ವಿಜಯ ದರ್ಪಣ ನ್ಯೂಸ್…..
” ಕರುಳ ಬಳ್ಳಿಯ ತಡವುತ್ತಾ……..”
( ಕಥಾ ಸಂಕಲನ )
ವಿವೇಕಾನಂದ. ಎಚ್. ಕೆ.
ಪ್ರಕಟಣೆಯ ಹಂತದಲ್ಲಿ,
ಶೀಘ್ರದಲ್ಲೇ ಬಿಡುಗಡೆ…
ಎಲ್ಲವನ್ನೂ ಕಳೆದುಕೊಂಡು ನನ್ನನ್ನು ನಾನು ಪಡೆದ ದಿನಗಳವು. ನನ್ನನ್ನೇನೋ ನಾನು ಪಡೆದೆ. ಆದರೆ ಅಲ್ಲಿಯವರೆಗಿನ ಬದುಕಿನ ನೆನಪುಗಳು ಆಳವಾಗಿ, ಗಾಢವಾಗಿ, ತೀವ್ರವಾಗಿ ಕಾಡುತ್ತಲೇ ಇದ್ದವು. ಏಕೆಂದರೆ ಅವುಗಳಲ್ಲಿ ಬಹಳಷ್ಟು ಮನುಷ್ಯ ಸಂಬಂಧಗಳೇ ಆಗಿದ್ದವು…..
ಆದರೆ ಮುಂದಿನ ಬದುಕಿಗಾಗಿ, ಆ ಕಾಡುವ ನೆನಪುಗಳಿಗೆ ಕ್ರಿಯಾತ್ಮಕ ರೂಪದ ಕಾರ್ಯ ಚಟುವಟಿಕೆಗಳಿಗೆ ಚಾಲನೆ ಕೊಡಲೇಬೇಕಾದ ತುಡಿತ, ಒತ್ತಡ ಜೊತೆಗೆ ಅನಿವಾರ್ಯತೆಯೂ ಇತ್ತು. ನಾನು ಬಾಳಿ ಬದುಕಿದ ಈ ಸಮಾಜದಿಂದ ಪಡೆಯುತ್ತಿದ್ದುದು ಸಾಕಷ್ಟು ಇತ್ತು. ಆದರೆ ಹೆಚ್ಚು ಕಾಡುತ್ತಿದ್ದುದು ಕಳೆದುಕೊಳ್ಳುತ್ತಿದ್ದವುಗಳೇ. ಅದೇ ಸದಾ ನನ್ನನ್ನು ಭಾದಿಸತೊಡಗಿತು…..
ವಸ್ತು ಸಂಸ್ಕೃತಿ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳು ಅಷ್ಟೇ ವೇಗವಾಗಿ ಕುಸಿಯುತ್ತಿದ್ದುದು ಮಾತ್ರವಲ್ಲದೆ ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆಯುತ್ತಿದ್ದವು. ಮುಖ್ಯವಾಗಿ ಮನುಷ್ಯ ಸಂಬಂಧಗಳು ವ್ಯಾಪಾರೀಕರಣಗೊಳ್ಳುತ್ತಿದ್ದವು……
