ವಿಜಯ ದರ್ಪಣ ನ್ಯೂಸ್…..
ಅಂತರರಾಷ್ಟ್ರೀಯ ಬೆಳಕಿನ ದಿನ ಮೇ 16
======================
ಜಗತ್ತನ್ನು ಬೆಳಗಿಸುವ ಬೆಳಕಿನ ವೈಭವ

ಪ್ರಕೃತಿ ಭುವಿಗೆ, ಜ್ಞಾನ ಬುದ್ಧಿಗೆ ಬೆಳಕು ನೀಡಿದರೆ, ವಿಜ್ಞಾನ ಕತ್ತಲೆಗೆ ಬೆಳಕು ನೀಡುತ್ತದೆ. ಹಾಗಾಗಿ ಅಜ್ಞಾನವನ್ನು ದೂರ ಮಾಡುವ ಶಕ್ತಿ ಜ್ಞಾನಕ್ಕಿದ್ದರೆ, ಕತ್ತಲೆಯನ್ನು ದೂರ ಮಾಡುವ ಶಕ್ತಿ ಬೆಳಕಿಗಿದೆ.
ಮಾನವ ಜೀವನದಲ್ಲಿ ಬೆಳಕಿನ ಸ್ಥಾನ ಅತ್ಯಂತ ಮಹತ್ತರವಾದದ್ದು. ಬೆಳಕು ಇಲ್ಲದೆ ಜೀವನವೇ ಅಸಾಧ್ಯ ಅದರ ಕಲ್ಪನೆಯು ಕೂಡ ಸಾಧ್ಯವಿಲ್ಲ.
ಒಂದೇ ಒಂದು ದಿವಸ ನಮಗೆ ಕರೆಂಟ್ ಇಲ್ಲದೆ ಜೀವನ ನೆಡಸಲು ಸಾಧ್ಯವೇ ಇಲ್ಲವೆಂಬತೆ ಈ ಆಧುನಿಕ ಜಗತ್ತಿನ ಜನ ಜೀವನ ಕೃತಕತೆಯ ಬೆಳಕಿಗೆ ತನ್ನನ್ನು ತಾನು ಆರ್ಪಿಸಿಕೊಂಡಿದೆ. ಆದ್ದರಿಂದ ಪ್ರಕೃತಿಯಲ್ಲಿ ಸೂರ್ಯನ ಬೆಳಕು ಜೀವ ಜಗತ್ತಿಗೆ ಜೀವನಾಡಿಯಾಗಿದ್ದರೆ, ಜ್ಞಾನದ ಬೆಳಕು ಮಾನವನ ಬದುಕಿಗೆ ದಿಕ್ಕು ತೋರಿಸುವ ಶಕ್ತಿಯಾಗಿದೆ, ಅದೇರೀತಿ ವಿಜ್ಞಾನದಿಂದ ಕೃತಕವಾಗಿ ಕಂಡುಹಿಡಿದ ಬೆಳಕು ಕೂಡ ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಕೃಷಿ, ಸಂವಹನ ಎಲ್ಲ ಕ್ಷೇತ್ರಗಳಲ್ಲಿಯೂ ಮಾನವನಿಗೆ ಜೀವನಾಡಿಯಂತೆ ಪ್ರಮುಖ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸೂರ್ಯನ ಬೆಳಕು ನಮ್ಮ ಜಗತ್ತನ್ನು ಬೆಳಗಿಸಲು ಎಷ್ಟು ಮುಖ್ಯವೂ ಕೃತಕ ಬೆಳಕು ವೈಜ್ಞಾನಿಕ ಆವಿಷ್ಕಾರಕ್ಕೆ ಅಷ್ಟೇ ಮುಖ್ಯ ಮೂಲ ಅಡಿಪಾಯವಾಗಿದ್ದು ಸೂಕ್ಷ್ಮದರ್ಶಕಗಳು ಮತ್ತು ಎಕ್ಸ್-ರೇ ಸೇರಿದಂತೆ ಎಲ್ಲಾ ವೈದ್ಯಕೀಯ ಕ್ಷೇತ್ರ ಹಾಗೂ ದೂರದರ್ಶಕಗಳನ್ನು ಬಳಸಿಕೊಂಡು ಖಗೋಳಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಸೇರಿ ಪ್ರತಿಯೊಂದು ಕ್ಷೇತ್ರಕ್ಕೂ ಬೆಳಕು ಅತ್ಯವಶ್ಯವಾಗಿ ಬೇಕಾಗಿದೆ. ಇಂದು ಲೇಸರ್‌ಗಳಂತಹ ಬೆಳಕು ಆಧಾರಿತ ತಂತ್ರಜ್ಞಾನಗಳು ಸಂವಹನ, ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಯನ್ನುಂಟು ಮಾಡಿವೆ.
