ವಿಜಯ ದರ್ಪಣ ನ್ಯೂಸ್….
ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿ…….

( ಲೇಖನ ಸ್ವಲ್ಪ ದೀರ್ಘವಾಗಿದೆ. ವಿಷಯದ ಮಹತ್ವದ ದೃಷ್ಟಿಯಿಂದ ಹೆಚ್ಚು ವಿವರಣೆ ನೀಡಲಾಗಿದೆ. )
ತಮಿಳುನಾಡು ಚುನಾವಣಾ ಫಲಿತಾಂಶದ ನಂತರ, ಅಲ್ಲಿನ ಜನಪ್ರಿಯ ಸಿನಿಮಾ ನಟ ವಿಜಯ್ ಅವರ ಜಯದ ನಂತರ, ಕರ್ನಾಟಕದಲ್ಲೂ ಒಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ಪ್ರಾದೇಶಿಕ ಪಕ್ಷವೊಂದು ಯಶಸ್ವಿಯಾಗಬೇಕು ಎಂಬ ಚರ್ಚೆ ಸಮಾನ ಮನಸ್ಕರ ನಡುವೆ ತೀವ್ರವಾಗಿ ನಡೆಯುತ್ತಿದೆ. ಆ ರೀತಿಯ ರಾಜಕೀಯ ಯಶಸ್ಸು ಸಿಕ್ಕರೆ ಕರ್ನಾಟಕದ ಅಭಿವೃದ್ಧಿ, ಸ್ವಾಭಿಮಾನ, ಅಸ್ಮಿತೆಯ ದೃಷ್ಟಿಯಿಂದ ತುಂಬಾ ಒಳ್ಳೆಯ ಬೆಳವಣಿಗೆ ಎಂದು ಅನೇಕರು ಭಾವಿಸಿದ್ದಾರೆ. ಆ ಸಾಧ್ಯತೆ ಎಷ್ಟು ?
ಪರ್ಯಾಯ ರಾಜಕೀಯ ಶಕ್ತಿಯ ನಿರೀಕ್ಷೆಯಲ್ಲಿ ಕನ್ನಡಿಗರು…….
ಇತ್ತೀಚಿನ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಪಕ್ಷವೊಂದರ ಅವಶ್ಯಕತೆಯ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೊರತುಪಡಿಸಿದ, ಪ್ರಾದೇಶಿಕ ಹಿತಾಸಕ್ತಿಯನ್ನು ಕಾಪಾಡುವ, ಕರ್ನಾಟಕ ಮತ್ತು ಕನ್ನಡದ ಅಸ್ಮಿತೆಯನ್ನು ಉಳಿಸುವ ಮತ್ತೊಂದು ರಾಜಕೀಯ ಪಕ್ಷ ಬೇಕು ಎಂಬ ಕೂಗು ಬಹಳ ದಿನಗಳಿಂದಲೂ ಕೇಳಿ ಬರುತ್ತಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಬಗ್ಗೆ ಒಂದು ಚಿಂತನೆ…….
ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಯಶಸ್ಸಿನ ಸಾಧ್ಯತೆ ಎಷ್ಟಿದೆ ?
ಬಹಳ ಜನ ರಾಜಕೀಯಾಸಕ್ತರ ಪ್ರಶ್ನೆ ಇದು. ಬದಲಾವಣೆ ಬಯಸುವ ಮನಸ್ಸುಗಳ ಕನಸು ಸಹ ಇದು. ಈ ವ್ಯವಸ್ಥೆಯ ಭ್ರಷ್ಟತೆಗೆ ರೋಸಿ ಹೋದ ಜನರ ಕುತೂಹಲವೂ ಇದೇ ಆಗಿದೆ……
ಅದನ್ನು ಪರಿಶೀಲಿಸುವ ಮೊದಲು 1950 ರಿಂದ ಇಂದಿನವರೆಗೆ ಕರ್ನಾಟಕದ ರಾಜಕೀಯ ಹೋರಾಟದ ಇತಿಹಾಸದ ಒಂದು ಸಂಕ್ಷಿಪ್ತ ಅವಲೋಕನ….
1950 ರಿಂದ 1983 ರ ವರೆಗೂ ಅಂದರೆ ಆರ್. ಗುಂಡೂರಾವ್ ಮುಖ್ಯಮಂತ್ರಿಯವರೆಗೆ ಕಾಂಗ್ರೆಸ್ ಪಕ್ಷದ್ದೇ ಆಡಳಿತ. ಕಮ್ಯುನಿಸ್ಟ್ ಮತ್ತು ಪ್ರಜಾ ಸೋಷಿಯಲಿಸ್ಟ್ ಪಕ್ಷಗಳು ಪ್ರಾರಂಭದ ವಿರೋಧ ಪಕ್ಷಗಳು. ನಂತರದಲ್ಲಿ ಜನತಾ ಪಕ್ಷ ಮುಖ್ಯ ವಿರೋಧ ಪಕ್ಷವಾಯಿತು.
1983 ರಲ್ಲಿ ಮೊದಲ ಬಾರಿಗೆ ಜನತಾ ಪರಿವಾರವೆಂದು ಗುರುತಿಸಲ್ಪಡುವ ಈಗಿನ ಜನತಾದಳ ಆಡಳಿತ ಪಕ್ಷವಾಗಿ ಮತ್ತು ನಂತರದ ವರ್ಷಗಳಲ್ಲಿ ವಿರೋಧ ಪಕ್ಷವಾಗಿ ಅಧಿಕಾರದ ಬದಲಾವಣೆ ಆಗಿ ಅದು ಈಗಲೂ ಅಸ್ತಿತ್ವದಲ್ಲಿದೆ.