ಯಾವುದೇ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದರೂ ಮಾನವ ಸಂಬಂಧಗಳ ಪ್ರೀತಿ, ಪ್ರೇಮ, ಪ್ರಣಯ, ಕರುಣೆ, ತ್ಯಾಗ, ಕ್ಷಮೆ, ಸಹಕಾರ, ಸಭ್ಯತೆ, ಸಮನ್ವಯಗಳೆಂಬ ಮಾನವೀಯ ಭಾವಗಳನ್ನು ಹೊರತುಪಡಿಸಿ ಎಲ್ಲಾ ತಂತ್ರಜ್ಞಾನವು ಕೇವಲ ಅನುಕೂಲಕರ ವ್ಯವಸ್ಥೆಯೇ ಹೊರತು ಅಂತರಂಗದ ಜೀವದ್ರವ್ಯವಲ್ಲ ಎನಿಸಿತು. ಆ ಜೀವದ್ರವ್ಯ ನಮ್ಮೊಳಗೆ, ಆ ಮೂಲಕ ಸಮಾಜದಲ್ಲಿ ಕರಗಿ ಹೋಗುವ ಮುನ್ನ ಒಂದಷ್ಟು ಜೀವ ಜಲವನ್ನು ಅದಕ್ಕೆ ಚಿಮುಕಿಸಬೇಕೆಂಬ ಆಸೆ ಮೂಡಿತು……
ಆ ನಿಟ್ಟಿನಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಗಿಂತ ಕೆಳಹಂತದ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ನಾನು ಏನನ್ನಾದರೂ ಮಾಡುವ ಆಲೋಚನೆಯಲ್ಲಿದ್ದಾಗ ನನ್ನಪ್ಪ ಹೇಳಿದ ಮಾತುಗಳು ನೆನಪಾದವು ” ನಿನ್ನ ಬಳಿ ಇರುವ ಹಣ, ಆಸ್ತಿ, ಅಧಿಕಾರ, ಅಂತಸ್ತುಗಳು ಯಾವಾಗ ಬೇಕಾದರೂ ನಾಶವಾಗಬಹುದು ಅಥವಾ ಯಾರಾದರೂ ಕದಿಯಬಹುದು. ಆದರೆ ನಿನ್ನೊಳಗಿರುವ ಅರಿವು, ಅಕ್ಷರಜ್ಞಾನ, ಮಾನವೀಯ ಮೌಲ್ಯಗಳು ಎಂದೂ ನಾಶವಾಗುವುದಿಲ್ಲ, ಅದನ್ನು ಕಳ್ಳತನ ಮಾಡಲೂ ಸಾಧ್ಯವಿಲ್ಲ ಮತ್ತು ನೀನು ಜೀವಂತ ಇರುವವರೆಗೂ ಅದನ್ನು ಬಳಸುತ್ತಲೇ ಇರಬಹುದು. ನಿನ್ನಿಂದ ಅದನ್ನು ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ, ಆದರೆ ಆ ಜ್ಞಾನವು ಕೂಡ ಮುಗಿದು ಹೋಗುವ ಇಂಧನವಿದ್ದಂತೆ. ಅದನ್ನು ನೀನು ಮತ್ತೆ ಮತ್ತೆ ನಿನ್ನೊಳಗಿನ ಅಂತಃಶಕ್ತಿಯಿಂದ, ಒಳ್ಳೆಯತನದಿಂದ, ವಿಶಾಲತೆಯಿಂದ, ಓದು, ಅಧ್ಯಯನ, ಚಿಂತನೆ, ಪ್ರವಾಸಗಳಿಂದ ಮರುಪೂರಣ ಮಾಡುತ್ತಲೇ ಇರಬೇಕು……. ”
ಈ ಮಾತುಗಳು ನನ್ನನ್ನು ಮತ್ತೊಂದು ಮಗ್ಗುಲಿಗೆ ಬದಲಿಸಿದವು.
