--Ads--

ಜನರ ಮನದಲ್ಲಿ  ಜಿಯಾಉಲ್ಲಾ  ಸಾಬ್ ಜಿಂದಾಬಾದ್ !

On: May 20, 2026 3:17 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಜನರ ಮನದಲ್ಲಿ  ಜಿಯಾಉಲ್ಲಾ  ಸಾಬ್ ಜಿಂದಾಬಾದ್ !

“””””””””””””””””””””””””””””””””””””””

ರಾಮನಗರ ಪುರಸಭೆಯ ಮಾಜಿ ಅಧ್ಯಕ್ಷ ಹಾಜಿ ಸೈಯದ್ ಜಿಯಾಉಲ್ಲಾ  ಅವರು ನೆನ್ನೆ (೧೮.೦೫.೨೦೨೬) ಅಸ್ತಂಗತರಾದ ಸುದ್ದಿ ತಿಳಿದು ದುಃಖವಾಯಿತು; ಅವರ ಆಡಳಿತದ ಕೆಲವು ಘಟನೆಗಳೂ ಹಾಗೆ ನೆನಪಿಗೆ ಬಂದವು. ಶ್ರೀ ಜಿಯಾ ಉಲ್ಲಾ  ಅವರು ಸಾರ್ವಜನಿಕ ಜೀವನದಲ್ಲಿ  ಸಾಮಾಜಿಕ ಬದ್ಧತೆ, ಧಾರ್ಮಿಕ ಸಹಿಷ್ಣುತೆ ಹಾಗೂ ಅಭಿವೃದ್ಧಿ  ಕಾರ್ಯಗಳಿಗೆ ಹೆಸರಾಗಿದ್ದರು. ಸರಳತೆ, ವಿನಯ, ಹಸನ್ಮುಖ ಭಾವ ಮತ್ತು ಮಾನವೀಯತೆ ಮೈಗೂಡಿಸಿಕೊಂಡಿದ್ದ  ಅವರು ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುವುದಷ್ಟೇ ಅಲ್ಲದೆ ಜನರ ಸಮಸ್ಯೆಗಳ ಪರಿಹಾರಕ್ಕೂ ಸ್ಪಂದಿಸುತ್ತಿದ್ದರು. ಹಾಗಾಗಿ ಆ ಗುಣವೇ ಅವರನ್ನು ಪುರಸಭೆಯ ಅಧ್ಯಕ್ಷ ಗಾದಿಯವರೆಗೂ ಕರೆತಂದಿತ್ತು ಎಂದರೆ ತಪ್ಪಾಗಲಾರದು.
ಅವರು ಸಮಾಜದ ಎಲ್ಲ  ವರ್ಗಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ನಗರದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡಿದ್ದರು. ಪಟ್ಟಣದ ವಿಸ್ತರಣೆ, ವ್ಯಾಪಾರ-ವಹಿವಾಟುಗಳಿಗೆ ಉತ್ತೇಜನ, ಸಾರ್ವಜನಿಕ ಸೌಕರ್ಯಗಳ ಅಭಿವೃದ್ಧಿಗೂ ಗಮನ ನೀಡಿದ್ದರು. ಅದರಲ್ಲೂ  ವಿಶೇಷವಾಗಿ ‘ಅಂಬೇಡ್ಕರ್ ಭವನ’ ನಿರ್ಮಾಣ ಕಾರ್ಯಕ್ಕೆ ಅವರು ತೋರಿದ ದೃಢತೆ,  ಆಡಳಿತಾತ್ಮಕ ಅಡೆತಡೆಗಳ ನಿವಾರಣೆ, ನಗರದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅದು ಮಹತ್ವದ ಕೇಂದ್ರವಾಗುವಂತೆ ಮಾಡುವ ದೃಷ್ಟಿಕೋನ, ಎಲ್ಲವೂ ಮೆಚ್ಚುಗೆಗೆ ಅರ್ಹವಾಗಿವೆ. ಇಂದು ಅಂಬೇಡ್ಕರ್ ಭವನ ಹತ್ತು ಹಲವು ಚಟುವಟಿಕೆಗಳ ಕೇಂದ್ರವಾಗಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿರುವ ಹಿಂದೆ ಶ್ರೀ ಜಿಯಾ ಉಲ್ಲಾ  ಅವರ ಅಂದಿನ ಶ್ರಮ ಖಂಡಿತ ಇದೆ.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿರಂತರವಾಗಿ ಒತ್ತಾಯ ಹೇರಿದ್ದು ಅಂದಿನ ಶಿವಶಂಕರ್ ನೈತೃತ್ವದ ತಾಲ್ಲೂಕು ದಲಿತ ಸಂಘರ್ಷ ಸಮಿತಿಯೇ ಆಗಿತ್ತಾದರೂ ಅದಕ್ಕೆ ಬೆಂಬಲವಾಗಿ ಹಲವು ಜಾತ್ಯತೀತ ಮನಸ್ಸುಗಳು, ಪತ್ರಕರ್ತ ಬಂಧುಗಳು ಇದ್ದರು. ಎಲ್ಲ  ಕಟ್ಟಡಗಳಂತೆ ಅಂಬೇಡ್ಕರ್ ಭವನವೂ ಕೇವಲ ಒಂದು ಕಟ್ಟಡವಾದರೆ ಮಾತ್ರ ಸಾಲದು. ಅದು ಸಮಾಜದ ಹಿಂದುಳಿದ ಮತ್ತು ಶೋಷಿತ ವರ್ಗಗಳಿಗೆ ಆತ್ಮಗೌರವದ ಸಂಕೇತವಾಗಬೇಕು ಎನ್ನುವ ಆಶಯವಿತ್ತು. ಅದಕ್ಕೆ ಪೂರಕವಾಗಿ ಅಲ್ಲಿ  ಸಭೆಗಳು, ಸಾಮಾಜಿಕ ಕಾರ್ಯಕ್ರಮಗಳು, ವಿದ್ಯಾರ್ಥಿ ಯುವಜನ ಚಟುವಟಿಕೆಗಳು ಮತ್ತು ಸಾರ್ವಜನಿಕ ಚರ್ಚೆಗಳು ನಡೆಯುವ ಸ್ಥಳವಾಗಿ ಭವನವನ್ನು ರೂಪಿಸುವ ಆಲೋಚನೆಗೆ ಎಲ್ಲರಿಂದ ಉತ್ತೇಜನವೂ ದೊರೆತಿತ್ತು. ಇದೆಲ್ಲವನ್ನೂ ಚಾಣಾಕ್ಷತೆಯಿಂದ ಗ್ರಹಿಸಿದ್ದ  ಜಿಯಾ ಉಲ್ಲಾ  ಅವರು ಹಿಂದೆ ಮುಂದೆ ನೋಡದೆ ಅಂದು ಅಂಬೇಡ್ಕರ್ ಭವನಕ್ಕೆ ಅಡಿಗಲ್ಲು ಹಾಕೇಬಿಟ್ಟರು. ಹಾಗಾಗಿ ಇಂದು ನಗರದ ಹೃದಯ ಭಾಗದಲ್ಲಿ ಈ ಭವ್ಯ ಭವನ ನೆಲೆನಿಂತಿದೆ; ನಗರಸಭೆಗೂ ಆದಾಯ ಮೂಲವಾಗಿದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಾಗಿದ್ದ  ಜಾಗದ ಪಕ್ಕದಲ್ಲಿದ್ದ ಕುರಿ ಪೋಷಕರ ಸಂಘದ ಮನವೊಲಿಸಿ ಅವರನ್ನು ಬೇರೆಡೆಗೆ ಸ್ಥಳಾಂತರ ಮಾಡಿದ ಜೊತೆಗೆ, ಅಲ್ಲೇ ಇದ್ದ ತಾಲ್ಲೂಕು ಪಂಚಾಯ್ತಿಗೆ ಸೇರಿದ್ದ ಶಿಥಿಲ ಕಟ್ಟಡವನ್ನೂ ಸಂಪೂರ್ಣವಾಗಿ ಕೆಡವಿ ‘ಅಂಬೇಡ್ಕರ್ ಭವನ’ವನ್ನು ಈಗಿರುವಷ್ಟು ವಿಶಾಲವಾಗಿ ಕಟ್ಟಿದ ಕೀರ್ತಿಯೂ ಜಿಯಾ ಉಲ್ಲಾ ಅವರಿಗೇ ಸಲ್ಲಬೇಕು. ಹಾಗಾಗಿ ಅವರ ಪ್ರಾಮಾಣಿಕ ಆಡಳಿತ ಮತ್ತು ಕಾಳಜಿಯನ್ನು ನಾವ್ಯಾರೂ ಮರೆಯುವಂತಿಲ್ಲ.; ಮರೆಯಬಾರದು.
ಹಾಗೆಯೇ ಈ ಅಂಬೇಡ್ಕರ್ ಭವನ ಕಟ್ಟಡದ ಆರಂಭಕ್ಕೂ ಮುನ್ನ ರಾಮನಗರದ ಪ್ರವಾಸಿ ಮಂದಿರದಲ್ಲಿ ನಡೆದ ಹಲವಾರು ಪೂರ್ವಭಾವಿ ಸಭೆಗಳಲ್ಲಿ  ತಾಲ್ಲೂಕಿನ ಸಮಾನ ಮನಸ್ಕರ ಒಂದು ಸಭೆ ನನಗೆ ತುಂಬಾ ವಿಶಿಷ್ಟವಾದುದಾಗಿತ್ತು. ಆ ಸಭೆಯ ಅಧ್ಯಕ್ಷತೆಯನ್ನು ಹಾಜಿ ಸೈಯದ್ ಜಿಯಾಉಲ್ಲಾ ಅವರೇ ವಹಿಸಿದ್ದರು. ಅಂದಿನ ಆ ಸಭೆಯ ಸಂಪೂರ್ಣ ರೂಪುರೇಷೆಯನ್ನೆಲ್ಲಾ ನಾನೇ ದಾಖಲಿಸಿದ್ದೆ . ಸಭೆಯಲ್ಲಿ ಚರ್ಚೆಯಾದ ಎಲ್ಲ ವಿವರಗಳನ್ನೂ ಚಾಚು ತಪ್ಪದೆ ಎಳೆಎಳೆಯಾಗಿ ಬಿಡಿಸಿ ಬರೆದಿದ್ದರಿಂದ ಕೊನೆಯಲ್ಲಿ ಎಲ್ಲವನ್ನೂ ಸಭೆಗೆ ಓದಿ ತಿಳಿಸಿದ್ದೆ. ಅದನ್ನು  ಕೇಳಿಸಿಕೊಂಡ ಜಿಯಾ ಉಲ್ಲಾ  ಅವರು ಬಾಯಿ ಮೇಲೆ ಬೆರಳಿಟ್ಟುಕೊಂಡು ಸಭೆಯಲ್ಲಿ  ಚರ್ಚೆಯಾದ ಯಾವ ವಿವರಗಳನ್ನೂ ಬಿಡದೆ ಅದೆಷ್ಟು ಚೆನ್ನಾಗಿ ಮತ್ತು ವೇಗವಾಗಿ ಮಾತುಗಳನ್ನು ಅಕ್ಷರವಾಗಿಸಿದ್ದೀರಿ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು; ಅವರ ಸಮೀಪವೇ ಕುಳಿತಿದ್ದ ನನ್ನ ಬೆನ್ನು ತಟ್ಟಿದ್ದರು. ಆ ಸಭೆಯಲ್ಲಿ  ಬಹುತೇಕ ನಮ್ಮ  ಒಡನಾಡಿಗಳೆಲ್ಲರೂ ಇದ್ದರು. ಆ ಸಭೆಯಲ್ಲಿ ಚರ್ಚೆಯಾದ ವಿವರಗಳಿಗೆ ಅನುಗುಣವಾಗಿಯೇ ಇಂದು ಅಂಬೇಡ್ಕರ್ ಭವನವೂ ಇದೆ. ಅದುವೇ ಖುಷಿಯ ವಿಚಾರ. ಆದರೆ ಅದರೊಳಗೊಂದು ಗ್ರಂಥಾಲಯ ಇದ್ದಿದ್ದರೆ, ಜ್ಞಾನ ದಾಹಿಗಳಿಗೆ ಆಸರೆಯಾಗಿದ್ದಿದ್ದರೆ ಇನ್ನಷ್ಟು ಚೆನ್ನಿತ್ತು. ಮುಂದಿನ ದಿನಗಳಲ್ಲಿ ಅದಾಗಲಿ ಎಂದು ಆಶಿಸುತ್ತೇನೆ.
