ವಿಜಯ ದರ್ಪಣ ನ್ಯೂಸ್….
ಅಹಂಕಾರದಿ ಮೆರೆದರೆ….?
ಲೇಖನ: ಜಯಶ್ರೀ. ಜೇ. ಅಬ್ಬಿಗೇರಿ

ಅಹಂಕಾರದ ಬಗೆಗೆ ಹೇಳುವಾಗ ನಾ ಕೇಳಿದ ಪುಟ್ಟ ಕತೆಯೊಂದು ನನಗೆ ನೆನಪಾಗುತ್ತದೆ. ಅದನ್ನೇ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಒಂದು ದೊಡ್ಡದಾಗಿ ಬೆಳೆದ ಮರವಿತ್ತು. ಮರದ ತುಂಬೆಲ್ಲಾ ಹಚ್ಚ ಹಸಿರಾದ ಎಲೆಗಳು ಇದ್ದವು. ಚೆಂದದ ಹೂವೊಂದು ಅಲ್ಲಿ ಅಂದವಾಗಿ ನಗುತ್ತಿತ್ತು. ಮಾಗಿದ ಹಣ್ಣು ಇತ್ತು. ಹಣ್ಣು ತನಗೆ ತಾನೇ ಹೇಳಿಕೊಂಡಿತು. ‘ನಾನೆಷ್ಟು ರುಚಿ? ನನ್ನ ಬಣ್ಣವೂ ಸೊಗಸಾಗಿದೆ. ಬಹುಶಃ ನನ್ನಷ್ಟು ರುಚಿಕರ ವಸ್ತು ಜಗತ್ತಿನಲ್ಲಿ ಇನ್ನೊಂದಿರಲಿಕ್ಕಿಲ್ಲ.’ ಎಂದು ಹಣ್ಣು ತನ್ನ ತಾನೇ ಬಣ್ಣಿಸಿಕೊಂಡಿತು. ಬೆನ್ನು ತಟ್ಟಿಕೊಂಡಿತು. ಹೂ ಹೇಳಿತು,‘ನನ್ನ ಈ ಸುಂದರ ರೂಪ, ಸುಗಂಧಕ್ಕೆ ಮರುಳಾಗದವರಿಲ್ಲ. ಹೆಂಗಳೆಯರು ಮುಡಿಯಲ್ಲಿ ಮುಡಿದು ಖುಷಿ ಪಡುತ್ತಾರೆ. ಹೆಂಗಳೆಯರಷ್ಟೇ ಅಲ್ಲ ದೇವಾನುದೇವತೆಗಳೆಲ್ಲ ನನ್ನನ್ನು ಬಯಸುವರು.’ ಎಲೆ ಹೇಳಿತು, ನನ್ನ ಹಸಿರು ಬಣ್ಣ ಎಲ್ಲರ ಕಣ್ಣು ಸೆಳೆಯುವಂತಿದೆ. ನನ್ನ ಮನಮೋಹಕತೆಗೆ ಸಾಟಿಯೇ ಇಲ್ಲ. ಹೀಗೆ ಎಲೆ ಹೂ ಹಣ್ಣುಗಳು ತಮ್ಮನ್ನು ತಾವು ಬಣ್ಣಿಸುವಲ್ಲಿ ಮಗ್ನವಾಗಿದ್ದವು. ಆ ಮರದ ಕೆಳಗೆ ಒಬ್ಬ ಜ್ಞಾನಿ ಕುಳಿತಿದ್ದ. ಬೇರಿನ ಮೇಲ್ಭಾಗ ಕಾಣುತ್ತಿದ್ದುದನ್ನು ಕಂಡು ‘ನಿನ್ನ ಮೇಲಿರುವವರು ಏನೆಂದರು ಕೇಳಿಸಿಕೊಂಡೆಯಾ?’ ಹೌದು ಕೇಳಿಸಿಕೊಂಡೆ ಎಂದಿತು
ಬೇರು. ಈ ಹೆಮ್ಮರವನ್ನು ಬೆಳೆಸಿ ಹೊತ್ತುಕೊಂಡು ನಿಂತವನು ನೀನು. ನಿನ್ನನ್ನು ಲೆಕ್ಕಿಸದೇ ತಾವೇ ಶ್ರೇಷ್ಠ ಎನ್ನುತ್ತಿದ್ದಾರಲ್ಲ ನೀನೇಕೆ ಕೇಳಿಸಿಕೊಂಡು ಸುಮ್ಮನಿರುವೆ? ಎಂದ ಜ್ಞಾನಿ ಅದಕ್ಕೆ ಬೇರು, ಅವರ ಸ್ವಭಾವ ಮರೆಯುವುದು. ನನ್ನ ಸ್ವಭಾವ ಅರಿಯುವುದು ಸುಮ್ಮನಿರುವುದು ನನ್ನ ಸ್ವಭಾವ. ಇದರಿಂದ ನಾವು ಕಲಿಯುವ ಪಾಠ ಸಾಕಷ್ಟಿದೆ ಅಲ್ಲವೇ?
