--Ads--

12 ವರ್ಷದಲ್ಲಿ ಮೋದಿಯದು ಐತಿಹಾಸಿಕ ಸಾಧನೆ: ಸಂಸದ ಯದುವೀರ್‌

On: June 10, 2026 3:31 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್..

12 ವರ್ಷದಲ್ಲಿ ಮೋದಿಯದು ಐತಿಹಾಸಿಕ ಸಾಧನೆ: ಸಂಸದ ಯದುವೀರ್‌

ತಾಂಡವಪುರ ಜುಲೈ 10 ಚುನಾಯಿತ ಪ್ರಧಾನಿಯಾಗಿ ಸತತ ೧೨ ವರ್ಷಗಳಿಂದ ನರೇಂದ್ರ ಮೋದಿ ದೇಶದ ಸರ್ವತೋಮುಖ ಅಭಿವೃದ್ಧಿ, ಸುರಕ್ಷತೆ, ಜಾಗತಿಕ ಮನ್ನಣೆಗಾಗಿ ಅನೇಕ ಐತಿಹಾಸಿಕ ನಿಲುವುಗಳನ್ನು ಕೈಗೊಂಡು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಮೈಸೂರು ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಬುಧವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೧೪ರಲ್ಲಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಇಂದಿನವರೆಗೆ ಭಾರತವನ್ನು ಅತ್ಯಂತ ಸುಭದ್ರ, ಶ್ರೇಷ್ಠ ಹಾಗೂ ವಿಕಸಿತ ರಾಷ್ಟ್ರವನ್ನಾಗಿ ಪರಿವರ್ತಿಸಲು ಹಲವು ಯೋಜನೆ ಜಾರಿಗೆ ತಂದಿದ್ದಾರೆ. ೨೦೧೪ಕ್ಕಿಂತ ಮುಂಚೆ ಜಾಗತಿಕ ಮಟ್ಟದಲ್ಲಿ ಅಸ್ಥಿರ ಆರ್ಥಿಕತೆಯ ಪಟ್ಟಿಯಲ್ಲಿದ್ದ ಭಾರತ, ಇಂದು ವಿಶ್ವದ ಅತ್ಯಂತ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಹಿಂದೆ ಭಾರತವನ್ನು ಕೇವಲ ಕಡಿಮೆ ವೆಚ್ಚದ ಶ್ರಮಿಕ ವಲಯ ಎಂದು ನೋಡುತ್ತಿದ್ದ ಅಂತರರಾಷ್ಟ್ರೀಯ ಸಂಸ್ಥೆಗಳು, ಇಂದು ಇಲ್ಲಿನ ಯುವ ಪ್ರತಿಭೆ ಮತ್ತು ತಂತ್ರಜ್ಞಾನವನ್ನು ನಂಬಿ ದೇಶದಾದ್ಯಂತ ನೂರಾರು ಜಿಸಿಸಿಗಳನ್ನು ಸ್ಥಾಪಿಸುತ್ತಿವೆ ಎಂದು ತಿಳಿಸಿದರು.

ನೀತಿ ಆಯೋಗ ಹಾಗೂ ಅಂತರಾಷ್ಟ್ರೀಯ ವರದಿಗಳ ಪ್ರಕಾರ ಕೇಂದ್ರ ಸರ್ಕಾರದ ಜನಪರ ನೀತಿಗಳಿಂದಾಗಿ ದೇಶದ ಸುಮಾರು ೨೫ ಕೋಟಿ ಜನರು ಬಹು ಆಯಾಮದ ಬಡತನದಿಂದ ಮುಕ್ತರಾಗಿದ್ದಾರೆ.

ಇದರೊಂದಿಗೆ ದೇಶದಲ್ಲಿದ್ದ ಬಡತನದ ಪ್ರಮಾಣ ಶೇ. ೨೯ ರಿಂದ ಶೇ.೧೧ಕ್ಕೆ ಕುಸಿದಿದೆ. ಅಲ್ಲದೆ, ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದ ಫಲವಾಗಿ ದೇಶದಲ್ಲಿ ಹಿಂದೆ ಶೇ.೧೦-೧೨ರಷ್ಟಿದ್ದ ಶಿಶು ಮರಣ ಪ್ರಮಾಣ ಇಂದು ಶೇ.೨-೩ಕ್ಕೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರೈತರ ಖಾತೆಗಳಿಗೆ ನೇರವಾಗಿ ವಾರ್ಷಿಕ ೬ ಸಾವಿರ ರೂ. ಜಮೆ ಮಾಡುವ ಯೋಜನೆಯಡಿ ಇದುವರೆಗೆ ೪.೫ ಲಕ್ಷ ಕೋಟಿ ರೂ ನೇರ ನಗದು ವರ್ಗಾವಣೆ ಮಾಡಲಾಗಿದೆ.

ಯೂರಿಯಾ ಗೊಬ್ಬರದ ಮೇಲೆ ಶೇ.೯೦ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ಆಹಾರ ಧಾನ್ಯ ಉತ್ಪಾದನೆಯಲ್ಲಿ ಶೇ.೭೧ರಷ್ಟು ಪ್ರಗತಿಯಾಗಿದೆ. ಜನ್‌ಧನ್ ಯೋಜನೆಯಡಿ ಮಹಿಳೆಯರಿಗಾಗಿಯೇ ೩೨ ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.

