ವಿಜಯ ದರ್ಪಣ ನ್ಯೂಸ್…..
ಅದ್ದೂರಿಯಾಗಿ ನಡೆದ ಸುಗಟೂರು ಶ್ರೀಕಲ್ಲೇಶ್ವರಸ್ವಾಮಿ, ಶ್ರೀಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ

ಶಿಡ್ಲಘಟ್ಟ : ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿರುವ ಇಂತಹ ಕಾಲದಲ್ಲಿ ಜಾತ್ರೆ, ಹಬ್ಬಗಳ ಮೂಲಕ ಯುವಪೀಳಿಗೆಗೆ ಭಕ್ತಿ, ಅಧ್ಯಾತ್ಮ ಮತ್ತು ಧಾರ್ಮಿಕ ಮೌಲ್ಯಗಳನ್ನು ತಿಳಿಸಬೇಕು ಎಂದು
ಜಿಲ್ಲಾ ಉಸ್ತುವಾರಿ ಸಚಿವ ಹಾಗುವಉನ್ನತಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ತಾಲ್ಲೂಕಿನ ಇತಿಹಾಸಪ್ರಸಿದ್ಧ ಸುಗಟೂರು ಶ್ರೀ ಕಲ್ಲೇಶ್ವರಸ್ವಾಮಿ, ಶ್ರೀಸಿದ್ಧರಾಮೆಶ್ವರಸ್ವಾಮಿ ಜಾತ್ರಾಮಹೋತ್ಸವವು ಕಳೆದೆರಡು ದಿನಗಳಿಂದ ಅದ್ದೂರಿಯಾಗಿ ಜರುಗಿತು ಆ ಪ್ರಯುಕ್ತ ರಾಜ್ಯವಲ್ಲದೇ ಇತರೆ ರಾಜ್ಯದ ವಿವಿಧ ಭಾಗಗಳಿಂದ ಕುಟುಂಬ, ಬಂಧುಗಳ ಸಮೇತ ಆಗಮಿಸಿದ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಗ್ರಾಮದ ವಿವಿಧ ಮನೆಗಳಲ್ಲಿ ಸ್ಥಳಾವಕಾಶ ಪಡೆದು ಅಚರಣೆ ಮಾಡಿದರು.
ಇಂತಹ ಆಚರಣೆಗಳು ಮುಂದಿನ ಪೀಳಿಗೆಗೆ ಆದರ್ಶವಾಗಿದ್ದು ನಮ್ಮ ಆಚರಣೆ, ಸಂಸ್ಕೃತಿಯು ಮುಂದಿನ ಪೀಳಿಗೆಯು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ನೂರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಕಲ್ಲೇಶ್ವರಸ್ವಾಮಿ ಜಾತ್ರೆಯು ಹೊರಗಿನ ಭಕ್ತರ ಮೂಲಕ ನಡೆದರೂ ಈ ಗ್ರಾಮದ ಜನತೆಯು ಮನೆಗಳಲ್ಲಿ ಸ್ಥಳವನ್ನು ಅವಕಾಶ ಒದಗಿಸಿ ಸಹಕಾರ ನೀಡುತ್ತಿರುವುದನ್ನು ಅಭಿನಂದಿಸಬೇಕಿದೆ ಎಂದರು.

ಇದೇ ವೇಳೆ ಹೊಳೆಯ ಪರಿಷೆ ಪ್ರಯುಕ್ತ ಬಸವಣ್ಣನನ್ನು ಅಲಂಕರಿಸಿ ಗ್ರಾಮದಲ್ಲಿ ವಾದ್ಯಗಳೊಂದಿಗೆ ಪಟದಕುಣಿತ, ವೀರಗಾಸೆ, ನಂದಿಧ್ವಜ ಕುಣಿತ, ಗೊರವನ ಕುಣಿತ ಮುಂತಾದ ವಿವಿಧ ಜಾನಪದ ಕಲಾತಂಡಗಳೊಂದಿಗೆ, ಚಾಟಿಏಟು ಪವಾಡ, ತಲೆಯ ಮೇಲೆ ತೆಂಗಿನಕಾಯಿ ಹೊಡೆಯುವ ಪವಾಡಗಳು ಜರುಗಿದವು. ಆನೂಚಾನವಾಗಿ ಜಾರಿಯಲ್ಲಿರುವಂತೆ ಶ್ರೀ ಕಲ್ಲೇಶ್ವರಸ್ವಾಮಿ, ಶ್ರೀಸಿದ್ಧರಾಮೇಶ್ವರಸ್ವಾಮಿಯವರ ಆಭರಣಗಳನ್ನು ಇಡಲಾದ ಪೆಟ್ಟಿಗೆಗಳನ್ನು ಹೊತ್ತು ಮೆರವಣಿಗೆ ನಡೆಸಲಾಯಿತು.
ಭಧ್ರನಕೆರೆ ಕೋಡಿಭಾಗ, ಹೊಸಪೇಟೆ, ಎದ್ದಲತಿಪ್ಪೇನಹಳ್ಳಿ, ಶ್ರೀಬಸವಣ್ಣದೇವಾಲಯದ ಮುಂಭಾಗ, ಇನ್ನಿತರ ಕಡೆ ತೆಂಗಿನಕಾಯಿ ಒಡೆಯುವ ಪವಾಡ ನಡೆಯಿತು ,ಆ ಪ್ರಯುಕ್ತ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜಾಕಾರ್ಯಕ್ರಮಗಳು ಜರುಗಿದವು ಭಕ್ತರಿಂದ ದೆವರಿಗೆ ದೀಪಾರತಿ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ, ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್, ತಹಶಿಲ್ದಾರ್ ಗಗನಸಿಂಧು, ಮುಖಂಡ ಗರುಡಾಚಾರ್ ಪಾಳ್ಯದ ಅನಂತರಾಮಯ್ಯ, ಅಧಿಕಾರಿಗಳು ಹಾಗು ಭಕ್ತಾದಿಗಳು ಪಾಲ್ಗೊಂಡಿದ್ದರು.










