--Ads--

ತನ್ನ ಉಸಿರಿನ ಮೂಲಕ್ಕೆ ತನ್ನಿಂದಲೇ ಮರಣ ಶಾಸನ

On: June 15, 2026 3:16 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಜೂನ್ 15 ವಿಶ್ವ ಗಾಳಿ ದಿನ

ತನ್ನ ಉಸಿರಿನ ಮೂಲಕ್ಕೆ ತನ್ನಿಂದಲೇ ಮರಣ ಶಾಸನ

ಪ್ರಕೃತಿ ಮತ್ತು ಮಾನವನ ಸಂಬಂಧವು ತಾಯಿ ಮತ್ತು ಮಗುವಿನ ಸಂಬಂಧದಂತಿದೆ. ಪ್ರಕೃತಿಯು ತಾಯಿಯ ಸ್ಥಾನದಲ್ಲಿ ನಿಂತು ಯಾವುದೇ ಸ್ವಾರ್ಥ, ನಿರೀಕ್ಷೆಯಿಲ್ಲದೆ ತನ್ನ ಅಮೂಲ್ಯ ಸಂಪನ್ಮೂಲಗಳನ್ನು ಮಾನವನಿಗೆ ನೀಡುತ್ತಲೇ ಬಂದಿದೆ. ಮರಗಳು ನೆರಳು ಕೊಟ್ಟಿವೆ, ನದಿಗಳು ನೀರು ಕೊಟ್ಟಿವೆ, ಗಾಳಿ ಜೀವ ಕೊಟ್ಟಿದೆ. ಆದರೆ ಮಾನವನು ಏನು ಕೊಟ್ಟಿದ್ದಾನೆ ಎಂದು ಪ್ರಶ್ನಿಸಿಕೊಂಡಾಗ ಸಿಗುವ ಉತ್ತರ ಮಾತ್ರ ದುಃಖತರಿಸುತ್ತದೆ. ಮಾನವ ಹುಟ್ಟಿದ ಕ್ಷಣದಿಂದ ಸಾಯುವ ಕ್ಷಣದವರಿಗೂ ಅವನ ಜೀವದುಸಿರಿಗೆ ಅಗತ್ಯವಿರುವ ಗಾಳಿಯನ್ನು ಪುಕ್ಕಟೆ ಕೊಟ್ಟಿರುವ ಪ್ರಕೃತಿಯನು ಪ್ರತ್ಯಕ್ಷ ದೇವರೆನ್ನಬಹುದು. ಆ ದೇವರನ್ನು ರಕ್ಷಿಸಬೇಕೆ ಹೊರತು ಹಾನಿಮಾಡಬಾರದು, ಗಾಳಿ ಎಂದರೆ ಅದು ಕೇವಲ ಪ್ರಕೃತಿಯ ಒಂದು ಅಂಶವಲ್ಲ, ಅದು ಜೀವಿಗಳ ಉಸಿರಿನ ಮೂಲ, ಬದುಕಿನ ಆಧಾರ ಮತ್ತು ಸೃಷ್ಟಿಯ ನಿರಂತರ ಚಲನೆಗೆ ಕಾರಣವಾದ ಜೀವಶಕ್ತಿಯಾಗಿದೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೂ ಗಾಳಿಯನ್ನೇ ಅವಲಂಬಿಸಿ ಬದುಕುತ್ತಿದೆ. ಮನುಷ್ಯನು ಜನಿಸಿದ ಕ್ಷಣದಲ್ಲಿ ಮೊದಲು ಪಡೆಯುವುದು ಉಸಿರು, ಜೀವನದ ಕೊನೆಯ ಕ್ಷಣದಲ್ಲಿ ಕಳೆದುಕೊಳ್ಳುವುದೂ ಅದೇ ಉಸಿರು. ಆದ್ದರಿಂದ ಗಾಳಿಯ ಮಹತ್ವವನ್ನು ಯಾವುದೇ ಸಂಪತ್ತು ಅಥವಾ ಸಾಧನೆಯೊಂದಿಗೆ ಹೋಲಿಸಲು ಸಾಧ್ಯವಿಲ್ಲ.