ಈ ಮಧ್ಯೆ ಜನಸಂಘ ಎಂಬ ಪಕ್ಷ ಭಾರತೀಯ ಜನತಾ ಪಕ್ಷವಾಗಿ ನಿಧಾನವಾಗಿ ಬೇರೂರಿ, ಪ್ರಬಲ ವಿರೋಧ ಪಕ್ಷವಾಗಿ, ಸಮ್ಮಿಶ್ರ ಸರ್ಕಾರದ ಭಾಗವಾಗಿ ನಂತರ ಮುಖ್ಯ ವಿರೋಧ ಪಕ್ಷ ಮತ್ತು ಆಗಾಗ ಆಡಳಿತ ಪಕ್ಷವಾಗಿ ಹೊರಹೊಮ್ಮಿದೆ…..
ಈಗಿನ ವಾಸ್ತವ ಸನ್ನಿವೇಶವೆಂದರೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪ್ರಬಲ ಪಕ್ಷಗಳಾದರೆ ಜನತಾದಳ ಮೂರನೆಯ ಶಕ್ತಿಯಾಗಿದೆ. ಉಳಿದ ಯಾವುದೇ ಪಕ್ಷಗಳು ಪ್ರಮುಖ ರಾಜಕೀಯ ಮಹತ್ವ ಪಡೆದಿಲ್ಲ…..
ಇದನ್ನು ಹೊರತುಪಡಿಸಿ ಪರ್ಯಾಯ ಶಕ್ತಿಗಳ ಪ್ರಯತ್ನಗಳ ಬಗ್ಗೆಯೂ ಒಂದಷ್ಟು ಮಾಹಿತಿ …..
ಕಾರ್ಮಿಕ ಹೋರಾಟವನ್ನೇ ಮುಖ್ಯವಾಗಿ ಗುರಿಯಾಗಿಸಿಕೊಂಡಿದ್ದ ಕಮ್ಯೂನಿಸ್ಟ್ ಪಕ್ಷಗಳು ಮತ್ತು ಅದರ ನಾಯಕರು ಪ್ರಾರಂಭದಲ್ಲಿ ಪ್ರಬಲರಾಗಿದ್ದು ಕಾರ್ಮಿಕರ ಧ್ವನಿಯಾಗಿ ಹೋರಾಟಗಳನ್ನು ರೂಪಿಸಿದರು. ಅವರೇ ಮುಖ್ಯ ವಿರೋಧ ಪಕ್ಷವಾಗಿದ್ದರು. ಆದರೆ ನಂತರದಲ್ಲಿ ದುರ್ಬಲವಾಗುತ್ತಾ ಸಾಗಿ ಈಗ ರಾಜಕೀಯವಾಗಿ ಕರ್ನಾಟಕದಲ್ಲಿ ಅಂತಹ ಮಹತ್ವ ಪಡೆದಿಲ್ಲ. ಶಾಂತವೇರಿ ಗೋಪಾಲಗೌಡರ ಸಮಯದಲ್ಲಿ ಸಮಾಜವಾದಿ ಪಕ್ಷ, ಪ್ರಜಾ ಸೋಷಲಿಸ್ಟ್ ಪಕ್ಷ ಪ್ರತಿಭಟನೆ, ಹೋರಾಟ ಮತ್ತು ವಿಧಾನಸಭಾ ಅಧಿವೇಶನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದರೂ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯುವಷ್ಟು ಬಲಶಾಲಿಯಾಗಿರಲಿಲ್ಲ.
ಕಾಂಗ್ರೆಸ್ ಪಕ್ಷದಿಂದ ವಿಭಜನೆ ಹೊಂದಿ ಒಂದು ಪರ್ಯಾಯ ಶಕ್ತಿಯ ಪ್ರಯತ್ನ ಮಾಡಿದ ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರು ಸಹ ಯಶಸ್ವಿಯಾಗಲಿಲ್ಲ…..
ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದ ದೇವರಾಜ ಅರಸು ಒಂದಷ್ಟು ಪರಿಣಾಮ ಬೀರಿ ಮುಂದೆ ಅದು ಕ್ರಾಂತಿರಂಗದ ರೂಪ ಪಡೆದು ಮೊದಲ ಕಾಂಗ್ರೆಸ್ಸೇತರ ಪಕ್ಷ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಅದೇ ಜನತಾ ಪರಿವಾರ ಎಂದು ಕರೆಯಲಾಗುತ್ತಿದ್ದ ಈಗಿನ ಜನತಾದಳ……
ಕಾಂಗ್ರೆಸ್ ಪಕ್ಷದಿಂದ ಸಿಡಿದ ಎಸ್. ಬಂಗಾರಪ್ಪ, ಜನತಾ ಪರಿವಾರದಿಂದ ಸಿಡಿದ ದೇವೇಗೌಡ, ಭಾರತೀಯ ಜನತಾ ಪಕ್ಷದಿಂದ ಸಿಡಿದ ಯಡಿಯೂರಪ್ಪ, ಶ್ರೀರಾಮಲು,
ಜನತಾ ದಳದಿಂದ ಸಿಡಿದ ಸಿದ್ದರಾಮಯ್ಯ ಯಾವುದೇ ಪರ್ಯಾಯ ಒದಗಿಸುವಲ್ಲಿ ವಿಫಲರಾದರು. ಸಣ್ಣ ಮಟ್ಟದ ಯಶಸ್ಸನ್ನು ಮಾತ್ರ ಪಡೆದರು. ಅಧಿಕಾರದಲ್ಲಿ ಇದ್ದ ಪಕ್ಷಗಳನ್ನು ಸೋಲಿಸುವಲ್ಲಿ ಮಾತ್ರ ಯಶಸ್ವಿಯಾದರು.