ಮದದ ಹೊಗೆ
ಚಳಿಗಾಲದ ಚುಮು ಚುಮು ಬಿಸಿಲಿರಲಿ, ಕೊರೆಯುವ ಚಳಿಯಿರಲಿ ಮೈಯಲ್ಲಿ ಅಹಂಕಾರ ಹೊತ್ತು ತಿರುಗುವವರು ಉರಿಯುತ್ತಲೇ ಇರುತ್ತಾರೆ. ಎಲ್ಲರೂ ತಲೆದೂಗುವ ಮಾತಗಳನ್ನಾಡಿದಾಗ ಇಲ್ಲವೇ ಒಳ್ಳೆಯ ಕೆಲಸವನ್ನು ಮಾಡಿದಾಗ ಮೆಚ್ಚುಗೆಯ ಮಾತುಗಳು ಬಾಯಿಯಿಂದ ಹೊರ ಬರುವುದೇ ಇಲ್ಲ. ಮಧುರ ಸಂಬಂಧಗಳು ತಾನಾಗಿಯೇ ದೂರ ಸರಿಯುವುದಿಲ್ಲ. ಸಂಬಂಧಿಸಿದವರ ನಡೆ ನುಡಿ ಅಹಂಕಾರ ನಿರ್ಲಕ್ಷ್ಯ ದಿಂದ ದೂರವಾಗುತ್ತದೆ. ಹಣದ ಮದ ರೂಪದ ಮದದ ಹೊಗೆ ಎಲ್ಲೆಲ್ಲೂ ಆಡುತ್ತಲೇ ಇರುತ್ತದೆ. ಅಹಂಕಾರದಿಂದ ವರ್ತಿಸುವ ಮೊದಲು ತಮ್ಮ ಬದುಕಿನ ಮೇಲೆ ಯಾವ ಯಾವ ತರಹದ ಪರಿಣಾಮಗಳಾಗುತ್ತವೆ ಎನ್ನುವುದನ್ನು ನೋಡಬೇಕಾಗುತ್ತದೆ.
ಅಂಧಕಾರದ ಮಾಯೆ
ನಮ್ಮವರು ಅನ್ನುವವರು ಪ್ರೀತಿ ಆದರದಿಂದ ಆರೈಕೆಯ ಹಾರೈಕೆಯ ಮಾತುಗಳನ್ನಾಡಿದರೂ ಅವುಗಳನ್ನು ಲೆಕ್ಕಿಸದೇ ಅಹಂಕಾರದ ಮಾಯೆಯಲ್ಲಿ ಮಾಯವಾಗುವ ಚಟ ಹಚ್ಚಿಕೊಂಡಿದ್ದೇವೆ. ಅಹಂಕಾರವೆಂಬ ಅಂಧಕಾರದ ಮಾಯೆಯಿಂದ ಬಚಾವು ಮಾಡುವವರು ಯಾರೂ ಇಲ್ಲ. ಎಲ್ಲರೂ ಇದ್ದು ಎಲ್ಲವೂ ಇದ್ದು ಮನಸ್ಸಿಗೆ ಒಂಟಿತನ ಕಾಡುತ್ತದೆ. ಏನು ಮಾಡಿದರೂ ಸಮಾಧಾನವೆನ್ನುವುದು ಕಾಣದೆ ಮಾಯಾಜಿಂಕೆ ಆಗಿ ಕೈ ಸಿಗದಂತೆ ದೂರ ದೂರ ಹೋಗುತ್ತದೆ. ದೇವರು ನೀಡಿದ ಸುಂದರ ಜೀವನದಲ್ಲಿ ಅಹಂಕಾರವೆಂಬ ಮನೋವಿಕಾರದಿಂದ ಬದುಕನ್ನು ವಿಸ್ತರಿಸಿಕೊಳ್ಳದೇ ಕುಬ್ಜವಾಗಿಸುತ್ತಿದ್ದೇವೆಂಬ ಅರಿವು ಹೊಳೆಯುವುದೇ ಇಲ್ಲ. ಪ್ರತಿಯೊಂದು ಕಷ್ಟಕ್ಕೂ ನಮ್ಮ ಅಹಂ ಕಾರಣ ಅನ್ನೋದು ಮೊದಲು ಅರಿವಿಗೆ ಬಂದರೆ ಸಾಕು.