ಬೆಳಕಿನ ವೈಜ್ಞಾನಿಕ ಮಹತ್ವವನ್ನು ನೋಡುವುದಾದರೆ, ಭೂಮಿಯ ಮೇಲಿನ ಪ್ರತಿಯೊಂದು ಜೀವವೂ ಬೆಳಕಿನ ಮೇಲೆ ಅವಲಂಬಿತವಾಗಿದೆ. ಸಸ್ಯಗಳು ಸೂರ್ಯನ ಬೆಳಕಿನಿಂದ ಆಹಾರವನ್ನ ತಯಾರಿಸಿಕೊಳ್ಳುತ್ತವೆ ಬೆಳಕಿನ ಸಹಾಯದಿಂದಲೇ ಮಾನವನು ಕೂಡ ಆಹಾರ ಹಾಗೂ ಜೀವನಾವಶ್ಯ ವಸ್ತುಗಳನ್ನು ತಯಾರಿಸಿಕೊಳ್ಳಲು, ನೋಡಲು, ಬಣ್ಣಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ವಿದ್ಯುತ್ ದೀಪಗಳು, ಲೇಸರ್ ಕಿರಣಗಳು, ಫೈಬರ್ ಆಪ್ಟಿಕ್ ತಂತ್ರಜ್ಞಾನ, ಸೌರಶಕ್ತಿ, ವೈದ್ಯಕೀಯ ಪರೀಕ್ಷೆಗಳು ಇವೆಲ್ಲವೂ ಬೆಳಕಿನ ತತ್ವಗಳ ಮೇಲೆಯೇ ನಿಂತಿವೆ.
ಇಂದು ಇಂಟರ್ನೆಟ್ ಸಂಪರ್ಕದಿಂದ ಹಿಡಿದು ಶಸ್ತ್ರಚಿಕಿತ್ಸೆಯ ತನಕ ಬೆಳಕಿನ ತಂತ್ರಜ್ಞಾನವು ಮಹತ್ತರ ಪಾತ್ರವಹಿಸಿದೆ. ಫೈಬರ್ ಆಪ್ಟಿಕ್ ಕೇಬಲ್‌ಗಳ ಮೂಲಕ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಜಗತ್ತಿನ ಮೂಲೆಮೂಲೆಗೂ ಕಳುಹಿಸಲಾಗುತ್ತಿದೆ. ಲೇಸರ್ ಕಿರಣಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆಗೂ ಬಳಸಲಾಗುತ್ತಿದೆ. ಹೀಗಾಗಿ ಬೆಳಕು ಕೇವಲ ಪ್ರಕೃತಿಯ ಅಂಶವಲ್ಲ, ಅದು ಆಧುನಿಕ ನಾಗರಿಕತೆಯ ಆಧಾರವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಕಿನ ಮಹತ್ವ ಅರಿಯಲು 2015ನೇ ವರ್ಷವನ್ನು ವಿಶ್ವಸಂಸ್ಥೆಯು “ಅಂತರರಾಷ್ಟ್ರೀಯ ಬೆಳಕಿನ ವರ್ಷ”ವೆಂದು ಘೋಷಿಸಿತು. ಅದರ ಯಶಸ್ಸಿನ ನಂತರ ಯುನೆಸ್ಕೋ ಸಂಸ್ಥೆ 2018ರಿಂದ ಪ್ರತಿ ವರ್ಷ ಮೇ 16ರಂದು “International Day of Light” ಅನ್ನು ಆಚರಿಸಲು ಆರಂಭಿಸಿತು. ಈ ದಿನಾಂಕವನ್ನು ಆಯ್ಕೆ ಮಾಡಿರುವುದಕ್ಕೂ ವಿಶೇಷ ಕಾರಣವಿದ್ದು. 