ವಿಜಯ ದರ್ಪಣ ನ್ಯೂಸ್…..
ಬುದ್ಧ ಪ್ರಜ್ಞೆ,
ಅಂಬೇಡ್ಕರ್ ಪ್ರಜ್ಞೆ,
ಅನಾಗರಿಕ ಹಿಂಸಾ ಪ್ರಜ್ಞೆ…….
ಚಾಮರಾಜನಗರ ಜಿಲ್ಲೆಯ ಒಂದು ಹಳ್ಳಿಯಲ್ಲಿ ಕಿಡಿಗೇಡಿಯೊಬ್ಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ಕಾರಣದಿಂದ ಅವನನ್ನು ಕಂಬಕ್ಕೆ ಕಟ್ಟಿ ಹೊಡೆದು ನಂತರ ಪೋಲೀಸರಿಗೆ ಒಪ್ಪಿಸಿದ ಪ್ರಕರಣ ಸುದ್ದಿಯಾಗಿದೆ.
ಇದನ್ನು ಮೂರು ರೀತಿಯ ಪ್ರಜ್ಞೆಗಳಲ್ಲಿ ನೋಡುವ ಒಂದು ಪ್ರಯತ್ನ……
ಇದು ಕೇವಲ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಡಿದ ಅವಮಾನದ ಸಾಂಕೇತಿಕ ಉದಾಹರಣೆ ಮಾತ್ರ. ಇದು ಬುದ್ಧ, ಮಹಾವೀರ, ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ಬಸವಣ್ಣ, ಶ್ರೀಕೃಷ್ಣ, ಶಿವಾಜಿ, ಟಿಪ್ಪುಸುಲ್ತಾನ್, ಶ್ರೀರಾಮ, ಗಣೇಶ, ಆಂಜನೇಯ, ಜೀಸಸ್, ಮಸೀದಿ ಹೀಗೆ ಯಾವುದೇ ಕಟ್ಟಡಗಳಿಗೆ, ಪ್ರತಿಮೆಗಳಿಗೆ, ಭಾವಚಿತ್ರಗಳಿಗೆ ಅವಮಾನ ಮಾಡಿದ ಸಂದರ್ಭದಲ್ಲಿ ನಾವು ನಡೆದುಕೊಳ್ಳಬಹುದಾದ ರೀತಿಯ ಒಂದು ಪ್ರಜ್ಞೆ.
ಬುದ್ಧ ಪ್ರಜ್ಞೆಯ ನೆರಳಲ್ಲಿ ಈ ರೀತಿಯ ಘಟನೆಗಳನ್ನು ನೋಡಿದಾಗ ಕಿಡಿಗೇಡಿಯೊಬ್ಬ ಹಿಂಸಾವಾದಿಯೊಬ್ಬ, ವಿಧ್ವಂಸಕ ಮನೋಭಾವದವನೊಬ್ಬ, ದುಷ್ಟ ಮನಸ್ಥಿತಿಯವನೊಬ್ಬ, ಕುಡಿದ ಅಮಲಿನಲ್ಲಿಯೋ, ಧರ್ಮದ ಅಮಲಿನಲ್ಲಿಯೋ, ಹಣಕ್ಕಾಗಿಯೋ, ಇನ್ನೊಬ್ಬರ ಆಜ್ಞೆಯಿಂದಾಗಿಯೋ, ಪ್ರಚೋದನೆಯಿಂದಾಗಿಯೂ ಈ ರೀತಿಯ ಪ್ರತಿಮೆ, ಮಂದಿರ, ಭಾವಚಿತ್ರಗಳಿಗೆ ಅವಮಾನ ಮಾಡಿದಾಗ ಆತನನ್ನು ಮಾನಸಿಕವಾಗಿ ಪರಿವರ್ತಿಸುವ ಕೆಲಸ ಮಾಡಬೇಕಾಗುತ್ತದೆ. ಹೇಗೆ ಬುದ್ಧ ಪ್ರಜ್ಞೆಯಲ್ಲಿ ಅತ್ಯಂತ ಕ್ರೌರ್ಯದ ಕೊಲೆಗಡುಕ ಅಂಗುಲಿಮಾಲನಂತಹವನನ್ನು ನಾಗರಿಕ ಮನುಷ್ಯನನ್ನಾಗಿ ಬದಲಾಯಿಸಿದ ಜಾನಪದೀಯ ಉದಾಹರಣೆ ಸಿಗುತ್ತದೆಯೋ, ಹಾಗೆಯೇ ಈಗಿನ ಕಾಲದಲ್ಲೂ ಆ ಸಾಧ್ಯತೆಯ ಅವಕಾಶವನ್ನು ನಾವು ಉಪಯೋಗಿಸಿಕೊಳ್ಳಬೇಕು. ಅಂದರೆ ಪ್ರತಿಮೆ, ಭಾವಚಿತ್ರ, ಕಟ್ಟಡ ಒಂದು ನಿರ್ಜೀವ ವಸ್ತು. ಅವಮಾನ ಮಾಡಿದ ವ್ಯಕ್ತಿ ನಮ್ಮದೇ ಸಹಪಾಠಿ, ಜೀವಂತ ವ್ಯಕ್ತಿ. ಈಗ ಸಮ ಸಮಾಜದ ಕನಸಿನ ಮನುಷ್ಯ ಪ್ರಜ್ಞೆಯ ಯಾರಿಗೆ ಆದರೂ ವ್ಯಕ್ತಿ ಮುಖ್ಯವೇ ಹೊರತು ನಿರ್ಜೀವ ವಸ್ತುವಲ್ಲ.
ಹೌದು, ಒಬ್ಬ ವ್ಯಕ್ತಿ ಅರಿವಿನಿಂದಲೋ, ಉದ್ದೇಶಪೂರ್ವಕವಾಗಿಯೋ, ಅನಿವಾರ್ಯವಾಗಿಯೋ, ದುರುದ್ದೇಶದಿಂದಲೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ಈ ರೀತಿಯ ದುಷ್ಕೃತ್ಯದಲ್ಲಿ ತೊಡಗಿದಾಗ ನಿಜಕ್ಕೂ ಸ್ಥಳೀಯ ಜನ ಸಮೂಹ ಮೊದಲು ಆತನನ್ನು ಹಿಡಿದು ಕುಳ್ಳಿರಿಸಿ ಆತ ( ನಮ್ಮ ಆತ್ಮ ರಕ್ಷಣೆಯ ದೃಷ್ಟಿಯಿಂದ ) ಅಪಾಯಕಾರಿಯಲ್ಲದಿದ್ದರೆ ಆತನನ್ನು ಒಂದು ಪ್ರಶಾಂತ ಸ್ಥಳದಲ್ಲಿ ಕುಳಿತುಕೊಳ್ಳಲು ಹೇಳಿ, ಆಹಾರ ಕೊಟ್ಟು ಪ್ರೀತಿಯಿಂದ ಮಾತನಾಡಿಸಿ, ಸಾಧ್ಯವಾದರೆ ಸ್ವಲ್ಪ ಹಣವನ್ನೂ ಕೊಟ್ಟು ಆತನಿಗೆ ಹೇಳಬೇಕಿದೆ,
” ಇವತ್ತು ನಾವೇನಾದರೂ ಬದುಕಿ ಹೇಗೋ ಜೀವನ ಸಾಗಿಸುತ್ತಿದ್ದಾರೆ ಅದಕ್ಕೆ ಬಾಬಾ ಸಾಹೇಬ್ ಎಂಬ ಜಗತ್ತಿನ ಅತಿ ದೊಡ್ಡ ವಿದ್ವಾಂಸ ನಮಗಾಗಿ ರೂಪಿಸಿದ ನೀತಿ ನಿಯಮಗಳ ಸಂವಿಧಾನವೇ ಕಾರಣ. ಇಂದು ನಿನ್ನನ್ನು ಹೊಡೆದು ಸಾಯಿಸುವ ಶಕ್ತಿ ನಮಗೆ ಇದ್ದರೂ, ಇಲ್ಲಿ ಕುಳಿತುಕೊಂಡು ನಿನಗೆ ಪ್ರೀತಿಯಿಂದ ಬುದ್ಧಿ ಹೇಳಲು ಕಾರಣ ಸಂವಿಧಾನದ ನೀತಿ ನಿಯಮಗಳು ಅಥವಾ ಬೇರೆ ದಾರ್ಶನಿಕರ ಚಿಂತನೆಗಳು. ಆ ಕಾರಣಕ್ಕಾಗಿ ನೀನು ಮಾಡಿರುವುದು ತುಂಬಾ ತುಂಬಾ ದೊಡ್ಡ ತಪ್ಪು. ದಯವಿಟ್ಟು ಇನ್ನು ಮುಂದೆ ಹೀಗೆ ಮಾಡಬೇಡ. ಮಾಡಿದರೆ ಅದರ ದುಷ್ಪರಿಣಾಮ ನಿನ್ನ ಮೇಲಾಗುತ್ತದೆ. ನಿನ್ನ ಬದುಕೇ ಮುಗಿಯಬಹುದು. ಎಚ್ಚರಿಕೆ. ದಯವಿಟ್ಟು ಬದಲಾಗು. ಹಾಗೆಯೇ ಇನ್ನು ಮುಂದೆ ನೀನು ನಮ್ಮನ್ನು ಸ್ನೇಹಿತರೆಂದು ಪರಿಗಣಿಸು. ನಿನ್ನ ಕಷ್ಟಕಾಲದಲ್ಲಿ ಏನಾದರೂ ಸಹಾಯದ ಅವಶ್ಯಕತೆ ಇದ್ದರೆ ನಮ್ಮನ್ನು ಸಂಪರ್ಕಿಸು. ಇನ್ನು ಮುಂದಾದರು ಸರಿಯಾಗಿ ನಡೆದುಕೋ. ಇದು ನಮ್ಮ ಸಲಹೆ ಅಷ್ಟೇ. ಒಂದು ವೇಳೆ ನೀನು ಮತ್ತೆ ಈ ರೀತಿ ಅಪರಾಧ ಮಾಡಿದರೆ ನಿನ್ನ ಜೀವ ಹೋಗುವುದು ಖಚಿತ. ಆಯ್ಕೆ ನಿನ್ನದು ಎಂದು ಆತನನ್ನು ಪ್ರಥಮ ಬಾರಿಗೆ ಅಥವಾ ದ್ವಿತೀಯ ಬಾರಿಗೆ ಬಿಟ್ಟು ಕಳುಹಿಸುವ ಒಂದು ಸಾಧ್ಯತೆಯೂ ಇರುತ್ತದೆ. ಅದರಿಂದ ಆತ ಬದಲಾಗಬಹುದು ಅಥವಾ ಬದಲಾಗಲು ನಾವು ಒಂದು ಅವಕಾಶ ಕಲ್ಪಿಸಿ ಕೊಡಬಹುದು. ತದನಂತರವು ಆತ ಬದಲಾಗದಿದ್ದರೆ ಖಂಡಿತ ಅದರ ಶಿಕ್ಷೆ ಆತನೇ ಅನುಭವಿಸುತ್ತಾನೆ. ನಾವಲ್ಲದಿದ್ದರೆ ಮತ್ತೊಬ್ಬರು ಆತನನ್ನು ಕ್ರೂರವಾಗಿ ನಡೆಸಿಕೊಳ್ಳಬಹುದು. ಆದರೆ ಪ್ರೀತಿಯಿಂದ, ಮಾನವೀಯತೆಯಿಂದ ಬದಲಾಯಿಸುವ ಅಥವಾ ಬದಲಾಗುವ ಒಂದು ಅವಕಾಶವಂತೂ ಸೃಷ್ಟಿಯಾಗುತ್ತದೆ.