ಅದೇ ಸಮಯದಲ್ಲಿ ಆಕಸ್ಮಿಕವಾಗಿ ಮತ್ತು ಅನಿರೀಕ್ಷಿತವಾಗಿ ನನಗೆ ದೊರಕಿದ ಆಂಡ್ರಾಯ್ಡ್ ಮೊಬೈಲ್ ಹಾಗು ಅದರೊಳಗಿದ್ದ ಸಾಮಾಜಿಕ ಜಾಲತಾಣಗಳೆಂಬ ವೇದಿಕೆ ಮತ್ತು ಅದನ್ನು ಉಪಯೋಗಿಸಲು ಬೇಕಾದ ಸಾಕಷ್ಟು ಸಮಯ ನನ್ನೊಂದಿಗೆ ಉಳಿಯಿತು. ಅದನ್ನು ಉಪಯೋಗಿಸಿಕೊಂಡು ಅಕ್ಷರಗಳ ಮೂಲಕವೇ ಏನನ್ನಾದರೂ ಈ ಸಮಾಜಕ್ಕೆ ಕೊಡುವ ಸಂಕಲ್ಪ ಮಾಡಿದೆ……
ಆ ಸಂದರ್ಭದಲ್ಲಿ ಇನ್ನು ಸಮಾಜದಿಂದ ಪಡೆದದ್ದು ಸಾಕು, ಕೇವಲ ಕೊಡುವ ದಿಕ್ಕಿನಲ್ಲಿ ಮಾತ್ರ ಯೋಚಿಸೋಣ ಎಂದು ನನ್ನ ಅನುಭವದ ಅನಿಸಿಕೆಗಳನ್ನು ಸೃಷ್ಟಿಯ ಮೂಲದಿಂದ ಯೋಚಿಸುತ್ತಾ, ಸಾಮಾಜಿಕ ಜಾಲತಾಣದಲ್ಲಿ ದಾಖಲಿಸತೊಡಗಿದೆ. ನಿರಂತರವಾಗಿ ಹನ್ನೆರಡನೇ ವರ್ಷ ದಾಟಿದೆ. ಈ ಸಮಯದಲ್ಲಿ ಕೆಲವೊಮ್ಮೆ ನನ್ನೊಳಗಿನ ಅನುಭವದ ನೈಜ ಘಟನೆಗಳು ಕಥಾರೂಪವಾಗಿ ಹೊರಹೊಮ್ಮಿದವು. ಆಗ ಹೊರಹೊಮ್ಮಿದ ಭಾವಗಳೇ ಈ
” ಕರುಳ ಬಳ್ಳಿಯ ತಡವುತ್ತಾ……” ಎಂಬ ಪುಸ್ತಕ ರೂಪ……
ಈ ಮಧ್ಯೆ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿಯಿಂದ ನವೆಂಬರ್ ೧, ೨೦೨೦ ರಂದು ಪ್ರಾರಂಭಿಸಿ ರಾಮನಗರ ಜಿಲ್ಲೆಯ ಚನ್ನಪಟ್ಟಣದವರೆಗೂ ಒಟ್ಟು ೩೮೫ ದಿನ ಅಂದರೆ ೨೦೨೧ರ ನವಂಬರ್ ೧೬ನೇ ತಾರೀಖಿನವರೆಗೂ ನಿರಂತರವಾಗಿ ರಾಜ್ಯದ ೨೮ ಜಿಲ್ಲೆಗಳ ೨೧೬ ತಾಲ್ಲೂಕುಗಳನ್ನು ಕಾಲ್ನಡಿಗೆಯಲ್ಲಿಯೇ ಸಂಚರಿಸಿ ಸುಮಾರು ೧೧,೫೦೦ ಕಿಲೋ ಮೀಟರ್ಗಳನ್ನು ಹೆಜ್ಜೆಗಳಲ್ಲಿಯೇ ಸವೆಸಿ ದೇಹ, ಮನಸ್ಸುಗಳನ್ನು ದಂಡಿಸಿ, ಸಾಕಷ್ಟು ಜನರೊಡನೆ ಬೆರೆತು, ಒಂದು ವರ್ಷದ ಎಲ್ಲಾ ಕಾಲಮಾನಗಳನ್ನು ಅನುಭವಿಸಿ, ಸಾಕಷ್ಟು ಸವಾಲುಗಳನ್ನು ಎದುರಿಸಿ, ಅನೇಕ ಸಂವಾದಗಳನ್ನು ನಡೆಸಿ, ಒಂದಷ್ಟು ಅನುಭವ ಪಡೆದುಕೊಂಡೆನು. ಇದು ಮಾನವೀಯ ಮೌಲ್ಯಗಳ ಪುನರುತ್ಥಾನದ ಜ್ಞಾನಭಿಕ್ಷಾ ಪಾದಯಾತ್ರೆಯಾಗಿ ನನ್ನೊಳಗೆ ಸೇರಿ ಹೋಗಿದೆ……….