1960ರ ಮೇ 16ರಂದು ವಿಜ್ಞಾನಿ ಥಿಯೊಡರ್ ಮೈಮನ್ ಮೊದಲ ಬಾರಿಗೆ ಲೇಸರ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಅದೇ ದಿನದ ಸ್ಮರಣಾರ್ಥವಾಗಿ ಈ ದಿನವನ್ನು ಬೆಳಕಿನ ದಿನವಾಗಿ ಆಚರಿಸಲಾಗುತ್ತಿದೆ. ಈ ಅಂತರರಾಷ್ಟ್ರೀಯ ಬೆಳಕಿನ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಬೆಳಕಿನ ವೈಜ್ಞಾನಿಕ, ತಾಂತ್ರಿಕ ಹಾಗೂ ಸಾಮಾಜಿಕ ಮಹತ್ವದ ಕುರಿತು ಜಾಗೃತಿ ಮೂಡಿಸುವುದು, ಹಾಗೂ ಬೆಳಕು ಮಾನವ ಜೀವನದ ಅಭಿವೃದ್ಧಿಗೆ ಹೇಗೆ ಸಹಕಾರಿಯಾಗಿದೆ ಎಂಬುದನ್ನು ಸಮಾಜಕ್ಕೆ ತಿಳಿಸುವುದರ ಜೊತೆಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಳಕಿನ ಬಳಕೆಯ ಮಹತ್ವವನ್ನು ಪ್ರಚಾರ ಮಾಡುವುದು ಈ ದಿನದ ಪ್ರಮುಖ ಆಶಯವಾಗಿದೆ. ಇದರೊಂದಿಗೆ ಸೌರಶಕ್ತಿ ಸೇರಿದಂತೆ ಪರಿಸರ ಸ್ನೇಹಿ ಬೆಳಕಿನ ಮೂಲಗಳನ್ನು ಉತ್ತೇಜಿಸುವುದು, ಶಕ್ತಿಯ ಸಂರಕ್ಷಣೆಯ ಅಗತ್ಯತೆಯನ್ನು ಮನವರಿಕೆ ಮಾಡಿಸುವುದು ಹಾಗೂ ಶಿಕ್ಷಣ, ಆರೋಗ್ಯ, ಸಂವಹನ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಬೆಳಕಿನ ಪಾತ್ರವನ್ನು ಪರಿಚಯಿಸುವುದೂ
ಸಹ ಈ ದಿನದ ಉದ್ದೇಶವಾಗಿದ್ದು “ಜ್ಞಾನವೇ ಬೆಳಕು” ಎಂಬ ಸಂದೇಶದ ಮೂಲಕ ಅಜ್ಞಾನ, ಅಂಧಶ್ರದ್ಧೆ ಮತ್ತು ಅಸಮಾನತೆ ಎಂಬ ಸಾಮಾಜಿಕ ಕತ್ತಲೆಯನ್ನು ದೂರ ಮಾಡಿ ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರೇರಣೆಯನ್ನು ಈ ದಿನ ನೀಡುತ್ತದೆ.
ಆದರೆ, ಇಂದು ಜಗತ್ತು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಅನೇಕ ಕಡೆಗಳಲ್ಲಿ ವಿದ್ಯುತ್ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಇನ್ನು ಇದ್ದು ಸೌರಶಕ್ತಿಯಂತಹ ಪರಿಸರ ಸ್ನೇಹಿ ಬೆಳಕಿನ ವ್ಯವಸ್ಥೆಗಳನ್ನು ಹೆಚ್ಚು ಬಳಸುವ ಅಗತ್ಯತೆ ಇನ್ನೂ ಇದೆ. ವಿದ್ಯುತ್ ಉಳಿತಾಯ ಮಾಡುವ LED ದೀಪಗಳು, ನವೀಕರಿಸಬಹುದಾದ ಶಕ್ತಿಸಾಧನಗಳು ಪರಿಸರ ಸಂರಕ್ಷಣೆಗೆ ಸಹಕಾರಿಯಾಗುತ್ತವೆ.