ಗಾಳಿಗೆ ಬಣ್ಣವಿಲ್ಲ, ರೂಪವಿಲ್ಲ, ಅದು ವಸ್ತುವಲ್ಲ ಆದರೆ ಅದರ ಮೌಲ್ಯ ಮಾತ್ರ ಅಳೆಯಲಾಗದು. ಮನುಷ್ಯನ ಜೀವನದ ಪ್ರತಿಯೊಂದು ಕ್ಷಣವೂ ಗಾಳಿಯ ಮೇಲೆಯೇ ಅವಲಂಬಿತವಾಗಿದೆ. ನಾವು ಉಸಿರಾಡುವ ಪ್ರತಿಯೊಂದು ಉಸಿರೂ ಪ್ರಕೃತಿಯು ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಈ ಕೊಡುಗೆಯನ್ನು ಕಾಪಾಡಿಕೊಳ್ಳುವ ಬದಲು ನಾವು ಅದನ್ನೇ ಕಲುಷಿತಗೊಳಿಸುತ್ತಿರುವುದು ಇಂದಿನ ಮಾನವ ನಾಗರಿಕತೆಯ ದೊಡ್ಡ ದುರಂತವಾಗಿದೆ.

ಮನುಷ್ಯನು ತನ್ನ ಜೀವನದಲ್ಲಿ ಅನೇಕ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುತ್ತಾನೆ. ಹಣ, ಮನೆ, ಜಮೀನು, ವಾಹನ, ಆಸ್ತಿ ಇವೆಲ್ಲವನ್ನೂ ತನ್ನ ಸಂಪತ್ತು ಎಂದು ಭಾವಿಸುತ್ತಾನೆ. ಆದರೆ ಅವನು ಪ್ರತಿಕ್ಷಣವೂ ಬಳಸುವ, ತನ್ನ ಜೀವದೊಂದಿಗೆ ಬೆಸೆದುಕೊಂಡಿರುವ ಅತ್ಯಮೂಲ್ಯ ಸಂಪತ್ತು ಗಾಳಿಯೆಂಬ ಸತ್ಯವನ್ನು ಮರೆತುಬಿಡುತ್ತಾನೆ. ಜೀವನದಲ್ಲಿ ಕೆಲವು ಸಂಗತಿಗಳ ಮೌಲ್ಯ ನಮಗೆ ಅವು ಇಲ್ಲದಾಗ ಮಾತ್ರ ತಿಳಿಯುತ್ತದೆ. ಆರೋಗ್ಯ ಹಾಳಾದಾಗ ಆರೋಗ್ಯದ ಬೆಲೆ ಗೊತ್ತಾಗುತ್ತದೆ, ನೀರಿನ ಕೊರತೆಯಾದಾಗ ನೀರಿನ ಮಹತ್ವ ಅರ್ಥವಾಗುತ್ತದೆ. ಅದೇ ರೀತಿ ಉಸಿರಾಡಲು ಶುದ್ಧ ಗಾಳಿ ಸಿಗದ ಪರಿಸ್ಥಿತಿ ಬಂದಾಗ ಮಾತ್ರ ಗಾಳಿಯ ನಿಜವಾದ ಮೌಲ್ಯ ಅರಿವಾಗುತ್ತದೆ. ಆದರೆ ಅಷ್ಟರೊಳಗೆ ಬಹಳಷ್ಟು ಹಾನಿಗಳು ಆಗಿರುತ್ತವೆ.

