ ನಮ್ಮನ್ನು ಆತ್ಮೀಯವಾಗಿ ಆಲಂಗಿಸಿಕೊಂಡಾಗ ಮಾತ್ರ ನಾವು ಅವರೊಂದಿಗೆ ಇರಬೇಕು. ಇಲ್ಲದಿದ್ದರೆ ಆ ಸಂಬಂಧಗಳನ್ನು ನಿರ್ಲಕ್ಷಿಸಬೇಕಾಗುತ್ತದೆ. ಆ ಚುಚ್ಚು ಮಾತುಗಳನ್ನು ಸಹಿಸಿಕೊಳ್ಳಬಾರದು.
ಹಾಗೆಯೇ ಅತ್ಯಂತ ಮುಖ್ಯವಾಗಿ ನಾನೊಬ್ಬ ಅನಾಥ ಎನ್ನುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅಂದರೆ ನನಗಾಗಿ ಯಾರು ಇಲ್ಲ. ನಾನು ಒಬ್ಬಂಟಿ. ನನಗೆ ಮಾನ ಅವಮಾನವೂ ಇಲ್ಲ, ಸಂಬಂಧಗಳೂ ಇಲ್ಲ. ಈ ಪ್ರಕೃತಿ ನೀಡಿರುವ ಜೀವ ತಾನಾಗಿ ತಾನೇ ಜೀವ ಹಿಂದಿರುಗಿ ತೆಗೆದುಕೊಳ್ಳುವವರೆಗೂ ನಾನು ಬದುಕಲು ಹೋರಾಡುತ್ತಲೇ ಇರುತ್ತೇನೆ. ನನ್ನ ಕೆಲವು ನಿರ್ಧಾರಗಳು ತಪ್ಪೋ, ಸರಿಯೋ ನನ್ನ ಅರಿವಿನಿಂದ ಮಾಡಿದ್ದೇನೆ. ಕೆಲವು ಆಕಸ್ಮಿಕವೂ ಇರಬಹುದು, ಕೆಲವು ಉದ್ದೇಶಪೂರ್ವಕವಾಗಿಯೇ ಇರಬಹುದು. ಅದಕ್ಕಾಗಿ ಪಶ್ಚಾತಾಪ ಪಡುತ್ತಾ, ನನ್ನನ್ನು ನಾನು ತಿದ್ದಿಕೊಳ್ಳುತ್ತಾ ಬದುಕುತ್ತಲೇ ಇರುತ್ತೇನೆ. ಹೊರಗಿನ ಜನ ಏನೇ ಹೇಳಲಿ ಅದರ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಸಾಧ್ಯವಾದಷ್ಟು ಅವರಿಂದ ದೂರವಿರುತ್ತೇನೆ.
ಇಲ್ಲಿಯವರೆಗೂ ಬದುಕಲ್ಲಿ ಅನೇಕ ಆಸೆ ಆಕಾಂಕ್ಷಿಗಳು, ಸಾಧನೆಯ ಭರವಸೆಗಳನ್ನು ಇಟ್ಟುಕೊಂಡಿದ್ದೆ. ಈ ಕ್ಷಣದಲ್ಲಿ ಅದನ್ನೆಲ್ಲಾ ಬಿಟ್ಟುಬಿಡುತ್ತಿದ್ದೇನೆ. ಬದುಕುವುದೇ ಒಂದು ಸಾಧನೆ. ಹೋರಾಡಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ. ಬದುಕಿನಲ್ಲಿ ಸಂತೋಷವನ್ನು ಅನುಭವಿಸುವ ನಾವು ಕಷ್ಟಗಳನ್ನು ಸಹ ಸಹಿಸಿಕೊಳ್ಳಲೇಬೇಕು.
ನಮ್ಮ ನಮ್ಮ ವಯಸ್ಸು ಮತ್ತು ಅನುಭವದಲ್ಲಿ ಈ ಭಾರತೀಯ ಸಮಾಜವನ್ನು ಅರ್ಥಮಾಡಿಕೊಂಡಿರುವ ಮಟ್ಟಿಗೆ ಹೇಳುವುದಾದರೆ ಬಹುತೇಕ ಯಾರದೇ ಜೀವನವಿರಲಿ ಅದರಲ್ಲಿ ಸಂಪೂರ್ಣ ಸುಖ ಸಂತೋಷಗಳೇ ತುಂಬಿ ತುಳುಕುತ್ತದೆ ಎಂಬುದು ನಂಬಲಾಸಾಧ್ಯ.