ನಾನೇ ಶ್ರೇಷ್ಠ
ಅಹಂಕಾರದ ಪೊರೆಯನ್ನು ಕಳಚಿಕೊಂಡಾಗ ಮಾತ್ರ ಮನಸ್ಸು ಇತರ ಮನಸ್ಸುಗಳಿಗೆ ಹತ್ತಿರವಾಗುತ್ತದೆ. ಬೇರೆಯವರಲ್ಲಿ ಒಳ್ಳೆಯೆದನ್ನು ಗುರುತಿಸುತ್ತದೆ. ಪ್ರತಿಯೊಂದು ಜೀವಕ್ಕೂ ತನ್ನದೇ ಆದ ಶಕ್ತಿ ದೌರ್ಬಲ್ಯಗಳಿವೆ. ನಾನೊಬ್ಬನೇ ಶ್ರೇಷ್ಠನೆಂದು ಇತರರನ್ನು ಕೀಳಾಗಿ ನೋಡುವುದು ಹೆಚ್ಚು ತೊಂದರೆಯನ್ನು ತರುತ್ತದೆ. ಹತ್ತಿರವಿರುವವರನ್ನು ಆಪ್ತತೆಯಿಂದ ನೋಡಬೇಕೇ ಹೊರತು ಅಹಂಕಾರದಿಂದಲ್ಲ. ಅಹಂಕಾರ ತರವಲ್ಲವೆಂದು ನಮಗೆ ಅರಿವಾದ ಸಮಯ ಅವರು ನಮ್ಮೊಂದಿಗೆ ಇರುವುದಿಲ್ಲ. ಆ ಸಮಯವೂ ನಮ್ಮದಾಗಿರುವುದಿಲ್ಲ. ಒಳ್ಳೆಯ ಸ್ನೇಹ ಒಳ್ಳೆಯ ಪ್ರೀತಿ ಒಂದು ಮನ ತಣಿಸುವ ಪುಸ್ತಕವಿದ್ದಂತೆ. ಪುಸ್ತಕ ಎಷ್ಟೇ ಹಳೆಯದಾದರೂ ಅದರಲ್ಲಿರುವ ಪದಗಳು ಎಂದಿಗೂ ಬದಲಾಗುವುದಿಲ್ಲ. ಆದ್ದರಿಂದ ಸ್ನೇಹ ಮತ್ತು ಪ್ರೀತಿಗಾಗಿ ಮನದ ಕಿಟಕಿ ಬಾಗಿಲುಗಳನ್ನು ವಿಶಾಲವಾಗಿ ತೆರೆದಿಡಬೇಕು. ಮನದ ದುರಭಿಮಾನವನ್ನು ಹೊಸಕಿ ಹಾಕುವಂತೆ
ಅಧಃಪತನ
ಆಚಾರ ವಿಚಾರಗಳು ನಮ್ಮ ಸಂಸ್ಕಾರವನ್ನು ತಿಳಿಸುತ್ತವೆ. ನಡೆ ನುಡಿ ಒಂದಾಗಿಬೇಕು ಅಷ್ಟೇ ಅಲ್ಲ ಸರಳತೆ ಮೈಗೂಡಿಸಿಕೊಂಡಿರಬೇಕು. ನಾನೇ ಶ್ರೇಷ್ಠವೆಂದು ಜಂಭ ಕೊಚ್ಚಿಕೊಳ್ಳುವುದು ಶ್ರೇಷ್ಠವಲ್ಲ. ಬೇರೆಯವರಲ್ಲಿಯ ಶ್ರೇಷ್ಠ ಗುಣಗಳನ್ನು ಗುರುತಿಸುವುದೇ ಶ್ರೇಷ್ಠತೆ. ಇಂಥ ಶ್ರೇಷ್ಠತೆ ಘನತೆಯನ್ನು ಹೆಚ್ಚಿಸುತ್ತದೆ. ಕೆಟ್ಟ ಪರಿಸ್ಥಿತಿಯಿಂದ ಹೊರಬರಬೇಕೆಂದರೆ ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕು. ನಮ್ಮಲ್ಲಿರುವ ಅಹಂಕಾರದ ಮುಳ್ಳಿನ ಗಿಡಕ್ಕೆ ಮನಸ್ಸಿನ ಬೇಲಿ ಹಾಕಿ ಬೆಳೆಸದೇ ಭಾವ ನಿಯಂತ್ರಣದ ಬೇಲಿ ಹಾಕಿ ಪ್ರೀತಿಯೆಂಬ ಶೀತಲ ಗಾಳಿಯನ್ನು ಒಳಬಿಟ್ಟುಕೊಳ್ಳಬೇಕು. ಹೀಗೆ ಅಹಂ ನಿಯಂತ್ರಿಸುವ ಪ್ರಯತ್ನ ಪ್ರತಿ ನಿತ್ಯ ಆಗಬೇಕು. ನಮ್ಮ ಅಧಃಪತನಕ್ಕೆ ಮೂಲ ಕಾರಣ ನಾವೇ.
ನಾನು ಮಾತ್ರ ಉಪಯುಕ್ತ
ಅಹಂಕಾರ ಎಷ್ಟೊಂದು ಪ್ರಭಾವಶಾಲಿ ಅಂದರೆ ಮುಂದಿನವರೆಲ್ಲ ನಿರುಪಯುಕ್ತರು ನಾನು ಮಾತ್ರ ಉಪಯುಕ್ತ ಎಂಬ ಪಾಠ ಹೇಳಿಕೊಡುತ್ತದೆ. ನನ್ನದೇನು ತಪ್ಪಿಲ್ಲ ಎಲ್ಲ ತಪ್ಪು ಎದುರಿನವರದೇ. ಅನ್ನೋ ನಿರ್ಧಾರವನ್ನು ಅಹಂ ನೋಡನೋಡುತ್ತಲೇ ತೆಗೆದುಕೊಂಡು ಬಿಡುತ್ತದೆ. ಇದಕ್ಕೆಲ್ಲ ಕಾರಣ ತನ್ನ ಮನಸ್ಥಿತಿ ಎಂಬುವುದನ್ನು ಒಪ್ಪುವುದೇ ಇಲ್ಲ. ತಪ್ಪು ಒಪ್ಪಿಕೊಳ್ಳುವ ದಾರಿಯಲ್ಲಿ ಉಜ್ವಲ ಭವಿಷ್ಯ ಕಾದು ನಿಂತಿದೆ. ಸಕಾಲದಲ್ಲಿ ಪಾಠ ಕಲಿಯದಿದ್ದರೆ ಪರಿಸ್ಥಿತಿಗಳು ನಮ್ಮ ಅಹಂ ಮನಸ್ಥಿತಿಗೆ ಆಘಾತ ನೀಡುವ ಉಡುಗೊರೆಯನ್ನು ಖಂಡಿತ ನೀಡುತ್ತವೆ. ತಾವೇ ಸೊಟ್ಟಗಿದ್ದು, ನೆಟ್ಟಗಿದ್ದವರನ್ನು ನೆಟ್ಟಗೆ ಮಾಡಲು ನೋಡುವುದು ತಪ್ಪು ಅಲ್ಲವೇ?