ಇಂದು ಮನುಷ್ಯನು ಭೂಮಿಯನ್ನು ತನ್ನ ಅಗತ್ಯಗಳಿಗೆ ತಕ್ಕಂತೆ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಪರ್ವತಗಳನ್ನು ಸೀಳಿ ರಸ್ತೆಗಳು ನಿರ್ಮಿಸಿದ್ದಾನೆ, ಆಕಾಶಮುಟ್ಟುವ ಕಟ್ಟಡಗಳನ್ನು ಕಟ್ಟಿದ್ದಾನೆ, ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಅಸಾಧ್ಯವೆನಿಸಿದ್ದ ಅನೇಕ ಸಾಧನೆಗಳನ್ನು ಮಾಡಿದ್ದಾನೆ. ಆದರೆ ಅವನ ಈ ಸಾಧನೆಗಳ ನಡುವೆಯೇ ಬದುಕಿನ ಮೂಲಾಧಾರವಾದ ಗಾಳಿ ಮಾತ್ರ ದಿನದಿಂದ ದಿನಕ್ಕೆ ತನ್ನ ಶುದ್ಧತೆಯನ್ನು ಕಳೆದುಕೊಳ್ಳುತ್ತಿದೆ ಎಂಬುದನ್ನು ಮರೆತಿದ್ದಾನೆ. ದುರಂತವೆಂದರೆ ಗಾಳಿಯನ್ನು ಕಲುಷಿತಗೊಳಿಸುವುದು ಪ್ರಾಣಿ ಪಕ್ಷಿಗಳಲ್ಲ. ಭೂಮಿಯ ಮೇಲಿನ ಬುದ್ದಿವಂತ ಜೀವಿ ಎಂದು ತನ್ನನ್ನು ತಾನೇ ಕರೆದುಕೊಳ್ಳುವ ಮನುಷ್ಯನ ಕೈಯಲ್ಲೇ ನಡೆಯುತ್ತಿದೆ. ತನ್ನ ಅನುಕೂಲಕ್ಕಾಗಿ ಪರಿಸರದ ಮೇಲೆ ನಡೆಸುತ್ತಿರುವ ನಿರಂತರ ಒತ್ತಡ, ದೌರ್ಜನ್ಯವು ವಾತಾವರಣದ ಸಮತೋಲನವನ್ನು ಹಾಳುಮಾಡುತ್ತಿದೆ. ಪರಿಣಾಮವಾಗಿ ಇಂದು ಶುದ್ಧ ಗಾಳಿಯ ಪ್ರಶ್ನೆ ಕೇವಲ ಪರಿಸರದ ಸಮಸ್ಯೆಯಾಗಿರದೆ, ಮಾನವ ಆರೋಗ್ಯ, ಸಾಮಾಜಿಕ ಅಭಿವೃದ್ಧಿ ಮತ್ತು ಭವಿಷ್ಯದ ಅಸ್ತಿತ್ವದ ಪ್ರಶ್ನೆಯಾಗಿ ಪರಿಣಮಿಸಿದೆ.

ಈ ನಿಟ್ಟಿನಲ್ಲಿ ಪ್ರತಿವರ್ಷ ಜೂನ್ 15 ರಂದು ಆಚರಿಸಲಾಗುವ ವಿಶ್ವ ಗಾಳಿ ದಿನವು ಶುದ್ಧ ಗಾಳಿಯ ಅಗತ್ಯತೆ ಹಾಗೂ ವಾಯುಮಾಲಿನ್ಯದ ಅಪಾಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಎಷ್ಟೇ ಬೆಳೆಯುತ್ತಿದ್ದರೂ, ಶುದ್ಧ ಗಾಳಿಗೆ ಪರ್ಯಾಯವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಅದರ ಕಟ್ಟಡಗಳು, ರಸ್ತೆಗಳು ಅಥವಾ ಕೈಗಾರಿಕೆಗಳಿಂದ ಮಾತ್ರ ಅಳೆಯಲಾಗುವುದಿಲ್ಲ. ಅಲ್ಲಿನ ಜನರು ಉಸಿರಾಡುವ ಗಾಳಿಯ ಗುಣಮಟ್ಟವೂ ಅಭಿವೃದ್ಧಿಯ ಪ್ರಮುಖ ಮಾನದಂಡವಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ಆರೋಗ್ಯಕರ ಪರಿಸರ ನಿರ್ಮಾಣವಾಗಬೇಕು.