ಕಷ್ಟ ಸುಖಗಳನ್ನು ಅಳೆಯುವ ಯಾವುದೇ ಮಾಪನ ಇಲ್ಲ ನಿಜ. ಆದರೆ ಅಧಿಕಾರ, ಹಣ, ಆಸ್ತಿ, ಕೌಟುಂಬಿಕ ಪರಿಸರ, ಆರೋಗ್ಯ, ವಾಸಿಸುವ ಸ್ಥಳ, ಉದ್ಯೋಗ ಮುಂತಾದ ಕೆಲವು ಮಾನದಂಡಗಳನ್ನು ಮೇಲ್ನೋಟಕ್ಕೆ ಗಮನಿಸಿದಾಗ ಕೆಲವರು ಹೆಚ್ಚು ಯಶಸ್ವಿ ಎಂತಲೂ ಮತ್ತು ಮೇಲೆ ಹೇಳಿದ ವಿಷಯಗಳು ಸರಿಯಾಗಿ ದೊರೆಯದೆ ಮೂಲಭೂತ ಅವಶ್ಯಕತೆಗಳಿಗೇ ತಮ್ಮ ಜೀವನವನ್ನು ಸವೆಸುತ್ತಿರುವ ಜನರನ್ನು ಬಡವರು, ಯಶಸ್ವಿಯಾಗದವರು, ನತದೃಷ್ಟರು ಎಂದೂ ಕರೆಯಲಾಗುತ್ತದೆ.
ಈ ದೃಷ್ಟಿಯಿಂದ ನೋಡಿದಾಗ ಈ ಆರ್ಥಿಕ ಸಾಮ್ರಾಜ್ಯ ಕಟ್ಟಿದವರು ಸಮಾಜದಲ್ಲಿ ಬಹುದೊಡ್ಡ ಯಶಸ್ಸನ್ನು, ಜೀವನದ ಹೆಚ್ಚು ಕಾಲವನ್ನು ಸುಖ ಸಂತೋಷದ ದಿನಗಳನ್ನು ಅನುಭವಿಸಿದವರು.
ಒಮ್ಮೆ ಅವರು ನಮ್ಮ ಸಮಾಜದ ಅತ್ಯಂತ ಕೆಳಗಿನ ಜನರನ್ನು ನೋಡಿದರೆ ಸಾಕು ಅವರು ಹಿಮಾಲಯದಷ್ಟು ಎತ್ತರದಲ್ಲಿ ಇರುವುದು ತಿಳಿದುಕೊಂಡು ಮನಸ್ಸಿಗೆ ಖಂಡಿತ ಸಮಾಧಾನ ಮಾಡಿಕೊಳ್ಳಬಹುದು. ತಮಗೆ ಈ ಕ್ಷಣದಲ್ಲಿ ಬಂದಿರುವುದು ಒಂದು ಸಣ್ಣ ಪ್ರಮಾಣದ ಕಷ್ಟ. ಮುಂದೆ ಇನ್ನೇನೋ ದೊಡ್ಡ ಸ್ಥಾನ ಗಳಿಸಲು ಇದರಿಂದ ತೊಂದರೆಯಾಗಬಹುದೇ ಹೊರತು ಬದುಕಿನ ಸಾಮಾನ್ಯ ಸೌಕರ್ಯಗಳಲ್ಲಿ ಅವರು ಎಷ್ಟೋ ಜನರಿಗಿಂತ ಈಗಾಗಲೇ ಮುಂದಿದ್ದಾರೆ ಎಂದು ಅರ್ಥಮಾಡಿಕೊಂಡರೆ ಅವರ ಕಷ್ಟಗಳು ಯಾವ ಲೆಕ್ಕಕ್ಕೂ ಇಲ್ಲ ಎಂದೇ ಅನಿಸುತ್ತದೆ.
ಅವರ ಸಹಾಯಕ್ಕೆ ಬಹಳಷ್ಟು ಹಾದಿಗಳು ಇರುತ್ತದೆ. ಆದರೆ ಅನೇಕ ಬಡವರಿಗೆ ಎಲ್ಲಾ ರೀತಿಯ ಮಾರ್ಗಗಳು ಮುಚ್ಚಿ ಬಿಡುತ್ತದೆ.
