ವಿಜಯ ದರ್ಪಣ ನ್ಯೂಸ್…..
ರಾಮೋಹಳ್ಳಿಯಲ್ಲಿ ಸಡಗರ ಸಂಭ್ರಮದ ಇತಿಹಾಸ ಪ್ರಸಿದ್ಧ ರಾಮಚಂದ್ರಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ

ಕೆಂಗೇರಿ : ಬೆಂಗಳೂರು ದಕ್ಷಿಣ ತಾಲ್ಲೂಕು ರಾಮೋಹಳ್ಳಿಯಲ್ಲಿ ಇತಿಹಾಸ ಪ್ರಸಿದ್ದ ರಾಮಚಂದ್ರಸ್ವಾಮಿ ದೇವರ ಬ್ರಹ್ಮ ರಥೋತ್ಸವ ಹಾಗೂ ಜಾನಪದ ಜಾತ್ರೆ ಸಡಗರ, ಸಂಭ್ರಮದಿಂದ ಅದ್ಧೂರಿಯಾಗಿ ನೆರವೇರಿತು.
ಬೆಳಗ್ಗೆ 5:00 ಗೆ ಪುಣ್ಯಾಹದಿಂದ ಪ್ರಾರಂಭವಾದ ಪೂಜೆ,ಗಣಪತಿ ಪೂಜೆ ಶ್ರೀ ರಾಮನ ಪೂಜೆ ಆಂಜನೇಯ ಸ್ವಾಮಿ ಪೂಜೆ, ಗಣಪತಿ ಶ್ರೀ ರಾಮ ಹಾಗೂ ಆಂಜನೇಯ ಸ್ವಾಮಿ ಹೋಮ, ಫಲಪಂಚಾಮೃತ ಅಭಿಷೇಕದ ನಂತರ ವಿವಿಧ ಹೂಗಳಿಂದ ಅಲಂಕೃತಗೊಂಡ ಶ್ರೀ ರಾಮನು ವಿಜೃಂಭಣೆಯಿಂದ ಕಂಗೊಳಿಸುತ್ತಿತ್ತು.
ಮಧ್ಯಾಹ್ನ 12 ಗಂಟೆಯ ನಂತರ ಮಹಾಮಂಗಳಾರತಿ ನೆರವೇರಿಸಿ ನೆರೆದಿದ್ದ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಕ್ತರ ಜಯ ಘೋಷಗಳೊಂದಿಗೆ ಮೆರವಣಿಗೆ ನಡೆಯಿತು.ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿಯಾಗಿದ್ದರು.
ರಾಮಚಂದ್ರಸ್ವಾಮಿ, ಆಂಜನೇಯ, ಸೀತಾ, ಲಕ್ಷ್ಮಣ, ಭರತ, ಶತೃಘ್ನ ದೇವರುಗಳ ವಿಗ್ರಹಗಳನ್ನಿಟ್ಟು ಪೂಜೆ ಸಲ್ಲಿಸುವುದರ ಮೂಲಕ ರಥೋತ್ಸವಕ್ಕೆ ಊರಿನ ಪ್ರಮುಖರಿಂದ ಚಾಲನೆ ನೀಡಲಾಯಿತು .
ಭಕ್ತಾದಿಗಳು ಜಯಘೋಷದೊಂದಿಗೆ ರಥವನ್ನು ಎಳೆದು ಹೂವು, ಬಾಳೆಹಣ್ಣುಗಳನ್ನು ಎಸೆಯುವುದರ ಮೂಲಕ ಕುಣಿದು ಕುಪ್ಪಳಿಸಿದರು.
ನಾಡಿನ ವಿವಿಧ ಜಾನಪದ ಕಲಾ ತಂಡಗಳಾದ ಪೂಜಾ ಕುಣಿತ, ಪಟ್ಟದ ಕುಣಿತ ಸೇರಿದಂತೆ ಹಲವು ಪ್ರದರ್ಶನಗಳು ಜನರ ಗಮನ ಸೆಳೆದವು.
ಈ ಸಂದರ್ಭದಲ್ಲಿ ಶಾಸಕ ಎಸ್.ಟಿ.ಸೋಮಶೇಖರ್, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ. ಹನುಮಂತಯ್ಯ, ರಾಮೋಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ವೇಣುಗೋಪಾಲ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಆರ್.ಪಿ. ಪ್ರಕಾಶ್, ಜಿ.ಮಹೇಶ್, ಚೇತನ್, ರವಿಕುಮಾರ್, ಚಂದ್ರಪ್ಪ, ಯಲ್ಲಪ್ಪ,ರಾಕೇಶ್, ಆಂಜನಿಗೌಡ ಸುತ್ತಲ ಗ್ರಾಮದ ಭಕ್ತಾದಿಗಳು, ಸ್ಥಳೀಯ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.










