ವಿಜಯ ದರ್ಪಣ ನ್ಯೂಸ್….
ರಾಜಕಾರಣದಲ್ಲಿ ಯಾರೂ ಪ್ರಾಮಾಣಿಕರೂ ಹೇಳಿ : ಮಾಜಿ ಸಚಿವ ಸಾ.ರಾ.ಮಹೇಶ್

ತಾಂಡವಪುರ ಮೇ 26: ನನ್ನನ್ನೂ ಸೇರಿದಂತೆ ರಾಜಕಾರಣದ ವ್ಯವಸ್ಥೆಯಲ್ಲಿರುವ ಯಾರೂ ಕೂಡ ಪ್ರಮಾಣಿಕರಲ್ಲ, ಇನ್ನೊಬ್ಬರ ಬಗ್ಗೆ ಆರೋಪ ಮಾಡುವಾಗ ಕಾಂಗ್ರೆಸ್ ನವರು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಕಾಂಗ್ರೆಸ್ ನವರು ಎನೂ ಬೆಳೆದು ಹಣ ಮಾಡಿದ್ದಾರೆಂಬುದನ್ನು ಹೇಳಲಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾರಾ ಮಹೇಶ್ ರವರು ಭ್ರಷ್ಟಾಚಾರವನ್ನು ಎಲ್ಲಾ ಪಕ್ಷದವರು ಮಾಡಿದ್ದಾರೆ. ಕೆಲವರು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿರಬಹುದು. ಇನ್ನು ಕೆಲವರು ಕಡಿಮೆ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿರಬಹುದು. ಒಟ್ಟಿನಲ್ಲಿ ಎಲ್ಲರೂ ಭ್ರಷ್ಟರೆ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೇತಗಾನಹಳ್ಳಿಯಲ್ಲಿ 40 ವರ್ಷಗಳ ಹಿಂದೆಯೇ ಜಮೀನು ಖರೀದಿ ಮಾಡಿದ್ದಾರೆ. ಇದರ ಸೇಲ್ ಡೀಡ್ ಕೂಡ ಇದೆ. ರಾಜ್ಯದ ಇತಿಹಾಸದಲ್ಲಿ ಬಹಳಷ್ಟು ರಾಜಕಾರಣಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಯಾವ ರಾಜಕಾರಣಿಗಳ ಜಾಗವನ್ನು ಎಸ್.ಐ.ಟಿ ತನಿಖೆಗೆ ಕೊಟ್ಟ ಪ್ರಕರಣವೇ ಇಲ್ಲ. ಕುಮಾರಸ್ವಾಮಿ ಅವರ ಜಮೀನು ಒಂದನ್ನೇ ಎಸ್.ಐ.ಟಿ ಗೆ ಕೊಟ್ಟಿರುವುದು ನೋಡಿದರೆ ಇದರ ಉದ್ದೇಶ ಏನು ಎಂಬುದು ಅರ್ಥವಾಗುತ್ತದೆ. ಇದು ದ್ವೇಷದ ಉದ್ದೇಶ ಪೂರ್ವಕವಾಗಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ತರಲು ಎಸ್.ಐ.ಟಿ ರಚನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಚ್.ಡಿ.ದೇವೇಗೌಡರಿಗೆ 94 ವರ್ಷ ವಯಸ್ಸಾಗಿದೆ. ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಯುವ ಘಟಕದ ಅಧ್ಯಕ್ಷರಾಗಿ ನಿಖಿಲ್ ಕುಮಾರಸ್ವಾಮಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಹಾಗಾಗಿ ಅವರು ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ. ಅವರು ಪ್ರಶ್ನೆ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರು ಬೇಸರ ಮಾಡಿಕೊಂಡರೆ ಹೇಗೆ?, ಯಾರೇ ಟೀಕೆ ಮಾಡಿದರು ಬಹಳ ಎಚ್ಚರಿಕೆಯಿಂದ ಪ್ರತಿಟೀಕೆ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಮಾಡುತ್ತೇವೆ ಎಂದು ಏಕವಚನ ಮತ್ತು ವೈಯಕ್ತಿಕವಾಗಿ ಟೀಕೆ ಮಾಡಬಾರದು.
ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸೋತಿರಬಹುದು ಅವರು ಮಂಡ್ಯ ಎಂಪಿ ಚುನಾವಣೆಯಲ್ಲಿ ತೆಗೆದುಕೊಂಡಷ್ಟು ಮತಗಳನ್ನು ನಿಖಿಲ್ ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರುಗಳು ಅವರ ಅಷ್ಟು ಚುನಾವಣೆಯಲ್ಲಿ ತೆಗೆದುಕೊಂಡಿಲ್ಲ ಎಂದು ಹರಿಹಾಯ್ದರು.
