ವಿಜಯ ದರ್ಪಣ ನ್ಯೂಸ್……
ವಿಶ್ವಾಸ ಘಾತಕರು ಮತ್ತು ನಮ್ಮ ತಿಳಿವಳಿಕೆ…………

ದೇವರ ಮೇಲೆ ವಿಶ್ವಾಸವಿತ್ತು.
ಆದರೆ ಆತ ಏನೂ ಮಾಡಲಿಲ್ಲ. ಪಕ್ಷಪಾತ ಮಾಡಿದ, ದುಷ್ಟರ ಪರವಾಗಿ ಮುಖವಾಡದವರ ಸಲುವಾಗಿ ನಿಂತ, ಮುಗ್ದರನ್ನು ಬಹಳ ಗೋಳಾಡಿಸಿದ……….
ಕಾನೂನಿನ ಮೇಲೆ ಭರವಸೆ ಇತ್ತು. ಕ್ರಿಮಿನಲ್ ಗಳಿಗೆ ಶಿಕ್ಷೆಯಾಗುತ್ತದೆ. ಅಮಾಯಕರಿಗೆ ರಕ್ಷಣೆ ದೊರೆಯುತ್ತದೆ. ಹೇಗೋ ನೆಮ್ಮದಿಯಿಂದ ಬದುಕಬಹುದು ಎಂದು.
ಅದೂ ಕೈಗೂಡಲಿಲ್ಲ. ಕಾನೂನು ಬಲಿಷ್ಠರ ಪಾಲಾಯಿತು. ಅಲ್ಲೂ ನಿರಾಸೆಯಾಯಿತು………
ದೇವರು, ಕಾನೂನು ವಿಫಲರಾದರೂ, ಮನುಷ್ಯನ ನೈತಿಕತೆ – ನಾಗರಿಕ ಪ್ರಜ್ಞೆಯಾದರೂ ಒಳ್ಳೆಯದು ಕೆಟ್ಟದ್ದನ್ನು ಗುರುತಿಸಿ ನಮಗೆ ನ್ಯಾಯ ನೀಡುತ್ತದೆ. ನಮ್ಮ ನಡುವೆ ಶಿಕ್ಷಕರು, ವೈದ್ಯರು, ನ್ಯಾಯಾಧೀಶರು, ವಿಜ್ಞಾನಿಗಳು, ತಂತ್ರಜ್ಞರು, ಸ್ವಾಮಿಗಳು, ಸಮಾಜ ಸೇವಕರು, ಪೋಲೀಸರು, ರಾಜಕಾರಣಿಗಳು ಇದ್ದಾರೆ. ಅವರಾದರೂ ಸಮಾಜದಲ್ಲಿ ನಮ್ಮ ನಡುವಿನ ಕ್ರೂರಿಗಳು – ಕರುಣಾಮಯಿಗಳ ವ್ಯತ್ಯಾಸ ಗುರುತಿಸಿ ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ ಎಂಬ ನಂಬಿಕೆ ಇತ್ತು.
ಕೊನೆಗೆ ಅವರೂ ಕೈಬಿಟ್ಟರು……….