ಇನ್ನು ರಾಮನಗರದ ವ್ಯಾಪಾರ ವಲಯವನ್ನು ಬಲಪಡಿಸಲು ಹಾಗೂ ಸಣ್ಣ ವ್ಯಾಪಾರಿಗಳಿಗೆ ವ್ಯವಸ್ಥಿತ ಸ್ಥಳ ಒದಗಿಸಲು ನಗರಸಭೆ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಅವರ ಇನ್ನೊಂದು ಮಹತ್ವದ ಹೆಜ್ಜೆಯಾಗಿತ್ತು. ಈ ಶಾಪಿಂಗ್ ಕಾಂಪ್ಲೆಕ್ಸ್ ಮೂಲಕ ನಗರಸಭೆಗೆ ಆದಾಯ ಬರಬೇಕು, ಅದೇ ಸಮಯದಲ್ಲಿ  ಸಣ್ಣ ವ್ಯಾಪಾರಿಗಳಿಗೆ ಸುರಕ್ಷಿತ ಹಾಗೂ ಸೌಲಭ್ಯಯುತ ಸ್ಥಿರ ವಾಣಿಜ್ಯ ಮಳಿಗೆಗಳು ದೊರೆಯಬೇಕು ಎಂಬ ದ್ವಿಪಕ್ಷೀಯ ಉದ್ದೇಶ ಈ ಯೋಜನೆಯ ಹಿಂದೆ ಇತ್ತು. ಇದು ಅಂದು ಬೆಳೆಯುತ್ತಿದ್ದ ನಗರದ ಅಭಿವೃದ್ಧಿಯ ಜೊತೆಗೆ  ಆರ್ಥಿಕ ಚಟುವಟಿಕೆಗಳಿಗೂ ಬಲ ತುಂಬುವ ಯೋಜನೆಯಾಗಿತ್ತು. ಹಾಗಾಗಿ ಅಂಬೇಡ್ಕರ್ ಭವನದ ಜೊತೆಗೆ ಶಾಪಿಂಗ್ ಕಾಂಪ್ಲೆಕ್ಸ್ ಗೂ ಅಡಿಗಲ್ಲು ಹಾಕಿ ಇಂದು ಅದೂ ಕೂಡ ತಲೆ ಎತ್ತಿ ನಿಂತಿದೆ. ನೂರಾರು ವ್ಯಾಪಾರಿಗಳಿಗೆ ಜೀವನ ನೀಡಿದೆ.
ಒಟ್ಟಿನಲ್ಲಿ  ಈ ಎರಡೂ ಯೋಜನೆಗಳು ಹಾಜಿ ಸೈಯದ್ ಜಿಯಾಉಲ್ಲಾ ಅವರಿಗೆ ಹೆಸರು ತಂದುಕೊಟ್ಟಿವೆ. ಒಂದು ಕಡೆ ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ಚಟುವಟಿಕೆಗಳಿಗೆ ವೇದಿಕೆಯಾದ ಅಂಬೇಡ್ಕರ್ ಭವನ, ಮತ್ತೊಂದು ಕಡೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಿದ ಶಾಪಿಂಗ್ ಕಾಂಪ್ಲೆಕ್ಸ್ ! ಎರಡೂ ಅವರ ಜನಪರ ಆಡಳಿತದ ಉದಾಹರಣೆಗಳಾಗಿವೆ. ಇದೇ ಕಾರಣಕ್ಕೆ ಅವರು ಸಾರ್ವಜನಿಕರ ನೆನಪಿನಲ್ಲಿ ಇಂದಿಗೂ ಶಾಶ್ವತವಾಗಿ ಉಳಿದಿದ್ದಾರೆ. ಅವರ ಅಂತಿಮ ವಿದಾಯಕ್ಕೆ ನಮ್ಮ ಭಾವಪೂರ್ಣ ನಮನಗಳು. ಜಿಂದಾಬಾದ್ ಜಿಯಾ ಉಲ್ಲಾ ಸಾಬ್!

ಅಂಕ್ನಳ್ಳಿ ಜಯರಾಂ. ಮುಂಬಯಿ.

WhatsApp

Join Now

Telegram

Join Now

Instagram

Join Now