ಅಂತರರಾಷ್ಟ್ರೀಯ ಬೆಳಕಿನ ದಿನವು ಕೇವಲ ವಿಜ್ಞಾನಿಗಳ ದಿನವಲ್ಲ, ಅದು ಪ್ರತಿಯೊಬ್ಬ ಮಾನವನ ಬದುಕಿಗೂ ಸಂಬಂಧಿಸಿದ ದಿನವಾಗಿದೆ. ಬೆಳಕು ಪ್ರಕೃತಿಯ ಅಮೂಲ್ಯ ಕೊಡುಗೆ ಮಾತ್ರವಲ್ಲ, ಪ್ರಗತಿಯ ಪ್ರತೀಕವೂ ಹೌದು ಸಂಸ್ಕಾರ ಮತ್ತು ಸಂಸ್ಕೃತಿಯ ದ್ಯೋತಕವೂ ಹೌದು. ನಮ್ಮ ಜೀವನದಲ್ಲಿ ಜ್ಞಾನದ ಬೆಳಕು, ಮಾನವೀಯತೆಯ ಬೆಳಕು ಮತ್ತು ಸಕಾರಾತ್ಮಕ ಚಿಂತನೆಯ ಬೆಳಕು ಸದಾ ಬೆಳಗುತ್ತಿರಬೇಕು ಆಗ ಮಾತ್ರ ಸಮಾಜವೂ ಸುಶಿಕ್ಷಿತ ಜೀವನವೂ ಮೌಲ್ಯಯುತ ಹಾಗೆಯೇ ಸಮಾಜ ಸಕಾರಾತ್ಮಕವಾಗಿ ಬೆಳಗಲು ಸಾಧ್ಯ. ಜೊತೆಗೆ ಸಾಮಾಜಿಕ ಬದುಕಿನಲ್ಲಿ ದ್ವೇಷ, ಅಸಮಾನತೆ ಅಜ್ಞಾನ ಎಂಬ ಕತ್ತಲೆಗಳನ್ನು ದೂರ ಮಾಡಲು ಪ್ರೀತಿ, ಶಿಕ್ಷಣ ಮತ್ತು ಮಾನವೀಯತೆಯ ಬೆಳಕು ಅತ್ಯಗತ್ಯವಾಗಿ ಬೇಕು.
ಬೆಳಕು ಮತ್ತು ಮಾನವ ಬದುಕಿಗೂ ಅವಿನಾಭಾವ ಸಂಬಂಧವಿದ್ದು ಬೆಳಕು ಎಂದರೆ ಕೇವಲ ದೀಪದ ಕಿರಣವಲ್ಲ ಅದು ಹೂಸತನದ ಸಂಕೇತ, ಜ್ಞಾನದ ಸಂಕೇತ, ಮಾನವೀಯತೆಯ ಸಂಕೇತ. ಒಂದು ಸಣ್ಣ ದೀಪ ಸಾವಿರಾರು ಕತ್ತಲೆಗಳನ್ನು ದೂರ ಮಾಡಬಲ್ಲದು ಅದೇ ರೀತಿ ಒಬ್ಬ ವ್ಯಕ್ತಿಯ ಉತ್ತಮ ಚಿಂತನೆಗಳು ಅನೇಕ ಜೀವಗಳಿಗೆ ಪ್ರೇರಣೆಯಾಗಿ ಸಾವಿರಾರು ಅಂಧಮನಸುಗಳಿಗೆ ಬೆಳಕಾಗಬಲ್ಲದು.
ಅಕ್ಷರ ಜ್ಞಾನವಿಲ್ಲದ ಮನಸ್ಸು ಕತ್ತಲೆಯಂತಿದ್ದರೆ, ಶಿಕ್ಷಣವು ಬೆಳಕಿನಂತೆ ಬದುಕಿಗೆ ದಾರಿ ತೋರಿಸುತ್ತದೆ. ಆದ್ದರಿಂದಲೇ “ಜ್ಞಾನವೇ ಬೆಳಕು” ಎಂದು ಹೇಲುವುದು. ಬೆಳಕಿನ ದಿನವು ವಿಜ್ಞಾನಕ್ಕೆ ಮಾತ್ರ ಸೀಮಿತವಲ್ಲ, ಅದು ಮಾನವೀಯ ಮೌಲ್ಯಗಳಿಗೂ ಸಂಬಂಧಿಸಿದ ದಿನವಾಗಿದೆ.