ಇದನ್ನು ಹೊರತುಪಡಿಸಿ ಇನ್ನೂ ಕೆಲವು ಪ್ರಯತ್ನಗಳು ನಡೆದವು. ರೈತ ಹೋರಾಟವನ್ನು ಹುಟ್ಟುಹಾಕಿ ಅದನ್ನು ರಾಜಕೀಯಗೊಳಿಸಿದ ಪ್ರೊಫೆಸರ್ ನಂಜುಂಡ ಸ್ವಾಮಿಯವರ ರೈತ ಸಂಘ, ಸಾಹಿತಿ, ಪತ್ರಕರ್ತ ಪಿ. ಲಂಕೇಶ್ ಅವರ ಪ್ರಗತಿರಂಗ, ವಾಟಾಳ್ ನಾಗರಾಜ್ ಅವರ ಕನ್ನಡ ಚಳವಳಿ ಪಕ್ಷ, ವಿಜಯ್ ಮಲ್ಯ ಅವರ ಜನತಾ ಪಕ್ಷ, ವಿಜಯ್ ಸಂಕೇಶ್ವರ ಅವರ ಕನ್ನಡ ನಾಡು ಪಕ್ಷ, ಮುಸ್ಲಿಂ ಲೀಗ್, ಮಹದಾಯಿ ಹೋರಾಟ ಸಮಿತಿಯ ರೈತ ಪಕ್ಷಗಳು ಯಾವುದೇ ದೊಡ್ಡ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಲಿಲ್ಲ….
ಜೊತೆಗೆ ಬಿಎಸ್ಪಿ, ಸಮಾಜವಾದಿ ಪಕ್ಷ, ಸಂಯುಕ್ತ ಜನತಾದಳ, ಪ್ರಮೋದ್ ಮುತಾಲಿಕ್ ಅವರ ಶ್ರೀರಾಮ ಸೇನೆ, ಶರದ್ ಪವಾರ್ ಅವರ ಎನ್ಸಿಪಿ, ಮುಸ್ಲಿಂ ಸಂಘಟನೆಗಳ ಪಿಎಫ್ಐ, ಎಸ್ಡಿಪಿಐ, ದೇವನೂರು ಮಹಾದೇವ ಮುಂತಾದವರ ಇತ್ತೀಚೆಗಷ್ಟೇ ಯೋಗೇಂದ್ರ ಯಾದವ್ ಅವರ ಸ್ವರಾಜ್ ಪಕ್ಷದಲ್ಲಿ ವಿಲೀನವಾದ ಸರ್ವೋದಯ, ಭಾರತೀಯ ನೀತಿ ಪಾರ್ಟಿ, ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ಎಂ. ವೆಂಕಟಸ್ವಾಮಿ ಅವರ ಸಮತಾ ಸೈನಿಕ ದಳ, ರವಿಕೃಷ್ಣಾರೆಡ್ಡಿಯವರ ಕರ್ನಾಟಕ ರಾಷ್ಟ್ರ ಸಮಿತಿ, ಉಪೇಂದ್ರ ಅವರ ಪ್ರಜಾಕೀಯ ಎಲ್ಲವೂ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿವೆ….
ಇಷ್ಟು ಇತಿಹಾಸವಿರುವ ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಪರ್ಯಾಯ ಶಕ್ತಿಗೆ ಇರುವ ಅವಕಾಶವಾದರೂ ಎಷ್ಟು ? ( ಕೆಲವು ಮಾಹಿತಿ ಬಿಟ್ಟು ಹೋಗಿದ್ದರೆ ಕ್ಷಮಿಸಿ. ಅದನ್ನು ನೆನಪಿಸಿದರೆ ಸ್ವಾಗತ )
ಯಾರು ಏನೇ ಹೇಳಿದರು, ರೈತ ಸಂಘಗಳು, ದಲಿತ ಸಂಘಟನೆಗಳು, ಕನ್ನಡ ಸಂಘಟನೆಗಳು, ಮಹಿಳಾ ಸಂಘಟನೆಗಳು, ಅಹಿಂದ ಸಂಘಟನೆ ಎಷ್ಟೇ ವ್ಯವಸ್ಥಿತವಾಗಿ ಹೋರಾಟ ಮಾಡುತ್ತಿದ್ದರೂ ಸಹ ಚುನಾವಣಾ ರಾಜಕೀಯದಲ್ಲಿ ಜನರ ಬಹುಮತಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಹೋರಾಟಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವಲ್ಲಿ ಈ ಸಂಘಟನೆಗಳು ಯಶಸ್ವಿಯಾದರೂ ಜನರು ಮಾತ್ರ ಚುನಾವಣೆಯಲ್ಲಿ ಮತವನ್ನು ಸಾಂಪ್ರದಾಯಿಕ ಪಕ್ಷಗಳಿಗೇ ಆಧ್ಯತೆ ನೀಡುತ್ತಾರೆ. ಬಹುಶಃ ಬಡತನದ ಅನಿವಾರ್ಯತೆ, ಜಾತೀಯತೆ ಮತ್ತು ಅಜ್ಞಾನ ಕಾರಣವಾಗಿರಬಹುದು…..
ಕರ್ನಾಟಕದ ರಾಜಕೀಯ ಬಹುತೇಕ ಜಾತಿ ಆಧಾರದಲ್ಲಿ ವಿಭಜನೆಯಾಗಿ ಅದು ಚುನಾವಣಾ ವ್ಯವಸ್ಥೆಯಲ್ಲಿ ಬಲವಾಗಿ ಬೇರೂರಿದೆ ಎಂಬುದು ಸಹ ಅಷ್ಟೇ ಸತ್ಯ…..
ಸಾಮಾನ್ಯವಾಗಿ ಒಕ್ಕಲಿಗ ಮತಗಳು ಜನತಾದಳ ಪಕ್ಷದಲ್ಲೂ, ವೀರಶೈವ, ಬ್ರಾಹ್ಮಣ, ಜೈನ ಮತಗಳು ಬಿಜೆಪಿ ಪಕ್ಷದಲ್ಲೂ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತಗಳು ಹೆಚ್ಚು ಕಡಿಮೆ ಕಾಂಗ್ರೆಸ್ ಪಕ್ಷದಲ್ಲೂ ಐಕ್ಯಗೊಂಡಿವೆ. ಇತ್ತೀಚೆಗೆ ಕೆಲವು ಬದಲಾವಣೆಗಳು ಸಹ ಆಗುತ್ತಿವೆ ಎಂಬುದನ್ನು ಸಹ ಪರಿಗಣಿಸಬೇಕು….