ಅಂಬೇಡ್ಕರ್ ಪ್ರಜ್ಞೆಯಲ್ಲಿ ಇದಕ್ಕೆ ಮತ್ತೊಂದು ರೂಪವಿದೆ. ಒಂದು ವೇಳೆ ವ್ಯಕ್ತಿಯೊಬ್ಬ ಈ ರೀತಿಯ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದರೆ ಆ ಕ್ಷಣಕ್ಕೆ ಆತನನ್ನು ಹಿಡಿದು ಅಲ್ಲೇ ಕುಳ್ಳಿರಿಸಿ ಪೊಲೀಸರಿಗೆ ಫೋನ್ ಮಾಡಿ ಕರೆಸಿ ಅವರಿಗೆ ಒಪ್ಪಿಸುವುದು ಅಥವಾ ತಾವೇ ಖುದ್ದಾಗಿ ಠಾಣೆಗೆ ಆತನನ್ನು ಕರೆದುಕೊಂಡು ಹೋಗುವುದು, ಕಾನೂನಿನ ವ್ಯಾಪ್ತಿಗೆ ಒಳಪಡಿಸುವುದು. ಇದು ಸಂವಿಧಾನಾತ್ಮಕ ಹಕ್ಕು ಮತ್ತು ಕರ್ತವ್ಯ. ಈ ಪ್ರಜ್ಞೆ ಸಹ ಸಮಾಜದ ಕ್ರಮಬದ್ಧ ಮುಂದುವರಿಕೆಗೆ ಅತ್ಯಂತ ಅವಶ್ಯಕ…..
ಅನಾಗರಿಕ ಪ್ರಜ್ಞೆ, ಅಂದರೆ ಹಿಂಸೆಗೆ ಹಿಂಸೆಯೇ ಪ್ರತ್ಯುತ್ತರ ಎಂಬ ಒಂದು ರೀತಿಯ ಆಕ್ರೋಶದ ನಡವಳಿಕೆ. ಅಂದರೆ ಸಿಕ್ಕ ವ್ಯಕ್ತಿಯನ್ನು ಮರಕ್ಕೊ, ಕಂಬಕ್ಕೋ ಕಟ್ಟಿ ಜೋರಾಗಿ ಥಳಿಸುವುದು, ನಾವೇ ಕೊಲ್ಲುವುದು ಅಥವಾ ಆತನನ್ನು ಗಾಯಗೊಳಿಸಿ ಪೊಲೀಸರಿಗೆ ಒಪ್ಪಿಸುವುದು. ಬಹುತೇಕ ಜನ ಆಕ್ರೋಶದ ಅಮಲಿನಲ್ಲಿ ಇದನ್ನೇ ಹೆಚ್ಚು ನ್ಯಾಯ ಸಮ್ಮತ ಎಂದು ಭಾವಿಸುತ್ತಾರೆ…
ತಿಳುವಳಿಕೆ ಮತ್ತು ನಡವಳಿಕೆಯ ನಡುವೆ ಅಂತರ ಹೆಚ್ಚಾದಷ್ಟು ಈ ರೀತಿಯ ಪ್ರಜ್ಞೆಗಳ ಹುಚ್ಚಾಟ ನಡೆಯುತ್ತದೆ….
ಎಲ್ಲಕ್ಕಿಂತ ಮುಖ್ಯವಾಗಿ ಬುದ್ಧ ಪ್ರಜ್ಞೆ, ಅಂಬೇಡ್ಕರ್ ಪ್ರಜ್ಞೆಯಲ್ಲಿ ಬೆಳೆದು ಬಂದ ಮನಸ್ಥಿತಿಯ ವ್ಯಕ್ತಿಗಳು ಈ ಪ್ರಜ್ಞೆಯನ್ನು ಸಮಾಜಕ್ಕೆ
ಪ್ರಸ್ತುತಪಡಿಸುವಲ್ಲಿ ಹೆಚ್ಚು ಹೆಚ್ಚು ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.