ಆದರೆ ಇಂದು ಮನುಷ್ಯನು ಪ್ರಕೃತಿಯನ್ನು ತನ್ನ ಸಹಚರಿಯಂತೆ ಕಾಣದೆ, ಕೇವಲ ಸಂಪನ್ಮೂಲಗಳ ಭಂಡಾರವೆಂದು ನೋಡುತ್ತಿದ್ದಾನೆ. ಪರಿಣಾಮವಾಗಿ ಪ್ರಕೃತಿಯ ಸಮತೋಲನ ಹದಗೆಡುತ್ತಿದೆ. ಅರಣ್ಯಗಳ ನಾಶ, ಹೆಚ್ಚುತ್ತಿರುವ ನಗರೀಕರಣ ಮತ್ತು ಪರಿಸರದ ಮೇಲಿನ ನಿರ್ಲಕ್ಷ್ಯ ಭವಿಷ್ಯದ ಪೀಳಿಗೆಗೆ ಅಪಾಯದ ಸೂಚನೆಗಳಾಗಿವೆ. ಇಂದು ವಾಯುಮಾಲಿನ್ಯ ಮೌನವಾಗಿ ಕಾಡುತ್ತಿರುವ ಅಪಾಯ ಇದು ತಕ್ಷಣಕ್ಕೆ ಗೋಚರಿಸುವ ಸಮಸ್ಯೆಯಲ್ಲದಿರಬಹುದು, ಆದರೆ ಅದರ ಪರಿಣಾಮಗಳು ನಿಧಾನವಾಗಿ ಜೇವನವನ್ನೇ ಕಡಿಯುತ್ತದೆ, ವಾಹನಗಳ ಹೊಗೆ, ಕೈಗಾರಿಕೆಗಳ ತ್ಯಾಜ್ಯ ಅನಿಲಗಳು, ಕಸ ಮತ್ತು ಪ್ಲಾಸ್ಟಿಕ್ ದಹನ, ಇತ್ಯಾದಿ ಪರಿಸರ ಹಾನಿ ಚಟುವಟಿಕೆಗಳಿಂದ ಉಂಟಾಗುವ ಧೂಳು ಇವೆಲ್ಲವೂ ವಾತಾವರಣದ ಗುಣಮಟ್ಟವನ್ನು ಹಾಳು ಮಾಡುತ್ತಿವೆ.

