ವಿಜಯ ದರ್ಪಣ ನ್ಯೂಸ್….
ಭಕ್ತಾದಿಗಳು ನಿಜವಾದ ಭಾಗವತರು ಟಿಎಲ್ ಆನಂದಸ್ವಾಮಿ

ವಿಜಯಪುರ ದೇವನಹಳ್ಳಿ ತಾಲ್ಲೂಕು : ಶ್ರೀಮದ್ ಭಗವತ್ ಪುರಾಣದಲ್ಲಿ, ಪ್ರಹ್ಲಾದನು ತನ್ನ ಗುರುಗಳು ತನಗೆ ಕಲಿಸಿದ ಭಕ್ತಿಯ ಒಂಬತ್ತು ರೂಪಗಳನ್ನು ತನ್ನ ತಂದೆ ಅಸುರ, ಹಿರಣ್ಯ ಕಶ್ಯಪುವಿಗೆ ವಿವರಿಸುತ್ತಾನೆ.
ಅವುಗಳೆಂದರೆ ಶ್ರವಣ, ಕೀರ್ತನ, ಸ್ಮರಣೆ, ಪಾದ-ಸೇವೆ, ಅರ್ಚನೆ, ವಂದನೆ, ದಾಸ್ಯ, ಸಾಖ್ಯ ಮತ್ತು ಆತ್ಮ-ನಿವೇದನೆ. ಎಂದು ತಿಳಿಯಪಡಿಸುತ್ತಾ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾದಿಗಳು ಭಾಗವತರು ಎಂದು ಟಿಎಲ್ಆನಂದ ಸ್ವಾಮಿಗಳು ಶ್ಲಾಘನೀಯ ಎಂದರು.
ವಿಜಯಪುರ ಪಟ್ಟಣದಲ್ಲಿರುವ ಪುರಾಣ ಪ್ರಸಿದ್ಧ ಅರ್ಜುನ ನಿರ್ಮಿತ ಶ್ರೀ ಚನ್ನಕೇಶವ ದೇವಾಲಯ ಆವರಣದಲ್ಲಿ ಶ್ರೀ ಚೆನ್ನಕೇಶವ ಸ್ವಾಮಿ ವ್ಯವಸ್ಥಾಪನ ಸಮಿತಿಯ ಸಹಕಾರದೊಂದಿಗೆ ಶ್ರೀ ಕೃಷ್ಣ ಯತಿಂದ್ರ ಸೇವಾ ಟ್ರಸ್ಟ್ ರವರ ವತಿಯಿಂದ ಶ್ರೀ ಶ್ರೀ ಶ್ರೀಮಂತ ಭಗವದ್ಗೀತಾ ಪಾರಾಯಣ ಶ್ರೀ ಶ್ರೀ ಶ್ರೀ ಕೈವಾರ ಯೋಗಿ ನಾರೇಯಣ ಯತೀಂದ್ರರ ಹಾಗೂ ಕನಕ ಪುರಂದರ ಗೀತಾ ತತ್ವಾಮೃತ ರಸಧಾರೆಯ 249ನೇ ಕಾರ್ಯಕ್ರಮ ಹಾಗೂ ಶ್ರೀ ಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆಯ ಗೋಷ್ಟಿಯ 200 ನೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕೈವಾರ ಉಪನ್ಯಾಸಕ ವಿದ್ವಾನ್ ಶ್ರೀ ಟಿಎಲ್ ಆನಂದ ಸ್ವಾಮಿಗಳು ಸದ್ಗುರು ತಾತಯ್ಯನವರ ಜೀವನ ಚರಿತ್ರೆ ಹಾಗೂ ಸದ್ಗುರು ಶ್ರೀ ಕೈವಾರ ತಾತಯ್ಯನವರ 300 ನೇ ಜಯಂತಿ ಅಂಗವಾಗಿ ಉಪನ್ಯಾಸ ನೀಡಿದರು .
ಶ್ರೀಕೃಷ್ಣ ದ್ವಾದಶಿ 200ನೇ ಕಾರ್ಯಕ್ರಮ ತಾತಯ್ಯನವರ ಜನ್ಮ ದಿನಾಚರಣೆ 300 ವರ್ಷವಾಗಿದ್ದು ವಿಸ್ಮಯ ಎಂದು ಭಾವಿಸುತ್ತಾ ಕೈವಾರ ಕರ್ನಾಟಕ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪುಣ್ಯಕ್ಷೇತ್ರ. ದ್ವಾಪರಯುಗದಲ್ಲಿ ಇದು ಏಕಚಕ್ರನಗರ.
