ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ : ಶಾಸಕ ಬಿ ಎನ್ ರವಿಕುಮಾರ್ 

ವಿಜಯ ದರ್ಪಣ ನ್ಯೂಸ್….

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ : ಶಾಸಕ ಬಿ ಎನ್ ರವಿಕುಮಾರ್

ಶಿಡ್ಲಘಟ್ಟ : ಪುರಸಬೆ ಅವಧಿಯ 2 ವರೆ ದಶಕಗಳಿಂದಲೂ ನಗರದಲ್ಲಿ ಕಾಡುತ್ತಿದ್ದ ನಗರದ ಎಲ್ಲಾ 31ವಾರ್ಡ್‌ಗಳ ನಾಗರಿಕರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅತಿ ಶೀಘ್ರದಲ್ಲೆ ಶಾಶ್ವತವಾದ ಪರಿಹಾರ ನೀಡಿ ನಗರಕ್ಕೆ ಕಾಡುತ್ತಿದ್ದ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದು ಶಾಸಕ ಬಿ.ಎನ್. ರವಿಕುಮಾ‌ರ್ ತಿಳಿಸಿದರು.

ಮೇಲೂರಿನ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ವಿವರ ನೀಡಿ ಅವರು ಮಾತನಾಡಿದರು.
25 ವರ್ಷಗಳಿಂದ ಇದ್ದ ನೀರಿನ ಸಮಸ್ಯೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೆರವಿನಿಂದ ಈ ಸತ್ಕಾರ್ಯವು ಅಮೃತ್-2 ಯೋಜನೆಯಡಿ 12,850 ಕುಟುಂಬಗಳಿಗೆ ಕುಡಿಯುವ ನೀರು ಪೂರೈಕೆಯಿಂದ ನಗರವಾಸಿಗಳ ಕನಸು ನನಸಾಗಲಿದೆ ಎಂದರು.

ಕಳೆದ ಎರಡೂವರೆ ದಶಕಗಳಿಂದಲೂ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ನದಿ ನಾಲೆಗಳಿಲ್ಲದ ಇಲ್ಲಿ ಕೊಳವೆಬಾವಿಗಳ ನೀರಷ್ಟೆ ಕುಡಿಯುವ ನೀರಿಗೆ ಆಧಾರವಾಗಿದ್ದು ಸಮಸ್ಯೆ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಾ ಬಂದಿತ್ತು ಎಂದು ಹೇಳಿದರು.

ಅಮೃತ್-2 ಯೋಜನೆಯಡಿ ನಗರದ 12,850 ಮನೆಗಳಿಗೆ ನೀರು ಹರಿಸುವ ಯೋಜನೆ ಜಾರಿಗೆ ನೀಲನಕ್ಷೆ ಸಿದ್ಧವಾಗಿದ್ದು ಇದಕ್ಕೆ ತಗಲುವ 96 ಕೋಟಿ ರೂ.ಗಳು ಅನುದಾನ ಈಗಾಗಲೆ ಮಂಜೂರಾಗಿದೆ ಎಂದರು.

ಕಳೆದ ನವಂಬರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಅಮೃತ್-2 ಯೋಜನೆಗೂ ಚಾಲನೆ ನೀಡಿದ್ದಾರೆ ಅಗತ್ಯ ಸಿದ್ಧತೆಗಳು ನಡೆದಿವೆ ಎಂದು ಹೇಳಿದರು.

ನಗರದ ಎಲ್ಲ 31-ವಾರ್ಡ್‌ಗಳ ವ್ಯಾಪ್ತಿಯಲ್ಲೂ ಈಗಾಗಲೆ ಒಟ್ಟು 93 ಕಿ.ಮೀ. ಉದ್ದದ ಪೈಪ್‌ಲೈನ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ,ನಗರದ ಅರ್ಧ ಭಾಗದಷ್ಟು ಪ್ರದೇಶದಲ್ಲಿ ಪೈಪ್‌ ಲೈನ್ ಅಳವಡಿಸುವ ಕಾರ್ಯ ಮುಗಿದಿದೆ ಎಂದರು.

