ವಿಜಯ ದರ್ಪಣ ನ್ಯೂಸ್…….
ದೇವರು ಎಷ್ಟೊಂದು ಒಳ್ಳೆಯವನಲ್ಲವೇ……..

ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೊಂದು ದೇಶದ ಅಧ್ಯಕ್ಷನನ್ನಾಗಿಸಿದ್ದಾನೆ.
ಲಕ್ಷಾಂತರ ಜನರನ್ನು ಹತ್ಯೆ ಮಾಡಿಸಲು ಇರಾನ್ ಇಸ್ರೇಲ್ ನಡುವೆ ಯುದ್ಧ ಮಾಡಿಸುತ್ತಿದ್ದಾನೆ.
ಹಿರೋಷಿಮಾ ನಾಗಸಾಕಿ ಮೇಲೆ ಬಾಂಬ್ ಹಾಕಿಸಿ ಜಪಾನಿನ ಲಕ್ಷಾಂತರ ಜನರನ್ನು ಜೀವಂತ ಶವ ಮಾಡಿದ.
ಆಫ್ರಿಕಾದಲ್ಲಿ ಹಾರಾಡುತ್ತಿದ್ದ ವಿಮಾನವನ್ನೇ ನೆಲಕ್ಕೆ ಬೀಳಿಸಿ ನೂರಾರು ಜನರನ್ನು ಕೊಂದ.
ಪುಲ್ವಾಮದಲ್ಲಿ ದೇಶ ರಕ್ಷಣೆ ಮಾಡುತ್ತಿದ್ದ 48 ಯೋಧರನ್ನು ಒಮ್ಮೆಗೇ ಸಾಯಿಸಿದ.
ಮಂಡ್ಯದ ಬಳಿ ಪ್ರಯಾಣಿಕರ ಬಸ್ ಕೆರೆಗೆ ಬೀಳಿಸಿ ಒಂದಷ್ಟು ಜನರನ್ನು ಇಲ್ಲವಾಗಿಸಿದ.
ಧಾರವಾಡದಲ್ಲಿ ಕಟ್ಟುತ್ತಿದ್ದ ಕಟ್ಟಡವನ್ನೇ ಕೆಡವಿ ಸುಮಾರು ಜನರನ್ನು ಕರೆದುಕೊಂಡು ಹೋದ.
ದೇವರು ಎಷ್ಟೊಂದು ಒಳ್ಳೆಯವನಲ್ಲವೇ……
ಅನ್ನ ಬೆಳೆಯುವ ರೈತರನ್ನೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಾನೆ.
ಪುಟ್ಟ ಶಾಲಾ ಮಕ್ಕಳ ವ್ಯಾನನ್ನು ರೈಲಿಗೆ ಗುದ್ದಿಸಿ ಅವರ ಪ್ರಾಣವನ್ನೇ ತೆಗೆಯುತ್ತಾನೆ.
ಎಷ್ಟೋ ಅಸಹಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿಸಿ ಅವರನ್ನು ಕೊಲ್ಲಿಸುತ್ತಾನೆ.
ಅದಕ್ಕಾಗಿಯೇ ಅಲ್ಲವೇ, ವಿಶ್ವದ ಎಲ್ಲಾ ಧರ್ಮಗಳ ಬಹುತೇಕ ಜನ ದೇವರನ್ನು ನಂಬಿ ಆರಾಧಿಸುವುದು.
ಇಡೀ ಸೃಷ್ಟಿಯನ್ನು ನಿಯಂತ್ರಿಸುತ್ತಿರುವುದೇ ದೇವರಲ್ಲವೇ……..