ಈಗ ಪರ್ಯಾಯ ರಾಜಕೀಯ ಶಕ್ತಿ ಇದನ್ನು ಮೀರಿ ಬೆಳೆಯಬೇಕಾಗಿದೆ. ಜೊತೆಗೆ ಸಂಘ ಪರಿವಾರದ ಪ್ರಬಲ ಧರ್ಮ ಮತ್ತು ಸಂಘಟನೆಯ ಶಕ್ತಿ, ಅಂಬೇಡ್ಕರ್ ವಾದದ ಜಾಗೃತ ಮನಸ್ಸುಗಳ ಒಂದು ಶಕ್ತಿ, ಮುಸ್ಲಿಂ ಮತಗಳು ಒಂದೇ ಕಡೆ ಐಕ್ಯವಾಗುವ ಸವಾಲು, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಹೊಸ ಚಿಂತನೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಯುವ ಸಮೂಹ ಎಲ್ಲವನ್ನೂ ಮೆಟ್ಟಿ ನಿಲ್ಲಬೇಕಿದೆ….
ಇದು ಒಂದು ಕಡೆಯಾದರೆ ಸಂಘಟನೆ, ಸಂಪನ್ಮೂಲ, ನಾಯಕತ್ವ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜನರ ಮನಸ್ಸುಗಳನ್ನು ಗೆಲ್ಲುವ ಮಾರ್ಗಗಳೇ ಎವರೆಸ್ಟ್ ಶಿಖರ ಹತ್ತಿದಷ್ಟು ಸವಾಲಿನ ಕೆಲಸ. ಪರ್ಯಾಯ ರಾಜಕೀಯ ಶಕ್ತಿಯ ಪ್ರಾರಂಭಿಸುವಾಗಲೇ ಅನೇಕ ಪ್ರಶ್ನೆಗಳು ಎದುರಾಗತೊಡಗುತ್ತದೆ. ನೀವು ಎಡಪಂಥೀಯರೇ ಬಲಪಂಥೀಯರೇ, ಆಸ್ತಿಕರೇ ನಾಸ್ತಿಕರೇ, ಮೀಸಲಾತಿ ಪರವೇ ಅಥವಾ ವಿರುದ್ದವೇ, ಮಹಿಳಾ ಸ್ವಾತಂತ್ರ್ಯ ನಿಮಗೆ ಒಪ್ಪಿತವೇ, ಮದ್ಯಪಾನದ ಬೆಂಬಲಿಗರೇ ಅಥವಾ ನಿಷೇಧಿಸುವವರೇ, ಜಾತ್ಯಾತೀತರೇ ಅಥವಾ ಹಿಂದುತ್ವವಾದಿಯೇ, ಬಂಡವಾಳಶಾಹಿಗಳೇ ಅಥವಾ ರೈತ ಕಾರ್ಮಿಕರ ಪರ ಒಲವುಳ್ಳವರೇ, ಉಚಿತ ಯೋಜನೆಗಳ ಪರವೇ, ವಿರುದ್ಧವೇ ಹೀಗೆ ಪ್ರತಿಯೊಂದರಲ್ಲೂ ನಿಮ್ಮನ್ನು ಕಾಡತೊಡಗುತ್ತಾರೆ. ಇನ್ನು ನಾಯಕತ್ವ ವಹಿಸುವವರ ವೈಯಕ್ತಿಕ ಬದುಕನ್ನು ಎಂದೋ ಮಾಡಿದ ಸಣ್ಣ ಪುಟ್ಟ ತಪ್ಪುಗಳನ್ನು ಮುಂದು ಮಾಡಿ ಅವರ ನೈತಿಕತೆಯನ್ನೇ ಕುಸಿಯುವಂತೆ ಮಾಡುತ್ತಾರೆ….
ಸ್ಪಷ್ಟವಾಗಿ ಉತ್ತರಿಸಲಾಗದ ಪ್ರಶ್ನೆಗಳನ್ನು ಕೇಳಿ ಬೇಕಂತಲೇ ಇಕ್ಕಟ್ಟಿಗೆ ಸಿಲುಕಿಸುತ್ತಾರೆ…
ಪ್ರಖ್ಯಾತ ಸಿನಿಮಾ ನಟನೋ, ಬಹುಸಂಖ್ಯಾತ ಜಾತಿಯ ವ್ಯಕ್ತಿಯೋ, ಆಗರ್ಭ ಶ್ರೀಮಂತನೋ ಆದರೆ ಒಂದಷ್ಟು ಜನಪ್ರಿಯ ಚಟುವಟಿಕೆ ಮಾಡುವುದು ಸುಲಭ. ಅದೆಲ್ಲವೂ ಇಲ್ಲದೇ ಕೇವಲ ಪ್ರಾಮಾಣಿಕತೆ, ದಕ್ಷತೆ ಮತ್ತು ವಿಚಾರಗಳ ಆಧಾರದ ಮೇಲೆ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವುದು ತುಂಬಾ ತುಂಬಾ ಕಷ್ಟ….