ಇದರ ನಂತರವೂ ಒಂದಷ್ಟು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡು ನನ್ನ ಪಾಡಿಗೆ ನಾನಿರುವಾಗ, ಅನೇಕ ಆತ್ಮೀಯ ಮಿತ್ರರು ಈ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಒತ್ತಾಯಿಸುತ್ತಿದ್ದರು. ನಾನು ಅನೇಕ ವೈಯಕ್ತಿಕ ಕಾರಣಗಳಿಗಾಗಿ ಅದನ್ನು ನಿರಾಕರಿಸುತ್ತಲೇ ಬಂದೆ. ಆದರೆ ನನ್ನ ಓದುಗ ಮಿತ್ರರಾದ ಆತ್ಮೀಯರು, ಸಹಜ ಚಿಂತಕರು, ಬೆಂಗಳೂರು ಜಲಮಂಡಳಿಯ ಉದ್ಯೋಗಿಯೂ ಆದ ಶ್ರೀ ಬಿ. ಮಲ್ಲಿಕಾರ್ಜುನ ಗೌಡ ಅವರು ತಾವೇ ಖುದ್ದು ಶ್ರಮವಹಿಸಿ, ಪ್ರಕಾಶಕರಾದ ಸ್ನೇಹ ಬುಕ್ ಹೌಸ್ನ
ಶ್ರೀ ಕೆ.ಬಿ. ಪರಶಿವಪ್ಪ ಅವರೊಂದಿಗೆ ನನ್ನನ್ನು ಮಾತನಾಡಿಸಿ ಈ ಕಥೆಗಳು ಪುಸ್ತಕ ರೂಪದಲ್ಲಿ ಪ್ರಕಟವಾಗುವಂತೆ, ಪುಸ್ತಕ ರೂಪಗೊಳ್ಳುವ ಪ್ರತಿ ಹಂತದಲ್ಲೂ ಜೊತೆಯಾಗಿ ನಿಂತು ಹಸ್ತಪ್ರತಿಯಿಂದ ಬಿಡುಗಡೆಯವರೆಗೆ ಚರ್ಚೆಗಳನ್ನು ಮಾಡುತ್ತ ಶ್ರಮವಹಿಸಿ ನನ್ನೊಂದಿಗೆ ಸಹಕರಿಸಿದ್ದಾರೆ. ಅಂತಿಮವಾಗಿ ನಾನು ಸಹ ಕೆಲವು ಷರತ್ತುಗಳೊಂದಿಗೆ ಅವರ ಪ್ರೀತಿಯ ಕೋರಿಕೆಗೆ ಒಪ್ಪಿಗೆ ನೀಡಿದ್ದೇನೆ…….
ಈ ಪುಸ್ತಕದ ಕರಡು ತಿದ್ದುಪಡಿಯನ್ನು ಅತ್ಯಂತ ಆಸಕ್ತಿ ವಹಿಸಿ ಮಾಡಿದ ಪತ್ರಕರ್ತ ಮಿತ್ರ
ಶ್ರೀ ಶ್ರೀನಿವಾಸ ಮಠ ಹಾಗೂ ಪುಸ್ತಕದ ಪುಟವಿನ್ಯಾಸ ಮಾಡಿದ ಶ್ರೀ ಜೈಕುಮಾರ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತಾ, ಸುಧಾ ವಿಶೇಷಾಂಕ ಸಂಚಿಕೆಯಲ್ಲಿ ಪತ್ರಕರ್ತೆ ಶ್ರೀಮತಿ ಮಂಜುಶ್ರೀ ಎಂ. ಕಡಕೋಳ ಅವರು ನನ್ನ ಪಾದಯಾತ್ರೆಯ ಬಗ್ಗೆ ಲೇಖನ ಬರೆಯುತ್ತಾ ಅದಕ್ಕೆ ನೀಡಿದ ಶೀರ್ಷಿಕೆ ” ಕರುಳ ಬಳ್ಳಿಯ ತಡವುತ್ತಾ…” ಅದನ್ನೇ ನನ್ನ ಈ ಕಥಾ ಸಂಕಲನದ ಶೀರ್ಷಿಕೆಯಾಗಿ ತೆಗೆದುಕೊಂಡಿದ್ದೇನೆ. ಅದಕ್ಕಾಗಿ ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ…..
