--Ads--

ಕದಡುವ ಭಾವನೆಗಳು ಮತ್ತು ವಾಸ್ತವ………

On: May 16, 2026 3:15 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕದಡುವ ಭಾವನೆಗಳು ಮತ್ತು ವಾಸ್ತವ………

ಬೀದಿ ಬದಿಯಲ್ಲಿ ಅನಾಥ ಶವದಂತೆ ಜೀವಂತ ವ್ಯಕ್ತಿಗಳು ಮಲಗಿರುವಾಗ ಅಪ್ಪನ ನೆನಪಾಗುತ್ತದೆ.

ಬಸ್ ನಿಲ್ದಾಣದಲ್ಲಿ ಗಿರಾಕಿಗಳಿಗಾಗಿ ಅಲಂಕಾರ ಮಾಡಿಕೊಂಡು
ನಿಂತಿರುವ ಹೆಣ್ಣುಗಳನ್ನು ನೋಡಿದಾಗ ಅಮ್ಮನ ನೆನಪಾಗುತ್ತದೆ.

ರಾತ್ರಿ ಹನ್ನೆರಡರವರೆಗೂ ಹೋಟೆಲ್ ಗಳಲ್ಲಿ ಪಾತ್ರೆ ತೊಳೆಯುವ
ಪುಟ್ಟ ಕಂದಮ್ಮಗಳನ್ನು ನೋಡಿದಾಗ ಮಗನ ನೆನಪಾಗುತ್ತದೆ.

ಬೆಳ್ಳಂಬೆಳಗ್ಗೆ ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡುವ ವೃದ್ಧರನ್ನು
ನೋಡಿದಾಗ ನನ್ನ ಅಜ್ಜನ ನೆನಪಾಗುತ್ತದೆ.

ಗಿಜಿಬಿಜಿ ಬಸ್ ಸ್ಟಾಂಡ್ ನಲ್ಲಿ ಗುಳೆಬಂದು ತಮ್ಮ ಹರಿದ ಚೀಲಗಳ ಸಮೇತ ಮಕ್ಕಳೊಂದಿಗೆ ಇರುವ ಬಡ ರೈತ ಕುಟುಂಬಗಳನ್ನು ನೋಡಿದಾಗ ನನ್ನದೇ ಕುಟುಂಬ ನೆನಪಾಗುತ್ತದೆ.

ಮಧ್ಯಾಹ್ನಕ್ಕೆಲ್ಲಾ ಕುಡಿದು ಚಿತ್ತಾಗಿ ಪುಟ್ ಪಾತಿನ ಮೇಲೆ ಮಲಗಿರುವ
ಯುವಕರನ್ನು ಕಂಡಾಗ ನನ್ನ ತಮ್ಮನ ನೆನಪಾಗುತ್ತದೆ.

ಉರಿ ಬಿಸಿಲಿನಲ್ಲಿ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ದೊಡ್ಡ ಗಾತ್ರದ ಕಲ್ಲುಗಳನ್ನು ಸಾಗಿಸುವ ಹೆಣ್ಣನ್ನು ನೋಡಿದಾಗ ನನ್ನ ಅಕ್ಕನ ನೆನಪಾಗುತ್ತದೆ.‌

ಆದರೆ,
ಟಿವಿಗಳಲ್ಲಿ, ಪತ್ರಿಕೆಗಳಲ್ಲಿ, ರಸ್ತೆ ಬದಿಯ ದೊಡ್ಡ ಬೋರ್ಡ್ ಗಳಲ್ಲಿ ಸರ್ಕಾರಗಳ ಸಾಧನೆಯ
ದೊಡ್ಡ ದೊಡ್ಡ ಜಾಹೀರಾತುಗಳನ್ನು ನೋಡಿದಾಗ,
ಕೋಪದಿಂದ ನನ್ನ ಪಾದರಕ್ಷೆಗಳ ನೆನಪಾಗುತ್ತದೆ.

ಆಗ ಅದನ್ನು ತೆಗೆದುಕೊಂಡು ನನ್ನನ್ನು ನಾನೇ ಹೊಡೆದುಕೊಂಡು,
ಕಣ್ಣೀರಾಗುತ್ತೇನೆ, ಸಮಾಧಾನ ಮಾಡಿಕೊಳ್ಳುತ್ತೇನೆ.
ನನ್ನದೇ ಜನಗಳ ಧಾರುಣ ಸ್ಥಿತಿಗೆ, ಅಸಹಾಯಕತೆಗೆ,
ಪರಿಹಾರ ಹುಡುಕುವ ಅರೆ ಹುಚ್ಚನಾಗುತ್ತೇನೆ.

ಏಕೆಂದರೆ,

ಅದ್ಭುತ ಸಿನಿಮಾವನ್ನು ನೋಡಿದಾಗ ಮನಸ್ಸು ಅರಳುತ್ತದೆ,
ಭಾವನೆಗಳು ಕೆರಳುತ್ತವೆ, ಹೃದಯ ಕಲಕುತ್ತದೆ,

ಅತ್ಯುತ್ತಮ ಕಾದಂಬರಿಯನ್ನು ಓದಿದಾಗ ಆ ಪಾತ್ರಗಳೇ ನಾವಾಗುತ್ತೇವೆ, ಇಡೀ ವಾತಾವರಣದಲ್ಲಿ ನಾವಿರುವ ಹಾಗೆ ಕಲ್ಪಿಸಿಕೊಳ್ಳುತ್ತೇವೆ.