ಹಾಗೆಂದು ನಿರಾಶರಾಗುವ ಅವಶ್ಯಕತೆ ಇಲ್ಲ. ಈಗಿನ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಜನರನ್ನು ಬೇಗ ತಲುಪುವ ಅನುಕೂಲಗಳೂ ಇವೆ. ಹೊಸ ಪ್ರಯೋಗಗಳಿಗೆ ಮಾದರಿಯಾಗಿ ದೇಶದಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗಿವೆ. ಅದರಲ್ಲಿ ಬಹುಮುಖ್ಯ ಉದಾಹರಣೆ ದೆಹಲಿಯ ಅರವಿಂದ್ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ, ಇದೀಗ ವಿಜಯ್ ಅವರ ಟಿವಿಕೆ ಪಕ್ಷ ಮತ್ತು ಇತಿಹಾಸದಲ್ಲಿ ದಾಖಲಾಗಿರುವ ಕೆಲವು ಪಕ್ಷಗಳು……
ನಾಯಕತ್ವದಲ್ಲಿ ಅತ್ಯಂತ ಪ್ರಾಮಾಣಿಕ, ಶುದ್ದ ಮತ್ತು ಅಧಿಕಾರದ ಆಸೆಗಿಂತ ಜನರಿಗೆ ಒಳಿತು ಮಾಡುವ ವ್ಯಕ್ತಿತ್ವವನ್ನು ಹೊಂದಿರುವವರು ಎಂಬ ನಂಬಿಕೆ ಜನರಲ್ಲಿ ಬೆಳೆದರೆ ಅದು ಪರ್ಯಾಯ ರಾಜಕೀಯ ಶಕ್ತಿಯ ಯಶಸ್ಸಿನ ಮೊದಲ ಮೆಟ್ಟಿಲು. ಅಧಿಕಾರಕ್ಕೆ ಬಂದರೇ ಯಾವ ಯಾವ ಕೆಲಸಗಳನ್ನು ಈಗಿನ ವ್ಯವಸ್ಥೆಗಿಂತ ಭಿನ್ನವಾಗಿ ಜನರಿಗೆ ತಲುಪಿಸುತ್ತೇವೆ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರೆ ಅದು ಎರಡನೇ ಮೆಟ್ಟಿಲು. ಈಗಿನ ಸಂದರ್ಭದಲ್ಲಿ ಸಂಘಟನಾತ್ಮಕ ಹೋರಾಟಕ್ಕಿಂತ ಜನ ಸಮೂಹವೇ ಆ ನಾಯಕತ್ವದ ಪರವಾಗಿ ಒಲವು ಹೊಂದಿ, ಒಬ್ಬರಿಂದೊಬ್ಬರಿಗೆ ಮಾತುಗಳ ಮುಖಾಂತರವೇ ಹರಡಿ ಮತಗಳಾಗಿ ಪರಿವರ್ತನೆ ಆಗುವ ಪ್ರಕ್ರಿಯೆಗೆ ಒಳಗಾಗುವಂತೆ ಮಾಡಿದರೆ ಅದು ಮೂರನೇ ಮೆಟ್ಟಿಲು.
ಪರ್ಯಾಯ ರಾಜಕೀಯ ಪಕ್ಷ ಸಾಂಪ್ರದಾಯಿಕ ಪಕ್ಷಗಳಿಗಿಂತ ನಡೆ ನುಡಿಗಳಲ್ಲಿ, ಆಡಳಿತಾತ್ಮಕ ದಕ್ಷತೆಯಲ್ಲಿ, ತನ್ನ ಅಭಿವೃದ್ಧಿಯ ಚಿಂತನೆಗಳಲ್ಲಿ, ಅಧಿಕಾರದ ಹಂಚಿಕೆಯಲ್ಲಿ, ಹಣಕಾಸಿನ ವ್ಯವಹಾರದಲ್ಲಿ, ಎಲ್ಲಕ್ಕಿಂತ ಮುಖ್ಯವಾಗಿ ತಾನು ರೂಪಿಸುವ ಯೋಜನೆಗಳು ಜನರನ್ನು ಹೇಗೆ ಸಮರ್ಪಕವಾಗಿ ತಲುಪುತ್ತವೆ ಎಂಬುದನ್ನು ಸ್ಪಷ್ಟವಾಗಿ ಜನರಿಗೆ ಮನವರಿಕೆ ಮಾಡಿಕೊಟ್ಟರೆ ಅದು ಪ್ರತಿ ಹಳ್ಳಿಗಳನ್ನು ತಲುಪುವಂತಾದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ….
ಹೌದು, ಇದು ಅಕ್ಷರಗಳಲ್ಲಿ ಬರೆದಷ್ಟು ಸುಲಭವಲ್ಲ ಎಂಬ ಅರಿವಿದೆ. ಅಸಾಧ್ಯ ಎಂಬುದೇ ಹೆಚ್ಚು ಸೂಕ್ತ. ಆದರೆ ಅಸಾಧ್ಯವೂ ಸಾಧ್ಯ ಎಂಬುದನ್ನು ಸಹ ಮರೆಯಬಾರದು. ಜನ ವ್ಯವಸ್ಥೆಯ ವಿರುದ್ಧ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಪರ್ಯಾಯ ಆಡಳಿತ ವ್ಯವಸ್ಥೆ ರೂಪಿಸಲು ಇದು ಸೂಕ್ತ ಸಮಯ ಎಂದು ಭಾವಿಸಬಹುದು. ಆಸಕ್ತ ಮನಸ್ಸುಗಳು ಈ ಬಗ್ಗೆ ಹೆಚ್ಚು ಹೆಚ್ಚು ತಮ್ಮನ್ನು ತೊಡಗಿಸಿಕೊಳ್ಳಬಹುದು. ಆದರೆ ಬಹುದೊಡ್ಡ ನಿರೀಕ್ಷೆ ಬೇಡ. ಅದು ನಿರಾಸೆಯ ಕೂಪಕ್ಕೆ ತಳ್ಳುತ್ತದೆ…..
ಪ್ರಾಮಾಣಿಕ ಪ್ರಯತ್ನ, ನಿಸ್ವಾರ್ಥ ಸೇವೆ, ಏನನ್ನೂ ತನಗಾಗಿ ನಿರೀಕ್ಷಿಸದ ನಿರ್ಲಿಪ್ತತೆ ಖಂಡಿತ ಜನರ ಮನವೊಲಿಸಲು ಯಶಸ್ವಿಯಾಗುತ್ತದೆ. ಈಗಲೂ ಸಾಕಷ್ಟು ಜನ ಒಳ್ಳೆಯವರು ಇದ್ದಾರೆ. ಆದರೆ ಅವರಿಗೆ ಸೂಕ್ತ ವೇದಿಕೆ ಮತ್ತು ಪರ್ಯಾಯ ಇಲ್ಲ. ಅದನ್ನು ಒದಗಿಸಿದರೆ ಖಂಡಿತ ಜನ ಸಮೂಹ ಒಪ್ಪಬಹುದು. ಆ ದಿನಗಳು ಬೇಗ ಬರಲಿ ಎಂದು ನಿರೀಕ್ಷಿಸುತ್ತಾ….