ನನ್ನ ಬಂಧು, ನನ್ನ ಜಾತಿಯವ, ನನ್ನ ಸ್ನೇಹಿತ, ನನ್ನ ಭಾಷೆಯವ, ನನ್ನ ಶಿಷ್ಯ, ನನ್ನ ಗುರು, ನನ್ನ ಸಂಘದವ, ನನ್ನ ಊರಿನವ, ನನ್ನ ಗ್ರಾಹಕ ಇವರೆಲ್ಲರ ಪರವಾಗಿ ನ್ಯಾಯದ ತಕ್ಕಡಿಯನ್ನು ತಮ್ಮ ಸ್ವಾರ್ಥಕ್ಕೆ ಬಗ್ಗಿಸಿಕೊಂಡ ಸಮಾಜ ನಮ್ಮದು…
ಮನಸ್ಸುಗಳೇ ಭ್ರಷ್ಟಗೊಂಡಿರುವಾಗ ನಾವು ನಂಬುವುದಾದರೂ ಯಾರನ್ನು. ಒಳ್ಳೆಯವರನ್ನು, ಕೆಟ್ಟವರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತಮ್ಮ ಅನುಕೂಲಕ್ಕೆ ತಕ್ಕಂತೆ ಅಳತೆ ಮಾಡಿದರೆ ವ್ಯವಸ್ಥೆಯ ಮೇಲೆ ನಂಬಿಕೆ ಬರುವುದಾದರೂ ಹೇಗೆ……
ಆತ್ಮವಂಚಕರ ಏಳು ಸುತ್ತಿನ ಕೋಟೆಯೊಳಗೆ ಸಿಲುಕಿರುವ ಮಕ್ಕಳು ಯುವಕರನ್ನು ಕಾಪಾಡುವುದು ಹೇಗೆ……
ಅವನೊಬ್ಬ ದೊಡ್ಡ ಸಾಹಿತಿ,
ಅಕ್ಷರದಲ್ಲಿಯೇ ಆದರ್ಶ ಹೇಳುತ್ತಾನೆ. ಮಾಡುವುದು ಮಾತ್ರ ಹೊಲಸು ಕೆಲಸಗಳು………
ಅವನೊಬ್ಬ ರಾಜಕಾರಣಿ,
ಮಾತಿನಲ್ಲೇ ಅರಮನೆ ಕಟ್ಟುತ್ತಾನೆ, ವಾಸ್ತವವಾಗಿ ಬಾಯಿ ಬಿಟ್ಟರೆ ಬಣ್ಣ ಗೇಡು…..
ಅವನೊಬ್ಬ ಧರ್ಮಾಧಿಕಾರಿ,
ನ್ಯಾಯ ನೀತಿಯ ಬಗ್ಗೆ ಪುಂಖಾನುಪುಂಖವಾಗಿ ಬೋಧಿಸುತ್ತಾನೆ. ಆದರೆ ನಿಜ ಬದುಕಿನಲ್ಲಿ ಮಹಾ ದುಷ್ಟ……
ಪ್ರೀತಿಯನ್ನೇ ಗುರುತಿಸಲಾಗದ,
ದ್ವೇಷವನ್ನೇ ಒಪ್ಪಿಕೊಳ್ಳುವ ಹಂತಕ್ಕೆ ನಮ್ಮ ಅಕ್ಷರಸ್ಥ ಬುದ್ದಿವಂತರು ತಲುಪಿದ್ದಾರೆ.
ಹೀಗೆ ಸಾಗುತ್ತಲೇ ಇದೆ ಬದುಕು……
ಮಾತು, ಅಕ್ಷರ, ಜ್ಞಾನ, ಪ್ರೀತಿ, ವಿಶ್ವಾಸ, ಕರುಣೆ, ಮಾನವೀಯತೆ ನಮ್ಮ ವ್ಯಕ್ತಿತ್ವದ ಭಾಗವಾಗುವವರೆಗೂ ಭಾರತೀಯ ಸಮಾಜ ಪ್ರತಿದಿನ ಅಪಾಯದ ಅಂಚಿಗೆ ಸರಿಯುತ್ತಿರುತ್ತದೆ.
ನನ್ನಂತವರ ಬರಹಕ್ಕೆ ವಿಷಯವಾಗುತ್ತಲೇ ಇರುತ್ತದೆ.
ಮುಖವಾಡ ಕಳಚುವವರೆಗೂ……..
ಆದ್ದರಿಂದ ನಾವೆಲ್ಲರೂ ಎಚ್ಚೆತ್ತುಕೊಂಡು ಜ್ಞಾನಕ್ಕೆ ಮಹತ್ವ ನೀಡಬೇಕಿದೆ.
ಹಾಗಾದರೆ ಜ್ಞಾನ ಎಂದರೇನು ?
ಜ್ಞಾನದ ಗುರುತಿಸುವಿಕೆ ಹೇಗೆ ?
