ವಿಜಯ ದರ್ಪಣ ನ್ಯೂಸ್…..
ವಿಜಯಪುರ ಪುರಸಭೆ 29.50 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದ ಭವ್ಯ ಮಹೇಶ್

ವಿಜಯಪುರ ದೇವನಹಳ್ಳಿ ತಾಲ್ಲೂಕು: ಸತತ ಎರಡು ಬಾರಿ ಪುರಸಭೆಯ ಬಜೆಟ್ ಮಂಡನೆಯ ದಿನಾಂಕವನ್ನು ಮುಂದೂಡಿದ್ದ ಪುರಸಭೆಯ ಅಧ್ಯಕ್ಷೆ ಭವ್ಯ ಮಹೇಶ್ ಅವರು, ಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿ 2026-27 ನೇ ಸಾಲಿನ ಬಜೆಟ್ ಅನ್ನು ಮಂಡಿಸಿದರು.
2026-27 ನೇ ಆರ್ಥಿಕ ವರ್ಷದಲ್ಲಿ ಬಜೆಟ್ ನ ಗಾತ್ರ 61,52,85,212 ರೂ. ಮಂಡಿಸಿದ್ದು, 61,23,35,000 ರೂ. ಖರ್ಚು ಮಾಡಲು ಅಂದಾಜಿಸಿದ್ದು, 29,50,212 ರೂ. ಉಳಿತಾಯ ಮಾಡಲಾಗಿದೆ ಎಂದು ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಅವರು ಹೇಳಿದರು.
ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ 6 ಕೋಟಿ ರೂ, ಪೀಠೋಪಕರಣಗಳಿಗೆ 15 ಲಕ್ಷ ರೂ, ಸ್ವಾಗತ ಕಮಾನು, ತಡೆಗೋಡೆಗಳ ನಿರ್ಮಾಣ, ರಸ್ತೆಬದಿ ಮಾರ್ಗ ಸೂಚಿಫಲಕಗಳ ಅಳವಡಿಕೆ ಹಾಗೂ ಸಿ.ಸಿ.ಕ್ಯಾಮಾರಾಗಳ ಅಳವಡಿಕೆಗೆ 15 ಲಕ್ಷ ರೂ, ಪಾದಾಚಾರಿಗಳ ರಸ್ತೆ, ಚರಂಡಿಗಳ ಅಭಿವೃದ್ಧಿಗೆ 1.30 ಕೋಟಿ ರೂ., ಬೀದಿದೀಪಗಳ ಕಾಮಗಾರಿಗಾಗಿ 8 ಲಕ್ಷ ರೂ, ಮಳೆ ನೀರಿನ ಚರಂಡಿ ಕಾಮಗಾರಿಗೆ 30 ಲಕ್ಷ ರೂ, ಎಂದು ತಿಳಿಸಿದರು.
ಸಾರ್ವಜನಿಕರ ಶೌಚಾಲಯಗಳ ನಿರ್ಮಾಣಕ್ಕೆ 25 ಲಕ್ಷ ರೂ, ಸ್ಮಶಾನ ಅಭಿವೃದ್ಧಿಗೆ 25 ಲಕ್ಷ ರೂ, ಘನತ್ಯಾಜ್ಯ ವಸ್ತು ನಿರ್ವಹಣೆಗೆ 50 ಲಕ್ಷ ರೂ, ನೀರು ಸರಬರಾಜು ಕಟ್ಟಡಗಳ ನಿರ್ಮಾಣ, ಯಂತ್ರೋಪಕರಣಗಳ ಖರೀದಿಗಾಗಿ 1.25 ಕೋಟಿ ರೂ, ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ ರೂ, ಪಾರ್ಕ್ ಅಭಿವೃದ್ಧಿಗೆ 20 ಲಕ್ಷ ರೂ, ಎಸ್.ಸಿ. ಎಸ್.ಟಿ. ಓಬಿಸಿ, ಅಂಗಲವಿಕಲ ಅಭಿವೃದ್ಧಿಗಾಗಿ 10 ಲಕ್ಷ ರೂ, ಅಧ್ಯಯನ ಪ್ರವಾಸ ಹಾಗೂ ಸದಸ್ಯರ ಗೌರವಧನಕ್ಕಾಗಿ 45 ಲಕ್ಷ ರೂ. ಎಂದು ಹೇಳಿದರು.