ಬದುಕಿನ ಒಂದು ಸೂಕ್ಷ್ಮತೆಯನ್ನು ನಾವು ಅರ್ಥಮಾಡಿಕೊಂಡರೆ ಜೀವನ ಸ್ವಲ್ಪ ಸರಳ, ಸುಲಭ ಮತ್ತು ನೆಮ್ಮದಿಯಾಗಬಹುದು.
ಮೊದಲಿಗೆ,
ನಾವು ಇಲ್ಲಿಯವರೆಗೆ ಬದುಕಿರುವುದೇ ಒಂದು ಸಾಧನೆ ಮತ್ತು ನೆಮ್ಮದಿಗೆ ಕಾರಣವಾಗಬೇಕು. ಎಷ್ಟೋ ಜನ ಇದರಿಂದಲೇ ವಂಚಿತರಾಗಿರುವುದನ್ನು ನೆನಪಿಸಿಕೊಳ್ಳಿ.
ಎರಡನೆಯದಾಗಿ,
ನಮ್ಮ ಊಟ ಬಟ್ಟೆ ವಸತಿಗಳು ನಮ್ಮ ಅವಶ್ಯಕತೆ ತಕ್ಕಂತೆ ಇದ್ದರೆ ಅದು ಮತ್ತೊಂದು ಸಾಧನೆ – ತೃಪ್ತಿಯ ಕಾರಣ ಎಂದೇ ಭಾವಿಸಿ.
ಮೂರನೆಯದಾಗಿ,
ನಮ್ಮ ರಕ್ತ ಸಂಬಂಧಗಳು, ಸಂಸಾರ, ಬಂಧು ಬಳಗಗಳು ಸ್ನೇಹಿತರು ಹೆಚ್ಚು ಘರ್ಷಣೆಗಳಿಲ್ಲದೆ ( ಸಣ್ಣ ಪುಟ್ಟ ವಿರಸಗಳನ್ನು ಹೊರತುಪಡಿಸಿ ) ಒಂದು ತಕ್ಕಮಟ್ಟಿನ ಸೌಹಾರ್ದ ಸಂಬಂಧ ಉಳಿದಿದ್ದರೆ ಅದು ಮಗದೊಂದು ಸಾಧನೆ ಮತ್ತು ಅದೃಷ್ಟ ಎಂದೇ ಪರಿಗಣಿಸಿ.
ನಾಲ್ಕನೆಯದಾಗಿ,
ಇರುವ ಅವಕಾಶದಲ್ಲಿ ನಮ್ಮ ಪ್ರತಿಭೆ, ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ದೊರೆತು ಅದರಿಂದ ಹಣ, ಅಧಿಕಾರ, ಜನಪ್ರಿಯತೆ ದೊರೆತರೆ ಅದು ಬದುಕಿನ ಬಹುದೊಡ್ಡ ಸಾಧನೆ ಸಾರ್ಥಕತೆ ಮತ್ತು ಬೋನಸ್ ಎಂದು ಪರಿಗಣಿಸಿ.
ಐದನೆಯದಾಗಿ,
ನೀವು ನಿರೀಕ್ಷಿಸದ ಅನೇಕ ಉತ್ತಮ ಗುಣಮಟ್ಟದ ಎಲ್ಲವೂ ದೊರೆತರೆ ( ಇದು ತೀರಾ ಅಪರೂಪ ) ನಿಮ್ಮನ್ನು ನೀವು ಅತ್ಯಂತ ಸುಖಿ ಎಂದೇ ಭಾವಿಸಿ.