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಎಷ್ಟು ?
ಕನ್ನಡಿಗರ ಒಳಧ್ವನಿ…….
ಒಂದು ಮಾಹಿತಿಯಂತೆ ಇಡೀ ಭಾರತದಲ್ಲಿ ಪ್ರಾದೇಶಿಕ ಭಾಷೆಗಾಗಿ ಹೋರಾಟ ಮಾಡಬೇಕಾದ ಮತ್ತು ಮಾಡುತ್ತಿರುವ ಅತಿ ಹೆಚ್ಚು ಸಂಘಟನೆಗಳಿರುವುದು ಕರ್ನಾಟಕದಲ್ಲಿ. ಬಹುಶಃ ಕನ್ನಡ ಭಾಷೆಯ, ಕನ್ನಡ ಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಲು ಭಾಷಾವಾರು ಪ್ರಾಂತ ರಚನೆಯಾದ ದಿನದಿಂದಲೂ, ಕರ್ನಾಟಕ ಏಕೀಕರಣದ ನಂತರವೂ ಸಾಕಷ್ಟು ಹೋರಾಟಗಳು ನಡೆಯುತ್ತಲೇ ಇವೆ.
ಅದಕ್ಕೆ ಹಲವಾರು ಕಾರಣಗಳು ಇವೆ. ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮೊಳಗಿನ ಭಾಷಾಭಿಮಾನ ಒಂದಷ್ಟು ಕಡಿಮೆ ಇರುವ ಮೂಲ ಕಾರಣ ಮಾತ್ರವಲ್ಲದೆ, ಪರಭಾಷಿಕರ ಹಾವಳಿಗೆ ದಕ್ಷಿಣ ಭಾರತದ ದ್ರಾವಿಡ ಭಾಷೆಗಳಲ್ಲಿ ಅತಿ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಕನ್ನಡವೇ. ಭೌಗೋಳಿಕವಾಗಿ ಕರ್ನಾಟಕ ಭಾರತ ದೇಶದಲ್ಲಿಯೇ ಇರುವುದರಲ್ಲಿ ಅತ್ಯಂತ ಸುರಕ್ಷಿತ ಪ್ರದೇಶ ಎಂಬ ಭಾವನೆ ಉತ್ತರ ಭಾರತೀಯರಲ್ಲಿದೆ. ಜೊತೆಗೆ ಕರ್ನಾಟಕ ಪ್ರಾಕೃತಿಕವಾಗಿಯೂ ಒಳ್ಳೆಯ ಸಂಪನ್ಮೂಲಭರಿತ ರಾಜ್ಯವಾಗಿದೆ. ಇಲ್ಲಿನ ವಾತಾವರಣ ಅತ್ಯುತ್ತಮ ಸ್ಥಿತಿಯಲ್ಲಿದೆ. ಪ್ರಾಕೃತಿಕ ವಿಕೋಪಗಳು ತುಂಬಾ ಕಡಿಮೆ. ಭದ್ರತೆ ಮತ್ತು ರಕ್ಷಣೆ ಉತ್ತಮವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಜನ ಉದಾರವಾದಿಗಳು, ಆತ್ಮೀಯರು. ತೀರಾ ಒರಟಾಗಿ ನಡೆದುಕೊಳ್ಳುವುದಿಲ್ಲ. ಇರುವುದರಲ್ಲಿ ಒಂದಷ್ಟು ಸಂಸ್ಕಾರವಂತರಾಗಿ ಇತರ ರಾಜ್ಯಗಳ ಜನರಿಗೂ ಗೌರವ ಕೊಡುತ್ತಾರೆ. ಹೆಚ್ಚು ತಂಟೆತಕರಾರು ಮಾಡುವುದಿಲ್ಲ. ವೈವಿಧ್ಯಮಯ ಆಹಾರ ಪದ್ಧತಿಯೂ ಇಲ್ಲಿದೆ.
ಇದರಿಂದಾಗಿ ಪರಭಾಷಿಕರ ವಲಸೆ ಒಂದು ಹಂತದವರೆಗೆ ಯಾವುದೇ ಸಮಸ್ಯೆ ಉಂಟುಮಾಡಲಿಲ್ಲ. 70/80/90 ರ ದಶಕದಲ್ಲಿ ತಮಿಳು ಭಾಷಿಕರಿಂದ ಒಂದಷ್ಟು ಸಮಸ್ಯೆ ಉಂಟಾಗಿ, ಅಸಮಾಧಾನ ಜಾಸ್ತಿಯಾಗಿ ಕಾವೇರಿ ಗಲಾಟೆಯಲ್ಲಿ ಅದು ಉತ್ತುಂಗಕ್ಕೇರಿ, ಒಂದಷ್ಟು ಘರ್ಷಣೆಗಳು ನಡೆದು, ಇತ್ತೀಚಿನ ವರ್ಷಗಳಲ್ಲಿ ಅದು ತಹಬಂಧಿಗೆ ಬಂದಿದೆ.