ಜ್ಞಾನದ ಬೆಳವಣಿಗೆ ಹೇಗೆ ?
ಜ್ಞಾನದ ವ್ಯಾಪ್ತಿ ಏನು ?
ಜ್ಞಾನದ ಮಿತಿ ಏನು ?
ಜ್ಞಾನದ ಉಪಯೋಗ ಏನು ?
ಪ್ರತಿನಿತ್ಯ ನಾವು ಜ್ಞಾನದ ಬಗ್ಗೆ ಒಂದಲ್ಲಾ ಒಂದು ಸಂಧರ್ಭದಲ್ಲಿ ಪ್ರಸಾಪಿಸುತ್ತಲೇ ಇರುತ್ತೇವೇ ? ಅದರ ಬಗ್ಗೆ ಸ್ವಲ್ಪ ಅರ್ಥಮಾಡಿಕೊಂಡರೆ ಉತ್ತಮ ಎಂಬ ಹಿನ್ನೆಲೆಯಲ್ಲಿ…………..
ಜ್ಞಾನ ಎಂಬ ಪದದ ಅರ್ಥ ತುಂಬಾ ತುಂಬಾ ವಿಶಾಲವಾಗಿದೆ. ಆದರೆ ಅದನ್ನು ಸರಳವಾಗಿ ಮತ್ತು ದಿನನಿತ್ಯದ ಬಳಕೆಯಲ್ಲಿ ಹೀಗೆ ಅರ್ಥೈಸಬಹುದು………..
ಜ್ಞಾನದಲ್ಲಿ ಅಡಗಿರುವ ಬಹುಮುಖ್ಯ ಅಂಶಗಳು ಅಥವಾ ಅಡಿಪಾಯ ಎಂದು ಕರೆಯಬಹುದಾದ ಅಂಶಗಳು
ಅಧ್ಯಯನ,
ಚಿಂತನೆ,
ಅನುಭವ.
ಇದರ ಉಪ ಅಂಶಗಳು,
ಓದು, ಪ್ರವಾಸ, ಗ್ರಹಿಕೆ, ಮಿದುಳಿನ ಸಾಮರ್ಥ್ಯ, ವಾಸಿಸುವ ಪರಿಸರ, ಅನುವಂಶೀಯ ಗುಣ ಮುಂತಾದವು………….
ಜ್ಞಾನ ಎಂಬುದು 360 ಡಿಗ್ರಿ ದೃಷ್ಟಿಕೋನದ ಸಂಪೂರ್ಣ ವೃತ್ತ. ಅದರಿಂದ ಹೊರತುಪಡಿಸಿದ ಯಾವ ವಿಷಯವೂ ಇಲ್ಲ. ಆದರೆ ಅದರ ಸಂಪೂರ್ಣ ನೋಟ ಮನುಷ್ಯ ಮಾತ್ರನಿಗೆ ಸಾಧ್ಯವಿಲ್ಲ. ಕೇವಲ ಅವರವರ ಸಾಮರ್ಥ್ಯಕ್ಕೆ ನಿಲುಕಿದಷ್ಟನ್ನು ಮಾತ್ರ ನೋಡಲು ಸಾಧ್ಯ.
ನಿಜವಾದ ವ್ಯತ್ಯಾಸ ಇರುವುದೇ ಇಲ್ಲಿ. ನೀವು ಯಾವುದೋ ಒಂದು ವಿಷಯದ ಬಗ್ಗೆ ಹೊಂದಿರುವ ಸಂಪೂರ್ಣ ತಿಳಿವಳಿಕೆ ಅದರ ಬಗೆಗೆ ನಿಮಗಿರುವ ಮಾಹಿತಿಯೇ ಹೊರತು ಜ್ಞಾನವಲ್ಲ.