ಆರನೆಯದಾಗಿ,
ಒಂದು ವೇಳೆ ನೀವು ಎಲ್ಲಾ ಯಶಸ್ಸುಗಳನ್ನು ಗಳಿಸಿ ಯಾವುದೋ ಕಾರಣದಿಂದ ಎಲ್ಲವನ್ನೂ ಕಳೆದುಕೊಳ್ಳಬೇಕಾಗಿ ಬಂದಾಗ ಅಥವಾ ಕಳೆದುಕೊಂಡರೆ ಆಗಲೂ ಸದ್ಯದ ಪರಿಸ್ಥಿತಿಯನ್ನು ನೆನೆದು ಧೃತಿಗೆಡಬೇಡಿ. ಮತ್ತೆ ಬದುಕಿರುವುದೇ ಒಂದು ಸಾಧನೆ ಎಂಬ ತೀರ್ಮಾನಕ್ಕೆ ಬನ್ನಿ. ಹೊರ ಪ್ರಪಂಚದ ಅನೇಕರ ಕುಹುಕದ ಮಾತುಗಳಿಗೆ ಹೆಚ್ಚಿನ ಮಾನ್ಯತೆ ನೀಡದೆ ಸೃಷ್ಟಿಯ ಜೀವಿ ಎಂದು ಭಾವಿಸಿ ಅಂತರ್ಮುಖಿಯಾಗಿ ನಿಮ್ಮನ್ನು ನೀವು ಸಂತೈಸಿಕೊಳ್ಳಿ.
ಯಶಸ್ಸಿನ ಇಮೇಜ್ ಒಂದು ಭ್ರಮೆ ಎಂಬುದನ್ನು ಜೀವನಪರ್ಯಂತ ಮರೆಯದಿರಿ. ಮೇಲೆ ಏರಿದವರು ಮತ್ತೆ ಕೆಳಗೆ ಇಳಿಯುವ ಸಾಧ್ಯತೆಯನ್ನು ಮೊದಲೇ ನಿರೀಕ್ಷಿಸಿ. ಅದು ಬದುಕಿನ ಭಾಗವೇ ಆಗಿರುತ್ತದೆ ಎಂದು ತಿಳಿದುಕೊಳ್ಳಿ.
ನೀವು ಈಗಾಗಲೇ ಯಶಸ್ಸಿನ ಹಾದಿಯಲ್ಲಿದ್ದು ಬದುಕಿನ ಬಗ್ಗೆ ಒಂದು ನಿರ್ಧಿಷ್ಟ ಮತ್ತು ಸ್ಪಷ್ಟ ಅಭಿಪ್ರಾಯ ಹೊಂದಿದ್ದರೆ ಈ ನನ್ನ ಅಭಿಪ್ರಾಯ ನಿರ್ಲಕ್ಷಿಸಿ.
ತುಂಬಾ ಅತೃಪ್ತಿ, ಅಸಮಾಧಾನ, ಅಸಹನೆ, ಕಷ್ಟ, ಬಡತನ ಇರುವವರಾದರೆ ದಯವಿಟ್ಟು ಸ್ವಲ್ಪ ಯೋಚಿಸಿ.
ಬೆತ್ತಲೆಯೊಂದಿಗೆ ಭೂ ಪ್ರವೇಶಿಸುವ ನಾವು ಮತ್ತೆ ಬೆತ್ತಲಾಗಲು ಹೆದರುವುದೇಕೆ……,
ಬೆಳೆಯುತ್ತಾ ದೇಹ ಬಲಿಯುತ್ತದೆ. ಅಂಗಾಗಗಳು ದಪ್ಪವಾಗುತ್ತವೆ. ಉಡುಗೆ ತೊಡುಗೆಗಳು ಮೈ ಅಲಂಕರಿಸುತ್ತವೆ. ಮನಸ್ಸಿನಲ್ಲಿ ಹಲವಾರು ಭಾವನೆಗಳು ಮೂಡುತ್ತವೆ. ಬೇರೆ ಬೇರೆ ಸಂಬಂಧಗಳು ಜೊತೆಯಾಗುತ್ತವೆ.
ಆದರೆ ಅವೆಲ್ಲವೂ ತಾತ್ಕಾಲಿಕವಲ್ಲವೇ.
ಜೀವನದ ಎಲ್ಲಾ ದಿನಗಳು ಹಿತಕರವಾಗಿಯೇ ಇರಬೇಕು ಎಂದರೆ ಹೇಗೆ ? ಒಂದಷ್ಟು ಕಹಿ ದಿನಗಳು ಸಹ ಸಹಿಸಬೇಕಲ್ಲವೇ ?