ಹಾಗೆಯೇ ಇದಕ್ಕೆ ಸಹಕರಿಸಿದ ಇನ್ನಿಬ್ಬರು ಬೆಂಗಳೂರು ಜಲಮಂಡಳಿಯ ಉದ್ಯೋಗಿಗಳು, ನಿತ್ಯ ನನ್ನ ಅಂಕಣದ ಓದುಗರೂ ಆದ ಶ್ರೀ ಡಿ.ಬಿ. ವೆಂಕಟೇಶ್ ಮತ್ತು ಶ್ರೀ ದೇವರಾಜ್ ಸಕ್ರಪ್ಪನವರ ಅವರ ಸಹಕಾರವನ್ನು ಸ್ಮರಿಸುತ್ತಾ,
ಈ ಪುಸ್ತಕ ಪ್ರಕಟಣೆಯಲ್ಲಿ ನನ್ನೊಂದಿಗೆ ಪ್ರತಿ ಹೆಜ್ಜೆಯಲ್ಲೂ ಬಹುವಾಗಿ ಸಹಕರಿಸುತ್ತಿರುವ ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದ ಸಂಚಾಲಕರು ಮತ್ತು ಆತ್ಮೀಯ ಮಿತ್ರರಾದ ಶ್ರೀ ಎಂ. ಯುವರಾಜ್, ಪುಸ್ತಕ ಪ್ರಕಟಣೆಯಲ್ಲಿ ತಮ್ಮ ನೇರ ಮತ್ತು ದಿಟ್ಟ ಅಭಿಪ್ರಾಯ ವ್ಯಕ್ತಪಡಿಸುತ್ತಾ ಸಹಕರಿಸಿದ ನನ್ನ ಆತ್ಮೀಯ ಮಿತ್ರರು ಮತ್ತು ಹಿತೈಷಿಗಳಾದ ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಪ್ರೊಫೆಸರ್ ಶ್ರೀ ಆರ್.ಕೆ. ರಾಮಚಂದ್ರ, ನನ್ನೆಲ್ಲಾ ಚಟುವಟಿಕೆಗಳಿಗೆ ಸದಾ ಬೆಂಬಲವಾಗಿ ನಿಂತಿರುವ ರಾಯಚೂರು ಹಟ್ಟಿ ಚಿನ್ನದ ಗಣಿಯ ಉದ್ಯೋಗಿಗಳಾದ ಶ್ರೀ ಎಂ. ಕರೇಗೌಡ ಮತ್ತು ನನ್ನೆಲ್ಲಾ ಕೆಲಸ ಕಾರ್ಯಗಳ ಸಂಪೂರ್ಣ ಜವಾಬ್ದಾರಿ ಹೊತ್ತು ಮುನ್ನಡೆಸುವ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಎಲ್ಲಾ ಗೆಳೆಯರಿಗೆ ಹಾಗೂ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ ಮುನ್ನಡೆಯಲು ಸದಾ ಶ್ರಮಿಸುತ್ತಿರುವ ಕೋಲಾರದ ಶಿವಪ್ಪ ಅವರ ನೇತೃತ್ವದ ಅರಿವು ಭಾರತ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಾ.