ಇದರ ಪರಿಣಾಮವಾಗಿ ಉಸಿರಾಟದ ಕಾಯಿಲೆಗಳು, ಅಸ್ತಮಾ, ಶ್ವಾಸಕೋಶದ ತೊಂದರೆಗಳು ಮತ್ತು ಹೃದಯ ಸಂಬಂಧಿ ರೋಗಗಳು ಹೆಚ್ಚಾಗುತ್ತಿವೆ. ಪರಿಸರದ ಸಮಸ್ಯೆ ಇಂದು ಆರೋಗ್ಯದ ಸಮಸ್ಯೆಯಾಗಿ ಪರಿವರ್ತನೆಯಾಗಿದೆ. ಹಿಂದಿನ ತಲೆಮಾರುಗಳು ಪ್ರಕೃತಿಯೊಂದಿಗೆ ಹೊಂದಿಕೊಂಡ ಜೀವನ ನಡೆಸುತ್ತಿದ್ದವು. ಮನೆಗಳ ಸುತ್ತ ಮರಗಳನ್ನು ಬೆಳೆಸುವುದು, ನೀರಿನ ಮೂಲಗಳನ್ನು ಕಾಪಾಡುವುದು, ಪರಿಸರವನ್ನು ಸ್ವಚ್ಛವಾಗಿಡುವುದು ಅವರ ಜೀವನದ ಭಾಗವಾಗಿತ್ತು. ಆದರೆ ಇಂದಿನ ಜನರು ಆಧುನಿಕತೆಯ ಹೆಸರಿನಲ್ಲಿ ಮರಗಿಡಗಳನ್ನು ಕಡಿದು ಅಗತ್ಯಕ್ಕಿಂತ ಹೆಚ್ಚು ಹೆಚ್ಚು ಕಟ್ಟಡ, ಕಾರ್ಖಾನೆಗಳನ್ನು ನಿರ್ಮಿಸಿಕೊಂಡು ಅದನ್ನೇ ಪ್ರಗತಿ ಎಂಬ ಮೂರ್ಖತನದಿಂದ ವಾತಾವರಣವನ್ನು ಹಾಳುಮಾಡಿಕೊಂಡು ದೇಹವನ್ನು ರೋಗಗಳ ಗೊಡನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನ ಅಗತ್ಯವೇ ಇರಬಹುದು, ಆದರೆ ಪ್ರಕೃತಿಯೊಂದಿಗಿನ ಬಾಂಧವ್ಯವನ್ನು ಕಳೆದುಕೊಳ್ಳುವಷ್ಟು ಆಧುನಿಕತೆ ಯಾವತ್ತೂ ಪ್ರಗತಿಯಾಗಲಾರದು. ಹಿರಿಯರ ಪರಿಸರ ಜ್ಞಾನವನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಇಂದಿನ ಯುವಜನತೆ ಕೇವಲ ಉದ್ಯೋಗ ಮತ್ತು ತಂತ್ರಜ್ಞಾನಕ್ಕೆ ಸೀಮಿತವಾಗದೆ ಪರಿಸರದ ರಕ್ಷಕರಾಗಬೇಕಾಗಿದೆ.ಪ್ರತಿಯೊಬ್ಬ ಯುವಜನರು ಒಂದು ಮರ ನೆಟ್ಟರೂ, ಒಂದು ಪರಿಸರ ಜಾಗೃತಿ ಕಾರ್ಯಕ್ರಮ ನಡೆಸಿದರೂ, ಒಂದು ಕುಟುಂಬದಲ್ಲಿ ಪರಿಸರ ಪ್ರಜ್ಞೆ ಮೂಡಿಸಿದರೂ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು. ಪರಿಸರ ಸಂರಕ್ಷಣೆ ಸರ್ಕಾರದ ಕರ್ತವ್ಯ ಮಾತ್ರವಲ್ಲ. ಅದು ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿಯಾಗಿದೆ ಎಂಬ ಅರಿವಿದ್ದಾಗ ಮಾತ್ರ ಶುದ್ಧಗಾಳಿ ಸಿಗಲು ಸಾಧ್ಯ.

ಶುದ್ಧ ಗಾಳಿ ಕೇವಲ ಆರೋಗ್ಯದ ವಿಷಯವಲ್ಲ, ಅದು ಮಾನವ ಹಕ್ಕಿನ ವಿಷಯವಾಗಿದೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಶುದ್ಧ ಗಾಳಿಯನ್ನು ಉಸಿರಾಡುವ ಹಕ್ಕಿದೆ. ಆ ಹಕ್ಕನ್ನು ಕಾಪಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ವಿಶ್ವ ಗಾಳಿ ದಿನದ ಸಂದರ್ಭದಲ್ಲಿ ನಾವು ಕೇವಲ ಒಂದು ದಿನ ಜಾಗೃತಿ ಮೂಡಿಸಿಕೊಂಡರೆ ಸಾಲದು. ಪ್ರತಿದಿನವೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಪ್ರಕೃತಿಯನ್ನು ರಕ್ಷಿಸುವ ಸಂಕಲ್ಪವನ್ನು ಮಾಡಬೇಕು. ಏಕೆಂದರೆ ನಾವು ಭೂಮಿಯನ್ನು ನಮ್ಮ ಪೂರ್ವಜರಿಂದ ಪಡೆದಿಲ್ಲ, ನಮ್ಮ ಮಕ್ಕಳಿಂದ ಎರವಲು ಪಡೆದಿದ್ದೇವೆ ನಾವು ಮತ್ತೆ ಅವರ ಮಕ್ಕಳಿಗೆ ಬಿಟ್ಟು ಕೊಡಬೇಕು ಎಂಬ ಜ್ಞಾನವಿದ್ದರೆ ಮಾತ್ರ ಎರವಲು ಪಡೆದದ್ದನ್ನು ಹಿಂದಿರುಗಿಸಲು ಸಾಧ್ಯ.