ಸರಪಳಿ ಬಿಡಿ ಬಿಡಿ
ಜೀವನವೇ ಜೇನುಗೂಡು ಅಹಂ ಇದ್ದರೆ ಖುಷಿ ಬಳಿ ಸುಳಿಯುವುದಿಲ್ಲ. ಅಹಂಕಾರದಿ ಮೆರೆದವರೆಲ್ಲ ಮಣ್ಣುಪಾಲಾಗಿರುವರು. ಅಹಂಕಾರ ಮರೆತವರೆಲ್ಲ ಆದರ್ಶ ಮೆರೆದಿರುವರು. ಅಹಂಕಾರವೆನ್ನುವುದು ನಮಗೆ ನಾವೇ ಖೈದಿ ಮಾಡಿಕೊಂಡAತೆ. ಸಣ್ಣದೆನಿಸುವ ಸಾಮಾನ್ಯ ಜ್ಞಾನವನ್ನು ಸಹ ಅಹಂ ನುಂಗಿ ನೀರು ಕುಡಿಯುತ್ತದೆ. ದೊಡ್ಡದೆನಿಸುವ ಸಂಬAಧದ ಸರಪಳಿಯನ್ನು ಬಿಡಿ ಬಿಡಿಯಾಗಿಸಿ ನೀರು ಕುಡಿಸುತ್ತ ಇಡೀ ಜಗವನ್ನು ದೂರುವವರು ದೂಷಿಸುವವರು ಅಹಂಕಾರಿಗಳು. ತಾವು ಮಾತ್ರ ಸರಿ ಎನ್ನುವ ಗರ್ವಿಗಳು.
ಕೊನೆ ಹನಿ
ಮನುಷ್ಯ ಬಹಳ ವಿಚಿತ್ರ ಜೀವಿಯೇ ಸರಿ. ಅವನಿಗೆ ತನ್ನ ಜ್ಞಾನದ ಬಗ್ಗೆ ಅಹಂಕಾರವಿದೆ. ಆದರೆ, ತನ್ನ ಅಹಂಕಾರದ ಬಗ್ಗೆ ಜ್ಞಾನವಿಲ್ಲ. ಬೀಚಿಯವರು ಹೇಳಿದಂತೆ ಅಹಂಕಾರ ಅವಿವೇಕಿಗಳ ಆಸ್ತಿ. ಏನೂ ಕೆಲಸ ಮಾಡದೇ ದೊಡ್ಡವರೆನಿಸಿಕೊಳ್ಳಬೇಕೆಂಬುದು ಅಹಂಕಾರಿಗಳ ಚಾಳಿ. ಒಳ್ಳೆಯ ಕೆಲಸ ಮಾಡಲಾರದೆ ಯಾರೂ ದೊಡ್ಡವರೆನಿಸಿಕೊಂಡಿಲ್ಲ. ಹಾಗೆ ಒಳ್ಳೆಯ ಕೆಲಸ ಮಾಡುವವರನ್ನು ಜಗತ್ತು ಯಾವತ್ತೂ ಸಣ್ಣವನೆಂದು ಗುರುತಿಸಿಲ್ಲ. ಅಹಂಕಾರವಿದ್ದವರನ್ನು ನಾಶ ಮಾಡಲು ಬೇರೆ ಯಾರು ಬೇಕಿಲ್ಲ. ಅಹಂಕಾರವೇ ಅವರನ್ನು ನಾಶ ಮಾಡುತ್ತದೆ. ಮೊದಲು ಅಹಂಕಾರವನ್ನು ಸುಟ್ಟುಬಿಡಬೇಕು ಆಮೇಲೆ ಮಿಕ್ಕಿದ್ದು. ನಮಗೆ ನಮ್ಮ ಮೇಲೆ ಅಭಿಮಾನ ಇರಬೇಕೆ ಹೊರತು ದುರಭಿಮಾನವಲ್ಲ. ಮಾನವ ಬದುಕಿದು ನೀರ ಮೇಲಿನ ಗುಳ್ಳೆಯಂತೆ ಕ್ಷಣಿಕ ಮೂರು ದಿನದ ಸಂತೆಯಲ್ಲಿ ಆನಂದವಾಗಿ ಇರುವುದನ್ನು ಕಲಿಯಬೇಕೇ ಹೊರತು ಅಹಂಕಾರದಿಂದ ಮರೆಯುವುದನ್ನಲ್ಲ ಅಲ್ಲವೇ?
=============================