ನಗರದ ಎಲ್ಲಾ 12,850 ಕುಟುಂಬಗಳಿಗೆ ವರ್ಷದ 365 ದಿನವೂ ಕುಡಿವ ನೀರನ್ನು ಹರಿಸಲು ಸಾಧ್ಯವಾಗಲಿದೆ, ಈ ವಾರ್ಡ್‌ಗಳಲ್ಲಿ ಕಾಮಗಾರಿ ಮಾಡುವಾಗ ಒಂದೊಂದು ಬೀದಿಯಲ್ಲಿ ಕಾಮಗಾರಿಯನ್ನು ಮುಗಿಸಿದ ನಂತರ ಮತ್ತೊಂದು ಬೀದಿಯಲ್ಲಿ ಪ್ರಾರಭಿಸಬೇಕು ಹಾಗು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅವರ ಸಹಕಾರದೊಂದಿಗೆ ಕೆಲಸ ಮಾಡಬೇಕು ಹಾಗು ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕೆಂದು ಗುತ್ತಿಗೆದಾರರಿಗೆ ತಿಳಿಸಿದ್ದು ನಾಗರಿಕರು ಕೂಡ ಈ ಬಗ್ಗೆ ಗಮನಹರಿಸಬೇಕೆಂದು ಮನವಿ ಮಾಡಿದರು.

ಶಿಡ್ಲಘಟ್ಟದ ಪ್ರತಿ ಮನೆಗೂ ಯುಜಿಡಿ ಸಂಪರ್ಕ ಕೊಡುವ 38 ಕೋಟಿ ರೂ. ವೆಚ್ಚದ ಮೊದಲನೇ ಹಂತದ ಕಾಮಗಾರಿ ಪ್ರಾರಂಭವಾಗಿದೆ. ಯುಜಿಡಿ ಮತ್ತು ಕುಡಿಯುವ ನೀರು ಸೇರಿದಂತೆ ಒಟ್ಟಾರೆ 165 ಕೋಟಿ ರೂ.ಗಳ ಕಾಮಗಾರಿ ಪ್ರಾರಂಭಗೊಂಡಿದೆ ಎಂದು ಮಾಹಿತಿ ನೀಡಿದರು.

ಒಳಚರಂಡಿ ಕಾಮಗಾರಿಗೂ ಚಾಲನೆ :

ನಗರದಲ್ಲಿ ಬಾಕಿ ಇರುವ ಎರಡನೇ ಹಂತದ ಒಳಚರಂಡಿ ಕಾಮಗಾರಿಗೂ ಇದೇ ವೇಳೆ ಚಾಲನೆ ನೀಡಲಾಗಿದ್ದು, ಒಳಚರಂಡಿ ನಿರ್ಮಾಣ ಕಾರ್ಯವೂ ಆರಂಭವಾಗಲಿದೆ. ನಗರದ ಅರ್ಧ ಭಾಗದಲ್ಲಿ ಮಾತ್ರ ಒಳಚರಂಡಿಯಿದ್ದು, ಇನ್ನುಳಿದ ಪ್ರದೇಶದ ಪ್ರತಿ ಮನೆಗೂ ಒಳಚರಂಡಿ ಸಂಪರ್ಕ ನೀಡಬೇಕಿದೆ. 38 ಕೋಟಿ ರೂ. ವೆಚ್ಚದ ಒಳಚರಂಡಿ ನಿರ್ಮಾಣ ಕಾಮಗಾರಿ ಕೂಡ ಆರಂಭವಾಗಿದೆ ಎಂದು ಶಾಸಕರು ವಿವರಿಸಿದರು.

ನಗರದಲ್ಲಿನ ಎಲ್ಲಾ ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ನಗರದ ನಾಗರಿಕರು ಈ ದೂರದೃಷ್ಟಿಯೋಜನೆಗೆ ಸಹಕಾರ ನೀಡಬೇಕು ,ಸ್ವಲ್ಪ ಕಾಲ ಅಡಚಣೆಗಳನ್ನು ತಾಳಿಕೊಳ್ಳಬೇಕು ,ಆದಷ್ಟು ಶೀಘ್ರವಾಗಿ ನೀರಿನ ಸಂಪರ್ಕ ಮತ್ತು ಯುಜಿಡಿ ಸಂಪರ್ಕ ಕೊಡಿಸಿ, ರಸ್ತೆಗಳನ್ನು ಸರಿಪಡಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತೇನೆ ದಯಮಾಡಿ ನಾಗರಿಕರು ಸಹಕರಿಸ ಬೇಕೆಂದು ಮನವಿ ಮಾಡಿದರು.