ಇಂದು ಗಾಳಿಯನ್ನು ಮನುಕುಲ ಹೇಗೆ ಕಲುಷಿತಗೊಳಿಸುತ್ತಿದೆ ಎಂದರೆ, ಪ್ರಕೃತಿ ನೀಡಿದ ಶುದ್ಧಗಾಳಿಯನ್ನು ತನ್ನ ಸ್ವಾರ್ಥದ ಕಾರ್ಯ ಚಟುವಟಿಕೆಗಳ ಮೂಲಕ ಅಭಿವೃದ್ಧಿ ಮತ್ತು ಆಧುನಿಕತೆಯ ಹೆಸರಿನಲ್ಲಿ ವಿಷಮಯವಾಗಿಸಿ ವಾಯುಮಾಲಿನ್ಯ ಮಾಡಿಕೊಂಡು ಪ್ರಕೃತಿಯನ್ನೇ ಕೆಟ್ಟ ಹೊಗೆಯಿಂದ ಉಸಿರುಗಟ್ಟುವಂತೆ ಮಾಡಿಕೊಂಡಿರುವುದನ್ನು ನೋಡಿದಾಗ ಇದು ಅವಿವೇಕದ ಪರಮಾವಧಿ ಎನಿಸದಿರದು.

ಗಾಳಿಯ ಮಾಲಿನ್ಯಕ್ಕೆ ಮೂಲ ಕಾರಣಗಳು
=========================

1. ವಾಹನಗಳ ಹೊಗೆ
ಇಂದು ರಸ್ತೆಗಳ ಮೇಲೆ ವಾಹನಗಳ ಸಂಖ್ಯೆ ಅತಿಯಾಗಿ ಹೆಚ್ಚಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಹೊರಬರುವ ಕಾರ್ಬನ್ ಮಾನಾಕ್ಸೈಡ್, ನೈಟ್ರೋಜನ್ ಆಕ್ಸೈಡ್ ಮತ್ತು ಇತರ ವಿಷಕಾರಿ ಅನಿಲಗಳು ವಾತಾವರಣವನ್ನು ಕಲುಷಿತಗೊಳಿಸುತ್ತವೆ. ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯದ ಪ್ರಮುಖ ಕಾರಣವೇ ವಾಹನಗಳ ಹೊಗೆಯಾಗಿದೆ.

2. ಕೈಗಾರಿಕೆಗಳ ವಿಷಕಾರಿ ಅನಿಲಗಳು
ಕಾರ್ಖಾನೆಗಳು ಮತ್ತು ಕೈಗಾರಿಕೆಗಳಿಂದ ಹೊರಹೊಮ್ಮುವ ಹೊಗೆ ಹಾಗೂ ರಾಸಾಯನಿಕ ಅನಿಲಗಳು ಗಾಳಿಗೆ ಸೇರಿ ಅದರ ಗುಣಮಟ್ಟವನ್ನು ಹಾಳುಮಾಡುತ್ತವೆ. ಪರಿಸರ ನಿಯಮಗಳನ್ನು ಪಾಲಿಸದ ಕೆಲವು ಕೈಗಾರಿಕೆಗಳು ವಾಯುಮಾಲಿನ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

3. ಅರಣ್ಯ ನಾಶ
ಮರಗಳು ವಾತಾವರಣದಲ್ಲಿರುವ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಆದರೆ ಅರಣ್ಯಗಳನ್ನು ಕಡಿದುಹಾಕುವುದರಿಂದ ಗಾಳಿಯನ್ನು ಶುದ್ಧೀಕರಿಸುವ ಪ್ರಕೃತಿಯ ವ್ಯವಸ್ಥೆಯೇ ದುರ್ಬಲವಾಗುತ್ತಿದೆ.

4. ಕಸ ಮತ್ತು ಪ್ಲಾಸ್ಟಿಕ್ ದಹನ
ಮನೆಯ ಕಸ, ಪ್ಲಾಸ್ಟಿಕ್, ಟೈರ್‌ಗಳು ಹಾಗೂ ಇತರೆ ತ್ಯಾಜ್ಯಗಳನ್ನು ಸುಡುವಾಗ ಹೊರಬರುವ ಹೊಗೆ ಮತ್ತು ವಿಷಕಾರಿ ಕಣಗಳು ಗಾಳಿಯನ್ನು ತೀವ್ರವಾಗಿ ಕಲುಷಿತಗೊಳಿಸುತ್ತವೆ. ಇವು ಮಾನವನ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ.