ಗಣ್ಯ ವ್ಯಕ್ತಿ ಆದ ಕಾರಣಕ್ಕೆ ಕಷ್ಟಗಳು, ನೋವುಗಳು, ದುಃಖಗಳು, ಅವಮಾನಗಳು ಸಹ ಗಣ್ಯವಾಗುವುದಿಲ್ಲ. ಅದು ಪ್ರತಿ ಮನುಷ್ಯನಿಗೂ ಸಹಜ ಮತ್ತು ಸಾಮಾನ್ಯ. ಆದರೆ ನಮ್ಮ ಭ್ರಮೆ ಮತ್ತು ಕೃತಕ ಮನಸ್ಥಿತಿಯ ಪರಿಸರ ಹಾಗು ಜನಪ್ರಿಯತೆ ನಮ್ಮ ಮಾನ ಅವಮಾನಗಳು ದೊಡ್ಡದು ಎಂಬಂತೆ ನಮ್ಮೊಳಗೆ ಬಿಂಬಿತವಾಗಿ ನಮ್ಮನ್ನು ಚಿಕ್ಕವರನ್ನಾಗಿಸುತ್ತದೆ.
” ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡ ಮೇಲೆಯೇ ನಮ್ಮನ್ನು ನಾವು ಪಡೆಯುವುದು ”
ಅದಕ್ಕಿಂತ ದೊಡ್ಡ ಸ್ವಾತಂತ್ರ್ಯ ಸೃಷ್ಟಿಯ ಜೀವಿಗೆ ಇನ್ನೇನಿದೆ.
ಇದು ಒಣ ವೇದಾಂತವಲ್ಲ ವಾಸ್ತವ.
ಇರಬಹುದು,
ನಿಮಗೆ ಆರ್ಥಿಕ ಸಂಕಷ್ಟ,
ತೆರಿಗೆ ಕಿರುಕುಳ,
ಸಾಲಗಾರರ ಒತ್ತಡ,
ಸ್ವಾಭಿಮಾನಕ್ಕೆ ಧಕ್ಕೆ,
ಸೋಲಿನ ಹತಾಶೆ,
ವಿಫಲತೆಯ ನಿರಾಶೆ,
ಅದು ಬದುಕಲು ಕಾರಣಗಳಾಗಬೇಕೇ ಹೊರತು ಸಾಯಲು ಅಲ್ಲ.
ಸಾವು ಬಂದೇ ಬರುತ್ತದೆ. ಅದನ್ನು ಹುಡುಕಲು ಪ್ರಯತ್ನಿಸಬಾರದು.
ನಾವು ನಮ್ಮನ್ನು ಮಾತ್ರ ನಿಯಂತ್ರಿಸಿಕೊಳ್ಳಬಹುದು. ಇತರರು ನಮ್ಮ ನಿಯಂತ್ರಣಕ್ಕೆ ಸಿಗುವುದು ಮತ್ತು ನಮ್ಮ ಇಚ್ಛೆಗೆ ಅನುಗುಣವಾಗಿ ವರ್ತಿಸುತ್ತಾರೆ ಎಂದು ನಿರೀಕ್ಷಿಸುವುದು ಬಹುದೊಡ್ಡ ತಪ್ಪಾಗಬಹುದು.
ಎಷ್ಟೇ ಸಾಲ ಆಗಲಿ,
ಎಷ್ಟೇ ಅವಮಾನ ಆಗಲಿ,
ಯಾವೊನೇ ಕೈಕೊಡಲಿ,
ಯಾವೊಳೇ ಕೈಬಿಡಲಿ,
ಎಷ್ಟೇ ಸೋಲಾಗಲಿ
ಯಾರು ಏನೇ ಅಂದುಕೊಳ್ಳಲಿ,
ಹೊಟ್ಟೆ ತುಂಬ ಊಟ ಮಾಡಿ,
ಕಣ್ಣು ತುಂಬ ನಿದ್ದೆ ಮಾಡಿ,
ಒಂದು ಕಾಫಿ ಕುಡಿದು,
ಸಿನಿಮಾಗೆ ಹೋಗಿ ಬಿಡಿ.
ಆತ್ಮಹತ್ಯೆ, ಗೀತ್ಮಹತ್ಯೆ ಎಲ್ಲಾ ಹೇಡಿಗಳ ಸರಕು.
ಸಾವು ಅಂದರೆ ತುಂಬಾ ಹೆದರಿಕೆ.
ಅದಕ್ಕೆ ಅದನ್ನು ಹುಡುಕಿಕೊಂಡು ಹೋಗಬೇಡಿ
ಬದುಕು ಮುಖ್ಯ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451….
9844013068……