ಆದರೆ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಉತ್ತರ ಭಾರತೀಯರು ತೀರಾ ತೀರಾ ಅತಿಯಾಗಿ ಕರ್ನಾಟಕದ ಎಲ್ಲ ಭಾಗಗಳ ಮೇಲೆ ಬಹುತೇಕ ದಾಳಿ ಎನ್ನುವಂತೆ ಬಂದು ಸೇರತೊಡಗಿದ್ದಾರೆ. ಅದು ಕೇವಲ ರೈಲ್ವೆ ಇಲಾಖೆ, ಬ್ಯಾಂಕಿಂಗ್, ಆಡಳಿತ ಮಾತ್ರವಲ್ಲದೆ ಕಟ್ಟಡ ಕಾರ್ಮಿಕರು, ವ್ಯಾಪಾರಿಗಳು, ಹೋಟೆಲ್ ಕೆಲಸಗಾರರು ಮುಂತಾದ ಇತರ ಎಲ್ಲಾ ಸ್ಥಳೀಯ ಕೆಲಸಗಳಿಗೂ ಕೂಡ ಬಹಳಷ್ಟು ಉತ್ತರ ಭಾರತೀಯರು ಬಂದು ಸೇರಿಕೊಂಡಿದ್ದಾರೆ.
ಆ ಸಂಖ್ಯೆ ಕನ್ನಡಿಗರ ದಿನನಿತ್ಯದ ಚಟುವಟಿಕೆಗಳಲ್ಲಿಯೇ ಎದ್ದು ಕಾಣುತ್ತಿದೆ. ಯಾವ ಹೋಟೆಲ್ ಗೆ ಹೋದರು, ಯಾವ ಅಂಗಡಿಗೆ ಹೋದರು, ಯಾವ ಮನರಂಜನಾ ಸ್ಥಳಕ್ಕೆ ಹೋದರು ಬಹುತೇಕ ಹಿಂದಿ ಭಾಷಿಕರು ಕಾಣಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲೂ ಅವರೇ ತುಂಬುತ್ತಿದ್ದಾರೆ. ಆ ಸಂಖ್ಯೆ ಹೆಚ್ಚಾದಾಗ ಸ್ಥಳೀಯ ಸಂಸ್ಕೃತಿ, ಭಾಷೆ, ಉಡುಗೆ ತೊಡುಗೆ, ಆಹಾರ ಮುಂತಾದವುಗಳ ವಿಷಯದ ಮೇಲೆ ಅನಧಿಕೃತವಾಗಿ ದಾಳಿಯಂತ ಒತ್ತಡ ಹೆಚ್ಚಾಗುತ್ತಿದೆ. ಅದು ಸ್ಥಳೀಯರ ಗಮನಕ್ಕೂ ಬರುತ್ತಿದೆ.
ಈ ನಡುವೆ ಕೇಂದ್ರ ಸರ್ಕಾರದಿಂದ ಹಿಂದಿ ಭಾಷೆಯ ಒತ್ತಾಯದ ಹೇರಿಕೆ, ಅಲ್ಲಲ್ಲಿ ಕಿಡಿಗೇಡಿ ಉತ್ತರ ಭಾರತೀಯರ ಕೆಲವು ಸಣ್ಣಪುಟ್ಟ ಘಟನೆಗಳು ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಅದು ಕನ್ನಡಿಗರಲ್ಲಿ ಹೆಚ್ಚು ಹೆಚ್ಚು ಆಕ್ರೋಶವನ್ನುಂಟು ಮಾಡುತ್ತಿದೆ. ಇದು ಮುಂದಿನ ಹಂತಕ್ಕೆ ಹೋಗುವ ಅಪಾಯಕಾರಿ ಹಂತ ತಲುಪುವ ಮೊದಲೇ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ಹೀಗೇ ಅತಿಯಾದ ವಲಸೆ ಮುಂದುವರಿದರೆ ಇಲ್ಲಿನ ಸ್ಥಳೀಯ ಸಾಂಸ್ಕೃತಿಕ ವ್ಯವಸ್ಥೆಗೆ ಧಕ್ಕೆಯಾಗುವುದು ಶತಸಿದ್ಧ. ಭಾರತ ಒಂದು ಒಕ್ಕೂಟ ವ್ಯವಸ್ಥೆ. ಇಲ್ಲಿ ರಾಜ್ಯಗಳ ಮಧ್ಯೆ ವಲಸೆಗೆ ಯಾವುದೇ ನೀತಿ ನಿಯಮ ಅಥವಾ ಮಿತಿ ಇಲ್ಲ. ಆದರೆ ವಲಸೆಗೆ ಒಂದು ಮಿತಿ ಖಂಡಿತ ಇರಲೇಬೇಕು. ಗರಿಷ್ಠ ಶೇಕಡ 20 ರಷ್ಟು ವಲಸೆಯನ್ನು ಯಾವುದೇ ಸಂಸ್ಕೃತಿ ಸಾಮಾನ್ಯವಾಗಿ ತಡೆದುಕೊಳ್ಳಬಹುದು. ಅದಕ್ಕಿಂತ ಹೆಚ್ಚಾಗಿ ಯಾವುದೇ ಕಾರಣದಿಂದಾದರೂ ವಲಸೆ ಹೆಚ್ಚಾಗಿ ಸ್ಥಳೀಯ ಜನಸಂಖ್ಯೆಯ ಮೇಲೆ, ಸಂಸ್ಕೃತಿಯ ಮೇಲೆ ಒತ್ತಡ ಹೆಚ್ಚಾದರೆ ಆಗ ಘರ್ಷಣೆ ಪ್ರಾರಂಭವಾಗುತ್ತದೆ.
ಅದರಲ್ಲೂ ಉದ್ದೇಶಪೂರ್ವಕವಾಗಿ ಭಾಷೆ ಮೇಲೆ, ಧರ್ಮದ ಮೇಲೆ ರಾಜಕೀಯವಾಗಿ ಒತ್ತಾಯ ಹೇರಿದರೆ, ಪರೋಕ್ಷ ಪ್ರೋತ್ಸಾಹ ದೊರೆತರೆ, ಆಗ ಪರಿಣಾಮ ಮತ್ತಷ್ಟು ಭೀಕರವಾಗಲಿದೆ. ಕರ್ನಾಟಕದಲ್ಲಿ ಆ ಪರಿಸ್ಥಿತಿ ನಿಧಾನವಾಗಿ ಉದ್ಭವವಾಗುತ್ತಿದೆ.