5. ನಿರ್ಮಾಣ ಕಾಮಗಾರಿಗಳ ಧೂಳು.
ದೊಡ್ಡ ದೊಡ್ಡ ಕಟ್ಟಡಗಳು, ರಸ್ತೆಗಳು ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸಂದರ್ಭದಲ್ಲಿ ಉಂಟಾಗುವ ಧೂಳು ಗಾಳಿಯಲ್ಲಿ ಬೆರೆತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

6. ತ್ಯಾಜ್ಯ ಮತ್ತು ಒಳಚರಂಡಿ ನಿರ್ವಹಣೆಯ ಕೊರತೆ.
ನಗರ ಪ್ರದೇಶಗಳಲ್ಲಿ ಕಲುಷಿತ ನೀರು ಮತ್ತು ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡದ ಕಾರಣ ಅವು ಕೊಳೆತು ದುರ್ವಾಸನೆ ಉಂಟುಮಾಡುತ್ತವೆ. ಈ ದುರ್ವಾಸನೆಯೂ ಗಾಳಿಯ ಗುಣಮಟ್ಟವನ್ನು ಹಾಳುಮಾಡುತ್ತದೆ.

7. ಕೃಷಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆ.
ಕೃಷಿಯಲ್ಲಿ ಬಳಸುವ ಕೆಲವು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳು ವಾತಾವರಣಕ್ಕೆ ಹಾನಿಕಾರಕ ಅನಿಲಗಳನ್ನು ಬಿಡುಗಡೆ ಮಾಡುತ್ತವೆ. ಬೆಳೆ ಅವಶೇಷಗಳನ್ನು ಸುಡುವುದೂ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ.

8. ವಿದ್ಯುತ್ ಉತ್ಪಾದನಾ ಘಟಕಗಳು.
ಕಲ್ಲಿದ್ದಲು ಮತ್ತು ಇತರ ಪಳೆಯುಳಿಕೆ ಇಂಧನಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಘಟಕಗಳಿಂದ ಅಪಾರ ಪ್ರಮಾಣದ ಹೊಗೆ ಹೊರಬರುತ್ತದೆ. ಇದು ವಾಯುಮಾಲಿನ್ಯ ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ.

9. ಪಟಾಕಿಗಳ ಬಳಕೆ
ಹಬ್ಬಗಳು ಮತ್ತು ಸಮಾರಂಭಗಳಲ್ಲಿ ಅತಿಯಾಗಿ ಪಟಾಕಿಗಳನ್ನು ಸಿಡಿಸುವುದರಿಂದ ಹೊಗೆ, ಧೂಳು ಮತ್ತು ವಿಷಕಾರಿ ಕಣಗಳು ವಾತಾವರಣವನ್ನು ಕಲುಷಿತಗೊಳಿಸುತ್ತವೆ.

10. ಹೆಚ್ಚುತ್ತಿರುವ ನಗರೀಕರಣ.
ಹಸಿರು ಪ್ರದೇಶಗಳನ್ನು ಕಡಿಮೆ ಮಾಡಿ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸುವುದರಿಂದ ವಾತಾವರಣದ ಸಹಜ ಸಮತೋಲನ ಹಾಳಾಗುತ್ತಿದೆ. ಇದರಿಂದ ಶುದ್ಧ ಗಾಳಿಯ ಪ್ರಮಾಣ ಕಡಿಮೆಯಾಗುತ್ತಿದೆ.