ಹುಟ್ಟಿಸುವವನೂ ಅವನೇ,
ಸಾಯಿಸುವವನೂ ಅವನೇ,
ವೃದ್ದಾಶ್ರಮಗಳನ್ನು ಹೆಚ್ಚಿಸುತ್ತಿರುವುದು ಅವನೇ,
ಜೈಲುಗಳನ್ನು ತುಂಬಿಸುತ್ತಿರುವುದು ಅವನೇ,
ಆಸ್ಪತ್ರೆಗಳನ್ನು ಬೆಳೆಸುತ್ತಿರುವುದು ಅವನೇ,
ಭ್ರಷ್ಟರನ್ನು ಚುನಾಯಿಸುತ್ತಿರುವುದು ಅವನೇ,
ಜನಸಂಖ್ಯೆಯನ್ನು ಮುಂದುವರಿಸುತ್ತಿರುವುದು ಅವನೇ,
ಜಾತಿವಾದಿ, ಕೋಮುವಾದಿ, ಭ್ರಷ್ಟ, ವಂಚಕ, ಸಮಾಜ ದ್ರೋಹಿ ಮನೋಭಾವದವರನ್ನು ಎಂಎಲ್ಎ, ಎಂಪಿ, ಮಂತ್ರಿಯಾಗಿ ಮಾಡುತ್ತಿರುವುದು ಅವನೇ…
ದಗಾಕೋರರಿಂದ ಕಾಣಿಕೆ ಪಡೆದು ಅವರಿಂದಲೇ ಹೋಮ ಹವನ ಪೂಜೆ ಮಾಡಿಸಿಕೊಳ್ಳುತ್ತಿರುವವನು ಅವನೇ……
ಮಂದಿರ, ಮಸೀದಿ, ಚರ್ಚುಗಳ ಮುಂದೆ ಹಸಿದವರನ್ನು ಭಿಕ್ಷೆಗೆ ದೂಡಿ ಗಹಗಹಿಸಿ ನಗುತ್ತಿರುವವನು ಅವನೇ………..
ಮಾನವೀಯ ಮನಸ್ಸುಗಳಿಗೆ, ಅವರ ಒಳ್ಳೆಯ ಗುಣಗಳಿಗೆ ಅಪಾರ ನೋವು ಕೊಡುತ್ತಿರುವವನು ಅವನೇ……
ಆದರೂ ಪ್ರತಿ ಕ್ಷಣ ವಿಶ್ವದ ಎಲ್ಲಾ ಕಡೆ,
ಎಲ್ಲಾ ಸಂಧರ್ಭಗಳಲ್ಲೂ, ಬೇರೆ ಬೇರೆ ಹೆಸರುಗಳಿಂದ ವಿವಿಧ ರೀತಿಯಲ್ಲಿ ಅಗ್ರ ಪೂಜೆ ಮಾಡಿಸಿ ಜನರಿಂದ ಮೆರೆಯುತ್ತಿರುವವನು ಅವನೇ….
ಹಿಂದೂ, ಮುಸ್ಲಿಂ , ಕ್ರಿಶ್ಚಿಯನ್ನರು ಸೇರಿದಂತೆ ಬಹುತೇಕ ಧರ್ಮಗಳಲ್ಲಿ ಅಗ್ರಗಣ್ಯ ಅವನೇ……
ಅಯ್ಯಾ ದೇವರೇ, ಏನಯ್ಯ ನಿನ್ನ ಲೀಲೆ. ಎಂದೂ, ಎಲ್ಲಿಯೂ ಕಾಣಿಸಿಕೊಳ್ಳದ ನೀನು, ಜನರ ಹೃದಯದಲ್ಲಿ ನೆಲೆಸಿ ಇಡೀ ಸೃಷ್ಟಿಯ ಅಧಿಪತಿ ಎಂದು ಬಿಂಬಿಸಿಕೊಳ್ಳುತ್ತಿರುವೆ.
ಕಾಲ್ಪನಿಕ ವ್ಯಕ್ತಿಯೊಬ್ಬ ಒಂದು ಶಕ್ತಿಯಾಗಿ ಮಾನವ ಕುಲವನ್ನು ನಿಯಂತ್ರಿಸುತ್ತಿರುವುದು ಮನುಷ್ಯನ ವಿವೇಚನಾ ಶಕ್ತಿಯನ್ನೇ ಪ್ರಶ್ನಿಸುವಂತೆ ಮಾಡಿದೆ.
ಅಂತಹ ದೈತ್ಯ ಶಕ್ತಿಯ ಮುಂದೆ,
ನಮ್ಮಂತ ಹುಲುಮಾನವನ ಅಭಿಪ್ರಾಯ ಯಾವ ಲೆಕ್ಕ.
ಗಾಳಿ ಬಂದ ಕಡೆ ತೂರಿಕೊಂಡು ಅದರೊಂದಿಗೆ ಬದುಕುವವನೇ ಜಾಣ ಎಂಬ ವ್ಯವಸ್ಥೆಯಲ್ಲಿ ಸತ್ಯದ ಹುಡುಕಾಟವೇ ಒಂದು ಹುಚ್ಚುತನ.