ಕುಮಾರಸ್ವಾಮಿ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚೆ ಮಾಡುತ್ತಿದ್ದಾರೆ. ಅವರು ಆಲೂಗಡ್ಡೆ ಬೆಳೆದು ಸಂಪಾದನೆ ಮಾಡಿದ್ದರ ಎಂದು ಕಾಂಗ್ರೆಸ್ ನಾಯಕರು ಕೇಳುತ್ತಿದ್ದಾರೆ. ಕುಮಾರಸ್ವಾಮಿ ಅವರು ಫಿಲಂ ಡಿಸ್ಟ್ರಿಬ್ಯೂಟರ್ ಆಗಿ, ನಿರ್ಮಾಪಕರಾಗಿ ಹಣ ಸಂಪಾದನೆ ಮಾಡಿದ್ದಾರೆ. ಅವರ ಮಗ ನಿಖಿಲ್ ಕುಮಾರಸ್ವಾಮಿ ಸಿನಿಮಾ ಹೀರೊ ಆಗಿ ಹಲವಾರು ಸಿನಿಮಾಗಳಲ್ಲಿ ನಟಿಸಿ ವ್ಯವಸಾಯ ಮಾಡಿ ಹಣ ಸಂಪಾದನೆ ಮಾಡಿದ್ದಾರೆ.
ಸಮಾಜವಾದಿ ನಾಯಕರು ಎನಿಸಿಕೊಂಡ ಕಾಂಗ್ರೆಸ್ ನಾಯಕರುಗಳು ಭತ್ತ, ರಾಗಿ, ಕಡಲೆ ಕಾಯಿ ಬೆಳೆದು ಹಣ ಸಂಪಾದನೆ ಮಾಡಿದ್ದೀರ. ನನ್ನನ್ನು ಸೇರಿದಂತೆ ರಾಜಕಾರಣದ ವ್ಯವಸ್ಥೆಯಲ್ಲಿ ಇರುವವರು ಯಾರೂ ಪ್ರಾಮಾಣಿಕರಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಒಂದು ಟಿ.ವಿ.ಗೆ ದೊಡ್ಡ ಪ್ರಮಾಣದಲ್ಲಿ ಹಣ ನೀಡಿದ್ದಾರೆ. ಒಂದು ಟಿ.ವಿ.ಗೆ ಒಂದು ಲಕ್ಷ ರೂ. ಆಗಬಹುದು. ಆದರೆ ಅದಕ್ಕಿಂತ ಹೆಚ್ಚಿನ ಹಣ ಪಡೆದಿದ್ದಾರೆ. ಅಹಿಂದ ಹೆಸರಿನಲ್ಲಿ ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಎಸ್.ಐ.ಆರ್ ಗೆ ಯಾಕೆ ವಿರೋಧ: ಮತದಾರರ ವಿಶೇಷ ಪರಿಷ್ಕರಣೆ (ಎಸ್.ಐ.ಆರ್) ನಡೆದರೆ ಯಾಕೆ ಕಾಂಗ್ರೆಸ್ ನಾಯಕರು ವಿರೋಧ ಮಾಡುತ್ತಿದ್ದಾರೆ. ಕೆಲವರು ಮೃತ ಪಟ್ಟಿರುತ್ತಾರೆ, ಇನ್ನು ಕೆಲವರು ಮದುವೆಯಾಗಿ ಬೇರೆಕಡೆಗೆ ಹೋಗಿರುತ್ತಾರೆ. ಹೀಗೆ ಹಲವು ಬದಲಾವಣೆಗಳು ಆಗಿರುತ್ತವೆ ಅಂತವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದರೆ ವಿರೋಧ ಯಾಕೆ? ಕೆಲವೊಮ್ಮೆ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದರೆ ಪುನಃ ಅಂತವರನ್ನು ಸೇರಿಸಬಹುದು. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಜನ ಬೇಸತ್ತಿದ್ದಾರೆ. ಈಗ ಚುನಾವಣೆ ಮಾಡಿದರು ಸಮ್ಮಿಶ್ರ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ವಿವೇಕಾನಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್, ನಗರಾಧ್ಯಕ್ಷ ಎಸ್.ಬಿ.ಎಂ.ಮಂಜು, ಜೆಡಿಎಸ್ ರಾಜ್ಯ ವಕ್ತಾರ ರವಿಚಂದ್ರೇಗೌಡ, ಮಾಜಿ ಮೇಯರ್ ಗಳಾದ ರಾಜೇಶ್ಬರಿ ಸೋಮು, ಆರ್.ಲಿಂಗಪ್ಪ, ನಗರ ಯುವ ಜೆಡಿಎಸ್ ಘಟಕದ ಅಧ್ಯಕ್ಷ ಮದನ್ ಸೇರಿ ಅನೇಕರು ಉಪಸ್ಥಿತರಿದ್ದರು.