ಮಸೀದಿ, ದೇವಸ್ಥಾನ, ಚರ್ಚುಗಳಿಗೆ ಈ ರೀತಿ ಅವಮಾನವಾದರೆ ಬಹುತೇಕ ಧಾರ್ಮಿಕ ಅಂಧ:ಶ್ರಧ್ಧೆಯ ವ್ಯಕ್ತಿಗಳು ಹಿಂಸಾತ್ಮಕವಾಗಿ, ಕ್ರೂರವಾಗಿ ಕೊಲ್ಲದೆ ಬಿಡುವುದಿಲ್ಲ. ಆದರೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ವಿವೇಕಾನಂದರಂತ ಇನ್ನೂ ಅನೇಕ ದಾರ್ಶನಿಕರ ಚಿಂತನೆಗಳಿಂದ ಪ್ರಭಾವ ಹೊಂದಿರುವವರು ಸಾಮಾನ್ಯವಾಗಿ ಬುದ್ಧ ಪ್ರಜ್ಞೆ ಮತ್ತು ಸಂವಿಧಾನ ಪ್ರಜ್ಞೆಯ ಅಡಿಯಲ್ಲಿ ತಮ್ಮ ನಡತೆಗಳನ್ನು ರೂಪಿಸಿಕೊಳ್ಳಬೇಕು. ಹಿಂಸೆಗೆ ಹಿಂಸೆಯೇ ಉತ್ತರವಾಗಿದ್ದರೆ ಜಗತ್ತು ಇಷ್ಟೊತ್ತಿಗೆ ತುಂಬಾ ಶಾಂತಿಯುತವಾಗಿ ಇರುತ್ತಿತ್ತು. ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸುವುದರಿಂದ ಅಪರಾಧಗಳು ಕಡಿಮೆಯಾಗುತ್ತಿದ್ದರೆ ಜಗತ್ತಿನ ಎಲ್ಲಾ ದೇಶಗಳಲ್ಲೂ ಅಪರಾಧಕ್ಕೆ ಕಠಿಣ ಶಿಕ್ಷೆಗಳೇ ಇದೆ, ಆದರೆ ಅಪರಾಧವೇನು ಕಡಿಮೆಯಾಗಿಲ್ಲ. ಕಾರಣ ಶಿಕ್ಷೆಗಿಂತ ಶಿಕ್ಷಣವೇ ಮುಖ್ಯವಾಗಬೇಕು. ಜೊತೆಗೆ ವಸ್ತು ಸಂಸ್ಕೃತಿಗಿಂತ ಜೀವ ಸಂಸ್ಕೃತಿಗೆ, ಜೀವಪರ ನಿಲುವಿಗೆ ಹೆಚ್ಚು ಮಹತ್ವ ಕೊಡಬೇಕು. ಸತ್ತವರಿಗಿಂತ ಬದುಕಿರುವವರೇ ನಮಗೆ ಮುಖ್ಯವಾಗಬೇಕು.
ಹೌದು, ಕಠಿಣ ಕಾನೂನುಗಳ ಅವಶ್ಯಕತೆ ಖಂಡಿತ ಇದೆ. ಆದರೆ ಅದು ಕೂಡ ಅಂಬೇಡ್ಕರ್ ಪ್ರಜ್ಞೆಯ ಮಿತಿಯಲ್ಲಿಯೇ ಅನುಷ್ಠಾನಗೊಳ್ಳಬೇಕು.
ಹೀಗೆ ಮರಕ್ಕೆ ಕಟ್ಟಿ, ಕಂಬಕ್ಕೆ ಕಟ್ಟಿ ಹೊಡೆಯುವುದು ಯಾವುದೇ ಕಾರಣವಾಗಿದ್ದರೂ ನೋಡಲು ಹಿಂಸೆಯಾಗುತ್ತದೆ. ಪೊಲೀಸರು ಸಹ ಹೊಡೆಯಬಹುದು. ಆದರೆ ಅದಕ್ಕೊಂದು ಕ್ರಮಬದ್ಧತೆ ಇರುತ್ತದೆ, ಜವಾಬ್ದಾರಿ ಇರುತ್ತದೆ. ಗುಂಪುಗಳಿಗೆ ಆ ರೀತಿಯ ಜವಾಬ್ದಾರಿ ಇರುವುದಿಲ್ಲ.
