ವಿಜಯ ದರ್ಪಣ ನ್ಯೂಸ್….
ಸಮಾಜ ಸೇವಕ ಮುನಿಕೃಷ್ಣ (ಕಿಟ್ಟಿ) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ತಾವರೆಕೆರೆ : ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಸಮಾಜ ಸೇವಕ ಹಾಗೂ ವಾಲ್ಮೀಕಿ ಸಮುದಾಯದ ಹೊಸಕೋಟೆ ತಾಲೂಕು ಮುಖಂಡರಾದ ಮುನಿಕೃಷ್ಣ (ಕಿಟ್ಟಿ) ಅವರಿಗೆ ಸಮಾಜ ಸೇವೆಯಲ್ಲಿ ಸಲ್ಲಿಸಿರುವ ವಿಶೇಷ ಕೊಡುಗೆಯನ್ನು ಪರಿಗಣಿಸಿ ದೆಹಲಿಯ ವಿಶ್ವಾಸ ಸಂಸ್ಕೃತಿ ಮತ್ತು ಪರಿಸರ ಸಂರಕ್ಷಣಾ ಆಯೋಗದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ದೆಹಲಿಯಲ್ಲಿ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರ ಸಮ್ಮುಖದಲ್ಲಿ ಮುನಿಕೃಷ್ಣ (ಕಿಟ್ಟಿ) ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.
ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಯುವಕರಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅನೇಕ ಬಾರಿ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸಿದ್ದಾರೆ.
ಅಲ್ಲದೆ, ಸಮಾಜದಲ್ಲಿನ ದೀನದಲಿತರು, ಬಡವರು ಹಾಗೂ ನಿರ್ಗತಿಕರಿಗೆ ಆಹಾರ, ಶೈಕ್ಷಣಿಕ ನೆರವು ಸೇರಿದಂತೆ ವಿವಿಧ ರೀತಿಯ ಮಾನವೀಯ ಸೇವೆಗಳನ್ನು ನಿರಂತರವಾಗಿ ಸಲ್ಲಿಸುತ್ತಿದ್ದಾರೆ. ಅವರ ಸೇವಾ ಮನೋಭಾವ ಮತ್ತು ಸಮಾಜದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ಗೌರವವನ್ನು ನೀಡಲಾಗಿದೆ.
ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಮುನಿಕೃಷ್ಣ (ಕಿಟ್ಟಿ), “ಈ ಗೌರವವು ನನಗಷ್ಟೇ ಸೀಮಿತವಲ್ಲ, ನನ್ನನ್ನು ಪ್ರೋತ್ಸಾಹಿಸಿದ ಕುಟುಂಬದವರು, ಸ್ನೇಹಿತರು, ಸಮಾಜದ ಹಿರಿಯರು ಹಾಗೂ ನನ್ನೊಂದಿಗೆ ಸಮಾಜ ಸೇವೆಯಲ್ಲಿ ಕೈಜೋಡಿಸಿದ ಪ್ರತಿಯೊಬ್ಬರಿಗೂ ಸಲ್ಲುತ್ತದೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಸೇವೆಗೆ ಸದಾ ಸಿದ್ಧನಾಗಿರುತ್ತೇನೆ,” ಎಂದು ಹೇಳಿದರು.










