ವಿಜಯ ದರ್ಪಣ ನ್ಯೂಸ್…
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ವರುಣ್ ಗೌಡರ ಸಾಧನೆ ನಮ್ಮ ಮಣ್ಣಿನ ಗುಣವನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿ ಹಿಡಿದಂತಾಗಿದೆ: ಶಾಸಕ ಬಿ.ಎನ್. ರವಿಕುಮಾರ್

ಶಿಡ್ಲಘಟ್ಟ : ಒಬ್ಬ ಸಾಮಾನ್ಯ ಪೊಲೀಸ್ ಅಧಿಕಾರಿಯ ಮಗನಾಗಿ, ಕಠಿಣ ಪರಿಶ್ರಮದಿಂದ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಸಾಧನೆ ಮಾಡಿರುವುದು ನಮ್ಮ ಮಣ್ಣಿನ ಗುಣವನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿ ಹಿಡಿದಂತಾಗಿದೆ ಎಂದು ಶಾಸಕರಾದ ಬಿ.ಎನ್. ರವಿಕುಮಾರ್
ಹರ್ಷ ವ್ಯಕ್ತಪಡಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರ ಸ್ವಗೃಹದಲ್ಲಿ “ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 462ನೇ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ಶ್ರೇಯಾಂಕ ಪಡೆದ ವರುಣ್ ಗೌಡ ” ಅವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
‘ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 462ನೇ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ಶ್ರೇಯಾಂಕ’ ಪಡೆಯುವ ಮೂಲಕ ವರುಣ್ ಗೌಡ
ಅವರು ಅವಳಿ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ದೊಡ್ಡ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ವರುಣ್ ಗೌಡ ರವರು ಪೊಲೀಸ್ ಇಲಾಖೆಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ಗೌಡ ಮತ್ತು ಪ್ರೇಮ ದಂಪತಿಯ ಪುತ್ರ ಮೂಲತಃ ಕೋಲಾರ ಜಿಲ್ಲೆಯವರಾದ ಇವರು ಶಿಡ್ಲಘಟ್ಟದಲ್ಲಿ ಹುಟ್ಟಿ ಬೆಳೆದವರು ಅವರ ಶೈಕ್ಷಣಿಕ ಹಾದಿಯನ್ನು ಸ್ಮರಿಸಿದ ಶಾಸಕರು, ಅವರು ಶಿಡ್ಲಘಟ್ಟ, ಮಂಚೇನಹಳ್ಳಿ, ಚಿಂತಾಮಣಿ ಹಾಗೂ ಮೂಡುಬಿದಿರೆಯಂತಹ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಓದಿ, ಕೊಪ್ಪಳದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು ಇಂದು ಈ ಹಂತಕ್ಕೆ ತಲುಪಿರುವುದು ಎಲ್ಲರಿಗೂ ಮಾದರಿ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹಾದಿಯಲ್ಲೇ ವರುಣ್ ಗೌಡ ಅವರು ಸಹ ಉತ್ತಮ ಆಡಳಿತಗಾರರಾಗಿ ಹೊರಹೊಮ್ಮಲಿ ಮತ್ತು ರಾಜ್ಯ ಹಾಗೂ ದೇಶಕ್ಕೆ ಒಳ್ಳೆಯ ಹೆಸರು ತರಲಿ ಎಂದು ಶಾಸಕರು ಹಾರೈಸಿದರು.
ಯುಪಿಎಸ್‌ಸಿ ರ್ಯಾಂಕ್ ವಿಜೇತ ಡಾ. ವರುಣ್ ಗೌಡ ಮಾತನಾಡಿ ,ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ನಿರ್ದಿಷ್ಟ ಗುರಿ ,ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಅತಿ ಮುಖ್ಯ,ಸೋಲುಗಳು ಎದುರಾದಾಗ ಎದೆಗುಂದದೆ ಗುರಿಯತ್ತ ಸಾಗಿದರೆ ಖಂಡಿತವಾಗಿಯೂ ಗೆಲುವು ನಮ್ಮದಾಗುತ್ತದೆ ಎಂದು ಯುವಜನತೆಗೆ ಅವರು ಮನವಿ ಮಾಡಿದರು.
ತಮ್ಮ ಯಶಸ್ಸಿನ ಹಾದಿಯ ಕುರಿತು ವಿವರಿಸಿದ ಡಾ. ವರುಣ್ ಗೌಡ, ಇದು ನನ್ನ ಮೂರನೇ ಪ್ರಯತ್ನವಾಗಿತ್ತು ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲನಾದಾಗಲೂ ನನ್ನ ಕುಟುಂಬದವರು ನೀಡಿದ ಬೆಂಬಲ ಮತ್ತು ನನ್ನ ಮೇಲಿದ್ದ ಆತ್ಮವಿಶ್ವಾಸ ನನ್ನನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ,ಸೋಲು ಎಂಬುದು ಜೀವನದ ಒಂದು ಭಾಗವಷ್ಟೇ, ಅದನ್ನೇ ಅಂತ್ಯ ಎಂದು ಭಾವಿಸಬಾರದು ಎಂದು ತಿಳಿಸಿದರು.
ತಮ್ಮ ಸಾಧನೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೇ ಸ್ಫೂರ್ತಿ ಎಂದ ಅವರು, ದೇವೇಗೌಡರು ಐಎಎಸ್ ಅಧಿಕಾರಿಗಳನ್ನು ಗೌರವಿಸುವ ರೀತಿ ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಗಳು ತಮಗೆ ಮಾದರಿ ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ವರುಣ್ ಗೌಡ ಅವರು ತಮಗೆ ಮಾರ್ಗದರ್ಶನ ನೀಡಿದ ಐಆರ್‌ಎಸ್ ಅಧಿಕಾರಿ ವಿವೇಕ್ ರೆಡ್ಡಿ ಹಾಗೂ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ ಶಾಸಕ ರವಿಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದರು.
ಶಾಸಕ ಬಿ.ಎನ್.ರವಿಕುಮಾರ್ ಅವರು ವರುಣ್ ಗೌಡ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೀವನ ಚರಿತ್ರೆಯ ‘ಶಿಖರಾರೋಹಣ’ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಗೌರವಿಸಿ ನಂತರ ಸಿಹಿ ಹಂಚಿದರು. ವರುಣ್ ಗೌಡ ಅವರು ಕಳೆದ ಎರಡು ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಲೇ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗಗನ ಸಿಂಧು,
ASI ಪ್ರಕಾಶ್ ಗೌಡ,ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜುಗೂರು ರಾಮಣ್ಣ,ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ವಕ್ಕಲೇರಿ ರಾಮು,ಪರಮೇಶ್,ಬೆಸ್ಕಾಂ ಗುತ್ತಿಗೆದಾರರಾದ ಬಿ.ಕೆ.ಶ್ರೀನಿವಾಸ್,ನಾರಾಯಣಸ್ವಾಮಿ,ನಾಗಮಂಗಲ ಶ್ರೀನಿವಾಸ್ ಗೌಡ,ಬೈರಸಂದ್ರಚಂದ್ರೇಗೌಡ,
ಆರ್.ಎ.ಉಮೇಶ್, ಕೆ.ಲಕ್ಷ್ಮಿಪತಿ,ಸಿ.ಕೆ.ಗಜೇಂದ್ರಬಾಬು ಹಾಗು ಅನೇಕ ಮುಖಂಡರು ಹಿತೈಷಿಗಳು ಉಪಸ್ಥಿತರಿದ್ದರು.