ಒಂದು ದೀಪ ಇನ್ನೊಂದು ದೀಪವನ್ನು ಹಚ್ಚಿದಾಗ ತನ್ನ ಬೆಳಕನ್ನು ಕಳೆದುಕೊಳ್ಳುವುದಿಲ್ಲ
ಬದಲಿಗೆ ಇನ್ನೂ ಹೆಚ್ಚಾಗುತ್ತದೆ, ಅದೇ ರೀತಿ ವಿದ್ಯೆ ಮತ್ತು ಜ್ಞಾನದ ಬೆಳಕು ಕೂಡ ಹಂಚಿದಷ್ಟು ಹೆಚ್ಚಾಗುತ್ತದೆ. ಒಟ್ಟಾರೆ ಅಂತರರಾಷ್ಟ್ರೀಯ ಬೆಳಕಿನ ದಿನವು ಕೃತಕ ಬೆಳಕಿನ ವೈಜ್ಞಾನಿಕ ಮಹತ್ವವನ್ನು ಮಾತ್ರವಲ್ಲ, ಮಾನವ ನಾಗರಿಕತೆಯ ಅಭಿವೃದ್ಧಿಯಲ್ಲಿ ಅದರ ಅನಿವಾರ್ಯ ಪಾತ್ರವನ್ನೂ ಸ್ಮರಿಸುವ ಮಹತ್ವದ ದಿನವಾಗಿದೆ. ಬೆಳಕು ಜಗತ್ತಿನ ಭೌತಿಕ ಕತ್ತಲೆಯನ್ನು ನಿವಾರಿಸುವ ಶಕ್ತಿಯಾಗಿದ್ದರೆ, ಜ್ಞಾನ ಮತ್ತು ಶಿಕ್ಷಣ ಮಾನವ ಮನಸ್ಸಿನ ಅಜ್ಞಾನವನ್ನು ದೂರ ಮಾಡುವ ದಿವ್ಯಶಕ್ತಿಗಳಾಗಿರುವುದರಿಂದ ಇಂದಿನ ತಂತ್ರಜ್ಞಾನ ಯುಗದಲ್ಲಿ ಬೆಳಕಿನ ಆವಿಷ್ಕಾರಗಳು ಬದುಕನ್ನು ಬಹಳ ಸುಗಮ ಹಾಗೂ ಸುಂದರಗೊಳಿಸುತ್ತಿವೆ. ಆದ್ದರಿಂದ ಬೆಳಕಿನ ಸದ್ಬಳಕೆ, ಶಕ್ತಿಯ ಸಂರಕ್ಷಣೆ ಹಾಗೂ ವೈಜ್ಞಾನಿಕ ಮನೋಭಾವದ ಬೆಳೆಸುವಿಕೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.
ಕತ್ತಲೆಯನ್ನು ಶಪಿಸುವುದಕ್ಕಿಂತ ಒಂದು ದೀಪ ಹಚ್ಚುವುದು ಶ್ರೇಷ್ಠ ಎಂಬಂತೆ, ಸಮಾಜದಲ್ಲಿ ಅಜ್ಞಾನ, ಅಸಮಾನತೆ ಮತ್ತು ನಿರಾಶೆಯ ಕತ್ತಲೆಯನ್ನು ದೂರ ಮಾಡಿ ಜ್ಞಾನ, ಮಾನವೀಯತೆ ಮತ್ತು ಪ್ರಗತಿಯ ಬೆಳಕನ್ನು ಹರಡುವ ಸಂಕಲ್ಪವನ್ನು ಈ ದಿನ ನಮಗೆ ನೀಡುತ್ತದೆ.

ಗೀತಾಂಜಲಿ ಎನ್ ಎಮ್
ಸೋಮವಾರಪೇಟೆ. ✍️🌹
===================