ಆದರೂ ಪ್ರಯತ್ನ ಮಾತ್ರ ನಿಲ್ಲಬಾರದು………..
ಅಗೋಚರ ಶಕ್ತಿಗೆ……
ಶಕ್ತಿಯಿದ್ದರೆ ಬಂಗಲೆಯಲ್ಲಿ ಒಬ್ಬ, ಬಯಲಿನಲ್ಲಿ ಒಬ್ಬ ವಾಸಿಸುವುದನ್ನು ತಡೆ,
ಕರುಣೆ ಇದ್ದರೆ ಪುಟ್ಟ ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರ ತಡೆ,
ಆತ್ಮವಿದ್ದರೆ ಒಬ್ಬನಿಗೆ ಭಕ್ಷ್ಯ ಭೋಜನದ ಸುಖ, ಇನ್ನೊಬ್ಬನಿಗೆ ಹಸಿವಿನ ನೋವು ತಡೆ,
ಧ್ಯೆರ್ಯವಿದ್ದರೆ ನಿನ್ನದೇ ಮುಗ್ಧ ಜನರನ್ನು ಕೊಲ್ಲುವ ಭಯೋತ್ಪಾದಕರನ್ನು ತಡೆ,
ಗೊತ್ತಿದ್ದರೆ ಸಾರ್ವಜನಿಕ ಹಣ ಲೂಟಿ ಹೊಡೆಯುವ ಭ್ರಷ್ಟರನ್ನು ತಡೆ,
ತಿಳಿದಿದ್ದರೆ ಲಕ್ಷಾಂತರ ಜನ ಸಾಯುವ ಅಪಘಾತಗಳನ್ನು ತಡೆ,
ಅರ್ಥವಾದರೆ ಖಾಯಿಲೆಗಳಿಂದ ಜನ ಅಕಾಲಿಕವಾಗಿ ಸಾಯುವುದನ್ನು ತಡೆ,
ಬುದ್ದಿಯಿದ್ದರೆ ರೈತರ ಆತ್ಮಹತ್ಯೆಗಳನ್ನು ತಡೆ,
ಪ್ರೀತಿಯಿದ್ದರೆ ಹೆಣ್ಣಿನ ಮೇಲಿನ ಕಾಮುಕರ ಅಟ್ಟಹಾಸ ತಡೆ,
ಕಾಡು ನಿನ್ನದಾದರೆ ಅದನ್ನು ನಾಶಮಾಡುತ್ತಿದ್ದೇವೆ, ತಡೆ ನೋಡೋಣ,
ನೀರು ನಿನ್ನದಾದರೆ ಅದನ್ನು ಮುಗಿಸುತ್ತಿದ್ದೇವೆ, ತಡೆ ನೋಡೋಣ,
ಗಾಳಿ ನಿನ್ನದಾದರೆ ಅದನ್ನು ಮಲಿನ ಮಾಡುತ್ತಿದ್ದೇವೆ, ತಡೆ ನೋಡೋಣ,
ಪ್ರಾಣಿ ಪಕ್ಷಿಗಳು ನಿನ್ನದಾದರೆ ಅದನ್ನು ಇಲ್ಲವಾಗಿಸುತ್ತಿದ್ದೇವೆ ತಡೆ ನೋಡೋಣ,
ಭೂಮಿ ನಿನ್ನದಾದರೆ ಅದನ್ನು
ಕೊರೆಯುತ್ತಿದ್ದೇವೆ, ತಡೆ ನೋಡೋಣ,
ಏಕೆ ಕಾಣದ ಜಾಗದಲಿ ಮರೆಯಾಗಿರುವೆ,
ಏಕೆ ಮಂದಿರ, ಮಸೀದಿ, ಚರ್ಚುಗಳಲ್ಲಿ ಬಂಧಿಯಾಗಿರುವೆ,
ಏಕೆ ಪೂಜಾರಿ, ಪಾದ್ರಿ, ಮೌಲ್ವಿಗಳ ಬೆನ್ನಹಿಂದೆ ಅಡಗಿರುವೆ,
ಏಕೆ ಪವಿತ್ರ ಗ್ರಂಥಗಳಲ್ಲಿ ಮರೆಮಾಚಿಕೊಂಡಿರುವೆ,
ಅಪ್ಪಾ ಜೀಸಸ್,