ಕೇವಲ ಅಧ್ಯಯನ ಅಥವಾ ಕೇವಲ ಚಿಂತನೆ ಅಥವಾ ಕೇವಲ ಅನುಭವ, ಅಥವಾ ಅಧ್ಯಯನ ಮತ್ತು ಚಿಂತನೆ, ಅಥವಾ ಅಧ್ಯಯನ ಮತ್ತು ಅನುಭವ, ಅಥವಾ ಚಿಂತನೆ ಮತ್ತು ಅನುಭವ ಹೀಗೆ ಯಾವುದೇ ಒಂದು ವಿಷಯದಲ್ಲಿ ಕೊರತೆಯಾದರೂ ಜ್ಞಾನ ದಕ್ಕುವುದಿಲ್ಲ. ಇದರ ಜೊತೆಗೆ ನಮ್ಮ ಗ್ರಹಿಕೆಯ ಸಾಮರ್ಥ್ಯ ಸಹ ಮುಖ್ಯವಾಗುತ್ತದೆ.
ಎಷ್ಟೋ ಬಾರಿ ಕೇವಲ ಅಧ್ಯಯನ ಅಥವಾ ಚಿಂತನೆ ಅಥವಾ ಅನುಭವವೇ ನಮಗೆ ಭಾರವಾಗಿ ನಮ್ಮ ದಿಕ್ಕನ್ನೇ ತಪ್ಪಿಸುತ್ತದೆ.
ಖುರಾನ್, ಬೈಬಲ್, ಭಗವದ್ಗೀತೆ, ವೇದ ಉಪನಿಷತ್ತುಗಳು, ಕಮ್ಯುನಿಸ್ಟ್ ಸಿದ್ದಾಂತಗಳ ಆಳ ಅಧ್ಯಯನ ನಮ್ಮನ್ನು ಆಪೋಷನ ತೆಗೆದುಕೊಂಡು ಅದಕ್ಕೆ ಅಡಿಯಾಳಾಗಿ ಮಾಡಿಕೊಳ್ಳುತ್ತದೆ.
ಆ ಕಾರಣದಿಂದಾಗಿಯೇ ಇವುಗಳ ಆಳ ಅಧ್ಯಯನ ಮಾಡಿರುವವರು ಸಹಜತೆಯಿಂದ ದೂರವಾಗಿ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಾರೆ. ನಾವೇ ಶ್ರೇಷ್ಠ, ನಮ್ಮ ಧರ್ಮವೇ ಶ್ರೇಷ್ಠ ಎಂಬ ವ್ಯಸನಕ್ಕೆ ಬಲಿಯಾಗುತ್ತಾರೆ. ಸ್ವತಂತ್ರ ಚಿಂತನೆಯ ಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ.
ಓದು, ಅಧ್ಯಯನ, ಚಿಂತನೆ, ಅನುಭವ, ಗ್ರಹಿಕೆ ಮುಂತಾದ ಅನೇಕ ಅಂಶಗಳ ಒಟ್ಟು ಮೊತ್ತವೇ ಜ್ಞಾನ. ಅದನ್ನು ಬಿಡಿಬಿಡಿಯಾಗಿ ಗ್ರಹಿಸಿದರೆ ಎಲ್ಲಾ ಧಾರ್ಮಿಕ ಆಚರಣೆಗಳು ಅವರವರ ಭಾವಕ್ಕೆ ತಕ್ಕಂತೆ ವೈಜ್ಞಾನಿಕವೇ………
ಮನುಷ್ಯ ಸೃಷ್ಟಿಯ ಸಹಜತೆಯಿಂದ ದೂರವಾಗಿ ತನ್ನ ಮೇಲೆ ಧರ್ಮ ದೇವರಗಳ ಒತ್ತಡ ಹೇರಿಕೊಂಡಿದ್ದರ ಫಲವೇ………….
ಸಮಷ್ಟಿ ಪ್ರಜ್ಞೆಯ ಕೊರತೆ……..
ಅದನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಂಡರೆ ಬದುಕು ಮತ್ತು ಸಮಾಜ ಹಾಗು ದೇಶ ನೆಮ್ಮದಿಯಿಂದ ಇರಲು ಸಾಧ್ಯ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,