ಬದುಕು ನಿರ್ಮಾಣಗೊಳ್ಳಲು ಸಹಕರಿಸಿದ ದೂರದರ್ಶನ ಕೇಂದ್ರದ ನಿವೃತ್ತ ಅಧಿಕಾರಿಗಳು ಮತ್ತು ಸಾಹಿತಿಗಳಾದ ಶ್ರೀ ಸುಬ್ಬು ಹೊಲೆಯಾರ್, ದಿವಂಗತ ಶ್ರೀ ಎಲ್. ಜಿ. ಶಿವಕುಮಾರ್, ಹಾಗೆಯೇ ಬಾಲ್ಯದ ಆತ್ಮೀಯ ಗೆಳೆಯರಾದ ದೇವನಹಳ್ಳಿಯ ಶ್ರೀ ಕೆ. ಎನ್. ಉಮೇಶ್ ಅವರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಾ, ಇನ್ನೂ ಸಾಕಷ್ಟು ಜನರ ಋಣ ನನ್ನ ಮೇಲಿದೆ. ಅದನ್ನು ಮುಂದಿನ ಪುಸ್ತಕಗಳ ಪ್ರಕಟಣೆಯ ಸಮಯದಲ್ಲಿ ಸ್ಮರಿಸಿಕೊಳ್ಳುವೆ…..
ಹೆಚ್ಚಿನ ಪ್ರಚಾರವಿಲ್ಲದೆ, ನಿರೀಕ್ಷೆಗಳಿಲ್ಲದೆ ಸಹಜವಾಗಿಯೇ ಈ ಪುಸ್ತಕ ಹೊರಬರಲಿ. ಇದರೊಳಗಡೆ ನಿಜವಾಗಲೂ ಮಾನವೀಯ ಮೌಲ್ಯಗಳ ಅಂತಃಶಕ್ತಿ ಇದ್ದರೆ, ಕರುಳ ಬಳ್ಳಿ ಬೆಸೆಯುವ ಜೀವ ದ್ರವ್ಯವಿದ್ದರೆ ಪುಸ್ತಕ ತಾನೇ ತಾನಾಗಿ ಜನರನ್ನು ತಲುಪಲಿ…..
ಹೇಗೆ ಕೆಲವು ವಸ್ತುಗಳು, ಸಿನಿಮಾಗಳು, ಕೃತಿಗಳು, ಸಾಹಸಗಳು, ಸಾಧನೆಗಳು ಒಬ್ಬರ ಬಾಯಿಂದ ಇನ್ನೊಬ್ಬರಿಗೆ ತಲುಪಿ ಹೆಚ್ಚು ಹೆಸರು ಪಡೆಯುತ್ತದೆಯೋ ಹಾಗೆಯೇ ಸಹಜವಾಗಿ ಇದು ಸಹ ಆಗಲಿ. ನಾವಾಗಿ ಯಾರಿಗೂ ತುಂಬಾ ಒತ್ತಾಯ ಮಾಡುವುದು ಬೇಡ. ಏಕೆಂದರೆ ನನ್ನ ಬರಹಗಳ ಮೂಲ ಆಶಯ ಪರಿವರ್ತನೆ. ಅದು ನನ್ನ ಒತ್ತಾಯಕ್ಕಿಂತ ಹೆಚ್ಚಾಗಿ ಪುಸ್ತಕವನ್ನು ಓದಿದ ಓದುಗರು ಅದನ್ನು ಮತ್ತೊಬ್ಬರಿಗೆ ತಲುಪಿಸಬೇಕು ಎಂಬ ಒತ್ತಡ ತಾನೇ ತಾನಾಗಿ ನಿರ್ಮಾಣವಾದರೆ ನಾವು ಬಯಸುವ ಮಾನವೀಯ ಮೌಲ್ಯಗಳ ಪುನರುತ್ಥಾನ ಒಂದು ಹೆಜ್ಜೆ ಮುಂದೆ ಹೋದಂತೆ. ಇಲ್ಲದಿದ್ದರೆ ಈ ಪುಸ್ತಕ ಕಸದ ಬುಟ್ಟಿ ಸೇರಲಿ…..