ಎಸ್.ಎಫ್.ಸಿ.ಯಡಿ ಬೀದಿದೀಪಗಳ ಶುಲ್ಕ ಪಾವತಿಗೆ 1.50 ಕೋಟಿ ರೂ, ಎಸ್.ಎಫ್.ಸಿ ನೀರು ಸರಬರಾಜು 4 ಕೋಟಿ ರೂ, ಬೀದಿನಾಯಿಗಳ ನಿಯಂತ್ರಣಕ್ಕಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ 30 ಲಕ್ಷ ರೂ, ಮುಕ್ತಿ ವಾಹನ ಖರೀದಿಸಲು 15 ಲಕ್ಷ ರೂ, ಪುರಸಭೆಗೆ ಸೇರಿದ ಕಟ್ಟಡಗಳು, ರಸ್ತೆಗಳು, ಶೌಚಾಲಯಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ದುರಸ್ತಿಗಾಗಿ 4.2 ಕೋಟಿ ರೂ. ಮೀಸಲಿಡಲಾಗಿದೆ ಎಂದು ಬಜೆಟ್ ನಲ್ಲಿ ಮೀಸಲಿಡಲಾಗಿದೆ ಎಂದರು.
ಪುರಸಭೆಗೆ ಆದಾಯದ ಮೂಲಗಳು: ಆಸ್ತಿ ತೆರಿಗೆ, ದಂಡ ವಸೂಲಿಯಿಂದ 2,24,69,000 ರೂ, ಮಳಿಗೆಗಳ ಬಾಡಿಗೆ 40,38,972 ರೂ, ಕಟ್ಟಡ ಪರವಾನಗಿ ಶುಲ್ಕಗಳು, ಸುಧಾರಣೆ ಶುಲ್ಕಗಳು ಮತ್ತು ಅಭಿವೃದ್ಧಿ ಶುಲ್ಕಗಳು 25 ಲಕ್ಷ ರೂ, ಉದ್ದಿಮೆ ಪರವಾನಿಗೆ ಶುಲ್ಕಗಳು 10 ಲಕ್ಷ ರೂ, ನೀರಿನ ಶುಲ್ಕಗಳು, ಸಕ್ರಮೀಕರಣ ಹಾಗೂ ಸಂಪರ್ಕ ಶುಲ್ಕಗಳು 53.6 ಲಕ್ಷ ರೂ, ಘನ ತಾಜ್ಯ ನಿರ್ವಹಣಾ ಶುಲ್ಕಗಳು 5 ಲಕ್ಷ ರೂ, ರಸ್ತೆ ಅಗೆತ ಶುಲ್ಕಗಳು 10 ಲಕ್ಷ ರೂ, ನೆಲ ಬಾಡಿಗೆ, ವಾಹನ ನಿಲುಗಡೆ, ಮಾರುಕಟ್ಟೆ, ಜಲ್ಲಿ ಕಲ್ಲು ಮತ್ತು ಮರಳು, ವಾರದ ಸಂತೆ ಇತರೆ ಶುಲ್ಕಗಳು 13.50 ಲಕ್ಷ ರೂ, ಅನುಪಯುಕ್ತ ವಸ್ತುಗಳ ಮಾರಾಟ ಶುಲ್ಕಗಳು 5 ಲಕ್ಷ ರೂ, ಖಾತೆ ಬದಲಾವಣೆ ಶುಲ್ಕ, ಖಾತ ನಕಲು ಪ್ರತಿಗಳ ಶುಲ್ಕಗಳು 20 ಲಕ್ಷ ರೂ, ಬ್ಯಾಂಕ್ ಖಾತೆಗಳಿಂದ ಬಂದ ಬಡ್ಡಿ 5 ಲಕ್ಷ ರೂ, ಇತರೆ ಶುಲ್ಕಗಳಿಂದ 46,58,884 ಲಕ್ಷ ರೂ, ಆದಾಯ ಗಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸುದ್ದಿಗಾರರೊಂದಗೆ ಮಾತನಾಡಿದ ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಅವರು, ಎಲ್ಲಾ ಸದಸ್ಯರ ಸಹಕಾರದಿಂದ ಉಳಿತಾಯ ಬಜೆಟ್ ಮಂಡನೆ ಮಾಡಿದ್ದೇವೆ. ಪಟ್ಟಣದ ಅಭಿವೃದ್ಧಿಯಲ್ಲಿ, ಸಾರ್ವಜನಿಕರ ಸಂಪೂರ್ಣ ಸಹಕಾರ ಬಹಳ ಅಗತ್ಯವಾಗಿದೆ. ಕಾಲ ಕಾಲಕ್ಕೆ ಆಸ್ತಿಗಳ ತೆರಿಗೆಯನ್ನು ಪಾವತಿಸುವ ಮೂಲಕ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಸದಸ್ಯರಾದ ಎಂ.