ಒಳ್ಳೆಯದು ಸಮಾಜದಲ್ಲಿ ವಾಸ್ತವಿಕವಾಗಿ ಅನುಷ್ಠಾನಗೊಳ್ಳುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಒಳ್ಳೆಯ ಚಿಂತನೆಗಳು ಮಾತ್ರ ಬುದ್ಧಕಾಲದಿಂದ ಮೋದಿ ಕಾಲದವರೆಗೂ ಭಾರತದಲ್ಲಿ ನಿರಂತರವಾಗಿ ಚರ್ಚೆಗೊಳಪಡುತ್ತಲೇ, ನಿಷ್ಕರ್ಷೆಗಳಿಗೊಳಪಡುತ್ತಲೇ ಇರಬೇಕು. ಅಂತಿಮವಾಗಿ ಒಳ್ಳೆಯದು ಮಾತ್ರ ಗೆಲ್ಲುತ್ತದೆ, ಗೆಲ್ಲಲೇ ಬೇಕು. ಅದೇ ಜೀವ ಪರ ನಿಲುವಿನ ಸಕಲ ಜೀವರಾಶಿಗಳಿಗೂ ಒಳಿತನ್ನೇ ಬಯಸುವ ಬಸವಪ್ರಜ್ಞೆ…..
ಯಾವನೋ ಒಬ್ಬ ತಲೆತಿರುಕ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿದರೆ ರಾಜ್ಯ ಹೊತ್ತಿ ಉರಿಯುತ್ತದೆ,
ಇನ್ಯಾವನೋ ಒಬ್ಬ ಮತಾಂಧ ಹಸುವಿನ ತಲೆ ತಂದು ದೇವಸ್ಥಾನದ
ಬಳಿ ಎಸೆದರೆ ರಾಜ್ಯದಲ್ಲಿ ಗಲಭೆಗಳಾಗುತ್ತವೆ,
ಮತ್ಯಾವನೋ ಒಬ್ಬ ಧರ್ಮಾಂಧ ಹಂದಿಯ ಮಾಂಸವನ್ನು ಮಸೀದಿಯ
ಬಳಿ ಎಸೆದರೆ ರಾಜ್ಯ ಕೋಮುದಳ್ಳುರಿಯಲ್ಲಿ ಬೇಯುತ್ತದೆ,
ಅದ್ಯಾವನೋ ಮೀರ್ ಸಾದಕ ಪಾಕಿಸ್ತಾನ್ ಜಿಂದಾಬಾದ್ ಎಂದರೆ
ರಾಜ್ಯದಲ್ಲಿ ಪ್ರತಿಭಟನೆ, ಮುಷ್ಕರಗಳಾಗುತ್ತವೆ,
ಕುಡುಕನೊಬ್ಬನ್ಯಾರೋ ಭಾರತಕ್ಕೆ ಧಿಕ್ಕಾರ ಎಂದರೆ ಸೋಷಿಯಲ್ ಮೀಡಿಯಾಗಳು ಘರ್ಜಿಸುತ್ತವೆ,
ವಿಕೃತನೊಬ್ಬನ ಫೇಕ್ ಪೋಟೋಷಾಪ್ ಗೆ ಜನಸಮೂಹ ಹುಚ್ಚರಂತೆ ಪ್ರತಿಕ್ರಿಯಿಸುತ್ತದೆ,
ಏನು ಇದೆಲ್ಲಾ, ?