ನಿನಗೆ ಶಕ್ತಿಯಿದ್ದರೆ – ಪ್ರೀತಿ ಇದ್ದರೆ, ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ, ಇರಾನ್, ಆಫ್ಘನಿಸ್ತಾನ, ರಷ್ಯಾ, ಉಕ್ರೇನ್, ಇಸ್ರೇಲ್, ಲೆಬನಾನ್ ಮುಂತಾದ ದೇಶಗಳಲ್ಲಿರುವ ನಿನ್ನದೇ ಭಕ್ತರು ಭಯೋತ್ಪಾದಕರ ಅಟ್ಟಹಾಸಕ್ಕೆ ದಾರುಣವಾಗಿ ಬಲಿಯಾಗುತ್ತಿದ್ದಾರೆ, ಅದನ್ನು ತಡೆ ನೋಡೋಣ,
ಅಣ್ಣಾ ಅಲ್ಲಾಹು,
ನಿನಗೆ ಶಕ್ತಿಯಿದ್ದರೆ – ಕರುಣೆ ಇದ್ದರೇ ನಿನ್ನದೇ ಜನಗಳು ಸಿರಿಯಾ, ಪ್ಯಾಲಿಸ್ಟೇನ್, ಇರಾಕ್, ಯೆಮನ್, ಅರಬ್ ದೇಶಗಳಲ್ಲಿ ಬರ್ಬರವಾಗಿ ಹತ್ಯೆಯಾಗುತ್ತಿದ್ದಾರೆ, ತಡೆ ನೋಡೋಣ,
ಅಯ್ಯಾ ಶಿವಪ್ಪ,
ಕಾಶ್ಮೀರದ ಭಯೋತ್ಪಾದಕರು ನಮಗೆ ಮಗ್ಗುಲ ಮುಳ್ಳಾಗಿ ಅನೇಕರನ್ನು ಕೊಲ್ಲುತ್ತಾ ತುಂಬಾ ತೊಂದರೆ ಕೊಡುತ್ತಿದ್ದಾರೆ, ನಿನಗೆ ಶಕ್ತಿಯಿದ್ದರೆ, ಪ್ರೀತಿ ಇದ್ದರೆ ನಿನ್ನ ಮೂರನೇ ಕಣ್ಣನ್ನು ತೆರೆದು ಅವರನ್ನು ಭಸ್ಮ ಮಾಡು ನೋಡೋಣ,
ಹೋಗಲಿ ಬಿಡು ಅದು ಅಸಾಧ್ಯ, ನೀವು ಇದ್ದರೆ ಅಲ್ಲವೇ ಅದನ್ನು ಮಾಡುವುದು,
ನಿಮ್ಮನ್ನು ಸೃಷ್ಟಿಸಿದ್ದೇ ಈ ಹುಲುಮಾನವರು,
ಅಪ್ಪಾ ಕ್ರೈಸ್ತರೇ,
ಬೈಬಲ್ ನ ಆರಾಧಕರೇ – ಅನುಯಾಯಿಗಳೇ, ಬೈಬಲ್ ಓದಿ ಅರ್ಥ ಮಾಡಿಕೊಂಡಿರುವಿರಲ್ಲವೇ, ವಿಶ್ವವೇ ಜೀಸಸ್ ಅವರ ಸೃಷ್ಟಿ ಎಂದು ಹೇಳುವಿರಲ್ಲವೇ ? ಹಾಗಾದರೆ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡಿ ನೋಡೋಣ,
ಅಣ್ಣಾ, ಇಸ್ಲಾಮಿಯರೇ,
ಖುರಾನ್ ನ ಆರಾಧಕರೇ – ಆಜ಼್ಞಾಪಾಲಕರೇ, ಅದನ್ನು ಓದಿ ಅರ್ಥಮಾಡಿಕೊಂಡಿರುವಿರಲ್ಲವೇ ? ಈ ಸೃಷ್ಟಿ ಅಲ್ಲಾನ ಕೃಪೆ ಎಂದು ಹೇಳುವಿರಲ್ಲವೇ ? ಹಾಗಾದರೆ ಇಡೀ ವಿಶ್ವವನ್ನು ನೆಮ್ಮದಿಯ ತಾಣ ಮಾಡಿ ನೋಡೋಣ,
ಅಯ್ಯಾ ಹಿಂದೂ ಭಾಂಧವರೇ,
ಸರ್ವಶಕ್ತ – ಸರ್ವವ್ಯಾಪಿ ಶಿವನೇ ಸೃಷ್ಟಿಯ ಮೂಲವಲ್ಲವೇ ? ಅವರಿಗೆ ಹೇಳಿ ವಿಶ್ವವನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ವಿಶ್ವಗುರುವಾಗಿ ನೋಡೋಣ,