ಸತೀಶ್ ಕುಮಾರ್, ಎಂ.ಕೇಶವಪ್ಪ, ವಿ.ನಂದಕುಮಾರ್, ಸಿ.ಎಂ.ರಾಮು, ಎ.ಆರ್.ಹನೀಪುಲ್ಲಾ , ವಿಮಲಾ ಬಸವರಾಜ್, ಸೈಯದ್ ಎಕ್ಬಾಲ್, ಎಂ.ರಾಜಣ್ಣ, ಶಿಲ್ಪಾಅಜಿತ್, ನಾರಾಯಣಸ್ವಾಮಿ, ಆಯಿಷಾಸೈಪುಲ್ಲಾ, ಸಲ್ಮಾಖಾನಂ, ಮಂಜುಳಮ್ಮಮುನಿರಾಜು, ಸುಷ್ಮಾಮಹೇಶ್, ಶ್ರೀರಾಮಣ್ಣ ಹಾಗೂ ಅಧಿಕಾರಿಗಳು ಇದ್ದರು.
ವಿಳಂಬದ ಕುರಿತು ಕಾರಣ ಕೇಳಿದ ಸದಸ್ಯ
ಬಜೆಟ್ ಮಂಡನೆಗೆ 07 ಮಂದಿ ಜೆಡಿಎಸ್ ಅನರ್ಹ ಸದಸ್ಯರು ಹೊರತು ಪಡಿಸಿ ಎಲ್ಲ ಸದಸ್ಯರು ಭಾಗಿಯಾಗಿದ್ದರು. ಆರಂಭದಲ್ಲಿ ಬಜೆಟ್ ಮಂಡನೆಯ ವಿಳಂಬದ ಕುರಿತು ಎಲ್ಲ ಸದಸ್ಯರಿಗೆ ಮಾಹಿತಿ ಒದಗಿಸುವಂತೆ ಸದಸ್ಯ ಹನೀಫುಲ್ಲಾ ಅವರು ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್‍ಗೆ ಅವರನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಅವರು, ಅನಾರೋಗ್ಯ ಸಮಸ್ಯೆ ಕಾರಣದಿಂದ ಬಜೆಟ್ ಮಂಡನೆಯ ದಿನಾಂಕವನ್ನು ಮುಂದೂಡಲಾಯಿತೇ ವಿನಾಃ ಬೇರೆ ಯಾವುದೇ ಕಾರಣವಿಲ್ಲ ಎಂದು ಸಮಜಾಯಿಷಿ ನೀಡಿದರು.
ಹೊರ ನಡೆದ ಸದಸ್ಯರ ವಿರುದ್ಧ ಆಕ್ಷೇಪ
ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಪುರಸಭೆ ಸಭಾಂಗಣದಲ್ಲಿ ಬಜೆಟ್ ಮಂಡನೆಯಾಗುತ್ತಿದ್ದಂತೆ ಕೆಲ ಸದಸ್ಯರು ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸದೇ ಸಭೆಯಿಂದ ಹೊರ ನಡೆದ ಪ್ರಸಂಗ ನಡೆಯಿತು.
ಪುರಸಭೆ ಅಧ್ಯಕ್ಷರಿಗೆ ಬಜೆಟ್ ಮಂಡನೆಯ ಒಪ್ಪಿಗೆ ಸೂಚಿಸಿ ಸದಸ್ಯರಾದ ವಿ.ನಂದಕುಮಾರ್, ಸೈಯದ್ ಎಕ್ಬಾಲ್, ಎಂ.ರಾಜಣ್ಣ, ಎಂ.ನಾರಾಯಣಸ್ವಾಮಿ, ಸಲ್ಮಾಖಾನಂ ಅವರು ಸಭೆಯಿಂದ ಹೊರ ನಡೆದರು.
ಇದಕ್ಕೆ ಕೆಲ ಸದಸ್ಯರು ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸದೇ ಹೋದ ಸದಸ್ಯರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.