ಅತ್ಯಾಕರ್ಷಕ ಪ್ರಾಕೃತಿಕ ಸೌಂದರ್ಯದ ದೃಶ್ಯಗಳನ್ನು ನೋಡಿದಾಗ ನಾವೇ ಮ್ಯೆಮರೆಯುತ್ತೇವೆ. ಮನ ಉಲ್ಲಾಸದಾಯಕವಾಗುತ್ತದೆ,

ಉತ್ಕೃಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿದಾಗ ಸಂತೋಷ ಉಕ್ಕಿ ಹರಿಯುತ್ತದೆ. ನಾವೇ ಅದರಲ್ಲಿ ಭಾಗಿಯಾದ ಹಾಗೆ ಅನಿಸುತ್ತದೆ.

ಅಮೋಘ ಸಂಗೀತ ಕೇಳಿದಾಗ ನಾವು ಅದರಲ್ಲಿ ಲೀನವಾಗುತ್ತೇವೆ,
ಹೊಸ ಕಲ್ಪನಾ ಪ್ರಪಂಚದಲ್ಲಿ ಮುಳುಗೇಳುತ್ತೇವೆ….

ಅದಕ್ಕೆ ವಿರುದ್ಧವಾಗಿ,
ಆತ್ಮೀಯರ ಸಾವು, ಅಪಘಾತ, ಆತ್ಮಹತ್ಯೆ ನಮ್ಮನ್ನು ಗಾಢವಾಗಿ ಕಾಡುತ್ತದೆ.

ಸುತ್ತಮುತ್ತಲ ಕೊಳಕು ಪರಿಸರ ಅಸಹ್ಯ ಹುಟ್ಟಿಸುತ್ತದೆ.

ದಿನನಿತ್ಯದ ಭ್ರಷ್ಟತೆಯ ವಿಷಯಗಳು ಕೋಪ ತರಿಸುತ್ತವೆ.

ಸಾರ್ವಜನಿಕ ಅಸಭ್ಯ ವರ್ತನೆಗಳು, ಕೊಲೆ ದರೋಡೆಗಳು ಜಿಗುಪ್ಸೆ ಹುಟ್ಟಿಸುತ್ತವೆ.

ವಂಚನೆ, ದೌರ್ಜನ್ಯಗಳು ಬಹಳವಾಗಿ ಕಾಡುತ್ತವೆ.

ಆದರೆ,
ಈ ಭಾವನೆಗಳು ತಾತ್ಕಾಲಿಕ ಮತ್ತು ಆ ಕ್ಷಣದ ಪ್ರತಿಕ್ರಿಯೆಗಳಾಗಿರುತ್ತವೆ.

ವಾಸ್ತವಕ್ಕೆ, ದಿನನಿತ್ಯದ ಬದುಕಿಗೆ ಮರಳಿದಾಗ, ನಾವು ಇದೇ ವ್ಯವಸ್ಥೆಯ ಭಾಗವಾಗುತ್ತೇವೆ.

ನಮ್ಮನ್ನು ಪುಳಕಗೊಳಿಸಿದ ಅಥವಾ,
ಕಾಡಿದ ವಿಷಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ.

ತಮ್ಮನ್ನು ಪುನರ್ ರೂಪಿಸಿಕೊಳ್ಳಲು ಬಹುತೇಕರಿಗೆ ಆಗುವುದಿಲ್ಲ.
ಅದರಿಂದ ಪ್ರೇರಣೆಗೊಳ್ಳಲು, ಹೊಸತನ್ನು ಹುಡುಕಲು ವ್ಯವಸ್ಥೆ ಬಿಡುವುದಿಲ್ಲ.

ಬೆರಳೆಣಿಕೆಯ ಜನ ಬಿಟ್ಟರೆ ಬೇರೆಲ್ಲರೂ ತಾತ್ಕಾಲಿಕ ಭಾವನೆ ವ್ಯಕ್ತಪಡಿಸಿ, ಆಮೇಲೆ ಎಲ್ಲಾ ಮರೆತು ಸಹಜವಾಗಿ ಬದುಕುತ್ತಾರೆ.
ಇವರೇ ಸಾಮಾನ್ಯರು.

ಆದರೆ ಮನಕಲುಕಿದ ಭಾವನೆಗಳನ್ನು, ಆದರ್ಶಗಳನ್ನು, ಪ್ರೇರಣೆಗಳನ್ನು,
ನಿಜ ಜೀವನದಲ್ಲಿ ಅಳವಡಿಸಿಕೊಳ್ಳವವರೇ ಅಸಾಮಾನ್ಯರು.

ಮನಸ್ಸನ್ನು ಕಾಡುವ ವಿಷಯಗಳನ್ನು ಹಾಗೇ ಮರೆತು ಬಿಡದೆ ನಿಜ ಜೀವನದಲ್ಲೂ,
ಅನುಸರಿಸಲು ಪ್ರಯತ್ನಿಸೋಣ. ಅಸಾಮಾನ್ಯರಾಗಲು ಸಾಮಾನ್ಯರಾದ ನಾವೆಲ್ಲರೂ ಪ್ರಯತ್ನಿಸೋಣ.

ನಿರಾಸೆ ಬೇಡ.ಒಳ್ಳೆಯ ದಿನಗಳು ಮುಂದಿವೆ,
ಆ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ ……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9663750451…….
9844013068…….

WhatsApp

Join Now

Telegram

Join Now

Instagram

Join Now