ವಿಶ್ವ ಗಾಳಿ ದಿನವು ಈ ಗಂಭೀರ ವಾಸ್ತವವನ್ನು ನೆನಪಿಸುವ ದಿನವಾಗಿದೆ. ಶುದ್ಧ ಗಾಳಿ ಎಂಬುದು ಐಷಾರಾಮಿ ಸೌಲಭ್ಯವಲ್ಲ, ಪ್ರತಿಯೊಂದು ಜೀವಿಯ ಮೂಲಭೂತ ಹಕ್ಕು ಎಂಬ ಅರಿವನ್ನು ಮೂಡಿಸುವುದು ಈ ದಿನದ ಆಶಯವಾಗಿದೆ. ಗಾಳಿಯನ್ನು ಸಂರಕ್ಷಿಸುವುದು ಪ್ರಕೃತಿಯ ಮೇಲಿನ ಕಾಳಜಿ ಮಾತ್ರವಲ್ಲ; ಅದು ಮಾನವ ನಾಗರಿಕತೆಯ ಉಳಿವಿಗಾಗಿ ನಾವು ಹೊರುವ ಜವಾಬ್ದಾರಿಯಾಗಿದೆ.

ಉಸಿರನ್ನು ಸೃಷ್ಟಿಸುವ ಶಕ್ತಿ ಮನುಷ್ಯನಿಗಿಲ್ಲ, ಆದರೆ ಆ ಉಸಿರಿಗೆ ಆಧಾರವಾದ ಗಾಳಿಯನ್ನು ಕಾಪಾಡುವ ಹೊಣೆಗಾರಿಕೆ ಮಾತ್ರ ಖಂಡಿತವಾಗಿಯೂ ಮನುಷ್ಯನ ಮೇಲಿದೆ, ಇಂದು ಶುದ್ಧ ಗಾಳಿಯ ಪ್ರಶ್ನೆ ಕೇವಲ ಪರಿಸರದ ಸಮಸ್ಯೆಯಲ್ಲ, ಅದು ಮಾನವ ಆರೋಗ್ಯ, ಸಾಮಾಜಿಕ ಜವಾಬ್ದಾರಿ ಮತ್ತು ಭವಿಷ್ಯದ ಪೀಳಿಗೆಯ ಅಸ್ತಿತ್ವಕ್ಕೆ ಸಂಬಂಧಿಸಿದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಗಾಳಿ ದಿನವು ಗಾಳಿಯ ಮಹತ್ವವನ್ನು ನೆನಪಿಸುವುದರ ಜೊತೆಗೆ, ಅದನ್ನು ಸಂರಕ್ಷಿಸುವ ನಮ್ಮ ಕರ್ತವ್ಯವನ್ನು ಅರಿವು ಮಾಡಿಸುವ ಮಹತ್ವದ ದಿನವಾಗಿದೆ.

ಉಸಿರು ಇರುವವರೆಗೂ ಜೀವನವಿದೆ, ಶುದ್ಧ ಗಾಳಿ ಇರುವವರೆಗೂ ಭೂಮಿಯ ಮೇಲೆ ಜೀವವಿದೆ.
ಆದ್ದರಿಂದ ಗಾಳಿಯನ್ನು ಕಾಪಾಡುವುದು ಎಂದರೆ ಕೇವಲ ಪ್ರಕೃತಿಯನ್ನು ಅಲ್ಲ, ಸಮಸ್ತ ಜೀವಸಂಕುಲದ ಭವಿಷ್ಯವನ್ನು ಕಾಪಾಡುವುದಾಗಿದೆ. ಮನುಷ್ಯನು ತನ್ನ ಮಕ್ಕಳಿಗೆ ಕೋಟಿ ಕೋಟಿ ಆಸ್ತಿಯನ್ನು ಬಿಟ್ಟುಹೋಗಬಹುದು, ಆದರೆ ಶುದ್ಧ ಗಾಳಿಯನ್ನು ಬಿಟ್ಟುಹೋಗದಿದ್ದರೆ ಆ ಆಸ್ತಿಯೆಲ್ಲವೂ ಉಸಿರಿಲ್ಲದ ಸಂಪತ್ತಾಗಿ ಉಳಿಯುತ್ತದೆ.

ಗೀತಾಂಜಲಿ ಎನ್ ಎಮ್
ಸೋಮವಾರಪೇಟೆ.✍️
==================

WhatsApp

Join Now

Telegram

Join Now

Instagram

Join Now