ಪ್ರತಿಯೊಬ್ಬರಲ್ಲು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿ ಮೌಡ್ಯತೆ ತೊಲಗಿಸಬೇಕು
ವಿಜಯ ದರ್ಪಣ ನ್ಯೂಸ್……
ಪ್ರತಿಯೊಬ್ಬರಲ್ಲು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿ ಮೌಡ್ಯತೆ ತೊಲಗಿಸಬೇಕು

ಶಿಡ್ಲಘಟ್ಟ : ಪ್ರತಿಯೊಬ್ಬರಲ್ಲಿಯೂ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಬೇಕು ಎಲ್ಲವನ್ನೂ ವೈಜ್ಞಾನಿಕವಾಗಿ ಚಿಂತನೆಗೊಳಪಡಿಸಿ ಮಕ್ಕಳದಿಸೆಯಿದಲೇ ಪ್ರಶ್ನಿಸುವ ಗುಣವನ್ನು ಬೆಳೆಸಬೇಕು ಈ ಮೂಲಕ ಅಂಧಕಾರ, ಮೌಡ್ಯಾಚರಣೆಗಳನ್ನು ತೊಡೆದುಹಾಕಬಹುದು ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್ ಆಶ್ರಯದಲ್ಲಿ “ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ” ಅಂಗವಾಗಿ ಆಯೋಜಿಸಿದ್ದ ಪ್ರತಿಜ್ಞಾ ವಿಧಿ ಬೋಧನೆ, ವಿಜ್ಞಾನ ಪ್ರಯೋಗಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೌಢ್ಯಗಳ ಆಚರಣೆ, ಮೂಢನಂಬಿಕೆಗಳ ಅಳವಡಿಕೆಯಿಂದ ಸಾಕಷ್ಟು ಮಂದಿ ಮೋಸಹೋಗುತ್ತಿದ್ದಾರೆ. ಜ್ಯೋತಿಷ್ಯದಂತಹ ವಿಷಯಗಳನ್ನು ವೈಜ್ಞಾನಿಕವಾಗಿ ಅರಿಯಬೇಕು
ಮೂಢನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಜನರನ್ನು ತಪ್ಪುದಾರಿಗೆಳೆದು ಬದುಕುವಂತಹವರಿಗೆ ಜನರೇ ಬುದ್ಧಿ ಕಲಿಸಬಹುದಾಗಿದೆ ಎಂದರು.
ವೈಜಾನಿಕ ಮನೋಭಾವನೆ ಮತ್ತು ವೈಚಾರಿಕತೆ ವೃದ್ಧಿಯಾಗಬೇಕಿದೆ ವಿಜ್ಞಾನವೆಂಬುದು ಎರಡು ಅಲುಗಿನ ಕತ್ತಿಯಾಗಿದ್ದು, ಅದನ್ನು ದೇಶದ ಅಭಿವೃದ್ದಿಗೂ, ಪ್ರಪಂಚ ವಿನಾಶಕ್ಕೂ ಬಳಸಬಹುದು ಎಂದರು.
ಸುಂದರಲಾಲ್ ಬಹುಗುಣ ಇಕೋಕ್ಲಬ್‍ನ ಶಿಕ್ಷಕ ಕಾರ್ಯದರ್ಶಿ ಎ.ಬಿ.ನಾಗರಾಜ ಮಾತನಾಡಿ, ಪ್ರಾಚೀನ ಕಾಲದಿಂದಲೂ ಭಾರತೀಯ ವಿಜ್ಞಾನಿಗಳು ಮತ್ತು ಋಷಿಗಳು ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರವಾದುದು. ಭಾರತೀಯ ವಿಜ್ಞಾನಿಗಳು ಪ್ರಪಂಚದಲ್ಲಿಯೇ ಉತ್ತಮ ಸಾಧನೆ ಮಾಡಿದ್ದು ಇತರೆ ದೇಶದ ವಿಜ್ಞಾನಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ಈ ವೇಳೆ ಶಾಲೆಯ ವಿದ್ಯಾರ್ಥಿಗಳಿಂದ ವಿಜ್ಞಾನಕ್ಕೆ ಸಂಬಂಧಪಟ್ಟಂತಹ ವಿದ್ಯುತ್ ಉತ್ಪಾದನೆ, ಎಲೆಕ್ಟ್ರೊ ಮ್ಯಾಗ್ನೆಟಿಕ್ ಇಂಡಕ್ಷನ್, ರಾಕೆಟ್‍ನ ತತ್ವ, ಮಸೂರಗಳು ಮತ್ತು ದರ್ಪಣಗಳ ಕಾರ್ಯ ಮತ್ತು ಉಪಯೋಗಗಳು, ಗಾಳಿ ಮತ್ತು ನೀರಿನ ಒತ್ತಡ, ರಾಸಾಯನಿಕ ಕ್ರಿಯೆಗಳ ಕುರಿತ ನೂರಾರು ಪ್ರಯೋಗಗಳನ್ನು ಪ್ರದರ್ಶಿಸಿ, ವಿವರಿಸಲಾಯಿತು,ವಿಜ್ಞಾನ ವಸ್ತುಗಳು ಮತ್ತು ಚಾರ್ಟುಗಳ ಪ್ರದರ್ಶನ ನಡೆಯಿತು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಈ ಸಂದರ್ಭದಲ್ಲಿ ಶಿಕ್ಷಕ ಮಧು, ಬಿ.ನಾಗರಾಜು, ಶಿಕ್ಷಕಿ ರಕ್ಷಿತಾ, ಮತ್ತಿತರರು ಹಾಜರಿದ್ದರು.