ದಯವಿಟ್ಟು ಆಡಳಿತ ಮಾಡುತ್ತಿರುವ ಎಲ್ಲಾ ರಾಜಕೀಯ ನೇತಾರರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಜೊತೆಗೆ ಹೋರಾಟಗಾರರು ಸಹ ಕೇವಲ ಘಟನೆಗಳ ವಿರುದ್ಧ ಹೋರಾಟ ಮಾತ್ರ ಮಾಡದೆ ಆಡಳಿತದ ಮೇಲೆ ಈ ವಿಷಯದಲ್ಲಿ ಗಮನಹರಿಸಿರುವಂತೆ ಸರ್ಕಾರದ ಮೇಲೆಯೇ ಹೆಚ್ಚು ಒತ್ತಡ ತರಬೇಕಾಗಿದೆ. ಎಲ್ಲೋ ಕೆಲವು ಘಟನೆಗಳನ್ನು ನಮ್ಮ ವೈಯಕ್ತಿಕ ನೆಲೆಯಲ್ಲಿ ತಡೆಗಟ್ಟಿ ಪ್ರತಿಭಟಿಸುವುದು ಸಾಕಾಗುವುದಿಲ್ಲ.
ಈ ವಲಸೆಯನ್ನು ನಿಯಂತ್ರಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಪರ್ಯಾಯ ಮಾರ್ಗಗಳನ್ನು ತಿಳಿದುಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ. ವಲಸೆಯು ಯಾವುದೇ ಕಾರಣದಿಂದ ದೊಡ್ಡ ಪ್ರಮಾಣದಲ್ಲಿಯಾದರೆ ವಿಶ್ವದ ಯಾವುದೇ ನಾಗರಿಕತೆಯು ಉಳಿಯುವುದು ಕಷ್ಟ.
ಕುವೆಂಪು ಅವರ
” ವಿಶ್ವಮಾನವ ಪ್ರಜ್ಞೆ ” ಬಸವಣ್ಣನವರ ” ಇವ ನಮ್ಮವ ಇವ ನಮ್ಮವ ” ಎನ್ನುವ ಭಾವನೆ ಎಲ್ಲವೂ ನಮ್ಮ ರಕ್ಷಣೆಯ ಮೊದಲ ಆದ್ಯತೆಯ ನಿಬಂಧನೆಗೆ ಒಳಪಟ್ಟಿರುತ್ತದೆ. ನಾವು ಯಾರನ್ನೂ ದ್ವೇಷಿಸಬಾರದು, ಹಿಂಸಿಸಬಾರದು. ಆದರೆ ನಮ್ಮ ಅಸ್ಮಿತೆಗೆ, ಸ್ವಾಭಿಮಾನಕ್ಕೆ ಸಂಸ್ಕೃತಿಗೆ, ಸಹಜ ಜೀವನಶೈಲಿಗೆ ಹೊರಗಿನಿಂದ ಧಕ್ಕೆ ಉಂಟಾಗ ಅದನ್ನು ರಕ್ಷಿಸಿಕೊಳ್ಳುವುದು ನಮ್ಮ ಕರ್ತವ್ಯ, ಜವಾಬ್ದಾರಿ ಮತ್ತು ನಾಗರಿಕ ಸಾಮಾನ್ಯ ಪ್ರಜ್ಞೆ.
ಇಲ್ಲಿನ ನೀತಿ ನಿಯಮಗಳು, ಕಾನೂನು ಸುವ್ಯವಸ್ಥೆ ಮತ್ತು ನಮ್ಮ ಸಂಪೂರ್ಣ ರಕ್ಷಣೆಯ ಮಿತಿಯಲ್ಲಿ ವಲಸೆ ಇದ್ದಾಗ ಅವರನ್ನು ಅತಿಥಿಗಳಂತೆ ಸತ್ಕರಿಸುವುದು ಸಹ ನಮ್ಮ ಕರ್ತವ್ಯ. ಇದು ಈಗ ಮಿತಿ ಮೀರುತ್ತಿರುವುದರಿಂದ ನಮ್ಮ ಪ್ರತಿಭಟನೆ ಅವಶ್ಯ.
ಈ ಕಾರಣದಿಂದಾಗಿಯೇ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಹೆಚ್ಚು ಕಡಿಮೆ ಅನಿವಾರ್ಯವಾಗಿದೆ. ಏನ್ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಾಗಿದೆ.
ಇದು ಒಂದು ವೈಯಕ್ತಿಕ ಅಭಿಪ್ರಾಯ. ನೀಡಿದ ಮಾಹಿತಿಗಳಲ್ಲಿ ತಪ್ಪು ಇದ್ದರೆ ಒಪ್ಪಿಕೊಳ್ಳುವೆ, ಹಾಗೆಯೇ ಇದು ಅಂತಿಮವಲ್ಲ. ಈ ಬಗ್ಗೆ ವಾಸ್ತವ ನೆಲೆಯಲ್ಲಿ ಇನ್ನಷ್ಟು ಚರ್ಚೆಗಳನ್ನು ಆಹ್ವಾನಿಸುತ್ತಾ….
ಮನಸ್ಸುಗಳ ಅಂತರಂಗದ ಚಳವಳಿ ಸಹ ಜನರ ಒಟ್ಟು ಚಿಂತನೆ ಮತ್ತು ವ್ಯಕ್ತಿತ್ವಗಳನ್ನು ವಿಶಾಲ ಗೊಳಿಸುವ ನಿಟ್ಟಿನಲ್ಲಿ ಸದಾ ಕಾರ್ಯನಿರ್ವಹಿಸುತ್ತದೆ ಎಂದು ಪ್ರತಿಜ್ಞೆ ಮಾಡುತ್ತಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9844013068………
9663750451……..