1726 ರಲ್ಲಿ ಬಲಿಜ ಜನಾಂಗಕ್ಕೆ ಸೇರಿದ ಮುದ್ದಮ್ಮ ಕೊಂಡಪ್ಪ ದಂಪತಿಗಳಿಗೆ ಹುಟ್ಟಿದ ಯೋಗಿನಾರೇಯಣರ ಜನ್ಮನಾಮ ನಾರಾಣಪ್ಪ. ತಂದೆ ತಾಯಿ ದೈವಭಕ್ತರು. ಕುಲದೇವರಾದ ಅಮರನಾರಾಯಣನ ಕೃಪೆಯಿಂದ ಗರ್ಭವತಿಯಾದಳು ಮುದ್ದಮ್ಮ. ಸೋದರತ್ತೆ ಆಸ್ತಿಯ ದುರಾಸೆಯಿಂದ ಮುದ್ದಮ್ಮ ಗರ್ಭವತಿ ಇದ್ದಾಗಲೇ ವಿಷಕೊಟ್ಟು ಗರ್ಭಪಾತ ಮಾಡಲೆತ್ನಿಸಿದಾಗ, ಸರ್ಪ ಆದಿಶೇಷನೇ ಬಂದು ಕಾಪಾಡುತ್ತಾನೆ.
ಹೀಗೆ ಜನ್ಮ ತಳೆದ ನಾರಾಣಪ್ಪನ ತಂದೆ ಬಳೆ ವ್ಯಾಪಾರಿಗಳು. ಅವರ ದುಡಿಮೆಲ್ಲೇ ಸಂತೃಪ್ತ ಜೀವನ ಕಂಡವರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗ ನಾರಾಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದನು.
ಭಕ್ತಿಭಾವದ ಮೂಲಕ ಜ್ಞಾನಮಾರ್ಗ ಎಂಬಂತೆ ಜನಮಾನಸದಲ್ಲಿ ಭಕ್ತಿಭಾವ ಬಿತ್ತುವಂಥ ಭಕ್ತಿಗೀತೆಗಳನ್ನು ರಚಿಸಿದರು. ಸನ್ಮಾರ್ಗ ತೋರುತ್ತ ಮಹಾನ್ ಭವಿಷ್ಯತ್ ಜ್ಞಾನಿಗಳಾಗಿ ಕಾಲಜ್ಞಾನವನ್ನು ರಚಿಸಿದರು.
ಅದು ಇಂದಿನ ಕಾಲಕ್ಕೆ ಪ್ರಸ್ತುತವೆನಿಸುತ್ತದೆ. ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರೆಂದೇ ಪ್ರಖ್ಯಾತರಾದರು. ತಾತಯ್ಯನವರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ತಪಸ್ಸು ಮಾಡಿ ವರುಣ ದೇವರನ್ನು ಪ್ರಾರ್ಥನೆ ಮಾಡಿ ಮಳೆಯನ್ನು ಬರೆಸಿದ್ದ ಪ್ರಸಂಗವಿದೆ. ತಾತಯ್ಯನವರು 110 ವರುಷಗಳಷ್ಟು ಸುದೀರ್ಘ ಕಾಲ (1726-1836) ಇಲ್ಲಿ ನೆಲೆಸಿದ್ದರು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ ಖಜಾಂಚಿ ಅಂಜಿನಪ್ಪ (ಗುಂಡಣ್ಣ) ವಹಿಸಿದರು.
ಮುಖ್ಯ ಅತಿಥಿಗಳಾಗಿ ಓಂಕಾರೇಶ್ವರ ಸ್ವಾಮಿ ಭಕ್ತ ಮಂಡಳಿಯ ಮಾಜಿ ಅಧ್ಯಕ್ಷ ತೋಟದಪ್ಪ, ದ್ರಾಕ್ಷಿ ರಾಜಣ್ಣ ಶ್ರೀಮತಿ ಗೀತಮ್ಮ ಅನಿತಾ ರಾಮದಾಸ್ ಹಾಗೂ ರಮೇಶ್ ಸ್ವಾಮಿಗಳು ಉಪಸ್ಥಿತರಿದ್ದರು.
ದ್ವಿಚಕ್ರ ವಾಹನದಲ್ಲಿ ದೇಶ ವಿದೇಶ ಪರ್ಯಾಟನೆ ಮಾಡಿದ ಎಸ್ ಕುಮಾರ್ ರವರನ್ನು ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಐದು ಬಡ ಮಹಿಳೆಯರಿಗೆ ಕಂಬಳಿ ಸೀರೆ ಕುಪ್ಪಸ ಮೂರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಅರಿಶಿನ ಕುಂಕುಮ ಬಳೆಗಳನ್ನು ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಎಂವಿ ನಾಯ್ಡು ,ಮುನಿರಾಜು, ಅನಿಲ್ ಕುಮಾರ್ ರವರ ವಾದ್ಯದೊಂದಿಗೆ ಟಿ ಮಹಾತ್ಮಾಂಜನೇಯ ನರಸಿಂಹಪ್ಪ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಈ ಕಾರ್ಯಕ್ರಮವನ್ನು ವಿ.ಎನ್. ವೆಂಕಟೇಶ್ ಮತ್ತು ಸಂಗಡಿಗರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.