ಆದ್ದರಿಂದ ನನ್ನ ಕೆಲವು ಪುಸ್ತಕಗಳ ಸರಣಿಯಲ್ಲಿ ಮೊದಲನೆಯದಾಗಿ ಈ ಕಥಾ ಪುಸ್ತಕವನ್ನು ನಿಮ್ಮ ಕೈಗೆಡುತ್ತಿದ್ದೇವೆ.
ನಾನು ಇಲ್ಲಿ ಮಾತನಾಡುವುದಕ್ಕಿಂತ ನನ್ನ ಈ ಕಥೆಗಳೇ ಮಾತನಾಡಲಿ. ಈ ಬಗ್ಗೆ ಮತ್ತೊಬ್ಬರು ಹಿನ್ನುಡಿ, ಮುನ್ನುಡಿ, ಬೆನ್ನುಡಿ ಬರೆದು ಅಭಿಪ್ರಾಯ ವ್ಯಕ್ತಪಡಿಸಿ ಪೂರ್ವ ನಿರ್ಣಯ ಆಗದಿರಲೆಂದು ಯಾರಿಂದಲೂ ಏನನ್ನು ಬರೆಸಿಲ್ಲ. ನೇರವಾಗಿ ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿರುತ್ತೇನೆ……
ಓದಿದ ನಂತರ ಅವಶ್ಯವೆನಿಸಿದರೆ ದಯವಿಟ್ಟು ಈ ಕೆಳಗಿನ ನನ್ನ ನಂಬರಿಗೆ ಸಂಪರ್ಕಿಸಿ
ನನ್ನೊಂದಿಗೆ ಮಾತನಾಡಬಹುದು. ಪುಸ್ತಕ ಬೇಕಾದಲ್ಲಿ ಸ್ನೇಹ ಬುಕ್ ಹೌಸ್ನ ಶ್ರೀ ಕೆ.ಬಿ. ಪರಶಿವಪ್ಪ ( 9845031335 ) ಅವರನ್ನು ಸಂಪರ್ಕಿಸಬಹುದು.
ನಿಮಗೆ ತುಂಬಾ ಇಷ್ಟವಾದಲ್ಲಿ ಯಾವುದಾದರೂ ನಿಮ್ಮ ವೈಯಕ್ತಿಕ ಅಥವಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೊಡುಗೆಯಾಗಿ ಈ ಪುಸ್ತಕವನ್ನು ಕೊಡಬಹುದು. ಯುವ ಜನಾಂಗಕ್ಕೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ವ್ಯಾಪಾರಸ್ಥರಿಗೆ ಇದನ್ನು ತಲುಪಿಸುವ ಕೆಲಸ ನಿಮ್ಮಿಂದಲೇ ಆಗಲಿ ಎಂದು ಆಶಿಸುತ್ತಾ……,
ಇಂದಿನ ಒಡೆದ ಮನಸ್ಸುಗಳ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳ ಪುನರುಜ್ಜೀಕರಣದ ಮನಸ್ಸುಗಳ ಅಂತರಂಗದ ಚಳವಳಿ ನಿರಂತರವಾಗಿ ಜಾರಿಯಲ್ಲಿರಲಿ…
ನನ್ನ ಬದುಕು ರೂಪುಗೊಳ್ಳಲು ಅನೇಕ ಆತ್ಮೀಯರ ಕೊಡುಗೆ ಸಾಕಷ್ಟು ಇದೆ. ಅವರನ್ನು ಮನದಲ್ಲೇ ಸ್ಮರಿಸುತ್ತಾ…..
ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು
ಪುಸ್ತಕದ ಪ್ರತಿ ಕಾಯ್ದಿರಿಸಲು ಸಂಪರ್ಕಿಸಿ.
ಸ್ನೇಹ ಬುಕ್ ಹೌಸ್
ಶ್ರೀ ಕೆ. ಬಿ. ಪರಶಿವಪ್ಪ.
ಮೊಬೈಲ್ ಸಂಖ್ಯೆ..
9845031335…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….