ನಾವೆಲ್ಲ ಯಾವ ವ್ಯವಸ್ಥೆಯಲ್ಲಿ ಇದ್ದೇವೆ ?,
ಕೇವಲ 4/5 ಜನರ ದುಷ್ಟ ಶಕ್ತಿ ಕೋಟ್ಯಂತರ ಜನರ ಭಾವನೆ ಕೆರಳಿಸಿ ರೊಚ್ಚಿಗೆಬ್ಬಿಸುತ್ತದೆ ಎಂದರೆ ನಮ್ಮ ಮಾನಸಿಕ ಸ್ಥಿತಿಗತಿಯ ಬಗ್ಗೆ ಮತ್ತೊಮ್ಮೆ
ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ನಮ್ಮ ನಂಬಿಕೆ, ಭಕ್ತಿ ಭಾವನೆಗಳು
ಕೆಟ್ಟ ಕೊಳಕ ಮನಸ್ಥಿತಿಯವರ ಪ್ರತಿಕ್ರಿಯೆಯಿಂದ ಉದ್ವೇಗಗೊಳ್ಳುತ್ತದೆ
ಎಂದರೆ ಅದು ನಮ್ಮ ಅರಿವಿನ ಆಳದ ಡಾಂಬಿಕತನ ಎಂದೆನಿಸುವುದಿಲ್ಲವೆ ?
ಕೆಲವೇ ಜನರ ಕಿಡಿಗೇಡಿ ಕೃತ್ಯಗಳನ್ನು ಪೋಲಿಸ್ ವ್ಯವಸ್ಥೆಗೆ ಒಪ್ಪಿಸಿ ಅದೊಂದು ಕ್ರಿಮಿನಲ್ ಅಪರಾಧ ಎಂದು ಕಾನೂನಿನ ತೆಕ್ಕೆಗೆ ನೀಡಿ ಅದನ್ನು ನಿರ್ಲಕ್ಷಿಸದೆ, ಸಿನಿಕತನದಿಂದ ವರ್ತಿಸಿ ಅನೇಕ ಅಮಾಯಕ ಬಡಜನರ ಸಾವುನೋವುಗಳಿಗೆ, ಅಪಾರ ಆಸ್ತಿಪಾಸ್ತಿಗಳ ನಾಶಕ್ಕೆ ಕಾರಣವಾಗುವ ನಮ್ಮ ಸಾಮಾಜಿಕ ವ್ಯವಸ್ಥೆ ಅದು ಹೇಗೆ
ನಾಗರಿಕ ಸಮಾಜ ಎಂದೆನಿಸಿಕೊಳ್ಳುತ್ತದೆ.
ಕೇವಲ ಲಕ್ಷಕೊಬ್ಬರ ಮನೆಮುರುಕತನ ಉಳಿದೆಲ್ಲ ಜನರನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆಯೆಂದರೆ ನಮ್ಮಗಳ ತಿಳುವಳಿಕೆಯ ಗಟ್ಟಿತನವನ್ನು ಪ್ರಶ್ನೆಮಾಡಿಕೊಳ್ಳಲೇ ಬೇಕು.
ಇದು ಸಾಮಾಜಿಕ ಸಮಸ್ಯೆಯೋ, ರಾಜಕೀಯ ಸಮಸ್ಯೆಯೋ, ಆರ್ಥಿಕ ಸಮಸ್ಯೆಯೋ ಅಥವಾ ನಮ್ಮಗಳ ಮಾನಸಿಕ ಸಮಸ್ಯೆಯೋ ಅರ್ಥವಾಗುತ್ತಿಲ್ಲ.
ಕನಿಷ್ಠ ನಾವುಗಳಾದರೂ ಈ ದುಷ್ಟಕೂಟದ ಸಂಚಿಗೆ ಬಲಿಯಾಗದೆ ಪ್ರಬುದ್ಧತೆಯೆಡಗೆ ಹೆಜ್ಜೆ ಇಡೋಣ. ನಮ್ಮ ಮಕ್ಕಳ ಕಾಲಕ್ಕಾದರೂ ನೆಮ್ಮದಿಯ ಶಾಂತಿಯುತ ಸಮಾಜ ಕಟ್ಟೋಣ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….