ಹೇಗಿದೆ ನೋಡಿ ಈ ದೇವರು ಧರ್ಮಗಳ ಪೊಳ್ಳುತನ – ಮನೆ ಮುರುಕುತನ ಮತ್ತು ಅಜ್ಞಾನ,
ನಿಜವಾಗಲೂ ಈ ಕ್ಷಣದ ದೇವರುಗಳು ಮತ್ತು ವಿಶ್ವವನ್ನು ಶಾಂತಿ ನೆಲೆಸುವಂತೆ ಮಾಡುವವ ಶಕ್ತಿ ಇರುವವರು ಯಾರು ಗೊತ್ತೆ ?,
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್,
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್,
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್,
ಭಾರತದ ಪ್ರಧಾನಿ ನರೇಂದ್ರ ಮೋದಿ,
ಪಾಕಿಸ್ತಾನದ ಪ್ರಧಾನಿ,
ಇಂಗ್ಲೆಂಡಿನ ಪ್ರಧಾನಿ,
ಹಾಗು ಇಸ್ರೇಲ್, ಫ್ರಾನ್ಸ್, ಇರಾನ್,ಜರ್ಮನಿ, ಕೊರಿಯಾ, ಜಪಾನ್, ಆಸ್ಟ್ರೇಲಿಯಾ ಮುಂತಾದ ವಿಶ್ವದ ಕನಿಷ್ಠ 100 ಪ್ರಬಲ ರಾಷ್ಟ್ರಗಳ ಮುಖ್ಯಸ್ಥರು,
ವಿಶ್ವದಲ್ಲಿ ಶಾಂತಿಯುತ ಸಹಭಾಳ್ವೆ ನಡೆಸಲು ಸಾಧ್ಯ ಮಾಡಬಹುದಾದ ಧರ್ಮಗಳೆಂದರೆ ಆಯಾ ದೇಶಗಳ ಸಂವಿಧಾನಗಳು,
ಅಂದರೆ ನಿಜವಾದ ದೇವರುಗಳು ಮತ್ತು ಧರ್ಮ
ಆಯಾ ದೇಶದ ಮುಖ್ಯಸ್ಥರು ಮತ್ತು ಸಂವಿಧಾನ,
ಬಹುಶಃ ಇಂದಿನ ವಾಸ್ತವ ಇದೇ,
ಉಳಿದದ್ದು ಭ್ರಮೆ ಮತ್ತು ನಂಬಿಕೆ ಮಾತ್ರ,
ಸರ್ವಶಕ್ತ, ನಿನಗೇ
ಅಂಜಿಕೆಯಾದರೆ ನಮ್ಮಂತ ಹುಲುಮಾನವರ ಗತಿಯೇನು,
ನಿನ್ನನ್ನು ಪ್ರಶ್ನಿಸಿದಾಗ ಉತ್ತರಿಸುವವರು ಇನ್ಯಾರೋ,
ಭಯಪಡಿಸುವವರು ಇನ್ಯಾರೋ,
ತರ್ಕ ಬೇಡ, ಚರ್ಚೆ ಬೇಡ, ಬುದ್ದಿಯ ಪ್ರದರ್ಶನ ಬೇಡ,
ಶುದ್ದನೋ, ಅಶುದ್ಧನೋ, ಪಾಪಿಯೋ ಗೊತ್ತಿಲ್ಲ ನನಗೆ ನಾನೇನೆಂದು,
ಕಾಣಿಸಿಕೋ ನನಗೊಮ್ಮೆ, ಅರ್ಪಿಸಿಕೊಳ್ಳುತ್ತೇನೆ ನನ್ನನ್ನು ನಿನಗೊಮ್ಮೆ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…..
9844013068…….