ಲಖ್ಪತಿ ದೀದಿ ಯೋಜನೆಯ ಮೂಲಕ ೩ ಕೋಟಿ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದು, ೯೧ ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು ದೇಶದ ನಾರಿಶಕ್ತಿಯ ಬದುಕಿಗೆ ಆಸರೆಯಾಗಿವೆ. ದೇಶದಲ್ಲಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಭಾರತೀಯ ಪರಂಪರೆಗೆ ಜಾಗತಿಕ ಮನ್ನಣೆ ದೊರೆತಿದ್ದು, ದೇಶದಲ್ಲಿ ಪ್ರಸ್ತುತ ೪೪ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಿವೆ. ವಿದೇಶಗಳಲ್ಲಿದ್ದ ೬೬೮ಕ್ಕೂ ಹೆಚ್ಚು ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ಮರಳಿ ತರಲಾಗಿದೆ. ೫೦೦ ವರ್ಷಗಳ ಸುದೀರ್ಘ ಹೋರಾಟಕ್ಕೆ ಕಾನೂನುಬದ್ಧ ಪರಿಹಾರ ಕಂಡುಕೊಂಡು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸಲಾಗಿದೆ.

ಕಾಶಿ ವಿಶ್ವನಾಥ, ಮಹಾಕಾಳ್ ಮತ್ತು ಕೇದಾರನಾಥ ಧಾಮಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ವಿಶ್ವಸಂಸ್ಥೆಯಲ್ಲಿ ಯೋಗಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡುವ ಮೂಲಕ ಭಾರತದ ಸಾಫ್ಟ್ ಪವರ್ ಅನ್ನು ಜಗತ್ತಿಗೆ ಸಾರಲಾಗಿದೆ ಎಂದರು.

ದೇಶದ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರದ ಆರ್ಟಿಕಲ್ ೩೭೦ ರದ್ದುಗೊಳಿಸುವ ಮೂಲಕ ಅಲ್ಲಿನ ಪ್ರತ್ಯೇಕತಾವಾದಕ್ಕೆ ಶಾಶ್ವತ ತೆರೆ ಎಳೆದಿದೆ. ದೇಶದಲ್ಲಿದ್ದ ನಕ್ಸಲಿಸಂ ಅನ್ನು ಬೇರುಸಹಿತ ಕಿತ್ತೊಗೆಯಲಾಗಿದೆ. ಸಂವಿಧಾನದ ಆಶಯದಂತೆ ಪ್ರತಿ ೧೦ ವರ್ಷಕ್ಕೊಮ್ಮೆ ನಡೆಯಬೇಕಾದ ಜನಗಣತಿ ಹಾಗೂ ಜಾತಿವಾರು ಮಾಹಿತಿಗಳ ಕ್ರೋಢೀಕರಣದ ಪ್ರಕ್ರಿಯೆಗೆ ಕೋವಿಡ್ ವಿಳಂಬದ ನಂತರ ಈಗ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಮನೆಗಳ ಸಮೀಕ್ಷೆ ಪ್ರಗತಿಯಲ್ಲಿದೆ ಎಂದರು.

ಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಹರ್ಷವರ್ಧನ್, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ವಸಂತಕುಮಾರ್, ಮಹೇಶ್ ರಾಜೇ ಅರಸ್ ಸೇರಿ ಹಲವರು ಇದ್ದರು.

ಕೇಂದ್ರದೊಂದಿಗೆ ಉತ್ತಮ ಸಂಬಂಧವಿಲ್ಲ
ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಉತ್ತಮ ಸಂಪರ್ಕ ಹಾಗೂ ಸಂಬಂಧ ಹೊಂದಿಲ್ಲ. ಜಿಎಸ್ಟಿ ಪಾಲು, ಸೂಕ್ತ ಅನುದಾನ ಬರುತ್ತಿಲ್ಲ ಎಂದು ಹಿಂದಿನ ಸಿಎಂ ಸಿದ್ದರಾಮಯ್ಯ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ಮಾಡಿಲ್ಲ. ಬೇರೆ ರಾಜ್ಯಗಳು ರಾಜಕೀಯ ಬದಿಗೊತ್ತಿ ಕೇಂದ್ರದೊಂದಿಗೆ ಉತ್ತಮ ಸಂಬಂಧ ಹೊಂದಿವೆ. ರಾಜ್ಯ ಸರ್ಕಾರ ಕೇವಲ ರಾಜಕೀಯ ಮಾಡುತ್ತಿದೆ. ಅವರಿಗೆ ರಾಜ್ಯದ ಹಿತರಕ್ಷಣೆ ಬೇಕಿಲ್ಲ. ತಮಿಳುನಾಡಿನ ಸಿಎಂ ವಿಜಯ್ ಮೇಕೆದಾಟಿಗೆ ಅನುಮತಿ ನೀಡದಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇದಕ್ಕೆ ರಾಜ್ಯದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೊಸ ಸಿಎಂ ಬಂದಿದ್ದು ಇನ್ನಾದರೂ ಉತ್ತಮ ಸಂಪರ್ಕ ಸಾಧಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಯದುವೀರ್ ತಿಳಿಸಿದರು

WhatsApp

Join Now

Telegram

Join Now

Instagram

Join Now